ಉದ್ಯೋಗ ಬದಲಿಸುತ್ತಿದ್ದೀರಾ? ಹಣಕಾಸು ನಿರ್ವಹಣೆ ಬಗ್ಗೆ ಇಲ್ಲಿದೆ ಟಿಪ್ಸ್

By ಆಧಿಲ್ ಶೆಟ್ಟಿFirst Published Dec 2, 2017, 8:22 PM IST
Highlights

ಶೀಘ್ರದಲ್ಲೇ ಉದ್ಯೋಗ ಬದಲಾಯಿಸುವ ಇರಾದೆಯಿದೆಯೇ? ಹಾಗಾದರೆ ಆ ಸಂದರ್ಭದಲ್ಲಿ ಎದುರಿಸಬೇಕಾದ ಹಣಕಾಸು ಸಮಸ್ಯೆಗಳ ಬಗ್ಗೆ ನೀವು ತಿಳಿದಿರಬೇಕು. ಸಾಮಾನ್ಯವಾಗಿ ಉದ್ಯೋಗ ಬದಲಾಯಿಸುವುದು ಕಠಿಣ ಕೆಲಸ; ಒಂದು ವೇಳೆ ಹಣಕಾಸು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದಿದ್ದಲ್ಲಿ ಉದ್ಯೋಗ ಬದಲಾಯಿಸುವಿಕೆಯು ನಿಮ್ಮನ್ನು ಇನ್ನೂ ಸಂಕಷ್ಟಕ್ಕೆ ದೂಡಬಹುದು.

ಶೀಘ್ರದಲ್ಲೇ ಉದ್ಯೋಗ ಬದಲಾಯಿಸುವ ಇರಾದೆಯಿದೆಯೇ? ಹಾಗಾದರೆ ಆ ಸಂದರ್ಭದಲ್ಲಿ ಎದುರಿಸಬೇಕಾದ ಹಣಕಾಸು ಸಮಸ್ಯೆಗಳ ಬಗ್ಗೆ ನೀವು ತಿಳಿದಿರಬೇಕು. ಸಾಮಾನ್ಯವಾಗಿ ಉದ್ಯೋಗ ಬದಲಾಯಿಸುವುದು ಕಠಿಣ ಕೆಲಸ; ಒಂದು ವೇಳೆ ಹಣಕಾಸು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದಿದ್ದಲ್ಲಿ ಉದ್ಯೋಗ ಬದಲಾಯಿಸುವಿಕೆಯು ನಿಮ್ಮನ್ನು ಇನ್ನೂ ಸಂಕಷ್ಟಕ್ಕೆ ದೂಡಬಹುದು.

ಸಾಮಾನ್ಯವಾಗಿ ಹೊಸ ಉದ್ಯೋಗ ಹುಡುಕಲು 3 ರಿಂದ 6 ತಿಂಗಳು ಬೇಕಾಗುತ್ತದೆ. ಸೇರಿದ ಹೊಸ ಕಂಪನಿಯು ಮೊದಲ ಬಾರಿಯೇ ಪರಿಷ್ಕೃತ ಸಂಬಳವನ್ನು ನೀಡುತ್ತದೆ ಎಂಬ ಬಗ್ಗೆ ಖಾತ್ರಿಯಿಲ್ಲದಿದ್ದರೆ, ಕನಿಷ್ಠ 6 ತಿಂಗಳಿಗೆ ಬೇಕಾಗುವಷ್ಟು ಹಣದ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ.

ನೀವು ಉದ್ಯೋಗ ಬದಲಾಯಿಸುವ ಯೋಜನೆ ಹಾಕಿಕೊಂಡಿದ್ದರೆ, ಯಾವ್ಯಾವ ರೀತಿಯ ಹಣಕಾಸು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹಾಗೂ ಅದನ್ನು ಹೇಗೆ ನಿರ್ವಹಿಸಬಹುದು ಎಂದು ನಾವು ನೋಡೋಣ.

ದಿನನಿತ್ಯದ ಖರ್ಚಿಗೆ ಹಣದ ಕೊರತೆ:

ಹೊಸ ಕಂಪನಿಯು ನಿಮಗೆ ನೀಡುವ ಸಂಬಳ ‘ಕಾಸ್ಟ್ ಟು ಕಂಪನಿ’ ದೃಷ್ಟಿಯಿಂದ ಹೆಚ್ಚಾಗಿರಬಹುದು. ಆದರೆ ಕಂಪನಿಯ ನಿಯಮಗಳನ್ವಯ ನಿಮ್ಮ ಕೈಗೆ ಬರುವಾಗ ಅದು ಕಡಿಮೆಯಾಗಿರಬಹುದು.  ಆದುದರಿಂದ ಅದಕ್ಕನುಗುಣವಾಗಿ ತಮ್ಮ ಖರ್ಚುಗಳನ್ನು ಸರಿದೂಗಿಸುವುದು ಉತ್ತಮ. ಉದ್ಯೋಗ ಬದಲಾವಣೆ ಸಂದರ್ಭದಲ್ಲಿ ಅನಿವಾರ್ಯವಲ್ಲದ ಖರ್ಚುಗಳಿಗೆ ಕಡಿವಾಣ ಹಾಕುವುದು ಕೂಡಾ ಅಗತ್ಯ.  

ನಿವೃತ್ತಿ ಯೋಜನೆ ಮೇಲೆ ಪರಿಣಾಮ:

ಉದ್ಯೋಗ ಬದಲಾಯಿಸುವ ನಿರ್ಧಾರವು ನಿವೃತ್ತಿಯೋತ್ತರ ಹಣಕಾಸು ಜೀವನದ ಮೇಲೂ ಪರಿಣಾಮ ಬೀರುವುದರಿಂದ ಆ ಬಗ್ಗೆಯೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಗಹನವಾದ ಅಧ್ಯಯನ ನಡೆಸಿ, ಆ ಬಳಿಕವೇ ನಿರ್ಧಾರವನ್ನು ಕೈಗೊಳ್ಳುವುದು ಸೂಕ್ತ. ಏಕೆಂದರೆ ಬೇರೆ ಬೇರೆ ಕಂಪನಿಗಳ ನಿವೃತ್ತಿಯೋತ್ತರ ಯೋಜನೆಗಳು ಬೇರೆ ಬೇರೆಯಾಗಿರುತ್ತವೆ.  ಆದುದರಿಂದ ಯಾವುದಕ್ಕೂ ಪರ್ಯಾಯ ಯೋಜನೆಗಳನ್ನು ಹಾಕುವುದು ಉತ್ತಮ. ಸಾಂಪ್ರದಾಯಿಕವಾದ ಪಿಂಚಣಿ ಯೋಜನೆ, ಪಿಪಿಎಫ್ ಖಾತೆ ಮುಂತಾದವುಗಳನ್ನು ಆಯ್ಕೆಮಾಡಿಕೊಳ್ಳಬಹುದು.

ಸೌಲಭ್ಯ ಕಡಿತ:

ಉದ್ಯೋಗ ಬದಲಾಯಿಸುವಿಕೆಯು ಇನ್ನೆರಡು ವಿಷಯಗಳ ಮೇಲೂ ಪರಿಣಾಮ ಬೀರುತ್ತವೆ. ನೀವು ಈಗಾಗಲೇ ಪಡೆಯುತ್ತಿರುವ ಆರೋಗ್ಯ ವಿಮೆ ಹಾಗೂ ಇತರ ಸಮೂಹ ವಿಮಾ ಯೋಜನೆಗಳ ಸೌಲಭ್ಯದ ಮೇಲೆ ಉದ್ಯೋಗ ಬದಲಾವಣೆಯು ಏನು ಪರಿಣಾಮ ಬೀರಲಿದೆ? ಕಂಪನಿಯನ್ನು ಬದಲಾಯಿಸುವಾಗ ಇಲ್ಲಿಯೂ ಬದಲಾವಣೆಗಳಾಗುವ ಸಾಧ್ಯತೆಗಳಿವೆ.   

ಸ್ಥಳಾಂತರ:

ನಿಮ್ಮ ಕನಸಿನ ಉದ್ಯೋಗ ನಿಮಗೆ ಸಿಕ್ಕಿರಬಹುದು, ಆದರೆ ಅದು ನೀವಿರುವ ಊರಿನಿಂದ ಬಹಳ ದೂರವಿರಬಹುದು. ಆ ಊರಿನಲ್ಲಿ ವಾಸಿಸಲು ನಿಮಗೆ ತಗಲುವ ವೆಚ್ಚ ನಿಮಗೆ ಸಿಗುತ್ತಿದೆಯೇ? ಹೊಸ ಸ್ಥಳದಲ್ಲಿ ನಿಮ್ಮ ಮಗುವಿನ ಶಿಕ್ಷಣವನ್ನು ಮುಂದುವರೆಸಬೇಕಾದಲ್ಲಿ ಅದರ ಖರ್ಚು ನಿಮಗೆ ಸಿಗುವುದೇ? ನಿಮ್ಮ ಮನೆ ಶಿಫ್ಟ್ ಮಾಡಲು ಬೇಕಾದ ಖರ್ಚು ನಿಮಗೆ ಸಿಗುತ್ತದೆಯೇ? ನಿಮ್ಮ ಹೊಸ ಕಂಪನಿಯು ಅದಕ್ಕಾಗಿ ತಯಾರಿದ್ದರೆ, ಬರಹ ರೂಪದಲ್ಲಿ  ಖಾತ್ರಿಪಡಿಸಿಕೊಳ್ಳಿರಿ.

ಈ ಮೇಲಿನ ವಿಷಯಗಳನ್ನು ಮುಂದಿಟ್ಟುಕೊಂಡು ಉದ್ಯೋಗ ಬದಲಾವಣೆಯ ನಿರ್ಧಾರ ಕೈಗೊಂಡರೆ ಆರ್ಥಿಕವಾಗಿ ಹೊರೆಯಾಗುವುದನ್ನು ತಪ್ಪಿಸಬಹುದು.

 

ಆಧಿಲ್ ಶೆಟ್ಟಿ,

ಸಿಇಓ- ಬ್ಯಾಂಕ್ ಬಝಾರ್

[ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ.]

click me!