ಮಹಾರಾಷ್ಟ್ರ ರೀತಿ ಕರ್ನಾಟಕದಲ್ಲೂ ಮೌಢ್ಯ ನಿಷೇಧ

By Suvarna Web DeskFirst Published Jun 6, 2017, 10:09 AM IST
Highlights

ಮಹಾರಾಷ್ಟ್ರದಲ್ಲಿ ಮೌಢ್ಯ ಮತ್ತು ಕಂದಾಚಾರಗಳ ಮೂಲಕ ಜನರನ್ನು ವಂಚಿಸುವುದು, ದೌರ್ಜನ್ಯ ನಡೆಸುವ ಅಂಶಗಳನ್ನು ಸೇರಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಶಾಸನ ಮಾಡಲಾಗಿತ್ತು. ಅದೇ ರೀತಿ ಕಾಯ್ದೆಯನ್ನು ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದೆ. ಅದರಲ್ಲೂ ಆಧ್ಯಾತ್ಮ, ಧಾರ್ಮಿಕ ಸ್ಥಳಗಳಲ್ಲಿ ಪೂಜೆ, ಹೋಮ, ಹರಿಕಥೆ, ದೇವರ ಆರಾಧನೆ, ಚರ್ಚ್ ಮತ್ತು ಮಸೀದಿಗಳಲ್ಲಿ ಆರಾಧಿಸುವುದು, ಪೂಜಿಸುವುದು ಸೇರಿದಂತೆ ಅನೇಕ ಧಾರ್ಮಿಕ ಆಚರಣೆಗಳನ್ನು ಕಾಯ್ದೆಯಿಂದ ಹೊರಗಿಡಲಾಗಿದೆ.

ವಿಧಾನಸಭೆ, ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಮಂಡಲ ಅಧಿವೇಶನ ದಲ್ಲೇ ಮಹಾರಾಷ್ಟ್ರ ಮಾದರಿ ‘ಮೌಢ್ಯ ನಿಷೇಧ ಪ್ರತಿಬಂಧಕ ಕುರಿತ ವಿಧೇಯಕ' ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2 ವರ್ಷ ಹಿಂದೆಯೇ ಸಿದ್ಧವಾಗಿದ್ದ ಈ ವಿಧೇಯಕಕ್ಕೆ ಕೆಲವು ಬದಲಾವಣೆ ಮಾಡಿ ಈ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆಯಲ್ಲಿ ಸೋಮವಾರ ಈ ವಿಚಾರ ತಿಳಿಸಿದ್ದಾರೆ.

ಇದರೊಂದಿಗೆ ರಾಜ್ಯ ಸರ್ಕಾರ 2014ರಲ್ಲೇ ಮಂಡಿಸಲು ಸಿದ್ಧತೆ ನಡೆಸಿ ಕೈಬಿಟ್ಟಿದ್ದ ವಿಧೇಯಕಕ್ಕೆ ಮತ್ತೆ ಜೀವ ಬಂದಂತಾಗಿದೆ. ಅಷ್ಟೇ ಅಲ್ಲ. ಈ ಬಾರಿ ಮಹಾರಾಷ್ಟ್ರ ಮಾದರಿಯ ವಿಧೇಯಕ ಸಿದ್ಧಪಡಿಸಲಾಗಿದ್ದು, ಇದಕ್ಕೆ ಈಗಾಗಲೇ ಸಚಿವ ಸಂಪುಟ ಉಪ ಸಮಿತಿ ಒಪ್ಪಿಗೆಯನ್ನೂ ಸೂಚಿಸಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕದ ಕರಡು ಚರ್ಚೆಗೆ ಬಂದರೆ ನಂತರ ಇದೇ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಲಿದೆ. ಇಲ್ಲವಾದರೆ ವಿಧೇಯಕ ಮಂಡನೆ ಮುಂದಿನ ಅಧಿವೇಶನಕ್ಕೆ ಹೋದರೂ ಅಚ್ಚರಿ ಇಲ್ಲ ಎನ್ನುತ್ತವೆ ಕಾನೂನು ಇಲಾಖೆ ಮೂಲಗಳು.

ಸಿಎಂ ಹೇಳಿದ್ದೇನು?: ವಿಧಾನಸಭೆಯಲ್ಲಿ ಸೋಮವಾರ ಬರ ಪರಿಸ್ಥಿತಿ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಪರ್ಜನ್ಯ ಹೋಮ ಮಾಡುವ ಸರ್ಕಾರ ಮೌಢ್ಯವನ್ನು ಪೋಷಿಸುತ್ತಿದ್ದರೂ ವಿಚಾರವಾದಿಗಳು ಏಕೆ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು. ನಿಮಗೆ ಪ್ರತಿ 6 ತಿಂಗಳಿಗೊಮ್ಮೆ ವಿಚಾರವಾದಿಗಳು, ಸ್ವಾಮೀಜಿಗಳು ಮೌಢ್ಯ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಮನವಿ ಸಲ್ಲಿಸುತ್ತಾರೆ. ಅವರೆಲ್ಲಾ ಈಗ ಪರ್ಜನ್ಯ ಹೋಮದ ಬಗ್ಗೆ ಮಾತನಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಣಕಿದರು.

ಇದರಿಂದ ಸಿಟ್ಟಾದ ಸಿದ್ದರಾಮಯ್ಯ, ನಂಬಿಕೆಗೂ, ಮೂಢನಂಬಿಕೆಗೂ ವ್ಯತ್ಯಾಸವಿದೆ. ಕೆಲವರು ದೇವರನ್ನು ನಂಬಿ ಪೂಜಿಸುತ್ತಾರೆ. ಅದರಿಂದ ಸಮಾಜಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅದೇ ಮೂಢನಂಬಿಕೆ ಸಮಾಜಕ್ಕೆ ಕಂಟಕ ತರುತ್ತದೆ. ಆದ್ದರಿಂದ ಸರ್ಕಾರ ಮೌಢ್ಯ ನಿಷೇಧಿಸುವ ವಿಧೇಯಕ ಸಿದ್ಧಪಡಿಸಿದೆ ಎಂದು ಅವರು ಹೇಳಿದರು. ಈ ಅಧಿವೇಶನದಲ್ಲೇ ಸರ್ಕಾರ ವಿಧೇಯಕ ಮಂಡಿಸುತ್ತಿದ್ದು, ಪ್ರತಿಪಕ್ಷಗಳು ಇದರ ಮೇಲೆ ಚರ್ಚೆ ನಡೆಸಬಹುದಾಗಿದೆ ಎಂದೂ ಅವರು ತಿಳಿಸಿದರು. ಈ ಮೂಲಕ ಮೌಢ್ಯ ನಿಷೇಧ ಕಾಯ್ದೆಗೆ ಸರ್ಕಾರ ಸಿದ್ಧವಿರುವುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಮೌಢ್ಯ ನಿಷೇಧ ಕಾಯ್ದೆ ಕರಡು ಕಾನೂನು ಶಾಲೆ ಸಹಯೋಗದಲ್ಲಿ 2013ರಲ್ಲೇ ಸಿದ್ಧವಾಗಿತ್ತು. ಆದರೆ, ಇದಕ್ಕೆ ಬಿಜೆಪಿ ಮತ್ತು ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದರು. ಕಾಯ್ದೆ ಜಾರಿಗೆ ತಂದರೆ ಜನರು ಪೂಜೆ ಮಾಡುವುದಕ್ಕೆ ಅವಕಾಶವಿಲ್ಲ ಎಂದೆಲ್ಲಾ ಆರೋಪಿಸಿ ಸರ್ಕಾರವನ್ನು ಟೀಕಿಸಲಾಗಿತ್ತು. ಇದರಿಂದ ಸರ್ಕಾರ ಕರಡು ವಿಧೇಯಕ ಸಿದ್ಧವಾದರೂ ಸದನದಲ್ಲಿ ಮಂಡಿಸಲಿಲ್ಲ. ಬದಲಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಸಚಿವ ಕಾಗೋಡು ತಿಮ್ಮಪ್ಪ ಅವರನ್ನೊಳಗೊಂಡ ಸಂಪುಟ ಉಪ ಸಮಿತಿ ರಚಿಸಿತ್ತು. ಈ ಸಮಿತಿ ಹಿಂದಿನ ವಿಧೇಯಕಕ್ಕೆ ಮಹಾರಾಷ್ಟ್ರದಲ್ಲಿ ಜಾರಿಗೊಳಿಸಲಾಗಿ ರುವ ಅಂಶಗಳನ್ನು ಕರಡು ಪ್ರಸ್ತಾವಕ್ಕೆ ಸೇರಿಸಿದೆ. ಈ ಮೂಲಕ ಮಹಾರಾಷ್ಟ್ರ ಮಾದರಿ ಎನ್ನುವಂತೆ ಮಾರ್ಪಾಡು ಮಾಡಿ ಅನುಮೋದಿಸಿದೆ. ಈ ಕರಡು ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕಿದ್ದು, ನಂತರ ಸದನದಲ್ಲಿ ಮಂಡನೆಯಾಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಸಿದ್ಧತೆಯನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಮಹಾರಾಷ್ಟ್ರ ಮಾದರಿ?
ಮಹಾರಾಷ್ಟ್ರದಲ್ಲಿ ಮೌಢ್ಯ ಮತ್ತು ಕಂದಾಚಾರಗಳ ಮೂಲಕ ಜನರನ್ನು ವಂಚಿಸುವುದು, ದೌರ್ಜನ್ಯ ನಡೆಸುವ ಅಂಶಗಳನ್ನು ಸೇರಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಶಾಸನ ಮಾಡಲಾಗಿತ್ತು. ಅದೇ ರೀತಿ ಕಾಯ್ದೆಯನ್ನು ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದೆ. ಅದರಲ್ಲೂ ಆಧ್ಯಾತ್ಮ, ಧಾರ್ಮಿಕ ಸ್ಥಳಗಳಲ್ಲಿ ಪೂಜೆ, ಹೋಮ, ಹರಿಕಥೆ, ದೇವರ ಆರಾಧನೆ, ಚರ್ಚ್ ಮತ್ತು ಮಸೀದಿಗಳಲ್ಲಿ ಆರಾಧಿಸುವುದು, ಪೂಜಿಸುವುದು ಸೇರಿದಂತೆ ಅನೇಕ ಧಾರ್ಮಿಕ ಆಚರಣೆಗಳನ್ನು ಕಾಯ್ದೆಯಿಂದ ಹೊರಗಿಡಲಾಗಿದೆ. ಆದರೆ, ನಂಬಿಕೆಗಳ ಮೂಲಕ ಮಹಿಳೆಯರು, ಬಡವರು ಮತ್ತು ಮುಗ್ಧರ ಮೇಲೆ ದೌರ್ಜನ್ಯ ಮಾಡುವುದು ಮತ್ತು ಸಮಾಜಕ್ಕೆ ಹಾನಿ ಉಂಟು ಮಾಡುವ ಆಚರಣೆಗಳನ್ನು ಮಾತ್ರ ಕಾಯ್ದೆಯಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏನೆಲ್ಲ ನಿಷೇಧ ಸಾಧ್ಯತೆ?
* ಮಾಟ, ಮಂತ್ರದ ಹೆಸರಿನಲ್ಲಿ ನರಬಲಿ. ಅತೀಂದ್ರಿಯ ಶಕ್ತಿ ಇದೆ ಎಂದು ನಂಬಿಸಿ ಮುಗ್ಧರನ್ನು ವಂಚಿಸುವುದು
* ದೆವ್ವ ಮತ್ತು ದೈವದ ಹೆಸರಿನಲ್ಲಿ ಹಿಂಸಿಸುವುದು, ದೌರ್ಜನ್ಯ ನಡೆಸುವುದು
* ನಗ್ನ ಮೆರವಣಿಗೆ, ಬೆಂಕಿ ಹಾಯುವುದು, ಹಲ್ಲೆ ನಡೆಸುವುದು, ಬೆರಳಿನ ಮೂಲಕ ಶಸ್ತ್ರಚಿಕಿತ್ಸೆ, ದೇವರ ಹೆಸರಿನಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸುವುದು
* ಬಾಯಿಗೆ ಬೀಗ, ಸಲಾಕೆ ಚುಚ್ಚಿಕೊಂಡು ಆರಾಧಿಸುವುದು

click me!