2 ದಿನ ಇಂದಿರಾನಗರ, ಎಂ.ಜಿ.ರಸ್ತೆ ಮೆಟ್ರೋ ಇಲ್ಲ

By Web DeskFirst Published Dec 29, 2018, 9:24 AM IST
Highlights

ಟ್ರಿನಿಟಿ ಮೆಟ್ರೋ ನಿಲ್ದಾಣ ಸಮೀಪದ ಮೆಟ್ರೋ ಪಿಲ್ಲರ್‌ 155ರ ಬೀಮ್‌ (ವಯಾಡಕ್ಟ್) ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಡಿ.29 ಮತ್ತು 30ರಂದು ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ಎಂ.ಜಿ.ರಸ್ತೆಯಿಂದ ಇಂದಿರಾನಗರದ ನಡುವಿನ ಮೆಟ್ರೋ ರೈಲು ಸಂಚಾರ ಇರುವುದಿಲ್ಲ.

ಬೆಂಗಳೂರು : ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣ ಸಮೀಪದ ಮೆಟ್ರೋ ಪಿಲ್ಲರ್‌ 155ರ ಬೀಮ್‌ (ವಯಾಡಕ್ಟ್) ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಎಂ.ಜಿ.ರಸ್ತೆಯಿಂದ ಇಂದಿರಾನಗರದ ವರೆಗಿನ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಡಿ.29 ಮತ್ತು 30ರಂದು ಕಾಮಗಾರಿ ನಡೆಯಲಿದ್ದು, ಈ ಅವಧಿಯಲ್ಲಿ ಎಂ.ಜಿ.ರಸ್ತೆಯಿಂದ ಇಂದಿರಾನಗರದ ನಡುವಿನ ಮೆಟ್ರೋ ರೈಲು ಸಂಚಾರ ಇರುವುದಿಲ್ಲ. ಮೆಟ್ರೋ ರೈಲು ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಕಬ್ಬನ್‌ಪಾರ್ಕ್ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಉಚಿತ ಬಸ್‌ ಸೇವೆ ಒದಗಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿ) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ದಿನ ನೇರಳೆ ಮಾರ್ಗದಲ್ಲಿ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) ಅತೀ ಹೆಚ್ಚು ಜನದಟ್ಟಣೆ ಇರುತ್ತದೆ. ಶುಕ್ರವಾರ ರಾತ್ರಿ 8ಕ್ಕೆ ಎಂ.ಜಿ.ರಸ್ತೆಯಿಂದ ಇಂದಿರಾನಗರವರೆಗಿನ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸುವುದಾಗಿ ಈ ಹಿಂದೆಯೇ ಬಿಎಂಆರ್‌ಸಿಎಲ್‌ ಮಾಹಿತಿ ನೀಡಿತ್ತು. ಆದರೂ ಕೂಡ ಶುಕ್ರವಾರವೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಕಬ್ಬನ್‌ಪಾರ್ಕ್ ಮತ್ತು ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಸುಮಾರು 75 ಉಚಿತ ಬಸ್‌ ಸೇವೆಯನ್ನು ನಿಗಮ ಒದಗಿಸಿತ್ತು. ಆದರೆ ಅತೀ ಹೆಚ್ಚು ಪ್ರಯಾಣಿಕರು ಇದ್ದುದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಜನದಟ್ಟಣೆ ನಿವಾರಿಸಲು ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದಿಂದಲೂ ಬಸ್‌ ಸೌಲಭ್ಯ ನೀಡಲಾಗಿತ್ತು.

ಸಾಮಾನ್ಯವಾಗಿ ಪ್ರತಿ ದಿನ ಸಂಜೆ 6ರ ನಂತರ ಅಂದಾಜು 10ರಿಂದ 15 ಸಾವಿರ ಮಂದಿ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಇದೀಗ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಎಂ.ಜಿ.ರಸ್ತೆಯಿಂದ ಇಂದಿರಾನಗರದ ಕಡೆಗೆ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದ್ದು, ವಾಹನ ದಟ್ಟಣೆಗೂ ಕಾರಣವಾಯಿತು. ಕೆಲವರು ಬಿಎಂಆರ್‌ಸಿಎಲ್‌ ಒದಗಿಸಿದ್ದ ಬಸ್‌ಗಳಲ್ಲಿ ಪ್ರಯಾಣಿಸಿದರೆ, ಹಲವರು ಆಟೋ, ಕ್ಯಾಬ್‌ ಹಾಗೂ ಬಿಎಂಟಿಸಿ ಬಸ್‌ಗಳನ್ನು ಆವಲಂಬಿಸಬೇಕಾಯಿತು. ವಾಹನ ಮತ್ತು ಪ್ರಯಾಣಿಕರ ದಟ್ಟಣೆಯಿಂದ ಸುಮಾರು ಗಂಟೆ ಗಟ್ಟಲೆ ಮೆಟ್ರೋ ನಿಲ್ದಾಣಗಳಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

click me!