ಕ್ಯೂಬಾ, ಸಮಾಜವಾದಿ ಕ್ರಾಂತಿ, ಹಾಗೂ ಕ್ಯಾಸ್ಟ್ರೋ ಹೋರಾಟ

By Suvarna Web DeskFirst Published Nov 25, 2016, 8:28 PM IST
Highlights

ಸಮಾಜವಾದದ ಮೇಲೆ ನಂಬಿಕೆಯಿಟ್ಟಿದ್ದ ಕ್ಯಾಸ್ಟ್ರೋ ಹೋರಾಟಕ್ಕೆ ಕ್ಯೂಬನ್ ಜನತೆಯು ಕೂಡಾ ಅಪಾರ ಬೆಂಬಲ ನೀಡಲಾರಂಭಿಸಿತ್ತು. 6 ವರ್ಷಗಳ ಸುಧೀರ್ಘವಾದ ಹೋರಾಟದ ಬಳಿಕ 1 ಜನವರಿ 1959ರಂದು ಬಂಡವಾಳಶಾಹಿ, ಅಮೆರಿಕಾ-ಪರವಾಗಿದ್ದ ಬಾಟಿಸ್ಟ ಮಿಲಿಟರ್ ಆಡಳಿತವನ್ನು ಕಿತ್ತೆಸೆಯಲು ಕ್ಯಾಸ್ಟ್ರೋ ಯಶಸ್ವಿಯಾಗಿದ್ದರು.

ಲ್ಯಾಟಿನ್ ಅಮೆರಿಕನ್ ದೇಶವಾಗಿರುವ ಕ್ಯೂಬಾ 1940 ದಶಕದಲ್ಲಿ ತೀವ್ರ ರೀತಿಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಒಂದು ಕಡೆ ದೇಶದ ಆಂತರೀಕ ವ್ಯವಹಾರಗಳಲ್ಲಿ ಹೆಚ್ಚುತ್ತಿದ್ದ ಅಮೆರಿಕಾದ ಹಸ್ತಕ್ಷೇಪ, ಇನ್ನೊಂದು ಕಡೆ ಕುಸಿಯುತ್ತಿದ್ದ ದೇಶದ ಆರ್ಥಿಕಥೆ. ನಿರುದ್ಯೋಗ , ಬಡತನ ಹಾಗೂ ಭ್ರಷ್ಟಾಚಾರದಂಥ ಸಮಸ್ಯೆಗಳು ಕ್ಯೂಬಾವನ್ನು ಅರಾಜಕತೆಗೆ ನೂಕಿದ್ದ ಸಂದರ್ಭದಲ್ಲಿ, ಫಲಗೆನ್ಶಿಯೋ ಬಾಟಿಸ್ಟ 1952ರಲ್ಲಿ  ಅಮೆರಿಕಾ ಸಹಾಯದಿಂದ ಸೇನಾದಂಗೆ ನಡೆಸಿ ಪ್ರಜಾತಾಂತ್ರಿಕ ಸರ್ಕಾರವನ್ನು ಉರುಳಿಸಿ ಅಧ್ಯಕ್ಷರಾದರು. ಮಾಜಿ ಯೋಧನಾಗಿದ್ದ ಬಾಟಿಸ್ಟ 1940ರಲ್ಲಿ ಪ್ರಜಾಸತ್ತಾತ್ಮಕವಾಗಿ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ, ಹಾಗೂ 1952ರಲ್ಲಿ ಸೇನಾದಂಗೆಯ ಮೂಲಕ ಅಧ್ಯಕ್ಷರಾಗಿ ಅವರ ರಾಜಕೀಯ ಹಾಗೂ ಆರ್ಥಿಕ ನಿಲುವುಗಳಲ್ಲಿ ಅಜಗಜಾಂತರವಿತ್ತು. ಅಮೆರಿಕಾಕ್ಕೆ ಅತೀ ನಿಷ್ಟರಾಗಿದ್ದ ಸರ್ವಾಧಿಕಾರಿ ಬಾಟಿಸ್ಟರ ನಿಲುವುಗಳು ಕ್ಯೂಬಾದ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದವು.

ಆ ಸಂದರ್ಭದಲ್ಲಿ ಬಾಟಿಸ್ಟರ ಸರ್ವಾಧಿಕಾರಿ ಧೋರಣೆ ಹಾಗೂ ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ್ದು ಯುವ ವಕೀಲನಾಗಿದ್ದ ಫಿಡೆಲ್ ಕ್ಯಾಸ್ಟ್ರೋ, ಬಾಟಿಸ್ಟ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆ ಹೂಡಿದರು; ದೇಶದಲ್ಲಿ ಉಂಟಾಗಿರುವ ಅರಾಜಕತೆ ಬಗ್ಗೆ ಪ್ರಜಾಸತ್ತಾತ್ಮಕವಾಗಿ ಹೋರಾಡಿದರು. ಆದರೆ ಅದ್ಯಾವುದೂ ಫಲ ನೀಡಲಿಲ್ಲ. ಸರ್ವಾಧಿಕಾರಿ ಆಡಳಿತದಲ್ಲಿ ಪ್ರಜಾತಾಂತ್ರಿಕ ಹೋರಾಟಗಳು ಯಾವುದೇ ಧನಾತ್ಮಕ ಫಲಿತಾಂಶ ನೀಡದಿರುವುದನ್ನು ಅರಿತ ಕ್ಯಾಸ್ಟ್ರೋ, ಕೊನೆಗೆ 1953ರಲ್ಲಿ ತನ್ನ ಸಹೋದರ ರಾವ್ಲ್ ಕ್ಯಾಸ್ಟ್ರೋನೊಂದಿಗೆ ಸೇರಿ ‘ದಿ ಮೂವ್’ಮೆಂಟ್’ ಎಂಬ ಸಶಸ್ತ್ರ  ಹೋರಾಟಪಡೆಯನ್ನು ಕಟ್ಟಿದರು.

ಸಮಾಜವಾದದ ಮೇಲೆ ನಂಬಿಕೆಯಿಟ್ಟಿದ್ದ ಕ್ಯಾಸ್ಟ್ರೋ ಹೋರಾಟಕ್ಕೆ ಕ್ಯೂಬನ್ ಜನತೆಯು ಕೂಡಾ ಅಪಾರ ಬೆಂಬಲ ನೀಡಲಾರಂಭಿಸಿತ್ತು. 6 ವರ್ಷಗಳ ಸುಧೀರ್ಘವಾದ ಹೋರಾಟದ ಬಳಿಕ 1 ಜನವರಿ 1959ರಂದು ಬಂಡವಾಳಶಾಹಿ, ಅಮೆರಿಕಾ-ಪರವಾಗಿದ್ದ ಬಾಟಿಸ್ಟ ಮಿಲಿಟರ್ ಆಡಳಿತವನ್ನು ಕಿತ್ತೆಸೆಯಲು ಕ್ಯಾಸ್ಟ್ರೋ ಯಶಸ್ವಿಯಾಗಿದ್ದರು.

ಕ್ಯಾಸ್ಟ್ರೋ ಅಧಿಕಾರಕ್ಕೆ ಬಂದ ಬಳಿಕ ದೇಶದ ಹಿತಾಸಕ್ತಿಯನ್ನು ಕಾಪಾಡಲು ಆರ್ಥಿಕ, ರಾಜಕೀಯ ವಲಯಗಳಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಜಾರಿಗೆತಂದರು. ಕ್ಯೂಬಾ ದೇಶದ ಆರ್ಥಿಕತೆಯನ್ನು ಮೇಲೆತ್ತಿದರು. ಆ ನಡುವೆ ಅಮೆರಿಕಾದೊಂದಿಗೆ ವೈರತ್ವವನ್ನು ಕಟ್ಟಿಕೊಳ್ಳಬೇಕಾಯಿತು. ಅಮೆರಿಕಾ ಅವರನ್ನು ಕೆಳಗಿಳಿಸಲು ವಿವಿಧ ರರೀತಿಯ ಪ್ರಯತ್ನಗಳನ್ನು ಮಾಡಿತ್ತು. ಆದರೆ ಅವೆಲ್ಲಾವನ್ನೂ ಸಮರ್ಥವಾಗಿ ನಿಭಾಯಿಸಿದ ಕ್ಯಾಸ್ಟ್ರೋ ಕ್ಯೂಬಾ ದೇಶದ ಮಹಾನ್ ಹೀರೋ ಆಗಿ ಮಾರ್ಪಟ್ಟಿದ್ದರು.

ಸಮಾಜವಾದ ವಿಚಾರಧಾರೆಗೆ ಇತರ ಕಡೆಯೂ ಪ್ರಸರಿಸಬಹುದೆಂಬ ಕಾರಣಕ್ಕೆ ಅಮೆರಿಕಾ ಕ್ಯೂಬಾದ ಸರ್ಕಾರವನ್ನು ಮಾನ್ಯತೆ ಮಾಡಲು ತಯಾರಿರಲಿಲ್ಲ.  ಆದರೆ ಐದು ದಶಕಗಳ ಬಳಿಕ, ಅಂದರೆ 2010ರಲ್ಲಿ ಅಮೆರಿಕಾ ಹಾಗೂ ಕ್ಯೂಬಾ ಸಂಬಂಧಗಳನ್ನು ಮರು-ಸ್ಥಾಪಿಸುವ ಬಗ್ಗೆ ಅಮೆರಿಕಾ ಪ್ರಯತ್ನಗಳನ್ನು ಆರಂಭಿಸಿತ್ತು. ಅದರ ಫಲವಾಗಿ 2015ರಲ್ಲಿ ಅಮೆರಿಕಾ ರಾಯಭಾರಿ ಕಚೇರಿಯನ್ನು ಪುನಾರಂಭಿಸಿತು.

ಸುದೀರ್ಘಕಾಲ ರಾಷ್ಟ್ರವೊಂದರ ಮುಖ್ಯಸ್ಥನಾಗಿರುವವರಲ್ಲಿ ರಾಷ್ಟ್ರನಾಯಕರಲ್ಲಿ ಫಿಡಲ್ ಕ್ಯಾಸ್ಟ್ರೋ ಒಬ್ಬರು. ಸುಮಾರು 5 ದಶಕಗಳ ಕಾಲ ಅವರು ದೇಶವನ್ನು ಮುನ್ನಡೆಸಿದ್ದಾರೆ. ಅನಾರೋಗ್ಯದ ಕಾರಣದಿಂದ 2008 ರ ಫೆಬ್ರವರಿ 19ರಂದು ಅಧಿಕೃತವಾಗಿ ರಾಜೀನಾಮೆ ನೀಡಿದ ಕ್ಯಾಸ್ಟ್ರೋ ಅಧಿಕಾರದ ಚುಕ್ಕಾಣಿಯನ್ನು ತನ್ನ ತಮ್ಮ ರಾವ್ಲ್ ಸುಪರ್ಧಿಗೊಪ್ಪಿಸಿದ್ದರು.

click me!