ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿರುವ ಲಕ್ಕಿಮ್ಯಾನ್ ಸಿನಿಮಾ ಭರ್ಜರಿಯಾಗಿ ಬಿಡುಗಡೆಯಾಗಿದೆ. ಪುನೀತ್ ರಾಜ್‌ಕುಮಾರ್ ನಟಿಸಿರುವ ಕೊನೆ ಸಿನಿಮಾ ಇದಾಗಿದ್ದು, ಹೇಗಿದೆ ಗೊತ್ತಾ?
ರಾಜೇಶ್ ಶೆಟ್ಟಿ
ಡಾರ್ಲಿಂಗ್ ಕೃಷ್ಣ ಲವ್ ಕೋರ್ಟು ರೂಮಿಗೆ ಕಾಲಿಡುತ್ತಿದ್ದಂತೆ ಕರೆಂಟು ಹೋಗುತ್ತದೆ. ಕತ್ತಲು ಆವರಿಸುತ್ತದೆ. ಸಾಧುಕೋಕಿಲ ಬಂದು ನಮ್ಮ ಬಾಸ್ ಅಲ್ಲಿದ್ದಾರೆ ನೋಡು ಎನ್ನುತ್ತಿರುವಂತೆಯೇ ಕರೆಂಟು ಬರುತ್ತದೆ. ಅಸತೋಮಾ ಜ್ಯೋತಿರ್ಗಮಯ ಶ್ಲೋಕ ಮೊಳಗುತ್ತದೆ. ಸಾವಿರ ವೋಲ್ಟಿನ ಬಲ್ಬು ಬೆಳಗಿದಂತೆ ಭಾಸವಾಗುವ ನಗುಮುಖದ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳುತ್ತಾರೆ. ಥಿಯೇಟರ್‌ನಲ್ಲಿ ಚಪ್ಪಾಳೆ, ಶಿಳ್ಳೆ, ಸಂಭ್ರಮ ತುಂಬಿಕೊಳ್ಳುತ್ತದೆ.
ನಿರ್ದೇಶನ: ಎಸ್. ನಾಗೇಂದ್ರಪ್ರಸಾದ್
ತಾರಾಗಣ: ಪುನೀತ್ ರಾಜ್‌ಕುಮಾರ್, ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ, ರೋಶಿನಿ ಪ್ರಕಾಶ್, ನಾಗಭೂಷಣ, ಸಾಧು ಕೋಕಿಲ
ರೇಟಿಂಗ್- 4
ಮೊದಲಾರ್ಧ ಪೂರ್ತಿ ಆವರಿಸಿಕೊಂಡಿರುವ ಪುನೀತ್ ರಾಜ್‌ಕುಮಾರ್ ಈ ಚಿತ್ರದ ಶಕ್ತಿ. ಚಿತ್ರದ ಪ್ರಮುಖ ಪಾತ್ರಕ್ಕೆ ದಾರಿ ತೋರಿಸುವ ಪರಮಾತ್ಮನ ಪಾತ್ರಧಾರಿ ಪುನೀತ್ ಪ್ರೇಕ್ಷಕನನ್ನೂ ತನ್ನ ಜೊತೆ ಕೈಹಿಡಿದು ನಡೆಸಿಕೊಂಡು ಹೋಗುತ್ತಾರೆ. ಅವರನ್ನು ಇನ್ನೊಂಚೂರು ನೋಡಬಹುದಿತ್ತು, ಇನ್ನೊಂಚೂರು ಅವರ ಮಾತು ಕೇಳಬಹುದಿತ್ತು ಅನ್ನಿಸುವಂತೆ ಮಾಡುತ್ತಾರೆ. ಈ ಚಿತ್ರದ ಬಹುಪಾಲು ಅವರ ಧ್ವನಿಯನ್ನೇ ಬಳಸಿಕೊಳ್ಳಲಾಗಿದೆ. ಕೆಲವೊಂದು ಕಡೆ ಬೇರೆಯವರ ಧ್ವನಿ ಇದ್ದರೂ ಪುನೀತ್ ಧ್ವನಿಯನ್ನು ಅಸಮರ್ಪಕ ಎಂದು ಅನ್ನಿಸದಂತೆ ಮಾಡುವಲ್ಲಿ ಚಿತ್ರತಂಡ ಗೆದ್ದಿದೆ. ಅದರಿಂದಲೇ ಈ ಚಿತ್ರಕ್ಕೆ ವಿಶಿಷ್ಟತೆ ಪ್ರಾಪ್ತವಾಗಿದೆ. ಕಡೆಗೆ ಲಕ್ಕಿಮ್ಯಾನ್ ಚಿತ್ರದ ನಿಜವಾದ ಅದೃಷ್ಟಪುನೀತ್ ಎಂದೇ ಅನ್ನಿಸುತ್ತದೆ.
Shiva 143 Review: ಪ್ರೀತಿ ಆಮೋದ, ಮೋಸ ಆಕ್ರೋಶ
ಇದು ಓ ಮೈ ಕಡವುಳೆ ಚಿತ್ರದ ರೀಮೇಕು. ಒಬ್ಬನ ಜೀವನ ಬದಲಿಸುವುದಕ್ಕೆ ಭಗವಂತ ಎರಡನೇ ಚಾನ್ಸ್ ಕೊಡುವ ಕತೆ. ಜಾಸ್ತಿ ಎಡರುತೊಡರುಗಳಿಲ್ಲದ ಒಂದು ಫೀಲ್‌ಗುಡ್ ಸಿನಿಮಾ. ಜೀವನದಲ್ಲಿ ಹಾದಿ ತಪ್ಪಿ ಹೋಗಿ ಮರುದಾರಿಗೆ ಬರುವ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ದಾರೆ. ಪುನೀತ್ ಜೊತೆ ಇರುವಷ್ಟುಹೊತ್ತು ಅವರು ನಿಜವಾಗಿಯೂ ಲಕ್ಕಿಮ್ಯಾನ್ ಅನ್ನಿಸುತ್ತಾರೆ. ಗೊಂದಲದಲ್ಲಿರುವ ಹುಡುಗನಾಗಿ, ಪ್ರೀತಿ ಕಂಡುಕೊಂಡು ಗೆಲ್ಲುವ ಪತಿಯಾಗಿ ಅವರ ನಟನೆ ಸೊಗಸು. ಪೊಸೆಸಿವ್ ಹುಡುಗಿಯಾಗಿ, ಇಷ್ಟದ ಹುಡುಗನ ಹಿತ ಬಯಸುವ ಸ್ನೇಹಿತೆಯಾಗಿ ಸಂಗೀತಾ ಶೃಂಗೇರಿಯ ನಟನೆ ಆಪ್ತ. ರೋಶಿನಿ ಪ್ರಕಾಶ್ ಈ ಚಿತ್ರದ ಮತ್ತೊಂದು ಆಸರೆ. ನಾಗಭೂಷಣ ತನ್ನ ಪ್ರತಿಭೆಯನ್ನು ಇಲ್ಲಿ ಮತ್ತೆ ಧಾರೆ ಎರೆದಿದ್ದಾರೆ. ಸ್ನೇಹಿತರಿಗಾಗಿ ಮರುಗುವ ಗೆಳೆಯನಾಗಿ, ತರ್ಲೆ ಮಾಡುವ ತುಂಟನಾಗಿ ನಟಿಸಿರುವ ನಾಗಭೂಷಣ ಅವರಿಗೆ ಒಂದು ಅಂಕ ಹೆಚ್ಚೇ ಕೊಡಬೇಕು ಅನ್ನುವಷ್ಟುತಲ್ಲೀನತೆ ಅವರಿಗಿಲ್ಲಿ ಸಾಧ್ಯವಾಗಿದೆ.
Puneeth Rajkumar Lucky Man ಒಪ್ಪದಿದ್ದರೆ ಈ ಚಿತ್ರ ಮಾಡುತ್ತಿರಲಿಲ್ಲ: ನಾಗೇಂದ್ರ ಪ್ರಸಾದ್
ತರ್ಕ ಮಾಡದೆ ಆಸ್ವಾದಿಸುವವರಿಗೆ ಈ ಸಿನಿಮಾ ಹತ್ತಿರವಾಗುತ್ತದೆ. ನಾವು ನಮ್ಮ ಹತ್ತಿರದವರ ಪ್ರೀತಿಯನ್ನು ಸೂಕ್ಷ್ಮವಾಗಿ ಗಮನಿಸದೇ ಇದ್ದಾಗ ಸಂಬಂಧಗಳು ಕೈತಪ್ಪಿಹೋಗುವ ಎಳೆಯನ್ನು ಜ್ಞಾನೋದಯವಾಗುವಂತೆ, ಮನಮುಟ್ಟುವಂತೆ ಹೇಳಿರುವುದು ನಿರ್ದೇಶಕರ ಗೆಲುವು. ಅದರಾಚೆಗೆ ಈ ಸಿನಿಮಾ ಪುನೀತ್ ಅವರಿಗೆ ಗೌರವಾರ್ಪಣೆ. ಎಲ್ಲಾ ಸಿನಿಮಾದಲ್ಲೂ ಕ್ಲೈಮ್ಯಾಕ್ಸಿನಲ್ಲಿ ಬಡಿದೆಬ್ಬಿಸುವ ಫೈಟ್ ಇದ್ದರೆ ಈ ಚಿತ್ರದಲ್ಲಿ ಹೃದಯಲ್ಲಿ ಚಿಟ್ಟೆಹಾರಿಸುವಂತೆ ಅನ್ನಿಸುವ ಅಪ್ಪು ಡಾನ್ಸ್ ಇದೆ. ಡಾನ್ಸ್ ನೋಡಿ ಮುಗಿದ ಮೇಲೆ ಪುನೀತ್ ಅವರ ಶೂಟಿಂಗ್ ದೃಶ್ಯಗಳು ಬರುತ್ತವೆ. ತೆರೆಯಲ್ಲಿ ಪುನೀತ್ ನಗುತ್ತಾರೆ. ನೋಡುವವರು ಮೌನಕ್ಕೆ ಶರಣಾಗುತ್ತಾರೆ. ಈ ಸಿನಿಮಾ ಮನದಲ್ಲಿ ಉಳಿಸಿದ್ದು ಅಷ್ಟನ್ನು.