ಯಡಿಯೂರಪ್ಪಗೆ ಲಿಂಗದೇವರು ಪತ್ರ: ನೀವು ಅವರಲ್ಲ ಎಂದ ನಿರ್ದೇಶಕ!

By Web DeskFirst Published Feb 14, 2019, 5:59 PM IST
Highlights

‘ನೀವು ಅವರಲ್ಲ: ಆ ಯಡಿಯೂರಪ್ಪ ಸಿಗೋದು ಕಷ್ಟವಲ್ಲ!’
ರಾಜಕೀಯ ಎನ್ನುವ ಮಾಹಾಯುದ್ಧದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಆಪರೇಷನ್ ಆಡಿಯೋ ಬಾಂಬ್ ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಿದೆ.  ಈ ಬಗ್ಗೆ ಯಡಿಯೂರಪ್ಪನವರಿಗೆ ಸಿನಿಮಾ ನಿರ್ದೇಶಕ ಬಿ ಎಸ್ ಲಿಂಗದೇವರು  ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಬಿಎಸ್‌ವೈಗೆ ಧೈರ್ಯ, ಹಾಗೂ ಸಲಹೆ ಸೂಚನೆಗಳನ್ನ ನೀಡಿದ್ದಾರೆ.

ಪ್ರಿಯ ಯಡಿಯೂರಪ್ಪನವರೇ, 

ಕ್ಷಮಿಸಿ,  ನೀವು ಇಂದಿನ ರಾಜನೀತಿ / ರಾಜಕೀಯ  ಚದುರಂಗದಾಟವನ್ನ ಇನ್ನೂ ಅರ್ಥ ಮಾಡಿಕೊಂಡ ಹಾಗೆ ಕಾಣಿಸುತ್ತಿಲ್ಲ.  ಇದು ರಾಜಕಾರಣವನ್ನು ದೂರದಲಿ‌ ಕಾಣುವ ನನ್ನಂತಹ ಲಕ್ಷಾಂತರ ಜನರ  ಅನಿಸಿಕೆ ಎಂದು ಭಾವಿಸಿದ್ದೇನೆ. 

ಪ್ರಸ್ತುತ ರಾಜಕಾರಣ ಅಂದರೇನೇ ಷಡ್ಯಂತ್ರ ಅನ್ನುವುದು ಎಲ್ಲರಿಗೂ ತಿಳಿದ ಮತ್ತು  ಒಪ್ಪಬೇಕಾದ ವಿಷಯ. ಮುಖ್ಯಮಂತ್ರಿಗಳಾದಿಯಾಗಿ, ಎಲ್ಲ ಪಕ್ಷಗಳ ಪ್ರಮುಖ ನಾಯಕರಿದ್ದ ಕಡೆ ಇದೆಲ್ಲ ನಿತ್ಯ ನಡೆಯುತ್ತಲೇ ಇರುತ್ತದೆ. 

ಹಾಗೆ ನೋಡಿದರೆ ಈ ಮೈತ್ರಿ ಸರ್ಕಾರವೇ ಷಡ್ಯಂತ್ರದ ಭಾಗವಲ್ಲವೇ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಿರಸ್ಕಾರಗೊಂಡ ಒಂದು ಪಕ್ಷದ ನಾಯಕ ಮುಖ್ಯ ಮಂತ್ರಿ ಆಗಿದ್ದಾರೆ ಎನ್ನುವುದೇ ಪ್ರಜಾತಂತ್ರ ವ್ಯವಸ್ಥೆಯ ಅಣಕವಲ್ಲವೇ ?

ಈಗಿನ ನಮ್ಮ ರಾಜಕೀಯ ಪರಿಸರ ಮತ್ತು ನಮ್ಮ ಸುತ್ತಲಿನ ಒತ್ತಡಗಳು ತನ್ನತನವನ್ನ ಬಿಟ್ಟು ಬರಲು ಆಜ್ಞಾಪಿಸುತ್ತವೆ, ಕೆರಳಿಸುತ್ತವೆ, ನಮ್ಮನ್ನು ತೊಡಗಿಕೊಳ್ಳುವಂತೆ ಮಾಡುತ್ತವೆ. 

ವೈಯಕ್ತಿಕವಾಗಿ ಮತ್ತು ಖಾಸಗಿಯಾಗಿ ಮಾತನಾಡುವಾಗ ಎಲ್ಲ ರಾಜಕಾರಣಿಗಳು ನೀವು ಮಾತನಾಡಿದ ರೀತಿಯಲ್ಲೇ ಮಾತನಾಡುತ್ತಾರೆ ಮತ್ತು ಆ ಮಾತುಗಳು ಬಹಿರಂಗವಾಗಿ ಪ್ರಚಾರಕ್ಕೆ ಸಿಗಲ್ಲ.   

ಆದರೆ ನಿಮ್ಮ‌ ಮಾತಿಗೆ ಮಾತ್ರ ದಾಖಲೆ ಸೃಷ್ಟಿಯಾಗುತ್ತದೆ ಮತ್ತು ಅದನ್ನಿಟ್ಟುಕೊಂಡು ಉಳಿದವರೆಲ್ಲ ಅತ್ಯಂತ ಪ್ರಾಮಾಣಿಕರಂತೆ ಪೋಸು ಕೊಡುತ್ತಾರೆ ಅನ್ನುವುದು ಈ ರಾಜ್ಯದ ಜನರಿಗೆ ಗೊತ್ತಿದೆ.  

ಇಲ್ಲಿ ಅವರ ಮಾತುಗಳನ್ನು ದಾಖಲಿಸಲಾರದ್ದಕ್ಕಾಗಿ ಮತ್ತು ನಿಮ್ಮ ಮಾತನ್ನು ದಾಖಲಿಸದಷ್ಟು ಎಚ್ಚರ ವಹಿಸದ್ದಕ್ಕಾಗಿ ನೀವಿಂದು ತಲೆತಗ್ಗಿಸಬೇಕಾಗಿದೆ ಮತ್ತು ಇದೇ ರೀತಿಯ ಷಡ್ಯಂತ್ರ ದಿಂದ  ಮುಖ್ಯಮಂತ್ರಿಯ ಸ್ಥಾನದಿಂದ ಇಳಿಯಬೇಕಾಗಿದ್ದು ಎಂಬ ಅನುಭವ ಹೊಂದಿರುವ ನೀವು, ಇವತ್ತೂ ಕೂಡ  ಜಾಗೃತರಾಗದೇ ಇರುವುದು ಸೋಜಿಗ !!

ನಿಮಗಿಂತ ಹೆಚ್ಚು ಆ ಅತೃಪ್ತ ಶಾಸಕರಿಗೆ ಶತಾಯಗತಾಯ ಅಧಿಕಾರ ಹಿಡಿಯುವ ಹಪಹಪಿತನ ಇದೆ.  ಆದರೆ ಆ ಹಪಹಪಿತನ ನಿಮಗೆ ಇದೆ ಎನ್ನುವ ರೀತಿಯಲ್ಲಿ ಬಿಂಬಿಸುವ ಮೂಲಕ ತಮ್ಮನ್ನು ತಾವು ಪ್ರಾಮಾಣಿಕರು ಎಂಬ ಭಾವನೆ ಜನರಲ್ಲಿ ಮೂಡುವ ಹಾಗೆ ಮಾಡುತ್ತಿದ್ದಾರೆ

ಹಾಗೆಂದು ನೀವು ಆಮಿಷವೊಡ್ಡಿದ ನಡೆ ಸರಿ ಎಂದು ಹೇಳುತ್ತಿಲ್ಲ. ಇಲ್ಲಿ ನೀವು ಮಾತ್ರವೇ ತಪ್ಪಿತಸ್ಥರಲ್ಲ ಎಂದಷ್ಟೇ ಹೇಳುತ್ತಿದ್ದೇನೆ. ಅಧಿಕಾರ ಹಿಡಿಯಲು ನಿಮಗೆ ಹಲವು ಒತ್ತಡಗಳಿರಬಹುದು. 

ನೀವು ಮುಖ್ಯಮಂತ್ರಿಯಾದರೆ ನಿಮ್ಮ ಮಂತ್ರಿಮಂಡಲದಲ್ಲಿ ಕುರ್ಚಿಯೇರಲು ಆಕಾಂಕ್ಷರಾದವರ ಒತ್ತಾಯ, ಒತ್ತಾಸೆಗಳೂ ನಿಮಗಿಲ್ಲದೆ ಇಲ್ಲ. ಈ ಹಿನ್ನೆಲೆಯಲ್ಲಿ ಇಷ್ಟು ವರ್ಷ ನಿಮ್ಮನ್ನು ಕಂಡ ನಮಗೆ ಈ ಆಟ ನೀವು ಆಡುತ್ತಿದ್ದೀರಿ ಅನ್ನುವುದಕಿಂತ ಆಡಿಸುತ್ತಿದ್ದಾರೆ ಅಂತಲೇ ಅನಿಸುತ್ತದೆ. 

ಹೊರಗಿನಿಂದ ಆಡುವ ಕೈಯಾಗಿ‌ ಕಾಣುವ ನೀವು ಒಳಗೆ ದಾಳವಾಗಿರಬಹುದೇನೋ ಅಂತ ನಮ್ಮ ಗುಮಾನಿ. ಈಗ ಬಿಂಬಿಸಲ್ಪಡುತ್ತಿರುವ ಲಾಲಸೆಯ ಯಡಿಯೂರಪ್ಪ ನೀವಲ್ಲ. ಆ ಯಡಿಯೂರಪ್ಪ ಬೇಡವೂ ಬೇಡ ನಮಗೆ. 

ನಮಗೆ ನಾವು ಕಂಡ ಹೋರಾಟದ ಹಿನ್ನೆಲೆಯ, ನೊಂದವರ ನೆರವಿಗೆ ಧಾವಿಸುವ ಸೀದಾ ಸಾದಾ ನಿಜವಾದ ಆ ಯಡಿಯೂರಪ್ಪ ಬೇಕಾಗಿದ್ದಾರೆ.  ಆ ಯಡಿಯೂರಪ್ಪ, ಒಳಗೆ .. ನಿಮ್ಮೊಳಗೆ ಇದ್ದಾರೆ. 

ದಯವಿಟ್ಟು ಆ ಯಡಿಯೂರಪ್ಪರನ್ನು ಜೀವಂತ ಆಗಿರಿಸಿ, ಆ ಯಡಿಯೂರಪ್ಪರನ್ನು ಹೊರಗೆ ಕಾಣಿಸಿ. ಈ ರಾಜ್ಯದ ರಾಜಕೀಯ ಇತಿಹಾಸ ನಿಮ್ಮನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅಂತ‌ ನೆನಪಿಟ್ಟುಕೊಳ್ಳದಿದ್ದರೂ ಪರವಾಗಿಲ್ಲ. ಪ್ರಾಮಾಣಿಕ ಜನಪರ ಹೋರಾಟಗಾರ ಯಡಿಯೂರಪ್ಪ ಅಂತ ನೆನಪಿಸಿಕೊಂಡರೆ ಸಾಕು. 

ನಾವು ನಡೆಯುವ ಹಾದಿಗಳ ಬಗ್ಗೆ ಎಷ್ಟೋ ಸಲ ನಮಗೇ ಗೊತ್ತಿರುವುದಿಲ್ಲ. ನಾನು ದಾರಿಯಲ್ಲಿ ನಡೆಯುತ್ತೇನೋ, ದಾರಿ ನನ್ನನ್ನು ನಡೆಸುತ್ತದೆಯೋ ಅನ್ನುವ ಅರಿವೂ ಇರುವುದಿಲ್ಲ.  

ಇವತ್ತಿನ ಈ ರಾಜಕೀಯ ಸಂದರ್ಭಲ್ಲಿ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಈ ಮಾತುಗಳು ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ನನ್ನದು. ಆದರೆ ನಿಜವಾದ ಆ ಯಡಿಯೂರಪ್ಪನವರ ಆತ್ಮ ಸಾಕ್ಷಿ ಒಪ್ಪಲ್ಲ.

ಇವತ್ತು ನಾವು ನೀವು ಸಂದರ್ಭದ ಶಿಶುಗಳು, ಪ್ರತಿಯೊಂದು ಹೆಜ್ಜೆಯನ್ನ ಎಚ್ಚರಿಕೆಯಿಂದ ಇಡಬೇಕು. ಸಂದರ್ಭವನ್ನು ಮೀರಲು ಸಾಧ್ಯವಾದರೆ ಮನುಷ್ಯ ದೇವರೇ ಆಗಿಬಿಡುತ್ತಾನೆ, ನಮ್ಮ ಬದುಕಿನ ಸಂಕಷ್ಟಗಳಿಗೆಲ್ಲ ಕಾರಣವಾಗುವುದು ಸಂದರ್ಭಗಳೇ ಅನ್ನುವುದು ಸತ್ಯ.

ಹೋರಾಟಗಾರ ಯಡಿಯೂರಪ್ಪ ತಮ್ಮ ಹೃದಯದ ಅಂತರಾಳದಿಂದ ಒಂದು ಭಾರಿ ಘರ್ಜಿಸಲಿ. ನಾನು ಇನ್ನು ಮುಂದೆ ಈ ರಾಜಕೀಯದ ಷಡ್ಯಂತ್ರಕ್ಕೆ ಪಾಲುದಾರನಾಗಲ್ಲ ಮತ್ತು ನನಗೆ ಮುಖ್ಯ ಮಂತ್ರಿ ಆಗಬೇಕು ಅನ್ನುವ ಆಸೆ ಇಲ್ಲ ಎಂದು. ಆಗ ನಮ್ಮೂರಿನ ಜಗಲಿಯಲಿ ಕೂತು  ಜನ‌ ಹೇಳುವ ಹಾಗೆ ಜನರೇ ನಿಮಗೆ ಅಧಿಕಾರ ನೀಡುತ್ತಾರೆ. ನೀವು ಸುಮ್ಮನಿದ್ದರೆ ಸಾಕು.  

ದುಡುಕಿ ಯಾರ್ಯಾರನ್ನೋ ನಂಬಿ, ಯಾರೋ ತೋಡಿದ ಹಳ್ಳಕ್ಕೆ ನೀವಾಗೇ ಹೋಗಿಬಿದ್ದು ನಗೆಪಾಟಲಾಗಬೇಡಿ. ನಮ್ಮಂತ‌ವರ ನಂಬಿಕೆಗೆ ಕೊಡಲಿ ಪೆಟ್ಟು ಕೊಡಬೇಡಿ.

ಬಿ ಎಸ್ ಲಿಂಗದೇವರು

click me!