13 ವರ್ಷಗಳ ಹೋರಾಟದ ಫಲ: ಸಿಎಂ ಬೊಮ್ಮಾಯಿ ಅವರಿಂದ ಇಂದು ವಿಷ್ಣು ಸ್ಮಾರಕ ಉದ್ಘಾಟನೆ

By Kannadaprabha News  |  First Published Jan 29, 2023, 2:40 AM IST

ಖ್ಯಾತ ಸಿನಿಮಾ ತಾರೆ, ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಸತತ 13 ವರ್ಷಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಎಚ್‌.ಡಿ.ಕೋಟೆ ರಸ್ತೆಯ ಉದ್ಬೂರು ಗೇಟ್‌ ಬಳಿಯ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಿಸಿದ್ದು, ಜ.29 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. 


ಮಹೇಂದ್ರ ದೇವನೂರು

ಮೈಸೂರು (ಜ.29): ಖ್ಯಾತ ಸಿನಿಮಾ ತಾರೆ, ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಸತತ 13 ವರ್ಷಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಎಚ್‌.ಡಿ.ಕೋಟೆ ರಸ್ತೆಯ ಉದ್ಬೂರು ಗೇಟ್‌ ಬಳಿಯ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಿಸಿದ್ದು, ಜ.29 ರಂದು ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು.  ಡಾ.ವಿಷ್ಣುವರ್ಧನ್‌ ಪ್ರತಿಷ್ಠಾನ ಹಾಗೂ ವಿಷ್ಣುವರ್ಧನ್‌ ಅವರ ಕುಟುಂಬ ಸದಸ್ಯರ ಸತತ ಪ್ರಯತ್ನ ಮತ್ತು ಹೋರಾಟದ ಫಲವಾಗಿ ಸ್ಮಾರಕ ಉದ್ಘಾಟನೆಗೆ ಸಜ್ಜಾಗಿದೆ. 

Tap to resize

Latest Videos

ಹಾಲಾಳು ಗ್ರಾಮದಲ್ಲಿ ಸರ್ಕಾರ ನೀಡಿದ 5 ಎಕರೆ ಜಾಗದ ಪೈಕಿ 3 ಎಕರೆ ಪ್ರದೇಶದಲ್ಲಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಿಸಿದ್ದು, 2020ರ ಸೆ.15 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗುದ್ದಲಿ ಪೂಜೆ ನೆರವೇರಿಸಿದ್ದರು.  ವಿಷ್ಣುವರ್ಧನ್‌ ಅವರು ತುಂಬಾ ಪ್ರೀತಿಸುತ್ತಿದ್ದ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಗೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ವಿಷ್ಣುವರ್ಧನ್‌ ಅವರಿಗೆ ಮೈಸೂರು ಹುಟ್ಟೂರು. ಇಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಚಾಮುಂಡಿಪುರಂನಲ್ಲಿ ವಾಸವಿದ್ದರು. ಮೈಸೂರಿನಲ್ಲಿ ಚಿತ್ರೀಕರಣ ನಡೆಸಿದರೆ ಅವರಿಗೆ ಎಲ್ಲಿಲ್ಲದ ಸಂತೋಷ. ಚಾಮುಂಡಿಬೆಟ್ಟಅವರ ನೆಚ್ಚಿನ ತಾಣವಾಗಿತ್ತು.

13 ವರ್ಷಗಳ ಬಳಿಕ ಮೈಸೂರಲ್ಲಿ ಜ.29ಕ್ಕೆ ವಿಷ್ಣು ಸ್ಮಾರಕ ಅನಾವರಣ!

7 ಅಡಿ ಪ್ರತಿಮೆ: ಸ್ಮಾರಕದ ಆವರಣದಲ್ಲಿ ಡಾ.ವಿಷ್ಣುವರ್ಧನ್‌ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ಖ್ಯಾತ ಶಿಲ್ಪ ಕಲಾವಿದ ಅರುಣ್‌ ಯೋಗಿರಾಜ್‌ ಅವರು ಎರಡೂವರೆ ತಿಂಗಳ ಅವಧಿಯಲ್ಲಿ ನಿರ್ಮಿಸಿದ್ದಾರೆ. ಅಭಿಮಾನಿಗಳಿಗೆ ಇಷ್ಟಎಂಬ ಕಾರಣಕ್ಕೆ ‘ಆಪ್ತರಕ್ಷಕ’ ಸಿನಿಮಾದಲ್ಲಿ ಪೇಟ ಧರಿಸಿ ನಿಂತ ಭಂಗಿಯಲ್ಲಿ ಪ್ರತಿಮೆ ಇದೆ. ಕೈಯಲ್ಲಿ ಕಡಗವೂ ಇದೆ. ಪ್ರತಿಮೆ ಬಳಿಯೇ ವಿಷ್ಣುವರ್ಧನ್‌ ಅವರ ಚಿತಾಭಸ್ಮವನ್ನು ಕುಡಿಕೆಯಲ್ಲಿ ಇಡಲಾಗಿದೆ.

ಭಾವಚಿತ್ರ ಮೆರವಣಿಗೆ: ಅಭಿಮಾನಿಗಳು ಜ.29ರಂದು ವಿಷ್ಣುವರ್ಧನ್‌ ಅವರ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ಆಯೋಜಿಸಿದ್ದಾರೆ. ಅಂದು ಬೆಳಗ್ಗೆ 9ಕ್ಕೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಆರಂಭವಾಗುವ ವಿಷ್ಣುವರ್ಧನ್‌ ಅವರ ಬೃಹತ್‌ ಕಟೌಟ್‌ ಅನ್ನು ಹೂವಿನ ಪಲ್ಲಕ್ಕಿಯಲ್ಲಿ ವಿವಿಧ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಲಾಗುವುದು. ಮಾನಂದವಾಡಿ ರಸ್ತೆಯ ಶ್ರೀರಾಂಪುರ ವೃತ್ತದವರೆಗೂ ಮೆರವಣಿಗೆ ಸಾಗಿ ಸಮಾವೇಶಗೊಳ್ಳಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ವಿಷ್ಣು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

13 ವರ್ಷ ಹೋರಾಟದ ಹಾದಿ: ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ಸಂಬಂಧ ಅವರ ಕುಟುಂಬ ವರ್ಗದವರ ಹೋರಾಟದಂತೆಯೇ ಅಭಿಮಾನಿಗಳೂ ಕೂಡ ಸಾಕಷ್ಟುಹೋರಾಟ ನಡೆಸಿದ್ದರು. ಪತ್ರ ಚಳವಳಿ, ಕಾನೂನಾತ್ಮಕ ಹೋರಾಟವೂ ನಡೆದಿತ್ತು. 2009ರ ಡಿಸೆಂಬರ್‌ನಲ್ಲಿ ಡಾ.ವಿಷ್ಣುವರ್ಧನ್‌ ನಿಧನರಾದರು. ಪ್ರಾರಂಭದಲ್ಲಿ ಬೆಂಗಳೂರಿನಲ್ಲಿ ಅವರ ಸ್ಮಾರಕ ನಿರ್ಮಾಣವಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು. ವಿವಿಧ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. 2016ರಲ್ಲಿ ಪತ್ನಿ ಭಾರತಿ ವಿಷ್ಣುವರ್ಧನ್‌ ಅವರು ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು. 2017ರಲ್ಲಿ ಮೈಸೂರಿನಲ್ಲಿ ಭೂಮಿ ಮಂಜೂರಾಯಿತು. ಆದರೆ, ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‌ ಮೊರೆ ಹೋಗಿದ್ದರು. ನಂತರ ಅರ್ಜಿ ವಜಾ ಆಗಿ ಸ್ಮಾರಕದ ಕೆಲಸ ಸುಗಮವಾಯಿತು.

ಸ್ಮಾರಕ ಹೇಗಿದೆ?: ಡಾ.ವಿಷ್ಣುವರ್ಧನ್‌ ಯಾವಾಗಲೂ ಬಲಗೈಯಲ್ಲಿ ಕಡಗ ಧರಿಸುತ್ತಿದ್ದು, ಅದನ್ನು ಬಿಂಬಿಸುವಂತೆ ಅವರ ಸ್ಮಾರಕವೂ ಕಡಗದ ಆಕೃತಿಯಲ್ಲಿದೆ. ಡ್ರೋನ್‌ ಬಳಸಿ ಛಾಯಾಚಿತ್ರ ತೆಗೆದರೆ ಈ ಆಕೃತಿ ಕಾಣುತ್ತದೆ. 3 ಎಕರೆಯ ಸ್ಮಾರಕದಲ್ಲಿ ಮ್ಯೂಸಿಯಂ, ಫೋಟೋ ಗ್ಯಾಲರಿ, ಸಭಾಂಗಣ, 2 ಕೊಠಡಿ ಇದೆ. ವಿಷ್ಣು ಅವರ 600ಕ್ಕೂ ಹೆಚ್ಚು ಛಾಯಾಚಿತ್ರ, ಅವರು ನಿತ್ಯ ಬಳಸುತ್ತಿದ್ದ ವಸ್ತು, ವಿಭೂತಿ, ಬಟ್ಟೆ, ಪ್ರಶಸ್ತಿಗಳನ್ನು ಮ್ಯೂಸಿಯಂನಲ್ಲಿ ಇಡಲಾಗಿದೆ. ಚಿತ್ರೋತ್ಸವ, ನಾಟಕೋತ್ಸವ ನಡೆಸಲು ಅನುಕೂಲ ಆಗುವಂತೆ 200 ಆಸನ ಸಾಮರ್ಥ್ಯದ ಸಭಾಂಗಣ ಇದೆ. ಉಳಿದ 2 ಎಕರೆಯಲ್ಲಿ ಪುಣೆಯ ಫಿಲ್ಮ್‌ ಆ್ಯಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಶಾಖೆಯನ್ನು ವಿಷ್ಣು ಹೆಸರಲ್ಲಿ ಸ್ಥಾಪಿಸುವ ಚಿಂತನೆ ಇದೆ. ಈ ಸಂಬಂಧ ಸಿಎಂ ಜತೆ ಮಾತುಕತೆ ನಡೆದಿದೆ.

ಬಾಲಣ್ಣ ಕುಟುಂಬ ಅವಮಾನಿಸಿದೆ, ಅಮ್ಮ ಕಣ್ಣೀರು ಸುರಿಸಿದ್ದಾರೆ; ಬೇಸರ ಹೊರಹಾಕಿದ ನಟ ಅನಿರುದ್ಧ್

ಕರ್ನಾಟಕಕ್ಕೆ ಆ ಸ್ಮಾರಕ ಬಹುದೊಡ್ಡ ಕೊಡುಗೆ ಹಾಗೂ ಮಾದರಿಯಾಗಿ ನಿರ್ಮಿಸಲಾಗಿದೆ. ಇದರ ವೈಶಿಷ್ಟ್ಯತೆ ಕುರಿತು ನಾಳೆ ಕಾರ್ಯಕ್ರಮದಲ್ಲಿ ವಿವರವಾಗಿ ಹೇಳುತ್ತೇನೆ. ಸ್ಮಾರಕದ ಮುಂದೆ ಕಡಗ ಇರಿಸಲಾಗಿದೆ. ಆದರೆ ಸ್ಮಾರಕವೇ ಕಡಗದ ರೂಪದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ನಾಳೆ ವಿವರಿಸುತ್ತೇನೆ.
- ಅನಿರುದ್ಧ್‌, ನಟ ಹಾಗೂ ವಿಷ್ಣುವರ್ಧನ್‌ ಅಳಿಯ

click me!