Trivikrama Film Review: ಫೈಟು, ಲವ್ವು, ನೋವು ಮತ್ತು ಮಿಡಲ್‌ ಕ್ಲಾಸ್‌ ಲೈಫು

Published : Jun 25, 2022, 05:00 AM IST
Trivikrama Film Review: ಫೈಟು, ಲವ್ವು, ನೋವು ಮತ್ತು ಮಿಡಲ್‌ ಕ್ಲಾಸ್‌ ಲೈಫು

ಸಾರಾಂಶ

ವಿಕ್ರಂ ರವಿಚಂದ್ರನ್‌ ನಟನೆ ಭರವಸೆ ಮೂಡಿಸುವಂತಿದೆ. ಆ್ಯಕ್ಷನ್‌ಗೂ ಸೈ, ಡ್ಯಾನ್ಸ್‌ಗೂ ಸೈ ಅನ್ನುವ ಇವರಿಂದ ನಿರ್ದೇಶಕ ಮನಸ್ಸು ಮಾಡಿದರೆ ಒಳ್ಳೆಯ ಆ್ಯಕ್ಟಿಂಗ್‌ ಅನ್ನೂ ತೆಗೆಸಬಹುದು. ಅಂಕಿತಾ ಶರ್ಮಾ ಅವರಿಗೆ ಸ್ಕ್ರೀನ್‌ ಸ್ಪೇಸ್‌ ಹೆಚ್ಚಿದೆ.

ಪ್ರಿಯಾ ಕೆರ್ವಾಶೆ

ಮಿಡಲ್‌ ಕ್ಲಾಸ್‌ ಹುಡುಗ ಮತ್ತು ಹೈ ಕ್ಲಾಸ್‌ ಹುಡುಗಿಯ ಲವ್‌ ಸ್ಟೋರಿ ತ್ರಿವಿಕ್ರಮ. ಮಧ್ಯಮ ವರ್ಗದ ರಗಡ್‌ ಹುಡುಗ ವಿಕ್ರಮ್‌ಗೆ ಜೈನ ಮನೆತನದ ಅಹಿಂಸೆಯೇ ಪರಮಧರ್ಮ ಎಂದು ನಂಬಿರುವ ಶ್ರೀಮಂತ ಹುಡುಗಿ ತ್ರಿಶಾ ಮೇಲೆ ಲವ್ವಾಗುತ್ತೆ. ಬಿಸಿಲು ಮಳೆಯ ನಡುವೆ ಕಾಮನಬಿಲ್ಲಾಗಿ ಅರಳುವ ಪ್ರೀತಿ ಬದುಕನ್ನು ಬೆಳಗಿಸುತ್ತಾ ಇಲ್ವಾ ಅನ್ನೋದು ಸಿನಿಮಾದ ಒನ್‌ಲೈನ್‌. ಇದನ್ನು ನೀಟ್‌ ಆಗಿ ನಿರ್ದೇಶಕ ಸಹನಾ ಮೂರ್ತಿ ಅವರು ತೆರೆ ಮೇಲೆ ತಂದಿದ್ದಾರಾ ಅಂದರೆ ಒಂದು ವಾಕ್ಯದಲ್ಲಿ ವಿವರಿಸೋದು ಕಷ್ಟ. ಆದರೆ ಗೊಂದಲಗಳು, ಪ್ರಶ್ನೆಗಳು, ಆಕಳಿಕೆಗಳು ಚಿತ್ರದುದ್ದಕ್ಕೂ ಬರುತ್ತವೆ. ಸಹನಾಮೂರ್ತಿ ಅವರು ವೀಕ್ಷಕರ ಸಹನೆಯ ಪರೀಕ್ಷೆಯನ್ನೂ ಮಾಡ್ತಾರೆ.

ವಿಕ್ರಂ ರವಿಚಂದ್ರನ್‌ ನಟನೆ ಭರವಸೆ ಮೂಡಿಸುವಂತಿದೆ. ಆ್ಯಕ್ಷನ್‌ಗೂ ಸೈ, ಡ್ಯಾನ್ಸ್‌ಗೂ ಸೈ ಅನ್ನುವ ಇವರಿಂದ ನಿರ್ದೇಶಕ ಮನಸ್ಸು ಮಾಡಿದರೆ ಒಳ್ಳೆಯ ಆ್ಯಕ್ಟಿಂಗ್‌ ಅನ್ನೂ ತೆಗೆಸಬಹುದು. ಅಂಕಿತಾ ಶರ್ಮಾ ಅವರಿಗೆ ಸ್ಕ್ರೀನ್‌ ಸ್ಪೇಸ್‌ ಹೆಚ್ಚಿದೆ. ಡಯಲಾಗ್‌ಗಳಲ್ಲಿ ಅವರಿಗಿರುವ ಭಾಷೆಯ ಸಮಸ್ಯೆ ಕಾಣಿಸಿದರೂ ಪರ್ವಾಗಿಲ್ಲ ಅನ್ನುವ ನಟನೆ ಅವರದ್ದು. ಆದರೆ ಮಧ್ಯಮ ವರ್ಗದ ತಾಯಿಯ ಖುಷಿ, ಸಿಟ್ಟು, ನೋವು, ಹಠ ಎಲ್ಲವನ್ನೂ ಬಹಳ ಚೆನ್ನಾಗಿ ವೀಕ್ಷಕರಿಗೆ ದಾಟಿಸಿದ್ದು ಹಿರಿಯ ನಟಿ ತುಳಸಿ ಶಿವಮಣಿ. ನಾಯಕಿ ತಂದೆಯ ಪಾತ್ರದಲ್ಲಿ ಬಹುಭಾಷಾ ನಟ ಜಯಪ್ರಕಾಶ್‌ ಅವರದೂ ಸೂಕ್ಷ್ಮ ಅಭಿನಯ.

ಚಿತ್ರ: ತ್ರಿವಿಕ್ರಮ

ತಾರಾಗಣ: ವಿಕ್ರಂ ರವಿಚಂದ್ರನ್‌, ಅಂಕಿತಾ ಶರ್ಮಾ, ತುಳಸಿ ಶಿವಮಣಿ

ನಿರ್ದೇಶನ: ಸಹನಾ ಮೂರ್ತಿ

ರೇಟಿಂಗ್‌: 3

ಅಲ್ಲಲ್ಲಿ ಕತೆಯ ಅನಗತ್ಯ ಎಳೆದಾಟ, ಉದ್ದೇಶವೇ ಇಲ್ಲದೇ ಬರುವ ಹಾಡು, ಸಿನಿಮಾ ಮುಗೀತು ಅಂತ ನೆಮ್ಮದಿ ನಿಟ್ಟುಸಿರು ಬಿಡುವಾಗ ದುಷ್ಮನ್‌ನಂತೆ ಎದುರಾಗುವ ತಿರುವುಗಳು, ನಾಯಕ ವಿಕ್ರಮ್‌ ರವಿಚಂದ್ರನ್‌ ಮಗನಾದ ತಪ್ಪಿಗೆ ಅಲ್ಲಲ್ಲಿ ಬರುವ ‘ಪಂಚಿಂಗ್‌’(ಮೈ ಪರಚಿಂಗ್‌) ಡೈಲಾಗ್‌ಗಳು ಈ ಸಿನಿಮಾ ವೀಕ್ಷಕರ ಶತ್ರುಗಳು. ಕ್ಲೈಮ್ಯಾಕ್ಸ್‌ ಚಿಂತನೆಗೆ ಹಚ್ಚುವಂತಿದೆ. ಹಾಡುಗಳು ಚೆನ್ನಾಗಿವೆ. ಎಡಿಟಿಂಗ್‌ ಶಾಪ್‌ರ್‍ ಆಗಿದ್ದರೆ ನೋಡುವವರಿಗೆ ಕೊಂಚ ರಿಲೀಫ್‌ ಸಿಗುತ್ತಿತ್ತು. ರವಿಚಂದ್ರನ್‌ ಮಗನ ಮೊದಲನೇ ಸಿನಿಮಾ, ನಿರ್ದೇಶಕರ ಮೊದಲ ಚಿತ್ರ ಅನ್ನೋ ಕಾರಣಕ್ಕೆ ಚಿತ್ರ ನೋಡೋದಾದ್ರೆ ಧಾರಾಳವಾಗಿ ನೋಡಬಹುದು.

Trivikrama: ತಂದೆಯ ಪ್ರತಿಕ್ರಿಯೆ ಕೇಳಲು ಕುತೂಹಲವಿದೆ: ವಿಕ್ರಮ್‌ ರವಿಚಂದ್ರನ್‌

‘ಈ ಚಿತ್ರದ ಕತೆ ಪುನೀತ್‌ ಹಾಗೂ ಶಿವಣ್ಣ ಅವರಿಗೆ ಗೊತ್ತಿದೆ. ನಾನು ಸಿನಿಮಾ ಮಾಡ್ತೀನಿ ಅಂದ ಕೂಡಲೇ ಕತೆ ಏನು ಅಂತ ಪುನೀತ್‌ ಕೇಳಿದರು. ಕತೆ ಕೇಳಿದ ಬಳಿಕ ಬೆನ್ನು ತಟ್ಟಿ, ನಾನೇ ನಿಂಗೆ ಒಂದು ಹಾಡು ಹಾಡ್ತೀನಿ, ನೀನದಕ್ಕೆ ಚೆನ್ನಾಗಿ ಡ್ಯಾನ್ಸ್‌ ಮಾಡಬೇಕು, ಇಲ್ಲಾಂದ್ರೆ ಹೊಡೀತೀನಿ ಅಂದಿದ್ರು. ಪುನೀತ್‌ ಅವರಿಂದ ಹಾಡಿಸಬೇಕು ಅಂದುಕೊಂಡಿದ್ದ ಹಾಡನ್ನು ಈವರೆಗೆ ಶೂಟ್‌ ಮಾಡಲಾಗಲಿಲ್ಲ. ರವಿಚಂದ್ರನ್‌ ಮಗನಾಗಿ, ಈಶ್ವರಿ ಸಂಸ್ಥೆಯ ಮೂರನೇ ತಲೆಮಾರಿನವನಾಗಿದ್ದರೂ ಜನ ಅದನ್ನೆಲ್ಲ ನೋಡಲ್ಲ. ಹೊಸ ನಟ ಅಂತಲೇ ನೋಡ್ತಾರೆ. ಇದೊಂದು ಮಿಡ್ಲ್‌ ಕ್ಲಾಸ್‌ ಹುಡುಗನ ಕತೆ. ಎಲ್ಲರ ನಂಬಿಕೆ ಉಳಿಸುವಂತೆ ನಟಿಸಿದ್ದೇನೆ’ ಎಂದು ಈ ಮೊದಲು ವಿಕ್ರಂ ರವಿಚಂದ್ರನ್‌ ತಿಳಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?