ಹಿಸ್ಟರ್ ಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ ಹಾಸ್ಟಲ್ ಹುಡುಗರು. ಸಿನಿಮಾ ಹೇಗಿದೆ ಅನ್ನೋದು ಬಿಗ್ ಕ್ಯೂರಿಯಾಸಿಟಿ...ಇಲ್ಲಿದೆ ನೋಡಿ ವಿಮರ್ಶೆ...
ರಾಜೇಶ್ ಶೆಟ್ಟಿ
ರೀಲ್ಸ್, ಸ್ಟೋರಿ, ಸ್ಟೇಟಸ್, ಸ್ನ್ಯಾಪ್ಸ್ ಮೂಲಕ ಆ ಕ್ಷಣವನ್ನು ಹಿಡಿದು ತೋರಿಸುವುದು ಈ ಕಾಲದ ಟ್ರೆಂಡು. ಆ ಸಂದರ್ಭವನ್ನು ಆಸ್ವಾದಿಸಿ ನಕ್ಕು ಹಗುರಾಗಿ ಮುಂದಕ್ಕೆ ಸಾಗುವುದು ಇನ್‌ಸ್ಟಾ, ಸ್ನ್ಯಾಪ್ ಜನರೇಷನ್‌ಗೆ ಬಲು ಇಷ್ಟ. ಇಂಥಾ ಕಾಲಘಟ್ಟಕ್ಕೆ ತಕ್ಕಂತೆ ಒಂದರಹಿಂದೊಂದರಂತೆ ಅಯಾಚಿತವಾಗಿ ನಡೆಯುವ ಘಟನೆಗಳನ್ನೇ ಇಟ್ಟುಕೊಂಡು ರೂಪಿಸಿರುವ ಈ ಕಾಲದ ಸಿನಿಮಾವನ್ನು ಕಟ್ಟಿಕೊಟ್ಟಿರುವುದು ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಹೆಗ್ಗಳಿಕೆ.
ಒಂದು ಹಾಸ್ಟೆಲ್, ಗೆಳೆಯರ ಗುಂಪು, ಸೀನಿಯರ್‌ಗಳ ಹಮ್ಮು, ವಾರ್ಡನ್ ಕಾಟ, ಫೇಲಾಗೋರ ಆತಂಕ, ಓದುವವರ ಉತ್ಸಾಹ, ಪ್ರೇಮಿಗಳ ಹಾರಾಟ, ಎಣ್ಣೆ ಹೊಡೆಯೋರ ತಾಕಲಾಟ, ದಮ್ ಪ್ರಿಯರ ಪೀಕಲಾಟ ಎಲ್ಲವನ್ನೂ ಇಟ್ಟುಕೊಂಡು ಅತ್ಯಂತ ಸೊಗಸಾಗಿ ಚಿತ್ರೀಕರಿಸಿರುವ ಸಿನಿಮಾ ಇದು. ಕತೆಗಿಂತ ಜಾಸ್ತಿ ಪ್ರೆಸೆಂಟೇಷನ್‌ಗೆ ಮಹತ್ವ ಕೊಟ್ಟಿರುವ, ತತ್ವಕ್ಕಿಂತ ತಾಂತ್ರಿಕತೆಗೆ ಜೈ ಎಂದಿರುವ, ಚಿತ್ರಕತೆಗೆ ಹೆಚ್ಚು ಪ್ರಾಶಸ್ತ್ಯ ನೀಡಿರುವ ಜಾಣ ನಿರ್ದೇಶಕ ಮತ್ತು ವಿಶಿಷ್ಟ ಛಾಯಾಗ್ರಾಹಕನ ಗೆಲುವಿನ ಕತೆ ಇದು.
ಹೊಸ ಹುಡುಗರಿಗೆ ಸಪೋರ್ಟ್ ಮಾಡಬೇಕು, ಇಂಡಸ್ಟ್ರಿ ಬೆಳೀಬೇಕು: ಶಿವರಾಜ್‌ಕುಮಾರ್
ನಿರ್ದೇಶನ: ನಿತಿನ್ ಕೃಷ್ಣಮೂರ್ತಿ
ತಾರಾಗಣ: ಪ್ರಜ್ವಲ್ ಬಿಪಿ, ರಾಕೇಶ್ ರಾಜ್‌ಕುಮಾರ್, ಶ್ರೀವತ್ಸ, ತೇಜಸ್, ಮಂಜುನಾಥ್ ನಾಯಕ್, ಶ್ರವಣ್ ಕುಮಾರ್
ರೇಟಿಂಗ್: 4
ಕತೆ ಎಂದು ಹುಡುಕಲು ಹೊರಟರೆ ಸಂಕೀರ್ಣವಾದ ಕತೆ ಇಲ್ಲಿ ಕಾಣುವುದಿಲ್ಲ. ಬದುಕೆಂದರೆ ಕತೆ ಅಲ್ಲ. ಆ ಕ್ಷಣ. ಒಂದು ಕ್ಷಣಕ್ಕೆ ಮತ್ತೊಂದು ಕ್ಷಣ ಸೇರಿ ಕತೆಯಾಗುತ್ತದೆ. ಈ ಸಿನಿಮಾ ಕೂಡ ಹಾಗೇ. ಒಂದೊಂದು ಕ್ಷಣವನ್ನು, ಒಂದೊಂದು ಪಾತ್ರವನ್ನು, ಪಾತ್ರಗಳ ಭಾವವನ್ನು ಸೆರೆಹಿಡಿಯಲು ಹೋಗಿರುವ, ಬೋರ್ ಹೊಡಿಸದ ಚಂದದ ಪ್ರಯತ್ನ.
ರಮ್ಯಾ ಲೇಡಿ ಸೂಪರ್‌ಸ್ಟಾರ್, ಅವರ ಮೇಲೆ ಬೇಜಾರಿಲ್ಲ: 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ನಿರ್ದೇಶಕ ನಿತಿನ್
ಜಾಣ ನಿರ್ದೇಶಕನೊಳಗೊಬ್ಬ ಗಣಿತಜ್ಞ ಚಿತ್ರಕತೆಗಾರ ಇದ್ದರೆ ಹೇಗಾಗುತ್ತದೆ ಎಂಬುದಕ್ಕೆ ಈ ಸಿನಿಮಾ ಪುರಾವೆ. ತನ್ನ ಸಿನಿಮಾ ಚಂದಗೊಳಿಸಲು ಏನೇನು ಬೇಕೋ ಅದನ್ನೆಲ್ಲವನ್ನೂ ತರುತ್ತಾರೆ. ರಿಷಬ್ ಶೆಟ್ಟಿ, ಪವನ್ ಕುಮಾರ್, ರಮ್ಯಾ ಬಂದುಹೋಗುವುದು ಹಾಗೆಯೇ. ಅದರೊಂದಿಗೆ ಇಲ್ಲಿರುವ ಪ್ರತಿಯೊಂದು ಪಾತ್ರವೂ ಒಂದೊಂದು ವಿಚಿತ್ರ ಪೀಸ್‌ಗಳೇ. ಅವರೆಲ್ಲರನ್ನೂ ಒಂದು ಕಡೆ ಜೋಡಿಸಿ ರಚಿಸಿದ ಸುಂದರವಾದ ಬಣ್ಣದ ಸ್ಟೇಟಸ್ ಈ ಸಿನಿಮಾ.
ಇಲ್ಲಿ ಒಂದು ಫ್ರೇಮಿನಲ್ಲಿ ಒಬ್ಬರೇ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ. ನಾಲ್ಕೈದಕ್ಕಿಂತ ಹೆಚ್ಚು ಜನ ಸೇರಿ ಗಿಜಿಗುಡುವ ಫ್ರೇಮುಗಳೇ ಜಾಸ್ತಿ. ಅವೆಲ್ಲವನ್ನೂ ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿ ಸಮರ್ಥ ನಿರ್ದೇಶಕ ಎಂದು ತೋರಿಸಿಕೊಟ್ಟಿದ್ದಾರೆ ನಿತಿನ್. ಅವರಿಗೆ ಹೆಗಲಿಗೆ ಹೆಗಲಾಗಿ ಹೊಸತು ಎಂಬಂತೆ ಇಡೀ ಸಿನಿಮಾವನ್ನೂ ಬೇರೆಯೇ ರೀತಿಯಲ್ಲಿಯೇ ತೋರಿಸಿರುವುದು ಅರವಿಂದ್ ಕಶ್ಯಪ್. ಅವರೇ ಈ ಸಿನಿಮಾದ ಸ್ಟಾರ್. ಇಲ್ಲಿನ ಪ್ರತಿಯೊಬ್ಬ ಕಲಾವಿದನ ನಟನೆಯೂ ಶ್ಲಾಘನೀಯ.
ಚಿತ್ರಕತೆ, ಸಂಭಾಷಣೆ ಬರವಣಿಗೆ ಮತ್ತು ನಿರ್ದೇಶಕನ ವಿಷನ್ ಈ ಸಿನಿಮಾವನ್ನು ಈ ಕಾಲದ ಸಿನಿಮಾವನ್ನಾಗಿಸಿದೆ. ಅದರಲ್ಲೂ ರೀಲ್ಸ್ ಜನರೇಷನ್ನಿಗೆ ತಾಕುವಂತಿದೆ.