ಇಂದಿನಿಂದ 2ನೇ 6 ಬೋಗಿ ಮೆಟ್ರೋ ಸಂಚಾರ

By Web DeskFirst Published Oct 4, 2018, 9:12 AM IST
Highlights

ಮತ್ತೊಂದು ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಸಿದ್ಧಗೊಂಡಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಇಂದು ಬೆಳಗ್ಗೆ 11ಕ್ಕೆ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್‌)ದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ.

ಬೆಂಗಳೂರು : ಆರು ಬೋಗಿಗಳ ಮತ್ತೊಂದು ಮೆಟ್ರೋ ರೈಲು ವಾಣಿಜ್ಯ ಸಂಚಾರಕ್ಕೆ ಸಿದ್ಧಗೊಂಡಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಅ.4ರಂದು ಬೆಳಗ್ಗೆ 11ಕ್ಕೆ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್‌)ದಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ.

ಎರಡನೇ ಹಂತದಲ್ಲಿ ಬೆಮೆಲ್‌ ಸಂಸ್ಥೆ ಮೂರು ಬೋಗಿಗಳನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿತ್ತು. ಆರು ಬೋಗಿಗಳ ರೈಲಾಗಿ ಪರಿವರ್ತಿಸಿದ ಬಳಿಕ ನಡೆಸಿದ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಅ.4ರಂದು ನೇರಳೆ ಮಾರ್ಗದಲ್ಲಿ (ಬೈಯಪ್ಪನಹಳ್ಳಿ- ನಾಯಂಡಹಳ್ಳಿ ಮಾರ್ಗ) ಮತ್ತೊಂದು ಆರು ಬೋಗಿಗಳ ರೈಲು ಸಂಚರಿಸಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಮೊದಲ ಹಂತದಲ್ಲಿ ಫೆ.14ರಂದು ಬೆಮೆಲ್‌ ಸಂಸ್ಥೆ ಮೂರು ಬೋಗಿಗಳನ್ನು ಬಿಎಂಆರ್‌ಸಿ ಸಂಸ್ಥೆಗೆ ವರ್ಗಾವಣೆ ಮಾಡಿತ್ತು. ಎಲ್ಲ ಮಾದರಿಯ ಪರೀಕ್ಷೆ ನಂತರ ಜೂ.22ರಂದು ಮೊದಲ ಆರು ಬೋಗಿಗಳ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಈಗಾಗಲೇ ನೇರಳೆ ಮಾರ್ಗದಲ್ಲಿ ಆರು ಬೋಗಿಯ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈ ಬಾರಿ ಹಸಿರು ಮಾರ್ಗದಲ್ಲಿ ಆರು ಬೋಗಿಯ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಆದರೂ ಪ್ರಯಾಣಿಕರ ಸಂಖ್ಯೆ ನೇರಳೆ ಮಾರ್ಗದಲ್ಲಿ ಹೆಚ್ಚಾಗಿ ಇರುವುದರಿಂದ ಮತ್ತೊಂದು ಆರು ಬೋಗಿಯ ರೈಲನ್ನು ಇದೇ ಮಾರ್ಗದಲ್ಲಿ ಬಿಡಲು ತೀರ್ಮಾನಿಸಲಾಗಿದೆ.

ಪ್ರಸ್ತುತ ಎರಡೂ ಮಾರ್ಗದಲ್ಲಿಯೂ ಸಾಕಷ್ಟುಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಆದ್ದರಿಂದ ಆದಷ್ಟುಶೀಘ್ರವಾಗಿ ಹಸಿರು ಮಾರ್ಗದಲ್ಲಿಯೂ ಕೂಡ ಆರು ಬೋಗಿಗಳ ಮೆಟ್ರೋ ರೈಲು ವಾಣಿಜ್ಯ ಸಂಚಾರ ನಡೆಸಲಿದೆ. ಆದರೆ, ಈಗಾಗಲೇ ತಾಂತ್ರಿಕವಾಗಿ ನೇರಳೆ ಮಾರ್ಗದಲ್ಲಿ ಪರೀಕ್ಷೆಗಳು ನಡೆದಿವೆ. ಜತೆಗೆ ನೇರಳೆ ಮಾರ್ಗದಲ್ಲಿ ಆರು ಬೋಗಿಯ ರೈಲು ಸಂಚರಿಸುತ್ತಿರುವುದರಿಂದ ಹೆಚ್ಚಿನ ಪರೀಕ್ಷಾರ್ಥ ಸಂಚಾರದ ಬೇಕಿರಲಿಲ್ಲ. ಆದರೆ, ಹಸಿರು ಮಾರ್ಗದಲ್ಲಿ ಮೊದಲಿನಿಂದ ಪರೀಕ್ಷೆ ಆರಂಭಿಸಬೇಕಿರುವುದರಿಂದ ಸ್ವಲ್ಪ ತಡವಾಗಲಿದೆ. ನಿಗದಿತ ಅವಧಿಯಲ್ಲಿ ಎಲ್ಲ ಬೋಗಿಗಳನ್ನು ಹಸ್ತಾಂತರಿಸುವಂತೆ ಬೆಮೆಲ್‌ಗೆ ನಿಗಮ ಮನವಿ ಮಾಡಿದೆ ಎಂದು ಬಿಎಂಆರ್‌ಸಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ನಿಗದಿಯಂತೆ ಸೆಪ್ಟೆಂಬರ್‌ ಅಂತ್ಯದೊಳಗೆ ಆರು ಬೋಗಿಯ ಮತ್ತೊಂದು ರೈಲು ಸಂಚಾರ ಆರಂಭಿಸಬೇಕಿತ್ತು. ಇದೀಗ ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡಿದ್ದು, ಅ.4ರಿಂದ ಆರು ಬೋಗಿಯ ಮೆಟ್ರೋ ರೈಲು ನೇರಳೆ ಮಾರ್ಗದಲ್ಲಿ ಸಂಚರಿಸಲಿದೆ.

-ಅಜಯ್‌ಸೇಠ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್‌.

click me!