ಹೇಮಂತ್ ಎಂ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾ ರಿಲೀಸ್ ಆಗಿದೆ. ರಕ್ಷಿತ್ ಚೈತ್ರಾ ಕಾಂಬಿನೇಷನ್ ಹೇಗಿದೆ.....
ಜೋಗಿ
ಅವನಿಗೆ ಅವಳು ಸುಖವಾಗಿದ್ದಾಳಾ ಅನ್ನುವ ಅನುಮಾನ. ಸುಖವಾಗಿರಬೇಕು ಅನ್ನುವ ಆಸೆ. ಯಾಕೆಂದರೆ ಅವಳ ಸುಖ ಏನೆಂಬುದನ್ನು ಅವಳೇ ಅವನಿಗೆ ಹೇಳಿದ್ದಾಳೆ. ಮನೆ ಹೇಗಿರಬೇಕು, ಅಡುಗೆ ಮನೆಯಲ್ಲಿ ಏನೇನಿರಬೇಕು, ಗಂಡ ಹೇಗಿರಬೇಕು ಅನ್ನುವುದನ್ನೆಲ್ಲ ವಿವರಿಸಿದ್ದಾಳೆ. ಅವನು ಬಂದು ನೋಡುವ ಹೊತ್ತಿಗೆ ಅವಳು ಹಾಗಿಲ್ಲ ಅನ್ನುವುದು ಗೊತ್ತಾಗುತ್ತದೆ.
ಪ್ರತಿಯೊಬ್ಬ ಭಗ್ನಪ್ರೇಮಿಗೂ ತನ್ನ ಜತೆಗಿದ್ದಿದ್ದರೆ ಅವಳು ಸುಖವಾಗಿರುತ್ತಿದ್ದಳು ಅಂತ ಅನ್ನಿಸುತ್ತಲೇ ಇರುತ್ತದೆ. ತಾನು ಪ್ರೀತಿಸಿದವಳನ್ನು ಸಂತೋಷವಾಗಿಡುತ್ತೇನೆ ಅನ್ನುವುದು ಒಂದು ಕಾಲದಲ್ಲಿ ಆದರ್ಶ ಮತ್ತು ಹೆಮ್ಮೆ. ಈಗ ಅದು ಗಂಡಸಿನ ಅಹಂಕಾರದಂತೆಯೂ ಕಂಡೀತು. ಆದರೆ ಕಾವ್ಯನ್ಯಾಯದಲ್ಲಿ ಈಗಲೂ ಇಂಥ ಭಾವನೆ ಪವಿತ್ರವೇ. ಹೀಗಾಗಿಯೇ ಸಪ್ತಸಾಗರದ ಆಚೆ ಇರುವ ಸುಪ್ತಸಾಗರದೆಡೆಗೇ ಪ್ರೇಮಿಯ ಗಮನ.
ನಿರ್ದೇಶನ: ಹೇಮಂತ್ ಎಂ ರಾವ್
ತಾರಾಗಣ: ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ, ಭರತ್
ರೇಟಿಂಗ್: 4
ಸಪ್ತಸಾಗರ ಸೈಡ್ ಎ ದುರಂತದಲ್ಲಿ ಕೊನೆಗೊಳ್ಳುತ್ತದೆ. ಹತ್ತು ವರುಷಗಳ ನಂತರ ಹೊರಬರುವ ಮನು, ಪ್ರಿಯಾಳಿಗಾಗಿ ಹಂಬಲಿಸುವುದು, ಅವಳ ಗುಂಗಿನಿಂದ ಪಾರಾಗಲಿಕ್ಕೆ ಹವಣಿಸುವುದು, ಅದಕ್ಕಾಗಿ ಮತ್ತೊಬ್ಬಳ ಸಂಗದಲ್ಲಿ ಕಳೆದುಹೋಗುವುದು, ಅವಳನ್ನು ಕೂಡ ಪ್ರಿಯಾಳನ್ನು ಪಡೆಯಲು ಬಳಸಿಕೊಳ್ಳುವುದು, ಹಳೆಯ ಸೇಡಿಗೆ ಹಾತೊರೆಯುವುದು- ಹೀಗೆ ಹಲವು ಆಯಾಮಗಳ ಕತೆಯನ್ನು ಸೈಡ್ ಬಿ ಅನಾವರಣ ಮಾಡುತ್ತಾ ಹೋಗುತ್ತದೆ.
Sapta Sagaradaache Ello Review: ಪ್ರತಿಯೊಬ್ಬ ಪ್ರೇಮಿಯೂ ವಿಚಾರಣಾಧೀನ ಕೈದಿ!
ನಿರ್ದೇಶಕ ಹೇಮಂತ್ ಎಂ. ರಾವ್ ಈ ಚಿತ್ರವನ್ನು ಅತ್ಯಂತ ಘನತೆಯಿಂದ ರೂಪಿಸಿದ್ದಾರೆ. ಅಷ್ಟೇ ಗಾಢವಾಗಿ ಕಟ್ಟಿದ್ದಾರೆ. ಉತ್ಕಟವಾದ ಪ್ರೇಮ ಮತ್ತು ಹಂಬಲದ ಹೊರತಾಗಿಯೂ ಹೆಣ್ಣಿನ ಆತ್ಮಗೌರವಕ್ಕೆ ಕಿಂಚಿತ್ತೂ ಧಕ್ಕೆ ಬರದಂತೆ ಸುರಭಿ ಮತ್ತು ಪ್ರಿಯಾ ಪಾತ್ರವನ್ನು ಪೋಷಿಸಿದ್ದಾರೆ. ಮನು ಎಂಬ ಮಾಜಿ ಪ್ರೇಮಿಯನ್ನು ಎಷ್ಟು ದೂರ ಸಾಧ್ಯವೋ ಅಷ್ಟು ದೂರದ ತನಕ ಸಂಯಮದಿಂದಲೇ ನಡೆಸಿಕೊಂಡು ಹೋಗಿದ್ದಾರೆ.
ಅವಳಿಗೇ ತಿಳಿಯದಂತೆ ಅವಳ ಮನೆಯನ್ನು ಚೆಂದಗೊಳಿಸುತ್ತಾ ಹೋಗುವುದರಲ್ಲಿ ಧನ್ಯತೆ ಕಂಡುಕೊಳ್ಳುವ ಸಾರ್ಥಕ ಪ್ರೇಮಿಯಾಗಿ ರಕ್ಷಿತ್ ಶೆಟ್ಟಿ ಅಭಿನಯ ಬಹುಕಾಲ ಗುಂಗು ಉಳಿಸುತ್ತದೆ. ರುಕ್ಮಿಣಿ ವಸಂತ್ ಅಭಿನಯವನ್ನು ಸೈಡ್ ಎಯಲ್ಲಿ ನೋಡಿ ಮೆಚ್ಚಿದವರು, ಸೈಡ್ ಬಿಯಲ್ಲಿ ಆಕೆಯ ಅಭಿಮಾನಿಯಾಗುತ್ತಾರೆ. ಬಡತನ, ಸ್ವಾಭಿಮಾನ, ಸಿಟ್ಟು ಮತ್ತು ದುಃಖವನ್ನು ರುಕ್ಮಿಣಿ ಒಂದಿನಿತೂ ಹೆಚ್ಚಿಲ್ಲದೇ, ಒಂದಿಷ್ಟೂ ಕಮ್ಮಿಯಿಲ್ಲದೇ ಕಟ್ಟಿಕೊಡುತ್ತಾರೆ. ಚೈತ್ರಾ ಆಚಾರ್ ರಸಿಕತೆ, ಕ್ರೋಧ, ಹಟ ಮತ್ತು ಅಕ್ಕರೆಯನ್ನು ನೋಟದಲ್ಲೂ ಬಾಗುಬಳುಕಿನಲ್ಲೂ ತೋರುತ್ತಾ ಮೆಚ್ಚುಗೆಯಾಗುತ್ತಾರೆ. ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ, ಭರತ್- ಮೂವರೂ ಚಿತ್ರದ ಚೈತನ್ಯಶೀಲ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ಪೋಷಿಸಿದ್ದಾರೆ.
Tagaru Palya Review: ಭಾಷೆ ಸೊಗಸು, ದೃಶ್ಯ ಚಂದ, ಕಥನ ವಿಶಿಷ್ಟ
ಇಷ್ಟು ಗಾಢವಾದ ಪ್ರೇಮಕತೆಯೊಂದನ್ನು ಅಷ್ಟೇ ತೀವ್ರವಾಗಿ ಕಟ್ಟಿಕೊಟ್ಟ ಹೇಮಂತ್, ಕೊನೆಯಲ್ಲಿ ಇನ್ನೊಂದಿಷ್ಟು ಸಂಯಮ ತೋರಬಹುದಿತ್ತು. ಭಗ್ನಪ್ರೇಮ ಹೇಗೆ ಕೊನೆಯಾಗಬೇಕು ಅನ್ನುವುದನ್ನು ಹೇಳಲೇಬೇಕು ಅಂತೇನಿಲ್ಲ. ಯಾಕೆಂದರೆ ಎಲ್ಲರ ಮನಸ್ಸಿನಲ್ಲೂ ಒಂದಲ್ಲ ಒಂದು ಪ್ರೇಮ ಒಂದಲ್ಲ ಒಂದು ಸಲ ಭಗ್ನಗೊಂಡಿರುತ್ತದೆ.