ಯಶ್ ಶೆಟ್ಟಿ, ರಾಕೇಶ್ ಮಯ್ಯ, ಸುಮನ್, ಹರ್ಷಿಕಾ ಪೂಣಚ್ಚ, ಅಶ್ವಿನ್ ಹಾಸನ್, ಸ್ವರಾಜ್ ಶೆಟ್ಟಿ, ದತ್ತಣ್ಣ ನಟಿಸಿರುವ ಬೇರ ಸಿನಿಮಾ ರಿಲೀಸ್
ರಾಜೇಶ್ ಶೆಟ್ಟಿ
ಹೆದ್ದಾರಿಗೆ ಅಂಟಿಕೊಂಡಿರುವ ಊರು. ಆ ಊರನ್ನು ಆವರಿಸಿರುವ ಧರ್ಮ ಭೇದದ ಭೀತಿ. ನೆಮ್ಮದಿಯಿಂದ ಇದ್ದ ಊರಲ್ಲಿ ಜಾತಿ ಧರ್ಮದ ಮಧ್ಯೆ ಕೋಲಾಹಲ. ಅಲ್ಲಿಬ್ಬರು ಸ್ನೇಹಿತರು. ಊರ ಕಾಯುವ ಪ್ರೀತಿ ಧರಿಸಿದವರು. ಎರಡೂ ಕಡೆಯ ಆಕ್ರೋಶಕ್ಕೂ ಗುರಿಯಾದವರು. ಅವರಿಬ್ಬರು ಸೇರಿ ಎರಡು ಹನಿ ಕಣ್ಣೀರಿನಿಂದ ಊರು ಬದಲಿಸುವ ಅಂತಃಕರಣದ ಕತೆಯೇ ಬೇರ.
undefined
ಇಲ್ಲಿ ಧರ್ಮ ಸಂಘರ್ಷಕ್ಕೆ ಬಲಿಯಾದ ಕುಟುಂಬದ ಕಣ್ಣೀರಿದೆ. ಎಲ್ಲವೂ ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆ ಇದೆ. ಯಾರೋ ಹೊರಗಿನವರು ಬಂದು ಊರನ್ನು ನಾಶ ಮಾಡುವ ಹುನ್ನಾರವಿದೆ. ಧರ್ಮಾಂಧರ ಕತ್ತಿಗೆ ಬಲಿಯಾಗುವ ತಾರುಣ್ಯದ ಆಕ್ರಂದನವಿದೆ. ಮೌನದಿಂದಲೇ ಧೈರ್ಯ ನೀಡುವ ಅಮ್ಮಂದಿರ ಶ್ರೀರಕ್ಷೆ ಇದೆ. ಮುಸ್ಲಿಮ್ ಧರ್ಮದ ವ್ಯಕ್ತಿಯ ಮನೆ ಮುಂದಿನ ದೇವರ ಕಲ್ಲಿನ ಮುಂದೆ ನೀಲಾಂಜನ ದೀಪವಿದೆ.
Matte Maduve Review: ನಟ, ನಟಿಯ ಲವ್ವು, ಲೈಫು ಮತ್ತು ಮೀಡಿಯಾ ಹೈಪು
ನಿರ್ದೇಶನ: ವಿನು ಬಳಂಜ
ತಾರಾಗಣ: ಯಶ್ ಶೆಟ್ಟಿ, ರಾಕೇಶ್ ಮಯ್ಯ, ಸುಮನ್, ಹರ್ಷಿಕಾ ಪೂಣಚ್ಚ, ಅಶ್ವಿನ್ ಹಾಸನ್, ಸ್ವರಾಜ್ ಶೆಟ್ಟಿ, ದತ್ತಣ್ಣ
ರೇಟಿಂಗ್: 3
ಹಸಿರು ತುಂಬಿರುವ ಯಾವುದೇ ಊರಿನ ಶಾಂತಿ ಕೆಡಿಸಿ ಗೊಂದಲಪುರವನ್ನಾಗಿಸುವ ಕತೆ ಇದು. ಥ್ರಿಲ್ಲರ್ ರೂಪದಲ್ಲಿ ಹೇಳಿರುವ ಕತೆಯಲ್ಲಿ ಅದೆಷ್ಟೋ ಮಂದಿಯ ನಿಟ್ಟುಸಿರು ಪಿಸುಮಾತಿನ ರೂಪದಲ್ಲಿ ಕೇಳಿಸುತ್ತದೆ. ಸೂಕ್ಷ್ಮವಾಗಿ ಕಿವಿಗೊಡುವ ಮನಸ್ಸಿದ್ದರೆ ತಾಕುವ ಸದ್ದೊಂದು ಉಳಿದುಹೋಗುವಂತೆ ಇರುವ ಕತೆ ಸಿನಿಮಾ ಆಗಿದೆ.
Melody Drama Review: ನವ ವಧುವಿನ ಪರಾರಿ ಪ್ರೇಮ ಪ್ರಸಂಗ
ಒಂದು ಊರನ್ನು ಸ್ವಾರ್ಥಕ್ಕಾಗಿ ಹೇಗೆ ಒಡೆಯಲಾಗುತ್ತದೆ ಎಂಬ ಅತಿಸೂಕ್ಷ್ಮ ವಸ್ತುವನ್ನು ಹೊಂದಿರುವ ಕತೆಯನ್ನು ನಿಭಾಯಿಸಿರುವ ರೀತಿಗೆ ನಿರ್ದೇಶಕ ವಿನು ಬಳಂಜ ಮೆಚ್ಚುಗೆಗೆ ಅರ್ಹರು. ಇಲ್ಲಿ ನಮ್ಮನಿಮ್ಮಂತಹ ಜನರೇ ಇದ್ದಾರೆ. ದೊಡ್ಡ ಎಕೆ 47 ಬಂದೂಕಿನ ಉಗ್ರವಾದವಿಲ್ಲ. ಸಾಮಾನ್ಯ ಮನುಷ್ಯರ ಮಧ್ಯೆ ಇದ್ದೇ ಬದುಕಿಗೆ ಕೊಳ್ಳಿ ಇಡುವ ಉಗ್ರವಾದವಿದೆ. ಅದನ್ನು ಕಾಯಲೆಂದೇ ಮನುಷ್ಯತ್ವ, ಪ್ರೀತಿ, ಕರುಣೆ ಇದೆ ಎಂಬುದನ್ನು ಸಾರುವ ಸಿನಿಮಾ ಇದು.
ಧರ್ಮ ಸಾಮರಸ್ಯ ಸಾರುವ ಮಾತುಗಳಲ್ಲಿ ಅಬ್ಬರ ಇದೆ ಎನ್ನಿಸುತ್ತದೆ. ಆದರೆ ಆ ಮಾತುಗಳ ಅಂತರಾಳದಲ್ಲಿ ನೋವೇ ತುಂಬಿಕೊಂಡಿದೆ. ಸಲೀಮ್ ಪಾತ್ರಧಾರಿ ಯಶ್ ಶೆಟ್ಟಿ, ವಿಷ್ಣು ಪಾತ್ರಧಾರಿ ರಾಕೇಶ್ ಮಯ್ಯ ಆ ನೋವುಗಳನ್ನು ಸಮರ್ಥವಾಗಿ ದಾಟಿಸುತ್ತಾರೆ. ಅಷ್ಟರ ಮಟ್ಟಿಗೆ ಅವರ ನಟನೆ ಪರಿಪೂರ್ಣ. ದೀಪಕ್ ರೈ ಪಾಣಾಜೆ, ಹರ್ಷಿಕಾ ಪೂಣಚ್ಚ, ಸ್ವರಾಜ್ ಶೆಟ್ಟಿ, ಸುಮನ್, ಮಂಜುನಾಥ್ ಹೆಗ್ಡೆ, ಅರವಿಂದ್ ರಾವ್ ಬಹುತೇಕ ಎಲ್ಲಾ ಕಲಾವಿದರೂ ಪಾತ್ರವೇ ಆಗಿ ಜೀವಿಸಿದ್ದಾರೆ. ಕದ್ರಿ ಮಣಿಕಾಂತ್ ಸಂಗೀತ ಈ ಚಿತ್ರಕ್ಕೊಂದು ಘನತೆ.
ನೋಡಿಸಿಕೊಂಡು ಹೋಗುವಂತೆ ಕಟ್ಟಿರುವ ಈ ಸಿನಿಮಾದಲ್ಲಿ ಬೇರೆ ಬೇರೆ ವಿಚಾರಗಳು ಅಡಗಿಕೊಂಡಿವೆ. ಯೋಚಿಸುತ್ತಾ ಹೋದಷ್ಟು ಅವುಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಆ ಲೇಯರ್‌ಗಳನ್ನು ಸೂಕ್ಷ್ಮವಾಗಿ, ತಾಕುವಂತೆ ಕಟ್ಟಿಕೊಟ್ಟಿರುವುದು ನಿರ್ದೇಶಕ ವಿನು ಬಳಂಜರ ವಿಶಿಷ್ಟ ಪ್ರತಿಭೆಗೆ ಪುರಾವೆ.
ಆಂತರ್ಯದಲ್ಲೊಂದು ಕರುಣೆಯ ದೀಪದ ಬೆಳಕನ್ನು ಮತ್ತು ಪ್ರೀತಿಯ ಪಿಸುಮಾತನ್ನು ಧರಿಸಿಕೊಂಡಿರುವ ಸಿನಿಮಾ ಇದು. ಆ ಬೆಳಕು ಕಾಣಬೇಕು. ಪಿಸುಮಾತು ಕೇಳಿಸಿಕೊಳ್ಳಬೇಕು. ಆಗಲೇ ಈ ಸಿನಿಮಾ ತಾಕುವುದು.