ಕಾಸರಗೋಡು ಕನ್ನಡಕ್ಕೆ ಕೇರಳ ಸಡ್ಡು

By Web DeskFirst Published Oct 8, 2018, 7:32 AM IST
Highlights

ಈಗ ಭೌತ ವಿಜ್ಞಾನ, ಸಮಾಜಶಾಸ್ತ್ರ ಬೋಧಿ ಸಲೂ ಕನ್ನಡ ಶಾಲೆಗಳಿಗೆ ಕೇರಳ ಸರ್ಕಾರ ಮಲಯಾಳಿ ಶಿಕ್ಷಕರನ್ನು ನೇಮಿಸಲು ಹೊರಟಿದೆ. ಒಟ್ಟಾರೆ ಕನ್ನಡ ಮಾಧ್ಯಮ ಶಾಲೆಗಳಿಗೆ 20 ಮಲಯಾಳಿ ಶಿಕ್ಷಕರ ನೇಮಕ ನಡೆದಿದ್ದು, ಈ ಮೂಲಕ ಕಾಸರಗೋಡಲ್ಲಿ ಕನ್ನಡ ಅಸ್ಮಿತೆಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. 

ಮಂಗಳೂರು : ಕೇರಳದ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಮೇಲಿನ ಗದಾಪ್ರಹಾರ ಮುಂದು ವರಿದಿದೆ. ಇತ್ತೀಚೆಗಷ್ಟೇ ಕಾಸರಗೋಡಿನ ಮಂಗಲ್ಪಾಡಿ ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಬಾರದ ಗಣಿತ ಶಿಕ್ಷಕರೊಬ್ಬರನ್ನು ಕೇರಳ ಸರ್ಕಾರ ನೇಮಿಸಿತ್ತು. ಇದರ ವಿರುದ್ಧ ರೂಪುಗೊಂಡ ಕನ್ನಡಿಗರ ಹೋರಾಟ ಆ ಶಿಕ್ಷಕ ರಜೆ ಮೇಲೆ ತೆರಳುವಂತೆ ಮಾಡಿತ್ತು. 

"

ಇದರ ಬೆನ್ನಲ್ಲೇ ಈಗ ಭೌತ ವಿಜ್ಞಾನ, ಸಮಾಜಶಾಸ್ತ್ರ ಬೋಧಿ ಸಲೂ ಕನ್ನಡ ಶಾಲೆಗಳಿಗೆ ಕೇರಳ ಸರ್ಕಾರ ಮಲಯಾಳಿ ಶಿಕ್ಷಕರನ್ನು ನೇಮಿಸಲು ಹೊರಟಿದೆ. ಒಟ್ಟಾರೆ ಕನ್ನಡ ಮಾಧ್ಯಮ ಶಾಲೆಗಳಿಗೆ 20 ಮಲಯಾಳಿ ಶಿಕ್ಷಕರ ನೇಮಕ ನಡೆದಿದ್ದು, ಈ ಮೂಲಕ ಕಾಸರಗೋಡಲ್ಲಿ ಕನ್ನಡ ಅಸ್ಮಿತೆಗೆ ಅಳಿವು-ಉಳಿವಿನ ಪ್ರಶ್ನೆ ಎದುರಾಗಿದೆ. 

ಕೇರಳ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ಶುಕ್ರವಾರವಷ್ಟೇ ಶಿಕ್ಷಕರ ಹೊಸ ಆಯ್ಕೆ ಪಟ್ಟಿಯೊಂದನ್ನು ಪ್ರಕಟಿಸಿದ್ದು, ಈ ಪಟ್ಟಿ ಪ್ರಕಾರ 7 ಮಂದಿ ಮಲಯಾಳಿ ಶಿಕ್ಷಕರು ಕನ್ನಡ ಮಾಧ್ಯಮ ಶಾಲೆಗೆ ನೇಮಕಗೊಳ್ಳಲಿದ್ದಾರೆ. ಶಿಕ್ಷಕರ ನೇಮಕಕ್ಕೆ ಸಂಬಂಧಿಸಿ ಕೇರಳ ಲೋಕಸೇವಾ ಆಯೋಗ ಈಗ ಪ್ರಕಟಿಸಿರುವುದು ನಾಲ್ಕನೇ ಹಾಗೂ ಕೊನೇ ಆಯ್ಕೆ ಪಟ್ಟಿ. ಮೊನ್ನೆ ಜುಲೈನಲ್ಲಿ ಕೆಪಿಎಸ್‌ಸಿ ಮೂರನೇ ಆಯ್ಕೆ ಪಟ್ಟಿಯಲ್ಲಿ 13 ಮಲಯಾಳಿ ಶಿಕ್ಷಕರ ಹೆಸರನ್ನು ಪ್ರಕಟಿಸಲಾಗಿತ್ತು. 

ಅವರಲ್ಲಿ ಒಬ್ಬರು ಗಣಿತ ಶಿಕ್ಷಕರು ಮಂಗಲ್ಪಾಡಿ ಸರ್ಕಾರಿ ಪ್ರೌಢ ಶಾಲೆಗೆ ಸೇರ್ಪಡೆಯಾಗಿದ್ದರು. ಅವರಿಗೆ ಕನ್ನಡ ಭಾಷೆ ಗೊತ್ತಿಲ್ಲದ ಹಿನ್ನೆಲೆಯಲ್ಲಿ ಶಿಕ್ಷಕರ ಬದಲಾವಣೆಗೆ ಕನ್ನಡಿಗರಿಂದ ಭಾರೀ ಹೋರಾಟವೇ ನಡೆದಿತ್ತು. ಈ ಹೋರಾಟಕ್ಕೆ ಮಣಿದು ಗಣಿತ ಶಿಕ್ಷ ಕರು ಡಿಸೆಂಬರ್‌ವರೆಗೆ 6 ತಿಂಗಳು ರಜೆಯಲ್ಲಿ ತೆರಳುವಂತಾಗಿತ್ತು. ಜತೆಗೆ, ಉಳಿದ ಮಲಯಾಳಿ ಭಾಷಿಕ ಶಿಕ್ಷಕರ ನೇಮಕವನ್ನು ಕೇರಳ ಶಿಕ್ಷಣ ಇಲಾಖೆ ತಾತ್ಕಾಲಿಕವಾಗಿ ತಡೆಹಿಡಿದಿತ್ತು. ಇದೀಗ ಕೆಪಿ ಎಸ್‌ಸಿ ನಾಲ್ಕನೇ ಪಟ್ಟಿಯಲ್ಲಿ ಮತ್ತೆ 7 ಮಂದಿ ಮಲಯಾಳಿ ಶಿಕ್ಷಕರ ಹೆಸರು ಪ್ರಕಟವಾಗಿದೆ. 

ಇವರ ನೇಮಕ ಪ್ರಕ್ರಿಯೆ ಸದ್ಯದಲ್ಲೇ  ಅಂತಿಮಗೊಳ್ಳಲಿ ಮೊದಲ ಪುಟದಿಂದ ಇದರೊಂದಿಗೆ ಕಾಸರಗೋಡು ಕನ್ನಡ ಶಾಲೆಗಳಲ್ಲಿ ಬೋಧಿಸಬೇಕಿರುವ ಮಲಯಾಳಿ ಶಿಕ್ಷಕರ ಸಂಖ್ಯೆ 20ಕ್ಕೆ ತಲುಪಿದಂತಾಗಿದೆ. ಈ ಮೂಲಕ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕೊನೇ ಮೊಳೆ ಬೀಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಮತ್ತೆ ನೇಮಕ ಹೇಗಾಯ್ತು?: ಕೆಪಿಎಸ್‌ಸಿ ಪ್ರಕಟಿಸಿದ ಈ ನಾಲ್ಕನೇ ಪಟ್ಟಿ 2014 - 15 ನೇ ಸಾಲಿಗೆ ಸೇರಿದ್ದು. ಆಗ ಜಿಲ್ಲಾವಾರು ಶಿಕ್ಷಕರ ನೇಮಕಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2016 ರಲ್ಲಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಸಲಾಗಿತ್ತು. ಅದೇ ವರ್ಷ ಕೇರಳ ಸರ್ಕಾರ ಹಾಗೂ ಹೈಕೋರ್ಟ್, ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಿಗೆ ಅಲ್ಲಿನ ಸ್ಥಳೀಯ ಶಿಕ್ಷಕರನ್ನು ನೇಮಿಸುವಂತೆ ಆದೇಶ ಹೊರಡಿಸಿತ್ತು. ಆದರೆ ಇದು 2014 -15ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಾದ್ದರಿಂದ 2016 ರ ಆದೇಶ ಅನ್ವಯವಾಗುವುದಿಲ್ಲ ಎನ್ನುವುದು ಕೆಪಿಎಸ್‌ಸಿ ವಾದ. 

ಅಲ್ಲದೆ ಆಯ್ಕೆ ಪ್ರಕ್ರಿಯೆ ಸಂದರ್ಭ ಭಾಷಾ ತಜ್ಞರ ಅನುಮೋದನೆ ಬಳಿಕವೇ ನೇಮಕ ಪಟ್ಟಿ ಅಂತಿಮಗೊಳಿಸಲಾಗುತ್ತದೆ. ಆಗ ಭಾಷಾ ತಜ್ಞರು ಆಕ್ಷೇಪ ವ್ಯಕ್ತಪಡಿಸಿಲ್ಲ. ಹಾಗಿರುವಾಗ ಈಗ ಈ ನೇಮಕ ತಪ್ಪು ಎಂದು ಹೇಳಲು ಹೇಗೆ ಸಾಧ್ಯ? ನಿಯಮ ಪ್ರಕಾರವೇ ಆಯ್ಕೆ ನಡೆಸಲಾಗಿದೆ ಎಂದು ಕೆಪಿಎಸ್‌ಸಿ ಸಮಜಾಯಿಷಿ ನೀಡುತ್ತಿದೆ. ಆದರೆ 2016 ರ ನಂತರದ ನೇಮಕಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ನೇಮಕಕ್ಕೆ ಅವಕಾಶ ಇರದು ಎಂದು ಕೆಪಿಎಸ್‌ಸಿ ಹೇಳುತ್ತಿದೆ. 

ಕನ್ನಡ ಶಾಲೆಗಳ ಅಧೋಗತಿ: ಕಾಸರಗೋಡಿನಲ್ಲಿ ಸುಮಾರು 60 ಕನ್ನಡ ಮಾಧ್ಯಮ ಪ್ರೌಢಶಾಲೆಗಳಿವೆ. ಪ್ರಾಥಮಿಕದಿಂದ ಪದವಿವರೆಗೆ180 ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಿವೆ. ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರ ಪ್ರವೇಶವಾದರೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆತಂಕ ಎದುರಾಗಲಿದೆ ಎನ್ನುವುದು ಸ್ಥಳೀಯರ ಆತಂಕ. 

ಏತನ್ಮಧ್ಯೆ, ಮೂರನೇ ಆಯ್ಕೆ ಪಟ್ಟಿಯಲ್ಲಿ ಬಾಕಿ ಇರುವ 12 ಮಂದಿ ಶಿಕ್ಷಕರ ನೇಮಕಕ್ಕೆ ಕೆಪಿಎಸ್‌ಸಿ ಈಗಾಗಲೇ ಚಾಲನೆ ನೀಡಿದೆ. ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಹುದ್ದೆ ಖಾಲಿ ಇದ್ದರೂ ಶಿಕ್ಷಕರನ್ನು ಭರ್ತಿಗೊಳಿಸುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ಕೆಪಿಎಸ್‌ಸಿ ನಿಯಮ ಪ್ರಕಾರ, ಒಮ್ಮೆ ಆಯ್ಕೆ ಪಟ್ಟಿಯಲ್ಲಿ ಹೆಸರು ಪ್ರಕಟವಾದರೆ, ನಂತರ ನೇಮಕ ಪ್ರಕ್ರಿಯೆ ಮುಂದುವರಿಯುತ್ತದೆ. ರೊಟೇಶನ್ ಪ್ರಕಾರ ನೇಮಕಾತಿ ನಡೆಯುತ್ತದೆ. ಈ ಶಿಕ್ಷಕರನ್ನು ಯಾವ ಶಾಲೆಗಳಿಗೆ ನೇಮಕಗೊಳಿಸಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿಲ್ಲ.

ಆತ್ಮಭೂಷಣ್

click me!