’ವೀರಯೋಧನ ಪತ್ನಿಯಾಗಿ 8 ತಿಂಗಳು ಬದುಕಿದ್ದೆ ನನ್ನ ಭಾಗ್ಯ’

By Web DeskFirst Published Feb 16, 2019, 10:41 AM IST
Highlights

ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆಯಾಗಿ 8 ತಿಂಗಳಲ್ಲೇ ಪತಿಯನ್ನು ಕಳೆದುಕೊಂಡಿದ್ದಾರೆ. ಹುತಾತ್ಮ ಯೋಧರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.  ಇಂತಹ ಕ್ಷಣದಲ್ಲೂ ಕಲಾವತಿ ಮಾತಿಗಳನ್ನು ಕೇಳಿದರೆ ಹೃದಯ ಮಿಡಿಯುತ್ತದೆ. 

ಮಂಡ್ಯ (ಫೆ. 16): ‘ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ವೀರ ಯೋಧನ ಪತ್ನಿ ನಾನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಅವರೊಂದಿಗೆ ಬದುಕಿ ಬಾಳುವ ಅವಕಾಶ ಸಿಕ್ಕಿದ್ದು ಮಾತ್ರ ಕ್ಷಣಿಕ. ಮದುವೆಯಾಗಿ 8
ತಿಂಗಳಲ್ಲೇ ನಾನು ಪತಿಯನ್ನು ಕಳೆದುಕೊಂಡೆ. ಆದರೆ, ಕಳೆದುಕೊಂಡ ರೀತಿ ದೇಶಕ್ಕಾಗಿ ಎನ್ನುವುದು ಹೆಮ್ಮೆಯ ಸಂಗತಿ. ನಾನೀಗ ಅನಾಥೆಯಾದೆ. ಕರುಳಿನ ಕುಡಿಯೂ ಇಲ್ಲ. ಬದುಕಿನ ದಾರಿ ಕತ್ತಲಿನಿಂದ ಕೂಡಿದೆ.’ - ಇದು ವೀರಯೋಧ ಗುಡಿಗೆರೆಯ ಎಚ್.ಗುರು ಅವರ ಪತ್ನಿ ಕಲಾವತಿಯವರ ಮಾತುಗಳು.

ಮನ ಕಲಕುವಂತಿದೆ ಹುತಾತ್ಮ ಯೋಧ ಗುರುವಿನ ಕಥೆ

ಅತ್ಯಂತ ದುಃಖದಲ್ಲಿರುವ ಕಲಾವತಿ ಮಾತನಾಡಿದ್ದೇ ಕಡಿಮೆ. ಪ್ರತಿ ಮಾತಿನ ಜೊತೆಯಲ್ಲಿ ಧಾರಾಕಾರದ ಕಣ್ಣೀರು, ನಡುವೆಯೇ ತನ್ನ ಮನದಾಳದ ಮಾತುಗಳನ್ನು ಕನ್ನಡಪ್ರಭದೊಂದಿಗೆ ಹಂಚಿಕೊಂಡರು.

‘ನನ್ನ ಪತಿ ಗುರು ಬಲಿದಾನವಾದರು ಎಂಬ ಸುದ್ದಿಯನ್ನು ನಾನು ನಂಬಲೇ ಇಲ್ಲ. ಅದು ನಂಬುವ ಸಂಗತಿಯೂ ಆಗಿರಲಿಲ್ಲ. ಕೇವಲ 1 ವಾರದ ಹಿಂದಷ್ಟೆ ನಾನು ಅವರನ್ನು ಖುಷಿಯಿಂದಲೇ ಬೀಳ್ಕೊಟ್ಟಿದ್ದೆ. ದಿನಕ್ಕೆ ಮೂರು ಬಾರಿಯಾದರೂ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ಆ ಮಾತುಗಳನ್ನು ನಾನು ಮೆಲುಕು ಹಾಕುವಂತಹ ದುರಂತ ದಿನಗಳು ಎದುರಾಗಿದೆ. ಅದು ನನ್ನ ದುರದೃಷ್ಟ ಎಂದರು ಕಲಾವತಿ.

ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC

ದಿನವೂ ಅವರು ಪೋನ್ ಮಾಡುತ್ತಿದ್ದರು. ನಾನು ಅವರ ಪೋನ್‌ಗಾಗಿ ಕಾಯುತ್ತಿದ್ದೆ. ಅದೇ ರೀತಿ ಗುರುವಾರ ಬೆಳಗ್ಗೆ ಅವರು ಪೋನ್ ಮಾಡಿದಾಗ ನಾನು ಪೋನ್ ರಿಸೀವ್ ಮಾಡಲಿಲ್ಲ. ಮಧ್ಯಾಹ್ನದ ವೇಳೆಗೆ ನಾನು ಪೋನ್ ಮಾಡಿದಾಗ ಅವರು ರಿಸೀವ್ ಮಾಡಲಿಲ್ಲ. ರಿಸೀವ್ ಮಾಡಿದ ಗೆಳೆಯರೊಬ್ಬರು ಹೇಳಿದ ಸುದ್ದಿ ಕೇಳಿ ನನಗೆ ಬರಸಿಡಿಲು ಬಂದಂತಾಯಿತು. ಉಗ್ರಗಾಮಿ ನಡೆಸಿದ ಆತ್ಮಾಹುತಿ ದಾಳಿಗೆ ನಿಮ್ಮ ಪತಿ ಬಲಿಯಾಗಿದ್ದಾರೆ ಎಂದು ಗೆಳೆಯರೊಬ್ಬರು ಹೇಳಿದಾಗಲೇ ನಾನು ಅಘಾತಕ್ಕೆ ಒಳಗಾದೆ.

ಇದೊಂದು ಬದುಕಿನ ದುರಂತದ ಘಟ್ಟ. ಕೇವಲ 3-4 ದಿನಗಳ ಹಿಂದೆ ಕಾಶ್ಮೀರದ ಹಿಮಪಾತದ ಸೆಲ್ಫಿ ವಿಡಿಯೋ ನನಗೆ ರವಾನೆ ಮಾಡಿದ್ದರು. ಅನೇಕ ಗೆಳೆಯರಿಗೂ ಅದನ್ನೇ ಕಳುಹಿಸಿದ್ದರು. ಆ ಪೋಟೋ ಈಗ ನನ್ನ ಬದುಕಿನ ಕೊನೇ ಅಧ್ಯಾಯವಾಗಿದೆ. ನನ್ನ ಪತಿಯನ್ನು ಕೇವಲ 8 ತಿಂಗಳಲ್ಲಿ ಎಷ್ಟು ಪ್ರೀತಿಸಿದೆ. ಇನ್ನು ಎಷ್ಟು ಕಾಲ ಪ್ರೀತಿಸಬೇಕು ಎನ್ನುವುದು ನನಗೆ ಅರ್ಥವಾಗದ ಸಂಗತಿ. ನನಗೆ ಏನೂ ಹೇಳಲಿಲ್ಲ. ಕೇಳುವುದು ಬೇಕಾದಷ್ಟು ಇತ್ತು. ಹೀಗೆ ಹೋಗುತ್ತಾರೆ ಎಂದು ಗೊತ್ತಾಗಿದ್ದರೆ ನಾನು ಕಳುಹಿಸುತ್ತಲೇ ಇರಲಿಲ್ಲ ಎಂದು ರೋದಿಸುತ್ತಲೇ ಮೌನಕ್ಕೆ ಶರಣಾದರು ಕಲಾವತಿ.

click me!