ಸಾಲ ಮನ್ನಾ ಬಳಿಕ ಬೊಕ್ಕಸದಲ್ಲಿ ಹಣವಿಲ್ಲ!

By Web DeskFirst Published Dec 25, 2018, 7:59 AM IST
Highlights

ಸಾಲ ಮನ್ನಾ ಆಯ್ತು, ಇತರೆ ಭರವಸೆಗೆ ಈಡೇರಿಕೆಗೆ ದುಡ್ಡಿಲ್ಲ | ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢ ಬೊಕ್ಕಸ ಖಾಲಿ |  ಮುಂದಿನ ಬಜೆಟ್‌ ಬಳಿಕವಷ್ಟೇ ಹೊಸ ಯೋಜನೆ ಜಾರಿ

ಜೈಪುರ/ಭೋಪಾಲ್‌/ರಾಯ್‌ಪುರ (ಡಿ. 25):  ಅಧಿಕಾರಕ್ಕೆ ಬಂದ 10 ದಿನಗಳಲ್ಲಿ ರೈತರ 2 ಲಕ್ಷ ರು.ವರೆಗಿನ ಸಾಲ ಮನ್ನಾ ಭರವಸೆ ನೀಡಿದ್ದ ಕಾಂಗ್ರೆಸ್‌, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ರೈತರ ಸಾಲ ಮನ್ನಾ ಘೋಷಿಸಿ, ರೈತರಿಗೆ ಸಿಹಿ ಸುದ್ದಿ ನೀಡಿದೆ. ಆದರೆ ಚುನಾವಣೆ ವೇಳೆ ನೀಡಿದ್ದ ಉಳಿದ ಭರವಸೆ ಈಡೇರಿಸುವುದು ಹೇಗೆ ಎಂಬ ವಿಷಯ ಇದೀಗ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕಾರಣ, ಈ ಮೂರು ರಾಜ್ಯಗಳಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಗಳು, ಕಳೆದ ಬಜೆಟ್‌ನಲ್ಲಿ ಒದಗಿಸಲಾಗಿದ್ದ ಹಣದ ಪೈಕಿ ಶೇ.70ರಷ್ಟುಹಣವನ್ನು ಮೊದಲ 7 ತಿಂಗಳಲ್ಲಿ ಪೂರ್ಣವಾಗಿ ವಿನಿಯೋಗಿಸಿವೆ. ಉಳಿದ ಶೇ.30ರಷ್ಟುಹಣದಲ್ಲಿ ಪ್ರಸಕ್ತ ಹಣಕಾಸು ವರ್ಷದ ಇತರೆ ಎಲ್ಲಾ ವೆಚ್ಚಗಳನ್ನು ಹೊಸ ಸರ್ಕಾರಗಳು ಭರಿಸಬೇಕು. ಆದರೆ ಈ ಪೈಕಿ ಬಹುತೇಕ ಹಣವನ್ನು ಮೂರೂ ರಾಜ್ಯದಲ್ಲಿ ಹೊಸ ಸರ್ಕಾರ, ರೈತರ ಸಾಲ ಮನ್ನಾಗೆ ಮೀಸಲಿಟ್ಟಿದೆ. ಹೀಗಾಗಿ ಉಳಿದ ಭರವಸೆ ಈಡೇರಿಸುವುದು ಸರ್ಕಾರಗಳಿಗೆ ಸವಾಲಾಗಿದೆ.

ಮಧ್ಯಪ್ರದೇಶದಲ್ಲಿ ಸಾಲಮನ್ನಾದಿಂದ 38000 ಕೋಟಿ ರು.,ರಾಜಸ್ಥಾನದಲ್ಲಿ 18000 ಕೋಟಿ ರು. ಮತ್ತು ಛತ್ತೀಸ್‌ಗಢದಲ್ಲಿ 6100 ಕೋಟಿ ರು. ಹೊರೆ ಸರ್ಕಾರದ ಮೇಲೆ ಬಿದ್ದಿದೆ. ಹೀಗಾಗಿ ಹೊಸದಾಗಿ ಮತ್ತೊಮ್ಮೆ ಸಾಲ ಮಾಡುವ ಇರಾದೆಯಲ್ಲಿ ಸರ್ಕಾರಗಳಿವೆ. ಆದರೆ ರಾಜ್ಯಗಳಿಗೆ ಪಡೆಯಲು ಇರುವ ಸಾಲದ ಗರಿಷ್ಠ ಮಿತಿಯಲ್ಲಿ ಬಹುಪಾಲನ್ನು ಈಗಾಗಲೇ ಹಿಂದಿನ ಸರ್ಕಾರಗಳು ಪಡೆದುಕೊಂಡಿವೆ. ಇದು ಕೂಡಾ ಸರ್ಕಾರದ ಸಮಸ್ಯೆಯನ್ನು ಇನ್ನಷ್ಟುಕಠಿಣಗೊಳಿಸಿದೆ.

ದೊಡ್ಡ ಭರವಸೆಗಳು: ಮಧ್ಯಪ್ರದೇಶದ ಕಾಂಗ್ರೆಸ್‌ ನಿರುದ್ಯೋಗಿಗಳಿಗೆ ಮಾಸಿಕ 10000 ರು. ಭತ್ಯೆ,ರಾಜಸ್ಥಾನದಲ್ಲಿ 3500 ರು. ನಿರುದ್ಯೋಗಿ ಭತ್ಯೆ ಭರವಸೆ ನೀಡಿತ್ತು. ಛತ್ತೀಸ್‌ಗಢ ಕೂಡಾ ಇದೇ ರೀತಿಯ ಭರವಸೆ ನೀಡಿದೆಯಾದರೂ ಮೊತ್ತವನ್ನು ಬಹಿರಂಗಪಡಿಸಿರಲಿಲ್ಲ. ಇನ್ನು ಮೂರೂ ರಾಜ್ಯಗಳಲ್ಲಿ ಬಡವರ ವಿದ್ಯುತ್‌ ಬಿಲ್‌ ಪೂರ್ಣ ಮನ್ನಾ, ಇತರೆ ವರ್ಗದವರ ವಿದ್ಯುತ್‌ ಬಿಲ್‌ನಲ್ಲಿ ಶೇ.50ರಷ್ಟುಮನ್ನಾದ ಭರವಸೆ ನೀಡಲಾಗಿತ್ತು. ಇದಲ್ಲದೆ ಉಚಿತ ಶಿಕ್ಷಣ ಹಾಗೂ ವೈದ್ಯಕೀಯ ಸವಲತ್ತು. ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯ ಭರವಸೆ ನೀಡಿವೆ. ಛತ್ತೀಸ್‌ಗಢದಲ್ಲಿ ಪೂರ್ಣ ಪಾನ ನಿಷೇಧದ ಭರವಸೆ ನೀಡಲಾಗಿದೆ. ಇದು ಮುಂದಿನ ವರ್ಷದಿಂದ ಸರ್ಕಾರದಿಂದ ದೊಡ್ಡ ಆದಾಯವನ್ನೇ ಕಸಿದುಕೊಳ್ಳಲಿದೆ.

2019ರ ಲೋಸಕಭಾ ಚುನಾವಣೆ ಒಳಗೆ ಈ ಘೋಷಣೆಗಳು ಈಡೇರದೇ ಹೋದಲ್ಲಿ, ಬಿಜೆಪಿ ಅದನ್ನೇ ತನ್ನ ಬಂಡವಾಳವಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮೂರೂ ರಾಜ್ಯಗಳಲ್ಲಿ ಹೊಸ ಸರ್ಕಾರಗಳು ಹಣ ಮೂಲಕ್ಕಾಗಿ ಹುಡುಕಾಡತೊಡಗಿವೆ.

click me!