ನಟ ಕಿಶೋರ್, ಪಂಜಾಬ್ ಹಾಗೂ ಹರಿಯಾಣದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ರಾಮ ರಾಜ್ಯವೋ, ಹರಾಮ್ ರಾಜ್ಯವೋ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು (ಫೆ.15): ಆಳುವ ಸರ್ಕಾರದ ವಿರುದ್ಧ ತಮ್ಮ ತೀಕ್ಷ್ಣ ಟೀಕೆಗಳ ಮೂಲಕವೇ ಸುದ್ದಿಯಾಗುವ ನಟ ಕಿಶೋರ್, ಪಂಜಾಬ್ ಹಾಗೂ ಹರಿಯಾಣದಲ್ಲಿ ರೈತರು ನಡೆಸುತ್ತಿರುವ ಹಿಂಸಾತ್ಮಕ ದೆಹಲಿ ಚಲೋ ಪ್ರತಿಭಟನೆಯ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ದೇಶದ ರೈತರು ಹಾಗೂ ಯೋಧರನ್ನು ದೇಶದ್ರೋಹಿಗಳು ಎನ್ನುವಂತೆ ನೋಡಬೇಡಿ ಎಂದು ಹೇಳಿರುವ ಕಿಶೋರ್, ಇದು ರಾಮ ರಾಜ್ಯವೋ, ಹರಾಮ್ ರಾಜ್ಯವೋ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಎಂಎಸ್‌ಪಿ ಗ್ಯಾರಂಟಿ ಕುರಿತಾಗಿ ಕಾನೂನು ಜಾರಿ ಸೇರಿದಂತೆ 10 ಪ್ರಮುಖ ಬೇಡಿಕೆಗಳನ್ನು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪೊಲೀಸರು ಅಡ್ಡಿ ಮಾಡಿದ್ದು, ಪ್ರತಿಭಟನೆ ಬರುವ ಹಾದಿಯುದ್ದಕ್ಕೂ ಕಾಂಕ್ರೀಟ್ ಸ್ಲ್ಯಾಬ್‌ಗಳು ಹಾಗೂ ದೊಡ್ಡ ದೊಡ್ಡ ಮೊಳೆಗಳನ್ನು ಇರಿಸಲಾಗಿದೆ. ದೆಹಲಿಗೆ ಬರುವ ಎಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರ ಕುರಿತಾಗಿ ಕಿಶೋರ್ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಪ್ರೀತಿಯ ದಿನದಂದು ದ್ವೇಷದ ಪ್ರತಿನಿಧಿಗಳ ಅಟ್ಟಹಾಸ ..' ಎಂದು ಫೆ.14ರ ಪೋಸ್ಟ್‌ನಲ್ಲಿ ಬರೆದಿರುವ ಕಿಶೋರ್, 'ಪ್ರಜೆಗಳ ಪ್ರತಿಭಟನೆಯ ದನಿಯಡಗಿಸುವುದು ಪ್ರಜಾಪ್ರಭುತ್ವವಲ್ಲವೇ ಅಲ್ಲ. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ದೇಶವಿಡೀ ಒಂದಾಗಿ ಬ್ರಿಟೀಷರ ವಿರುದ್ಧ ನಿಂತಾಗ ಬ್ರಿಟಿಷರ ಪರ ನಿಂತ ಜನರಿಂದ ಬೇರೇನು ನಿರೀಕ್ಷಿಸಲು ಸಾಧ್ಯ? ನಾಡಿನ ರೈತರನ್ನು ಯೋಧರನ್ನು, ದೇಶದ್ರೋಹಿಗಳಂತೆ ನಡೆಸಿಕೊಳ್ಳುವ ಅದೇ ಹೊಲಸು ಮನೋಭಾವ.. ವರ್ಷದ ಹಿಂದೆ ವರ್ಷಪೂರ್ತಿ ನಡೆದ ಹೋರಾಟದಲ್ಲಿ 700 ಜನ ರೈತರು ಪ್ರಾಣ ಬಿಟ್ಟಾಗ ನನಗಾಗಿ ಸತ್ತರೇ ಎಂದು ಕೇಳಿದವರಲ್ಲವೇ ಇವರು??. ಸೈನಿಕರ ಪಿಂಚಣಿ ಹಣ ಉಳಿಸಿ ತನ್ನ ಗೆಳೆಯರಿಗೆ ಹಂಚುವ ವ್ಯಾಪಾರಿಯಲ್ಲವೇ ಇವರು?' ಎಂದು ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದಾರೆ.
ಇದೇ ವೇಳೆ ರೈತ ಪ್ರತಿಭಟನೆಗೆ ಆಗುತ್ತಿರುವ ಅಡ್ಡಿಗಳ ಬಗ್ಗೆಯೂ ಬರೆದಿರುವ ಕಿಶೋರ್, 'ರೈತರ ದಾರಿಯಲ್ಲಿ ಹಳ್ಳ ತೋಡುತ್ತಾರೆ, ಮುಳ್ಳು ಹಾಕುತ್ತಾರೆ, ಅಶ್ರುವಾಯು ಸಿಡಿಸುತ್ತಾರೆ, ಲಾಠಿಚಾರ್ಜ್ ಮಾಡುತ್ತಾರೆ, ರೈತ ಮುಖಂಡರ ಟ್ವಿಟರ್ ಬಂದ್ ಮಾಡುತ್ತಾರೆ .. ಸೈನಿಕರನ್ನು ಕೂಲಿಪಡೆಯಾಳಾಗಿಸುತ್ತಾರೆ, ದೇಶದ ಹೆಣ್ಣುಮಕ್ಕಳನ್ನು ಬೀದಿಯಲ್ಲಿ ಎಳೆದಾಡುತ್ತಾರೆ .. ಅತ್ಯಾಚಾರಿಗಳನ್ನು ಹೊರಗೆ ಸುತ್ತಲು ಬಿಟ್ಟು ಅಮಾಯಕರನ್ನು ಜೈಲಿಗೆ ತುಂಬುತ್ತಾರೆ.. ಪ್ರಶ್ನಿಸಬೇಕಾದ ಮಾಧ್ಯಮಗಳು ಅವರ ಚಪ್ಪಲಿ ನೆಕ್ಕುತ್ತಾ ಕೂರುತ್ತವೆ. ಇದು ರಾಮ ರಾಜ್ಯವೊ ಹರಾಮ್ ರಾಜ್ಯವೊ??' ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಹಿಂದೂ ವಿರೋಧಿಗಳಲ್ಲವೇ? ಕಿಶೋರ್ ಪ್ರಶ್ನೆ
ಇನ್ನು ಕಿಶೋರ್ ಅವರ ಪೋಸ್ಟ್‌ಗೆ ಪರ ವಿರೋಧದ ಪ್ರಶ್ನೆಗಳೂ ಬಂದಿವೆ. 'ಯಾವುದೇ ಸಂದೇಹ ಬೇಡ. ಇದು ಹರಾಮ್ ರಾಜ್ಯದ ಲಕ್ಷಣಗಳೇ ಆಗಿವೆ' ಎಂದು ಕಿಶೋರ್ ಮಾತಿಗೆ ಒಬ್ಬರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಸರ್ಕಾರದಲ್ಲಿ ಪ್ರಶ್ನೆ ಮಾಡುವವನೇ ಮೊದಲಿಗೆ ಗುರಿಯಾಗುತ್ತಾನೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಇದು ಉತ್ತರ ಭಾರತದಲ್ಲಿ ಅದರಲ್ಲೂ ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಆಗುತ್ತಿರುವ ಪ್ರತಿಭಟನೆಯಷ್ಟೇ. ಇದಕ್ಕೆ ರೈತ ಪ್ರತಿಭಟನೆ ಎನ್ನುವ ಟ್ಯಾಗ್ ಮಾಡಬೇಡಿ ಎಂದು ಹೇಳಿದ್ದಾರೆ.
ಲಾಗಿನ್ ಐಡಿ ಕೊಟ್ಟಿದ್ದಕ್ಕೆ ಮಹುವಾ ಉಚ್ಛಾಟನೆಯಾದ್ರೆ, ದೇಶದ ಆಸ್ತಿ ಸ್ನೇಹಿತನಿಗೆ ಕೊಟ್ಟವನನ್ನು ಏನು ಮಾಡಬೇಕು?