ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ಬಿಡುಗಡೆಯಾಗುತ್ತಿದೆ. ಸಾಗರ್ ಪುರಾಣಿಕ್ ನಿರ್ದೇಶನದ, ಪವನ್ ಒಡೆಯರ್ ನಿರ್ಮಾಣದ ಈ ಸಿನಿಮಾ ಹೇಗಿದೆ?
ರಾಜೇಶ್ ಶೆಟ್ಟಿ
ಒಂದು ಡ್ರೋಣ್ ಕ್ಯಾಮೆರಾ ಹಸಿರು ತುಂಬಿದ ಹಳ್ಳಿಯ ಮೇಲೆ ಸಾಗುತ್ತಿದೆ. ನದಿ ಗದ್ದೆ ತೋಟಗಳನ್ನು ದಾಟಿ ಹೋಗುತ್ತದೆ. ಕೊನೆಗೊಂದು ದೇಗುಲದ ಪ್ರಾಂಗಣದಲ್ಲಿ ನಿಲ್ಲುತ್ತದೆ. ಅಲ್ಲಿ ಡೊಳ್ಳು ಕುಣಿತ ಕಲಾವಿದರಿದ್ದಾರೆ. ಆ ತಂಡದ ನಾಯಕನಿಗೆ ಅರ್ಚಕರು ವರ್ಷಂಪ್ರತಿ ನಡೆಯುವ ಜಾತ್ರೆಯಲ್ಲಿ ಡೊಳ್ಳು ಕುಣಿತ ಯಾವತ್ತೂ ನಿಲ್ಲಬಾರದು ಎನ್ನುವಲ್ಲಿಗೆ ಕತೆ ಶುರುವಾಗುತ್ತದೆ.
undefined
ಇದೊಂದು ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಕತೆ. ಪರಂಪರೆಯ ಕತೆ. ಸಂಪ್ರದಾಯದ ಕತೆ. ಕೃಷಿಯಲ್ಲಿ ನಂಬಿಕೆ ಕಳೆದುಕೊಂಡ ಜನರೇಷನ್ನಿನ ಕತೆ. ಹಳೆಯ ದಾರಿಯ ಕತೆ. ಹೊಸ ಚಿಗುರಿನ ಕತೆ. ವಿಷಾದದ ಜೊತೆಗೆ ಹುರುಪು ತುಂಬುವ ಹುಮ್ಮಸ್ಸಿನ ಕತೆ. ಡೊಳ್ಳು ಕುಣಿತದಂತಹ ಜಾನಪದ ಕಲೆಗಳು ಉಳಿದು ಬೆಳೆದು ಮುಂದಿನ ಪೀಳಿಗೆಗೆ ದಾಟಿ ಹೋಗಬೇಕು ಅನ್ನುವ ಒಳ್ಳೆಯ ಉದ್ದೇಶದಿಂದ ರೂಪಿತಗೊಂಡ ಈ ಕತೆಯಲ್ಲಿ ಹಳ್ಳಿಯ ವಿಷಾದ, ನಗರದ ಆಕರ್ಷಣೆ, ಬದಲಾವಣೆಯ ಸಂಕಟ, ಕಲೆ ನಂಬಿದವರ ಅಸಹಾಯಕತೆ ಎಲ್ಲವೂ ಮಿಳಿತಗೊಂಡಿದೆ. ಅಷ್ಟರಮಟ್ಟಿಗೆ ನಿರ್ದೇಶಕ ಸಾಗರ್ ಪುರಾಣಿಕ್ ಶ್ರಮ ಎದ್ದು ಕಾಣುತ್ತದೆ.
SHIVA 143 REVIEW: ಪ್ರೀತಿ ಆಮೋದ, ಮೋಸ ಆಕ್ರೋಶ
ನಾವು ನೀವು ಎಷ್ಟೇ ಡ್ರೋಣ್ ಫೋಟೋ ನೋಡಿದರೂ ಕಡೆಗೂ ಜಾಸ್ತಿ ಮನಸ್ಸಲ್ಲಿ ಉಳಿಯುವುದು ಕ್ಲೋಸಪ್ ಫೋಟೋಗಳೇ. ಈ ಸಿನಿಮಾದಲ್ಲಿ ನಿರ್ದೇಶಕರು ಮೇಲಿನಿಂದ ಎಲ್ಲವನ್ನೂ ತೋರಿಸುತ್ತಾರೆ. ಸ್ವಲ್ಪ ಹತ್ತಿರ ಹೋಗಲು, ಆಳಕ್ಕಿಳಿಯಲು ಯತ್ನಿಸಿ ಹಿಂದೆ ಬಂದಿದ್ದಾರೆ. ಮೇಲುನೋಟಕ್ಕೆ ಎಲ್ಲವೂ ಚೆಂದ ಕಂಡರೂ ಕೊನೆಗೆ ಕಾಡುವುದು ಮಾತ್ರ ಗಾಢವಾಗಿರುವುದೇ. ಹಾಗಿದ್ದಾಗ್ಯೂ ಉದ್ದೇಶ ಚೆನ್ನಾಗಿದ್ದಾಗ ನೋಡುಗರೇ ಸೂಕ್ಷ್ಮವನ್ನು ಹುಡುಕುತ್ತಾ ಹೋಗುತ್ತಾರೆ. ಅಷ್ಟುಮಾಡುವಲ್ಲಿ ಈ ಸಿನಿಮಾ ಗೆಲ್ಲುತ್ತದೆ.
ನಿರ್ದೇಶಕ: ಸಾಗರ್ ಪುರಾಣಿಕ್
ತಾರಾಗಣ: ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ಚಂದ್ರ ಮಯೂರ್, ಶರಣ್ಯ ಸುರೇಶ್
ರೇಟಿಂಗ್- 3
ಮೊದಲ ಸಿನಿಮಾ ನಿರ್ದೇಶನ ಮಾಡಿದ ಸಾಗರ್ ಪುರಾಣಿಕ್ ಇಂಥದ್ದೊಂದು ಸೂಕ್ಷ್ಮ ಸಂವೇದನೆಯ ಕತೆಗಾಗಿ ಮೆಚ್ಚುಗೆಗೆ ಅರ್ಹರು. ಡೊಳ್ಳು ಕುಣಿತವನ್ನು ಪ್ರೀತಿಸುವ ತಳಮಳದ ತರುಣ ಪಾತ್ರಧಾರಿ ಕಾರ್ತಿಕ್ ಮಹೇಶ್ ಈ ಚಿತ್ರದ ಭರವಸೆ ಬೆಳಕು. ಪ್ರಮುಖ ಪಾತ್ರಧಾರಿಗಳಾದ ನಿಧಿ ಹೆಗ್ಡೆ, ವರುಣ್ ಶ್ರೀನಿವಾಸ್, ಚಂದ್ರ ಮಯೂರ್ ಆತಂಕಗಳನ್ನು ಮುಖದ ಕದಲಿಕೆಗಳಲ್ಲೇ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಶರಣ್ಯ ಸುರೇಶ್ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಅವರ ಸ್ಕ್ರೀನ್ ಪ್ರೆಸೆನ್ಸ್ ಆಹ್ಲಾದಕರ.
Gaalipata 2Film Review: ಪ್ರಾಯಶಃ ಭಾಗಶಃ ಪ್ರೇಮ ಪರವಶ
ಡೊಳ್ಳಿನ ಗುಣ ಏನೆಂದರೆ ಬಡಿದಷ್ಟೂಅದು ಅನುರಣಿಸುತ್ತಾ ಇರುತ್ತದೆ. ಅದರ ಸದ್ದು ಕಿವಿಗೆ ಬಿದ್ದು ಭಾರಿ ಅನ್ನಿಸುತ್ತದೆ. ಆದರೆ ಆ ಡೊಳ್ಳು ಹೊತ್ತಿರುವ ಜೀವದ ಸಣ್ಣ ಕಂಪನ ಅರಿವಿಗೆ ಬಾರದೇ ಹೋಗುತ್ತದೆ. ಆ ಜೀವಗಳ ಸಣ್ಣ ಕಂಪನವನ್ನು ದಾಟಿಸಲು ಯತ್ನಿಸಿರುವ ಸಿನಿಮಾ ಇದು. ಆ ಕಂಪನ ಎದೆ ಸೇರಿಕೊಂಡಾಗ ಒಂದು ಸಣ್ಣ ನಿಟ್ಟುಸಿರು.