ಗೌರಿ ಹಂತಕ ಯಾರು..? : ಕೊನೆಗೂ ತಿಳಿದ ಸತ್ಯವೇನು..?

By Web DeskFirst Published Sep 5, 2018, 7:48 AM IST
Highlights

ಹತ್ಯೆ ಕೃತ್ಯ ನಡೆದ ದಿನ ಗೌರಿ ಅವರ ಮನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ 9 ಸೆಕೆಂಡ್‌ಗಳ ದೃಶ್ಯಾವಳಿ ಪರಿಶೀಲಿಸಿದ ಗುಜರಾತ್‌ ಎಫ್‌ಎಸ್‌ಎಲ್‌ ತಜ್ಞರು ವಾಗ್ಮೋರೆಯೇ ಶೂಟರ್‌ ಎಂದು ಸ್ಪಷ್ಟಪಡಿಸಿದ್ದಾರೆ. ತನ್ಮೂಲಕ ವಾಗ್ಮೋರೆ ಕೃತ್ಯ ರುಜುವಾತುಪಡಿಸಲು ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ಬಹುಮುಖ್ಯ ವೈಜ್ಞಾನಿಕ ಸಾಕ್ಷ್ಯ ಸಿಕ್ಕಂತಾಗಿದೆ.

ಬೆಂಗಳೂರು :  ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ವಿಜಯಪುರದ ಸಿಂದಗಿ ಪಟ್ಟಣದ ಪರಶುರಾಮ್‌ ವಾಗ್ಮೋರೆಯೇ ಗುಂಡು ಹಾರಿಸಿದ್ದು ಎಂಬುದಾಗಿ ಎಸ್‌ಐಟಿಗೆ ರಾಷ್ಟ್ರದ ಅತ್ಯುತ್ತಮ ವಿಧಿ ವಿಜ್ಞಾನ ಪ್ರಯೋಗಾಲಯ ಎಂದೇ ಹೆಸರು ಪಡೆದಿರುವ ಗುಜರಾತ್‌ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ವರದಿ ಸಲ್ಲಿಸಿದ್ದಾರೆ.

ಹತ್ಯೆ ಕೃತ್ಯ ನಡೆದ ದಿನ ಗೌರಿ ಅವರ ಮನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ 9 ಸೆಕೆಂಡ್‌ಗಳ ದೃಶ್ಯಾವಳಿ ಪರಿಶೀಲಿಸಿದ ಗುಜರಾತ್‌ ಎಫ್‌ಎಸ್‌ಎಲ್‌ ತಜ್ಞರು ವಾಗ್ಮೋರೆಯೇ ಶೂಟರ್‌ ಎಂದು ಸ್ಪಷ್ಟಪಡಿಸಿದ್ದಾರೆ. ತನ್ಮೂಲಕ ವಾಗ್ಮೋರೆ ಕೃತ್ಯ ರುಜುವಾತುಪಡಿಸಲು ವಿಶೇಷ ತನಿಖಾ ದಳ (ಎಸ್‌ಐಟಿ)ಕ್ಕೆ ಬಹುಮುಖ್ಯ ವೈಜ್ಞಾನಿಕ ಸಾಕ್ಷ್ಯವು ಲಭಿಸಿದಂತಾಗಿದೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ಆರೋಪದಡಿ ಬಂಧಿತರಾಗಿರುವ ಹಿಂದೂ ಸಂಘಟನೆಗಳ ಮುಖಂಡರ ಬಳಿ ಗೌರಿ ಹತ್ಯೆಗೆ ಬಳಸಲಾದ ಪಿಸ್ತೂಲ್‌ ಲಭಿಸಿರುವ ಕುರಿತು ಅಧಿಕೃತ ಎಫ್‌ಎಸ್‌ಎಲ್‌ ವರದಿ ಬರುವುದಕ್ಕೂ ಮುನ್ನವೇ ಶೂಟರ್‌ ಬಗ್ಗೆ ಸಾಂದರ್ಭಿಕ ಸನ್ನಿವೇಶ ಆಧರಿಸಿ ನೀಡಿರುವ ಈ ವರದಿ ಮಹತ್ವದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪತ್ತೇದಾರಿಕೆಗೆ ವೈಜ್ಞಾನಿಕವಾಗಿ ‘ಪ್ರೋಡಿಯಾಟಿಕ್‌ ಗೇಟ್‌ ಅನಾಲಿಸಿಸ್‌’ (ಪ್ರವೇಶ ದ್ವಾರ ಸಾಂದರ್ಭಿಕ ವಿಶ್ಲೇಷಣೆ) ಪದ್ಧತಿ ಎನ್ನಲಾಗುತ್ತದೆ. ಇದೇ ರೀತಿ ಬೆಂಗಳೂರಿನ ಐಐಎಸ್‌ಸಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದ ಪ್ರಕರಣದಲ್ಲಿ ಗೇಟ್‌ ಅನಾಲಿಸಿಸ್‌ ಮೂಲಕವೇ ತನಿಖಾ ಸಂಸ್ಥೆಗಳು ಶಂಕಿತರ ಗುರುತು ಪತ್ತೆಹಚ್ಚಿದ್ದವು ಎಂದು ಮೂಲಗಳು ಹೇಳಿವೆ.

ಗೇಟ್‌ ಅನಾಲಿಸಿಸ್‌ ಮೂಲಕ ಗೌರಿ ಲಂಕೇಶ್‌ ಹಂತಕನನ್ನು ಎಫ್‌ಎಸ್‌ಎಲ್‌ ತಜ್ಞರು ಪತ್ತೆಹಚ್ಚಿದ್ದಾರೆ. ಕೃತ್ಯ ನಡೆದ ದಿನ ವಾಗ್ಮೋರೆ ಹೆಲ್ಮೆಟ್‌ ಧರಿಸಿದ್ದ. ಅಂದು ಗೌರಿ ಅವರ ಮನೆ ಗೇಟ್‌ ಬಳಿ ಆತನ ನಡಿಗೆ, ಆತ ಧರಿಸಿದ್ದ ಜರ್ಕಿನ್‌ ಹಾಗೂ ಗೇಟ್‌ ತೆಗೆದು ಹೊರಬರುವಾಗಿನ ಕೈಚಲನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಎಫ್‌ಎಸ್‌ಎಲ್‌ ತಜ್ಞರು, ಗೌರಿ ಅವರಿಗೆ ಗುಂಡು ಹಾರಿಸಿದ್ದು ವಾಗ್ಮೋರೆಯೇ ಎಂದು ಸ್ಪಷ್ಟಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತಜ್ಞರು ಹೇಗೆ ಪತ್ತೆಹಚ್ಚಿದ್ದು ಹೇಗೆ:  ಕಳೆದ 2017ರ ಸೆಪ್ಟೆಂಬರ್‌ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್‌ ಲೇಔಟ್‌ನಲ್ಲಿ ಗೌರಿ ಲಂಕೇಶ್‌ ಅವರ ನಿವಾಸದ ಗೇಟ್‌ ಬಳಿಯೇ ಗುಂಡಿನ ದಾಳಿ ನಡೆದಿತ್ತು. ಈ ಕೃತ್ಯದ ತನಿಖೆ ನಡೆಸಿದ ಎಸ್‌ಐಟಿ ಅಧಿಕಾರಿಗಳಿಗೆ ಗೌರಿ ಅವರ ಮನೆ ಸಿಸಿಟಿವಿ ಕ್ಯಾಮೆರಾದಲ್ಲಿ ಗೇಟ್‌ ಬಳಿ ಹೆಲ್ಮೆಟ್‌ ಮತ್ತು ಜರ್ಕಿನ್‌ ಧರಿಸಿದ್ದ ಶೂಟರ್‌ನ ಚಲನವಲನದ 9 ಸೆಕೆಂಡ್‌ಗಳ ದೃಶ್ಯಾವಳಿ ಲಭಿಸಿತು. ಇದನ್ನು ಸಂಗ್ರಹಿಸಿದ ಎಸ್‌ಐಟಿ, ಆ ದೃಶ್ಯಾವಳಿ ಪರಿಶೀಲಿಸಿ ಆರೋಪಿ ಕುರಿತು ಮಾಹಿತಿ ನೀಡುವಂತೆ ಗುಜರಾತ್‌ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕೋರಿತ್ತು.

ಅಷ್ಟರಲ್ಲಿ ಸಿಕ್ಕಿಬಿದ್ದ ಪ್ರಕರಣದ ಪ್ರಮುಖ ಸಂಚುಕೋರ ಮಹಾರಾಷ್ಟ್ರದ ಅಮೋಲ್‌ ಕಾಳೆಯ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ಗೌರಿ ಅವರಿಗೆ ಗುಂಡು ಹಾರಿಸಿದ ಆರೋಪದ ಮೇರೆಗೆ ವಿಜಯಪುರದ ಸಿಂದಗಿ ಪಟ್ಟಣದ ಪರಶುರಾಮ್‌ ವಾಗ್ಮೋರೆಯನ್ನು ಅಧಿಕಾರಿಗಳು ಬಂಧಿಸಿದ್ದರು. ಆನಂತರ ಗೌರಿ ಅವರ ಮನೆ ಬಳಿಗೆ ಕರೆದೊಯ್ದು ಹತ್ಯೆ ಕೃತ್ಯದ ‘ಮರು ಸೃಷ್ಟಿ’ ನಡೆಸಿ ಎಸ್‌ಐಟಿ ಚಿತ್ರೀಕರಣ ಮಾಡಿತ್ತು. ಈ ವಿಡಿಯೋ ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಮತ್ತೆ ಗುಜರಾತ್‌ ಎಫ್‌ಎಸ್‌ಎಲ್‌ಗೆ ಎಸ್‌ಐಟಿ ಕಳುಹಿಸಿತು. ಈ ಎರಡು ವಿಡಿಯೋಗಳನ್ನು ತುಲನೆ ಮಾಡಿ ಶೂಟರ್‌ನನ್ನು ತಜ್ಞರು ಗುರುತು ಹಿಡಿದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!