ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯಿಸಿರುವ ಲೈಗರ್ ಸಿನಿಮಾ ಬಿಡುಗಡೆಯಾಗಿದೆ. ಕನ್ನಡ ಮೌರ್ಯ ಸಿನಿಮಾ ರಿಮೇಕ್ ಮಾಡಿರುವುದು ನಿಜವೇ? ಕಥೆ ಹೇಗಿದೆ?
ಆರ್. ಕೇಶವಮೂರ್ತಿ
ಲಯನ್ ಹಾಗೂ ಟೈಗರ್ ಸೇರಿದರೆ ಹುಟ್ಟುವ ಜೀವಿ ಹೇಗಿರುತ್ತದೆ ಎನ್ನುವ ರೋಮಾಂಚಕಾರಿ ಕಲ್ಪನೆಗೆ ತಕ್ಕಂತೆ ವಿಜಯ್ ದೇವರಕೊಂಡ ಪಾತ್ರವನ್ನು ರೂಪಿಸಿ ‘ಲೈಗರ್’ ಚಿತ್ರವನ್ನು ಕಟ್ಟಿದ್ದಾರೆ ನಿರ್ದೇಶಕ ಪುರಿ ಜಗನ್ನಾಥ್. ಫೈಟರ್ ಆಗಿ ಹೆಸರು ಮಾಡಬೇಕು ಎಂದುಕೊಂಡಿದ್ದ ನಾಯಕನ ತಂದೆ ತೀರಿಕೊಂಡಿದ್ದಾನೆ. ಆತನ ಮಗ ಈಗ ಬಾಕ್ಸಿಂಗ್ ರಿಂಗ್‌ನಲ್ಲಿದ್ದಾನೆ. ನಾಯಕನ ತಾಯಿಗೆ ಮಗ, ತನ್ನ ಗಂಡನ ಆಸೆ ಈಡೇರಿಸಲಿ ಎನ್ನುವ ಕನಸು. ಆ ಕನಸಿಗೆ ಸಾಥ್ ಕೊಡುವ ಕೋಚ್. ಅಮ್ಮ-ಮಗನ ಭಾವನೆಗಳ ಮೇಲೆ ನಿಂತಿರುವ ಈ ಸಿನಿಮಾ ಮುಂದೆ ಹೇಗೆ ಸಾಗುತ್ತದೆ ಎನ್ನುವುದು ತೆರೆ ಮೇಲೆ ನೋಡಬೇಕು. ಜತೆಗೆ ಗ್ಲಾಮರ್ ಶೋನಂತಿರುವ ನಾಯಕಿ ಪಾತ್ರ ನಾಯಕನ ಜೀವನದಲ್ಲಿ ಎಂಥ ತಿರುವು ಕೊಡುತ್ತದೆ ಎಂಬುದು ಕುತೂಹಲದ ಅಂಶ.
ತಾರಾಗಣ: ವಿಜಯ್ ದೇವರಕೊಂಡ, ರಮ್ಯಾಕೃಷ್ಣ, ಆಲಿ, ಅನನ್ಯಾ ಪಾಂಡೆ, ವಿಷ್ಣು, ಮೈಕ್ ಟೈಸನ್
ನಿರ್ದೇಶನ: ಪುರಿ ಜಗನ್ನಾಥ್
ರೇಟಿಂಗ್: 2
ಆದರೆ, ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಬಂದಿಲ್ಲ. ಚಿತ್ರದ ಆರಂಭದಲ್ಲೇ ಬರುವ ‘ನನಗೆ ಸ್ಟೋರಿ ಹೇಳಕ್ಕೆ ಬರಲ್ಲ’ ಎನ್ನುವ ನಾಯಕನ ಡೈಲಾಗ್‌ನಂತೆ ನಿರ್ದೇಶಕರಿಗೆ ಸ್ಟೋರಿ ಹೇಳುವುದಕ್ಕಿಂತ ದೃಶ್ಯಗಳನ್ನು ತೋರಿಸುವುದೇ ಮುಖ್ಯ ಆಗಿತ್ತೋ ಏನೋ. ಹೀಗಾಗಿ ಅವರು ಕತೆ ಕತೆಯನ್ನು ಮೂಲೆಗುಂಪು ಮಾಡಿ, ಮೇಕಿಂಗ್ ಮತ್ತು ದೃಶ್ಯಗಳನ್ನೇ ನಂಬಿಕೊಂಡಿದ್ದಾರೆ. ಅದೊಂದು ಅಡುಗೆ ಸಾಮಾಗ್ರಿಗಳು ಇಲ್ಲದೆ ಪಾತ್ರೆಗಳನ್ನು ಜೋಡಿಸಿಕೊಂಡಂತೆ. ಡೈಲಾಗ್ ಡೆಲಿವರಿ ಮಾಡುವುದರಲ್ಲಿ ವಿಜಯ್ ದೇವರಕೊಂಡ ಅವರಿಗೆ ಪ್ರತ್ಯೇಕತೆ ಇದೆ. ಆದರೆ, ನಿರ್ದೇಶಕರು ನಾಯಕನ ಪಾತ್ರವನ್ನು ನೆತ್ತಿ ಮಾಡಿ ಹೀರೋನ ನಿಜ ಪ್ರತಿಭೆಯನ್ನು ಕಿತ್ತುಕೊಂಡಿದ್ದಾರೆ. ವಿಜಯ್ ದೇವರಕೊಂಡ ಹೊಸದಾಗಿ ಕಾಣುತ್ತಾರೆ ಎಂಬುದು ಬಿಟ್ಟು ಚಿತ್ರದಲ್ಲಿ ಏನೂ ಇಲ್ಲ. ಕತೆ ಹಾಗೂ ಪಾತ್ರಧಾರಿಗಳ ನಟನೆ ವಿಚಾರದಲ್ಲಿ ಪುರಿಯ ಪೂರ್ ಸಿನಿಮಾ ಇದು.
ಅಪ್ಪು ಮೌರ್ಯ ಚಿತ್ರಕ್ಕೂ ಲೈಗರ್‌ಗೂ ಸಂಬಂಧವಿಲ್ಲ: ವಿಜಯ್ ದೇವರಕೊಂಡ
ವಿಜಯ್ ದೇವರಕೊಂಡ ಮಾತುಗಳು:
'ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಕಾರಣಕ್ಕೆ ಎಲ್ಲಾ ಭಾಷೆಗಳಲ್ಲಿ ನಾನೇ ಡಬ್ ಮಾಡಿ ಆ ಭಾಷೆಯನ್ನು ತಪ್ಪಾಗಿ ಮಾತನಾಡುವುದು ಬೇಡ. ‘ಆರ್‌ಆರ್‌ಆರ್’ ಚಿತ್ರದಲ್ಲಿ ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ತೇಜ ತಮ್ಮ ಪಾತ್ರಗಳಿಗೇ ತಾವೇ ಕನ್ನಡದಲ್ಲೇ ಡಬ್ ಮಾಡಿದ್ದಾರೆ. ಅವರಂತೆ ನಾನು ಭಾಷೆ ಕಲಿತಿಲ್ಲ. ಮುಂದಿನ ದಿನಗಳಲ್ಲಿ ಭಾಷೆಯನ್ನು ಕಲಿತು ನಾನೇ ಡಬ್ ಮಾಡುತ್ತೇನೆ.ಚಿತ್ರದ ಸಬ್ ಟೈಟಲ್‌ನಲ್ಲೇ ಒಂದು ಸಾಲು ಇದೆ. ನನ್ನ ಪಾತ್ರ ಬೀಸ್ಟ್ ಇದ್ದಂತೆ. ಅಂದರೆ ಲಯನ್ ಹಾಗೂ ಟೈಗರ್ ಸೇರಿದಾಗ ಹುಟ್ಟುವುದೇ ಲೈಗರ್. ನನ್ನ ತಾಯಿ ಪಾತ್ರ ಟೈಗರ್‌ನಂತೆ. ತಂದೆ ಲಯನ್. ಪೂರ್ತಿ ಹೆಸರು ಲಯನ್ ಬಲರಾಮ್. ಇವರ ಮಗನ ಕ್ಯಾರೆಕ್ಟರ್ ಲೈಗರ್. ತುಂಬಾ ಕುತೂಹಲಕಾರಿಯಾಗಿರುವ ಹೆಸರು ಇದು. ಕತೆಗೆ ಈ ಹೆಸರು ಸಂಬಂಧ ಇದೆ.ಎರಡೂ ಚಿತ್ರಗಳಲ್ಲಿ ಬಾಕ್ಸಿಂಗ್ ಕಾಮನ್ ಪಾಯಿಂಟ್. ಜತೆಗೆ ತಾಯಿ ಮತ್ತು ತಂದೆ ಸೆಂಟಿಮೆಂಟ್ ಇದೆ. ಅಲ್ಲದೆ ‘ಮೌರ್ಯ ’ಚಿತ್ರಕ್ಕೂ ಪುರಿ ಅವರದ್ದೇ ಕತೆ. ಆ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ‘ಮೌರ್ಯ’ ಹಾಗೂ ‘ಲೈಗರ್’ ಒಂದೇ ಎನ್ನುತ್ತಿದ್ದಾರೆ. ಆದರೆ, ಎರಡೂ ಚಿತ್ರಗಳ ಕತೆ ಬೇರೆ.'