ಮುಗಾಬೆ 36 ವರ್ಷದ ಸರ್ವಾಧಿಕಾರಕ್ಕೆ ಮಿಲಿಟರಿ ಬ್ರೇಕ್

By Suvarna Web DeskFirst Published Nov 16, 2017, 12:45 PM IST
Highlights

ಸರ್ವಾಧಿಕಾರಿಯ ಆಡಳಿತದಿಂದ ನಲುಗಿದ್ದ ಆಫ್ರಿಕಾ ಖಂಡದ ರಾಷ್ಟ್ರ ಜಿಂಬಾಬ್ವೆಯಲ್ಲಿ ಕ್ಷಿಪ್ರಕ್ರಾಂತಿ ನಡೆದಿದ್ದು, ಅಧ್ಯಕ್ಷ ರಾಬರ್ಟ್ ಮುಗಾಬೆ (93) ಹಾಗೂ ಅವರ ಪತ್ನಿಯನ್ನು ಸೇನೆ ವಶಕ್ಕೆ ತೆಗೆದುಕೊಂಡಿದೆ. ಇದರೊಂದಿಗೆ ವಿಶ್ವ ಕಂಡ ಅತ್ಯಂತ ವಯೋವೃದ್ಧ ಆಡಳಿತಗಾರನ ಆಳ್ವಿಕೆ ಕೊನೆಗೊಂಡಂತಾಗಿದೆ.

ಹರಾರೆ: ಸರ್ವಾಧಿಕಾರಿಯ ಆಡಳಿತದಿಂದ ನಲುಗಿದ್ದ ಆಫ್ರಿಕಾ ಖಂಡದ ರಾಷ್ಟ್ರ ಜಿಂಬಾಬ್ವೆಯಲ್ಲಿ ಕ್ಷಿಪ್ರಕ್ರಾಂತಿ ನಡೆದಿದ್ದು, ಅಧ್ಯಕ್ಷ ರಾಬರ್ಟ್ ಮುಗಾಬೆ (93) ಹಾಗೂ ಅವರ ಪತ್ನಿಯನ್ನು ಸೇನೆ ವಶಕ್ಕೆ ತೆಗೆದುಕೊಂಡಿದೆ. ಇದರೊಂದಿಗೆ ವಿಶ್ವ ಕಂಡ ಅತ್ಯಂತ ವಯೋವೃದ್ಧ ಆಡಳಿತಗಾರನ ಆಳ್ವಿಕೆ ಕೊನೆಗೊಂಡಂತಾಗಿದೆ.

ತಮಗಿಂತ 41 ವರ್ಷ ಚಿಕ್ಕವರಾಗಿರುವ ಪತ್ನಿ ಗ್ರೇಸ್‌ರನ್ನು ಅಧ್ಯಕ್ಷ ಪಟ್ಟದಲ್ಲಿ ಕೂರಿಸುವ ಮುಗಾಬೆ ಕನಸು ನುಚ್ಚು ನೂರಾಗಿದೆ. ಪತ್ನಿಯನ್ನು ಜಿಂಬಾಬ್ವೆ ಅಧ್ಯಕ್ಷ ಪಟ್ಟಕ್ಕೇರಿಸಲು ತೊಡಕಾಗಿದ್ದ ಜಿಂಬಾಬ್ವೆ ಉಪಾಧ್ಯಕ್ಷ ಎಮ್ಮರ್‌ಸನ್ ಎಂನಾನ್‌ಗಾಗ್ವಾ ಅವರನ್ನು ಮಾಸಾರಂಭದಲ್ಲಿ ಮುಗಾಬೆ ಪದಚ್ಯುತಗೊಳಿಸಿದ್ದರು. ಆ ನಂತರ ಎಮ್ಮರ್‌ಸನ್ ದೇಶವನ್ನೇ ತೊರೆದು ಹೋಗಿದ್ದರು.

ಆದರೆ ಈಗ ಅವರು ಮತ್ತೆ ದೇಶಕ್ಕೆ ಮರಳಿದ್ದು, ಸೇನೆ ಅವರಿಗೇ ಪಟ್ಟ ಕಟ್ಟುವ ಸಾಧ್ಯತೆ ನಿಚ್ಚಳವಾಗಿದೆ. ಕ್ಷಿಪ್ರಕ್ರಾಂತಿ ನಡೆಸಿ ಮುಗಾಬೆಯನ್ನು ಸೇನೆ ಕೆಳಗಿಳಿಸಿದ ಬೆನ್ನಲ್ಲೇ, ಜಿಂಬಾಬ್ವೆಯ ಪ್ರಜಾಪ್ರಭುತ್ವ ಎಲ್ಲಿ ಸೇನೆಯ ಕೈಗೆ ಹೋಗುತ್ತೋ ಎಂಬ ಭೀತಿ ಎದುರಾಗಿದೆಯಾದರೂ, ಎಮ್ಮರ್‌ಸನ್ ಪಟ್ಟಾಭಿಷೇಕವಾದರೆ ಅದು ನಿವಾರಣೆಯಾಗಲಿದೆ. ನಿವೃತ್ತ ಸೇನಾಧಿಕಾರಿಗಳು ಕ್ಷಿಪ್ರಕ್ರಾಂತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಜಿಂಬಾಬ್ವೆಯಲ್ಲಿ 400 ಮಂದಿ ಭಾರತೀಯರು ಹಾಗೂ 9400 ಮಂದಿ ಭಾರತೀಯ ಮೂಲದವರಿದ್ದು, ಅವರೆಲ್ಲಾ ಸುರಕ್ಷಿತ ವಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಯಾರು ಈ ಮುಗಾಬೆ?: ಬ್ರಿಟಿಷ್ ವಸಾಹುತು ಆಗಿದ್ದ ಜಿಂಬಾಬ್ವೆಗೆ 1980ರಲ್ಲಿ ಸ್ವಾತಂತ್ರ್ಯ ಲಭಿಸಿತು. ಅಂದಿನಿಂದಲೂ ಮುಗಾಬೆ ಅವರೇ ಆ ದೇಶವನ್ನು ಆಳುತ್ತಾ ಬಂದಿದ್ದಾರೆ. 93 ವರ್ಷವಾದರೂ ನಿವೃತ್ತಿಯಾಗಿಲ್ಲ. ಇವರ ಆಡಳಿತಾವಧಿಯಲ್ಲಿ ಆರ್ಥಿಕ ವ್ಯವಸ್ಥೆ ನೆಲಕಚ್ಚಿದ್ದರೆ, ಹಣದುಬ್ಬರ ಮುಗಿಲು ಮುಟ್ಟಿದೆ. ವಿರೋಧಿಗಳನ್ನು ನಿರ್ದಯವಾಗಿ ಹತ್ತಿಕ್ಕಿದ ಆರೋಪ ಮುಗಾಬೆ ಮೇಲಿದೆ.

ಮತದಾನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಟೀಕೆಯೂ ಇವೆ. ಮುಗಾಬೆಗೆ ಇಬ್ಬರು ಹೆಂಡತಿಯರು. ಮೊದಲನೇ ಪತ್ನಿ 1992ರಲ್ಲಿ ನಿಧನ ಹೊಂದಿದ ಬಳಿಕ ತಮ್ಮ ಬಳಿ ಟೈಪಿಸ್ಟ್ ಆಗಿದ್ದ ಗ್ರೇಸ್ ಅವರನ್ನೇ ಎರಡನೇ ವಿವಾಹವಾಗಿದ್ದಾರೆ. ಮುಗಾಬೆ ಅಧಿಕಾರಾವಧಿ ಮುಗಿದ ಬಳಿಕ ಜಿಂಬಾಬ್ವೆ ಉಪಾಧ್ಯಕ್ಷರಾಗಿದ್ದ ಎಮ್ಮರ್‌ಸನ್ ಎಂನಾನ್‌ಗಾಗ್ವಾ ಅವರು ಅಧ್ಯಕ್ಷ ಪಟ್ಟಕ್ಕೇರಬೇಕಿತ್ತು. ಆದರೆ ಅದನ್ನು ತಪ್ಪಿಸಿ, ತಮ್ಮ ಪತ್ನಿ ಗ್ರೇಸ್‌ರನ್ನು ಅಧ್ಯಕ್ಷ ಪಟ್ಟಕ್ಕೇರಿಸುವ ಕನಸನ್ನು ಮುಗಾಬೆ ಕಂಡಿದ್ದರು. ಹೀಗಾಗಿ ಎಮ್ಮರ್ ಸನ್‌ರನ್ನು ಪದಚ್ಯುತಗೊಳಿಸಿದ್ದರು. ಆನಂತರ ಎಮ್ಮರ್‌ಸನ್ ಅವರು ದೇಶ ಬಿಟ್ಟು ಹೋಗಿದ್ದರು.

ಇದು ಸೇನೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಬುಧವಾರ ಸೇನಾ ಪಡೆಗಳು ಮುಗಾಬೆ ಹಾಗೂ ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಂಡಿವೆ. ಇದು ಕ್ಷಿಪ್ರಕ್ರಾಂತಿ ಅಲ್ಲ, ‘ರಕ್ತರಹಿತ ಸುಧಾರಣೆ’ ಎಂದು ಬಣ್ಣಿಸಿದೆ. ಅಧ್ಯಕ್ಷ ಮುಗಾಬೆ ಸುತ್ತ ಕ್ರಿಮಿನಲ್‌ಗಳು ಇದ್ದು, ಅವರನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದೆ. ಮುಗಾಬೆ ಆಳ್ವಿಕೆಯನ್ನು ಸೇನೆ ಕೊನೆಗೊಳಿಸಿದ ಸುದ್ದಿ ತಿಳಿಯುತ್ತಿದ್ದಂತೆ

ಜನರು ಬ್ಯಾಂಕುಗಳಿಗೆ ಮುಗಿಬಿದ್ದು ಹಣ ಪಡೆಯಲು ಯತ್ನಿಸಿದ್ದಾರೆ. ಮೂರು ಸ್ಫೋಟಗಳನ್ನು ಬಿಟ್ಟರೆ ಮಿಕ್ಕಂತೆ ಯಾವುದೇ ಹಿಂಸಾಚಾರ ನಡೆದಿಲ್ಲ. ಅಂಗಡಿ- ಮುಂಗಟ್ಟು, ಕಚೇರಿಗಳು ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿವೆ.

 

click me!