ಕತಾರ್ ಕಗ್ಗಂಟು: ಸಂಕಷ್ಟದಲ್ಲಿ 6 ಲಕ್ಷ ಭಾರತೀಯರು

By Suvarna Web DeskFirst Published Jun 10, 2017, 4:39 PM IST
Highlights

ಜಗತ್ತಿನ ಅತಿ ಚಿಕ್ಕ ದೇಶವಾದರೂ ಅತ್ಯಂತ ಸಂಪದ್ಭರಿತ ರಾಷ್ಟ್ರ ಎಂಬ ಹೆಗ್ಗಳಿಕೆಯ ಕತಾರ್‌ ಈಗ ಉಸಿರುಗಟ್ಟಿದ ಸ್ಥಿತಿಯಲ್ಲಿದೆ. ಅರಬ್‌ ವಲಯದ ಸಾಂಪ್ರದಾಯಿಕ ಅರಸೊತ್ತಿಗೆಯ ಸರ್ವಾಧಿಕಾರಿ ಆಡಳಿತ ಮತ್ತು ತೀವ್ರ ಕಟ್ಟುನಿಟ್ಟಿನ ಧೋರಣೆಗೆ ವಿರುದ್ಧವಾಗಿ ತುಸು ಉದಾರ ಮತ್ತು ವ್ಯಾವಹಾರಿಕ ಧೋರಣೆಗಳಿಂದಾಗಿ ಹೆಸರಾಗಿರುವ ಕತಾರ್‌'ನ ಅರಸೊತ್ತಿಗೆ, ಇದೀಗ ಅಂತಹ ಧೋರಣೆಯ ಕಾರಣದಿಂದಾಗಿಯೇ ಸಂಕಷ್ಟಕ್ಕೆ ಸಿಲುಕಿದೆ. ಸೌದಿ ಅರೇಬಿಯಾ ಮತ್ತು ಅದರ ಮಿತ್ರರಾಷ್ಟ್ರಗಳು ಕತಾರ್‌ನೊಂದಿಗಿನ ಸಂಬಂಧವನ್ನು ಸಂಪೂರ್ಣ ಕಡಿದುಕೊಂಡಿವೆ. ಇದರಿಂದ ಕತಾರ್‌ ಎದುರಿಸುತ್ತಿರುವ ಮತ್ತು ಭವಿಷ್ಯದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಲೇಖನ: ಶಶಿ ಸಂಪಳ್ಳಿ, ಕನ್ನಡಪ್ರಭ

ಕಳೆದ ಸೋಮವಾರ ಸೌದಿ ಅರೇಬಿಯಾ, ಯುಎಇ, ಬಹರೇನ್‌, ಯೆಮೆನ್‌, ಈಜಿಪ್ಟ್‌, ಲಿಬಿಯಾ ಸೇರಿ ಆರು ದೇಶಗಳು ಕತಾರ್‌ ವಿರುದ್ಧ ಆರ್ಥಿಕ, ರಾಜತಾಂತ್ರಿಕ ದಿಗ್ಬಂಧನ ಜಾರಿ ಮಾಡುತ್ತಲೇ ಆ ಬೆಳವಣಿಗೆ ಭಾರತವೂ ಸೇರಿ ವಿಶ್ವಾದ್ಯಂತ ಆತಂಕ ಹುಟ್ಟುಹಾಕಿದೆ. ಜೊತೆಗೆ ಸೌದಿಯ ಬೆನ್ನಲ್ಲೇ ಮಾರಿಷಸ್‌, ಮಾಲ್ಡೀವ್‌್ಸ ಮತ್ತಿತರ ದೇಶಗಳೂ ಅದೇ ಹಾದಿ ತುಳಿದು, ಕತಾರ್‌ ವಿರುದ್ಧ ಸಂಪೂರ್ಣ ಸಂಬಂಧ ಕಡಿತದ ಘೋಷಣೆ ಮಾಡಿವೆ. ಕೇವಲ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿರುವುದು ಮಾತ್ರವಲ್ಲ; ಬದಲಾಗಿ ಕತಾರ್‌ನೊಂದಿಗೆ ಸೌದಿ ಅರೇಬಿಯಾ ಹಂಚಿಕೊಂಡಿರುವ ಭೂ ಗಡಿ ಮತ್ತು ಜಲಗಡಿಯನ್ನು ಮುಚ್ಚುವ ಆದೇಶ ಮಾಡಿದೆ. ವಾಯುಯಾನವನ್ನೂ ಕೂಡ ರದ್ದುಗೊಳಿಸಿದೆ. ಕತಾರ್‌ನಲ್ಲಿರುವ ತನ್ನ ಪ್ರಜೆ​ಗಳು ಕೂಡಲೇ ಸ್ವದೇಶಕ್ಕೆ ಮರಳಬೇಕು ಮತ್ತು ತನ್ನ ನೆಲದಲ್ಲಿರುವ ಕತಾರ್‌ ಪ್ರಜೆಗಳು ಎರಡು ವಾರದ ಗಡುವಲ್ಲಿ ತಮ್ಮ ದೇಶಕ್ಕೆ ವಾಪಸ್ಸಾಗಬೇಕು ಎಂದಿದೆ. ಅಲ್ಲದೆ ಈ ದೇಶಗಳು ತಮ್ಮ ಗಡಿಯೊಳಗೆ ಕತಾರ್‌ ವಿಮಾನಗಳಿಗೆ ಪ್ರವೇಶವನ್ನೂ ನಿರಾಕರಿಸಿವೆ. 

ಆಹಾರ ಪದಾರ್ಥಗಳದ್ದೇ ಕತಾರ್‌'ಗೆ ದೊಡ್ಡ ಸಮಸ್ಯೆ:
ಒಟ್ಟಾರೆ ಸುಮಾರು 26 ಲಕ್ಷ ಜನಸಂಖ್ಯೆಯ ಪುಟ್ಟದೇಶದಲ್ಲಿ ನೆಲೆಸಿರುವವರ ಪೈಕಿ ಸುಮಾರು 6 ಲಕ್ಷ ಮಂದಿ ಭಾರತೀಯರು ಸೇರಿದಂತೆ ಶೇ.80ರಷ್ಟುಮಂದಿ ವಿದೇಶಿಗರೇ ಇದ್ದಾರೆ. ಹಾಗಾಗಿ ಭಾರತವೂ ಸೇರಿದಂತೆ ಹಲವು ದೇಶಗಳು ತಮ್ಮ ಪ್ರಜೆಗಳ ಬಗ್ಗೆ ಆತಂಕಗೊಂಡಿವೆ. ಅಷ್ಟೇ ಅಲ್ಲ; ಈ ಬಿಕ್ಕಟ್ಟು ಕಳೆದ ಆರು ದಿನಗಳಿಂ­ದಲೂ ಕಗ್ಗಂಟಾಗುತ್ತಲೇ ಸಾಗಿದ್ದು, ಅಂತಾರಾಷ್ಟ್ರೀಯ ಬಿಕ್ಕಟ್ಟಾಗಿ ಮಾರ್ಪಾಡಾಗಿವೆ. ಜಗತ್ತಿನ ತೈಲ ಉತ್ಪಾದನೆಯ ಮುಂಚೂಣಿ ರಾಷ್ಟ್ರವಾದ ಕತಾರ್‌, ತನ್ನ ಆಹಾರ ಮತ್ತು ದಿನ​ಬಳಕೆ ಸಾಮಗ್ರಿಗಳಲ್ಲಿ ಶೇ.80ರಷ್ಟನ್ನು ಹೊರಜಗತ್ತಿನಿಂದಲೇ ತರಿಸಿಕೊಳ್ಳಬೇಕಿದೆ. ಅದ​ರಲ್ಲೂ ಶೇ.40ರಷ್ಟುಪದಾರ್ಥಗಳು ಈವರೆಗೆ ಸೌದಿ ಅರೇಬಿಯಾದ ಭೂಗಡಿಯ ಮೂಲಕವೇ ಹಾದುಬರುತ್ತಿದ್ದವು. ಇದೀಗ ಅಕ್ಷರಶಃ ಭೌತಿಕ ದಿಗ್ಬಂಧನಕ್ಕೊಳಗಾಗಿರುವ ಆ ಪುಟ್ಟದೇಶದಲ್ಲಿ ಆಹಾರ ಮತ್ತು ದಿನಬಳಕೆ ವಸ್ತುಗಳ ಹಾಹಾಕಾರ ಶುರುವಾಗುವ ಆತಂಕ ಕೂಡ ಎದುರಾಗಿದೆ. ಇರಾನ್‌, ಟರ್ಕಿ, ರಷ್ಯಾದಂತಹ ರಾಷ್ಟ್ರಗಳ ಬೆಂಬಲ​ದ ಹೊರ​ತಾಗಿಯೂ ಅಮೆರಿಕ ಮತ್ತು ಸೌದಿ ಅರೇಬಿಯಾ ಬಣದ ವಿರುದ್ಧ ಕತಾರ್‌ ಯಾವ ರೀತಿಯ ನಡೆಯ ಮೂಲಕ ತನ್ನ ಬಿಕ್ಕಟ್ಟು ಪರಿಹರಿಸಿಕೊಳ್ಳುತ್ತದೆ ಎಂಬು​ದು ರಾಜ​​​ಕೀಯ ಪ್ರಶ್ನೆಯಷ್ಟೇ ಅಲ್ಲ, ಅಲ್ಲಿನ 26 ಲಕ್ಷ ಜನರ ನಾಳೆಗಳ ಪ್ರಶ್ನೆ ಕೂಡ ಆಗಿದೆ.

ದಿಗ್ಬಂಧನಕ್ಕೆ ಕಾರಣವಾಗಿದ್ದು ಟಿವಿ ಚಾನೆಲ್‌ನ ಸುದ್ದಿ!
ಸದ್ಯಕ್ಕೆ ಸೌದಿ ಅರೇಬಿಯಾ ಮತ್ತು ಅದರ ಮಿತ್ರ ರಾಷ್ಟ್ರಗಳನ್ನು ಕೆರಳಿಸಿದ್ದು ಕತಾರ್‌ ರಾಜಾಡಳಿತದ ಮಾಲೀಕತ್ವದ ಅಲ್‌ ಜಝೀರಾ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿರುವ ಒಂದು ಸುದ್ದಿ. ಕತಾರ್‌ ರಾಜಪ್ರಭುತ್ವ ವಿಷಯದಲ್ಲಿ ಸೌದಿ ರಾಷ್ಟ್ರಗಳು ಹಗೆತನ ಸಾಧಿಸುವ ಅಗತ್ಯವಿಲ್ಲ ಎಂದಿರುವುದು ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್‌ ವಿರುದ್ಧ ಟೀಕಿಸಿರುವ ಹೇಳಿಕೆಗಳು ಸುದ್ದಿವಾಹಿನಿಯ ವೆಬ್‌ತಾಣದಲ್ಲಿ ಕಳೆದ ಮೇನಲ್ಲಿ ಪ್ರಸಾರವಾಗಿದ್ದವು. ಆದರೆ, ಸುದ್ದಿವಾಹಿನಿ ಅದು ತಾನು ಪ್ರಸಾರ ಮಾಡಿರುವ ಸುದ್ದಿಯಲ್ಲ, ತನ್ನ ವೆಬ್‌ತಾಣವನ್ನು ಹ್ಯಾಕ್‌ ಮಾಡಿ ಐಎಸ್‌ ಸಂಘಟನೆ ಈ ತಿರುಚಿದ ಹೇಳಿಕೆ ಪ್ರಸಾರ ಮಾಡಿದೆ ಎಂದು ಸ್ಪಷ್ಟನೆ ನೀಡಿತ್ತು. ಆದರೆ, ಸೌದಿ ಅರೇಬಿಯಾ ಈ ಸ್ಪಷ್ಟನೆಯನ್ನು ತಳ್ಳಿಹಾಕಿ, ಕತಾರ್‌ ವಿರುದ್ಧ ರಾಜತಾಂತ್ರಿಕ ಸಮರ ಸಾರಿದೆ. ತನ್ನ ದಿಗ್ಬಂಧನ ಕ್ರಮಕ್ಕೆ ಸೌದಿ ನೀಡಿರುವ ಕಾರಣ; ಕತಾರ್‌ ಅರಬ್‌ ವಲಯದ ಮುಸ್ಲಿಂ ಬ್ರದರ್‌ಹುಡ್‌ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ, ತಮ್ಮ ಸಾಂಪ್ರದಾಯಿಕ ವಿರೋಧಿ ಇರಾನ್‌ ಪರ ಧೋರಣೆ ಮುಂದುವರಿಸಿದೆ ಎಂಬುದು.

ದಿಗ್ಬಂಧನ ವಿಧಿಸುವಂತಹ ಕೆಲಸ ಕತಾರ್‌ ಮಾಡಿದ್ದೇನು?
ಅಲ್‌ಖೈದಾ, ಮುಸ್ಲಿಂ ಬ್ರದರ್‌ಹುಡ್‌, ಹಮಾಸ್‌ ಸೇರಿದಂತೆ ಹಲವು ಜಿಹಾದಿ ಗುಂಪು​ಗಳಿಗೆ ಹಣಕಾಸು, ಶಸ್ತ್ರಾಸ್ತ್ರ ಮತ್ತು ನೆಲೆಯನ್ನು ಒದಗಿಸಿಕೊಡುವ ಮೂಲಕ ಭಯೋ​ತ್ಪಾ​ದನೆ ಪರವಾಗಿದೆ ಎಂಬ ಸೌದಿ ಅರೇಬಿಯಾ ಮತ್ತಿತರ ರಾಷ್ಟ್ರಗಳ ಆರೋಪಗಳನ್ನು ಕತಾರ್‌ ತಳ್ಳಿಹಾಕುತ್ತಲೇ ಬಂದಿದೆ. ಅಲ್ಲದೆ, ಐಸಿಸ್‌ ಸಂಘಟನೆ ವಿರು​ದ್ಧ​ದ ಜಂಟಿ ಹೋರಾಟ ವೇದಿಕೆಯಲ್ಲಿ ಅಮೆರಿಕದೊಂದಿಗೆ ಕತಾರ್‌ ಕೂಡ ಕೈಜೋಡಿ​ಸಿ​ದೆ. ಆದರೆ, ವಾಸ್ತವವೆಂದರೆ, ಸಿರಿಯಾದ ಅಧ್ಯಕ್ಷ ಬಷರ್‌ ಅಲ್‌ ಅಸದ್‌ ವಿರುದ್ಧ ಹೋರಾ​​​ಡುತ್ತಿರುವ ಇಸ್ಲಾಮಿಕ್‌ ಬಂಡುಕೋರರಿಗೆ ಇದೇ ಕತಾರ್‌ ಮತ್ತು ಸೌದಿ ಅರೇಬಿ​ಯಾ​ಗಳೆರಡೂ ಶಸ್ತ್ರ ಮತ್ತು ಹಣಕಾಸು ನೆರವು ನೀಡಿವೆ. ಅಲ್‌ಖೈದಾದೊಂದಿಗೂ ಕತಾರ್‌ ಆಪ್ತ ಸಂಬಂಧ ಹೊಂದಿದೆ ಎಂಬುದನ್ನು ಆ ರಾಷ್ಟ್ರ ತಳ್ಳಿಹಾಕಿದರೂ, ಆ ಆರೋಪ ಸುಳ್ಳಲ್ಲ ಎಂಬುದಕ್ಕೆ ಹಲವು ಸಾಕ್ಷ್ಯಗಳಿವೆ. ಮತ್ತೊಂದು ಭಯೋತ್ಪಾದನಾ ಸಂಘ​ಟನೆ ಆಫ್ಘನ್‌ ತಾಲಿಬಾನ್‌ ಕತಾರ್‌ ರಾಜಧಾನಿ ದೋಹಾದಲ್ಲಿ ಕಚೇರಿಯನ್ನೇ ಹೊಂದಿದೆ.

ಬಿಕ್ಕಟ್ಟಿನ ಪರಿಣಾಮವೇನು?
ತತ್‌ಕ್ಷಣಕ್ಕೆ ಈ ಬಿಕ್ಕಟ್ಟು ಮೂರು ಪ್ರಮುಖ ಪರಿಣಾಮಗಳನ್ನು ಬೀರಲಿದೆ. ಒಂದು ವಿಮಾನ​ಯಾನ, ಎರಡನೆಯದು ಆಹಾರ ಮತ್ತು ಮೂರನೆಯದು ವಿಶ್ವಕಪ್‌ ಫುಟ್ಬಾಲ್‌. ಈಗಾಗಲೇ ಸುಮಾರು ಒಂಭತ್ತು ಅರಬ್‌ ಮತ್ತು ಆಫ್ರಿಕಾ ದೇಶಗಳು ಕತಾರ್‌ಗೆ ಸಂಪರ್ಕ ಕಲ್ಪಿಸುವ ತನ್ನ ವಿಮಾನಗಳನ್ನು ರದ್ದು ಮಾಡಿವೆ. ಸೌದಿ ಅರೇಬಿಯಾ, ಯುಎಇ, ಈಜಿಪ್ಟ್‌ಗಳು ತಮ್ಮ ಗಡಿ ವ್ಯಾಪ್ತಿಯಲ್ಲಿ ಕತಾರ್‌ ವಿಮಾನಗಳಿಗೆ ಪ್ರವೇಶ ನಿರ್ಬಂಧಿ​ಸಿವೆ. ಹಾಗಾಗಿ ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಟರ್ಮಿನಲ್‌ ಆಗಿ​ರುವ ದೋಹಾದ ಮೂಲಕ ಹಾದುಹೋಗುವ ವಿವಿಧ ದೇಶಗಳ ಪ್ರಯಾಣಿಕರಿಗೆ ಮತ್ತು ಸ್ಥಳೀಯ ಪ್ರಯಾಣಿಕರಿಗೆ ತೀವ್ರ ತೊಂದರೆ​ಯಾಗಿದೆ. ಇನ್ನು ಕತಾರ್‌ ಬಳಸುವ ಆಹಾರ ಮತ್ತು ದಿನಬಳಕೆ ವಸ್ತಗಳ ಪೈಕಿ ಶೇ.80ರಷ್ಟುಹೊರಗಿನಿಂದಲೇ ಬರಬೇಕು. ಈ ದಿಗ್ಬಂಧನದಿಂದಾಗಿ ಅಲ್ಲಿನ ಮಾರುಕಟ್ಟೆಗಳಲ್ಲಿ ಈಗಾಗಲೇ ಹಾಲು ಮುಂತಾದ ಅಗತ್ಯ ವಸ್ತುಗಳ ಖರೀದಿಗೆ ಸರದಿ ಸಾಲುಗಳು ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಕ್ಷಾಮದ ಸ್ಥಿತಿ ತಲೆದೋರಬಹುದು. 2022ರ ವಿಶ್ವಕಪ್‌ ಕ್ರೀಡಾಕೂಟದ ಆತಿಥ್ಯ ವಹಿಸಿರುವ ಕತಾರ್‌, ರಾಜಧಾನಿ ದೋಹದಲ್ಲಿ 8ಕ್ಕೂ ಹೆಚ್ಚು ಫುಟ್ಬಾಲ್‌ ಸ್ಟೇಡಿಯಂಗಳನ್ನು ನಿರ್ಮಾಣ ಮಾಡುತ್ತಿದೆ. ಈ ಹಂತದಲ್ಲಿ ಸರಕು ಸಾಮಗ್ರಿ ಹರಿವು ಸ್ಥಗಿತಗೊಂಡರೆ, ವಿಶ್ವಕಪ್‌ ಮೇಲೂ ಆತಂಕದ ಕರಿಮೋಡ ಕವಿಯಲಿದೆ.

ಕತಾರ್‌'ನಲ್ಲಿರುವ ಭಾರತೀಯರ ರಕ್ಷಣೆ ಬದ್ಧ:
ಕತಾರ್‌ನಲ್ಲಿ ನೆಲೆಸಿರುವ ಆರು ಲಕ್ಷ ಭಾರತೀಯರ ನೆರವಿಗೆ ತತ್‌ಕ್ಷಣಕ್ಕೆ ಧಾವಿಸಿರುವ ಭಾರತ ಸರ್ಕಾರ, ಯಾವುದೇ ಪರಿಸ್ಥಿತಿಯಲ್ಲೂ ಭಾರತೀಯರ ಹಿತರಕ್ಷಣೆಗೆ ಸರ್ಕಾರ ಬದ್ಧ ಎಂದು ಅಭಯ ನೀಡಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ, ಕತಾರ್‌ನ ಭಾರತೀಯ ಧೂತವಾಸ ಕಚೇರಿ ಹಾಗೂ ಕತಾರ್‌ ಪ್ರಭುತ್ವದೊಂದಿಗೆ ಮಾತುಕತೆ ನಡೆಸಿದ್ದು, ಭಾರತಕ್ಕೆ ವಾಪಸ್ಸಾಗಲು ಬಯಸುವ ಭಾರತೀಯರು ಹಾಗೂ ಪ್ರವಾಸಿಗರಿಗೆ ವಿಮಾನಯಾನ ಅಡಚಣೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದೆ. ಅಲ್ಲದೆ, ಸದ್ಯಕ್ಕೆ ಕತಾರ್‌ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದ್ದು, ಅಲ್ಲಿನ ಬೆಳವಣಿಗೆಗಳನ್ನು ಅವಲೋಕಿಸಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಭಾರತ ಪ್ರಜೆಗಳ ರಕ್ಷಣೆ ಮತ್ತು ಅವರನ್ನು ತವರಿಗೆ ಕರೆತರಲು ಬೇಕಾದ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದೂ ಸರ್ಕಾರ ಹೇಳಿದೆ. ಕತಾರ್‌ನಲ್ಲಿ ಪ್ರಮುಖವಾಗಿ ಕಟ್ಟಡ ನಿರ್ಮಾಣ, ವೈದ್ಯಕೀಯ ಸೇವೆ, ಶಿಕ್ಷಣ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ತೊಡಗಿಸಿಕೊಂಡಿದ್ದಾರೆ. 

ಕತಾರ್‌ ಸಹಜ ಸ್ಥಿತಿಗೆ ಮರಳುವ ವಿಶ್ವಾಸ:
ಜಾಗತೀಕರಣ ಇಡೀ ವಿಶ್ವದ ರಾಷ್ಟ್ರಗಳನ್ನು ಪರಾವಲಂಬಿಗಳನ್ನಾಗಿ ಮಾಡಿದೆ. ಈ ಹಿನ್ನೆಲೆಯಲ್ಲಿ, ವಿಶ್ವದ ಅತ್ಯಂತ ಮೊದಲ ಹತ್ತು ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾದ ಕತಾರ್‌ಗೆ ಇತ್ತೀಚಿನ ಬೆಳವಣಿಗೆಗಳು ಚಿಂತೆಗೀಡು ಮಾಡಿವೆ. ನೆರೆ ರಾಷ್ಟ್ರಗಳು ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವ ತೀರ್ಮಾನ ಆಘಾತಕಾರಿ ಮತ್ತು ಅಪಾಯಕಾರಿ. ಕತಾರ್‌ ಅನಿಲಭರಿತ (ಲಿಕ್ವಿ ಫೈಡ್‌, ನ್ಯಾಚುರಲ್‌ ಗ್ಯಾಸ್‌) ಸಂಪದ್ಭರಿತ ದೇಶ. 2022ರ ವಿಶ್ವಕಪ್‌ ಫುಟ್‌'ಬಾಲ್‌ ನಡೆಸುವ ತಯಾರಿಯಲ್ಲಿರುವ ರಾಷ್ಟ್ರ. ಮೂಲಸೌಕರ್ಯಗಳು, ಮೆಟ್ರೋ, ಸ್ಟೇಡಿಯಂಗಳ ನಿರ್ಮಾಣ ಭರದಿಂದ ಸಾಗಿದೆ. ನಿರ್ಮಾಣ ಸಂಬಂಧದ ಯೋಜನೆಗಳು ಬಹಳಷ್ಟಿವೆ. ನೆರೆ ದೇಶಗಳಿಂದ ಆಮದಾಗುವ ಸಾಮಗ್ರಿಗಳು, ಕಚ್ಚಾವಸ್ತುಗಳಿಗೆ ಈ ಬೆಳವಣಿಗೆಯಿಂದ ಹೊಡೆತ ಬೀಳಬಹುದು.
ಸದ್ಯಕ್ಕೆ ಜೀವನ ಎಂದಿನಂತಿದೆ. ಹಾಲು ಮತ್ತು ಅದರ ಉತ್ಪನ್ನಗಳ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ತಿರುವು ಪಡೆಯಬಹುದೆಂಬುದರ ಮೇಲೆ ಎಲ್ಲರ ಉದ್ಯೋಗ ಮತ್ತು ಭವಿಷ್ಯ ನಿಂತಿದೆ. ಈ ದೇಶದ ಮೇಲೆ ಕೇಳಿಬಂದಿರುವ ಆರೋಪಗಳು ದೂರಾಗಲಿ. ಇಲ್ಲಿ ನೆಲೆಸಿರುವ 140ಕ್ಕೂ ಹೆಚ್ಚು ದೇಶಗಳ ಜನರ ಬದುಕು ಮತ್ತೆ ಹಸನಾಗಲಿ. ವಿಶ್ವ ಭೂಪಟದಲ್ಲಿ ಕತಾರ್‌ ಮತ್ತೆ ರಾರಾಜಿಸಲಿ.
ಕತಾರ್‌ ನಮಗೆ ಕರ್ಮಭೂಮಿ. ಕಳೆದ 19 ವರ್ಷಗಳಿಂದ ಕುಟುಂಬಸಮೇತ ಕತಾರ್‌ ರಾಜಧಾನಿ ದೋಹಾದಲ್ಲಿ ವಾಸವಾಗಿದ್ದೇನೆ. ಈಗಿನ ರಾಜತಾಂತ್ರಿಕ ನಿಬಂಧನೆಗಳ ಬೆಳವಣಿಗೆಗಳು ಕತಾರಿನ ಎಲ್ಲಾ ನಿವಾಸಿಗಳಲ್ಲೂ ಚಿಂತೆಯ ಕಾರ್ಮೋಡ ಕವಿದಿದೆ. ಕತಾರಿನ ಸರ್ಕಾರ, ದಿನನಿತ್ಯ ಬಳಕೆಯ ವಸ್ತುಗಳ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದೆ. ಆದರೂ, ಸಹಜವಾಗಿ ಹಲವು ಮಂದಿ ವಸ್ತುಗಳನ್ನು ಶೇಖರಣೆ ಮಾಡಿಡುವ ಪ್ರಯತ್ನ ಮಾಡುತ್ತಿದ್ದಾರೆ. ಡೈರಿ ಉತ್ಪನ್ನಗಳ ಕೊರತೆ ಕಂಡುಬಂದಿದೆ. ಮಿಕ್ಕಂತೆ ಅಗತ್ಯ ವಸ್ತುಗಳು ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯ. ಅದೇ ಗಡಿಬಿಡಿಯ ಬದುಕು ಎಲ್ಲರದು.
ಕತಾರ್‌ ತೊರೆಯುವ, ಕೆಲಸ ಬಿಟ್ಟು ಭಾರತಕ್ಕೆ ಮರುಳುವ ಯೋಚನೆ ನನಗಂತೂ ಬಂದಿಲ್ಲ. ಹಾಗೊಮ್ಮೆ ಅನಿವಾರ್ಯವಾದರೆ, ಸ್ವದೇಶಕ್ಕೆ ಹಿಂತಿರುಗಲು ಹಿಂದೆ, ಮುಂದೆ ನೋಡುವುದಿಲ್ಲ. ಇತ್ತೀಚೆಗೆ ನಡೆದ ನಮ್ಮ ಸಂಘದ ಸಭೆಯಲ್ಲಿ ಈ ವಿಚಾರ ಅನೌಪಚಾರಿಕವಾಗಿ ಚರ್ಚೆಯಾಯಿತು. ಎಲ್ಲರದೂ ಕಾದು ನೋಡುವ ಮನಸ್ಸು. ಬಹುಶಃ ಇದು ಇಲ್ಲಿನ ಎಲ್ಲ ಅನಿವಾಸಿ ಭಾರತೀಯರ ಮನಸ್ಥಿತಿ ಕೂಡ. ಸಮಸ್ಯೆಗೆ ಬೇಗ ಪರಿಹಾರ ದೊರೆತು, ಮಾಮೂಲಿಯಂತೆ ಜೀವನ ಸಾಗೀತು ಎಂಬ ಆಶಾಭಾವನೆ ಇದೆ.
- ಎಚ್‌ ಕೆ ಮಧು, ಕತಾರ್‌ ಕರ್ನಾಟಕ ಸಂಘದ ಅಧ್ಯಕ್ಷ

click me!