Vedha Review ವೇದನ ರೋಷ ಇಪ್ಪತ್ತು ವರುಷ

By Vaishnavi Chandrashekar  |  First Published Dec 24, 2022, 8:46 AM IST

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 125ನೇ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ ಗೊತ್ತಾ?


ಆರ್‌ ಕೇಶವಮೂರ್ತಿ

ಹೆಣ್ಣು ಪೀಡಕರಿಗೆ, ಅತ್ಯಾಚಾರಿಗಳಿಗೆ ನಿರ್ದೇಶಕ ಎ ಹರ್ಷ ಹಾಗೂ ಶಿವರಾಜ್‌ಕುಮಾರ್‌ ಕಾಂಬಿನೇಶನ್‌ನಲ್ಲಿ ಒಂದು ವೆಪನ್‌ ತಯಾರಾಗಿ ಬಂದಿದೆ. ಅದರ ಹೆಸರೇ ‘ವೇದ’. ‘ಯಾರಿಗೂ ಹೆದರಬೇಡ, ತಪ್ಪು ಮಾಡಿದವನನ್ನು ಕ್ಷಮಿಸಲೇ ಬೇಡ’ ಎನ್ನುವುದು ವೇದನ ಉಪನಿಷತ್ತು ಅಲ್ಲ, ಆಯುಧ. ಹೆದರಬಾರದು ಮತ್ತು ಕ್ಷಮಿಸಬಾರದು ಈ ಎರಡೂ ಮಾತುಗಳ ಮೇಲೆಯೇ ಇಡೀ ಕತೆ ಸಾಗುತ್ತದೆ. ಈ ಮಾತುಗಳನ್ನು ಆಯುಧವನ್ನಾಗಿ ರೂಪಿಸಿಕೊಳ್ಳುವ ಅಪ್ಪ- ಮಗಳ ಕತೆ, ವ್ಯಥೆ, ರೋಷ ಮತ್ತು ರಕ್ತ ಚರಿತ್ರೆಯನ್ನು ನಿರ್ದೇಶಕರು ಸಾಧ್ಯವಾದಷ್ಟರ ಮಟ್ಟಿಗೆ ಹಸಿಹಸಿಯಾಗಿಯೇ ತೆರೆದಿಟ್ಟಿದ್ದಾರೆ. ಶತ್ರುಗಳನ್ನು ಹುಡುಕಿಕೊಂಡು ಹೋಗಿ ಕೊಲ್ಲುವ ಅಪ್ಪ ಮಗಳ ಕತೆಯನ್ನು ನಿವೃತ್ತ ಮಹಿಳಾ ಪೊಲೀಸ್‌ ಅಧಿಕಾರಿ ತನ್ನ ಮೊಮ್ಮಗಳಿಗೆ ಹೇಳುತ್ತಾಳೆ. ಆ ಮೂಲಕ ಬೀದಿ ಪೊರ್ಕಿಯೊಬ್ಬನ ಕಿರುಕುಳಕ್ಕೆ ಹೆದರಿ ಕೂತ ತಮ್ಮ ಮಗಳಿಗೆ, ಧೈರ್ಯದ ಆಯುಧ ಕೊಡುತ್ತಾಳೆ. ‘ವೇದ’ನ ರೋಷ, ಆತನ ಮಗಳ ಅವೇಶಕ್ಕೆ 20 ವರ್ಷಗಳ ವಯಸ್ಸಾಗಿದ್ದರೂ ಅದು ಒಂದೆರಡು ತಲೆಮಾರುಗಳಿಗೆ ಸೀಮಿತವಲ್ಲ. ಹೆಣ್ಣನ್ನು ದುರುಗುಟ್ಟಿಕೊಂಡು ನೋಡುವ ಪ್ರತಿಯೊಬ್ಬನ ಪಾಲಿಗೂ ಸದಾ ಚಾಲ್ತಿಯಲ್ಲಿರುವ ದ್ವೇಷದ ಕತ್ತಿ. ಆ ಕತ್ತಿಯನ್ನು ಯಾವಾಗ ಬೇಕಾದರೂ ತಮ್ಮ ರಕ್ಷಣೆಗೆ ಬಳಸಬಹುದು ಎನ್ನುವ ಸಂದೇಶ ಕೊಟ್ಟಿದೆ ಸಿನಿಮಾ.

Tap to resize

Latest Videos

ತಾರಾಗಣ: ಶಿವರಾಜ್‌ಕುಮಾರ್‌, ಗಾನವಿ ಲಕ್ಷ್ಮಣ್‌, ಉಮಾಶ್ರೀ, ಅದಿತಿ ಸಾಗರ್‌

ನಿರ್ದೇಶನ: ಎ ಹರ್ಷ

ರೇಟಿಂಗ್‌: 3

Vedha ಅಪ್ಪುಗೆ ಮುತ್ತಿಟ್ಟ ಶಿವಣ್ಣ; ಓಪನಿಂಗ್‌ನಲ್ಲೇ ಭಾವುಕರಾದ ಅಭಿಮಾನಿಗಳು

ಇದು ಶಿವಣ್ಣ ನಟನೆಯ 125ನೇ ಸಿನಿಮಾ. ಹಿಂದೆಂದೂ ಕಂಡರಿಯದ ಎನರ್ಜಿಯಿಂದ ಸೆಂಚುರಿ ಸ್ಟಾರ್‌ ತೆರೆಯನ್ನು ಆವರಿಸಿಕೊಂಡರೆ, ಮಗಳ ಪಾತ್ರಧಾರಿ ಅದಿತಿ ಸಾಗರ್‌ ನಿರ್ದೇಶಕನ ಕತೆಯನ್ನು ಆವರಿಸಿಕೊಳ್ಳುತ್ತಾಳೆ. ಮೇಕಿಂಗ್‌ನಲ್ಲಿ ‘ಭಜರಂಗಿ’ ಚಿತ್ರದ ರಂಗು, ಟೇಕಿಂಗ್‌ ಹಾಗೂ ನಿರೂಪಣೆಯಲ್ಲಿ ‘ಕೆಜಿಎಫ್‌’ ಚಿತ್ರದ ಫ್ಲೇವರ್‌ ನೆನಪಿಸುತ್ತಾನೆ ‘ವೇದ’. ಅದಿತಿ ಸಾಗರ್‌, ಶ್ವೇತಾ ಚಂಗಪ್ಪ, ಗಾನವಿ ಲಕ್ಷ್ಮಣ್‌, ರಾಘು ಶಿವಮೊಗ್ಗ, ಉಮಾಶ್ರೀ ಊಹೆಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅದರಲ್ಲೂ ಅದಿತಿ ಸಾಗರ್‌ ಪಾತ್ರ ಚಿತ್ರದ ನಾಯಕ ಶಿವಣ್ಣ ಅವರನ್ನೇ ಮೀರಿ ನಿಲ್ಲುವುದು ಕತೆಯೇ ಹೆಚ್ಚುಗಾರಿಕೆ ಎನ್ನಬಹುದು. ಶಿವಣ್ಣ ಅವರ ಎನರ್ಜಿಗೆ ಸಮನಾಗಿ ನಿಲ್ಲುವುದು ಸಾಹಸ ನಿರ್ದೇಶಕರಾದ ವಿಕ್ರಮ್‌ ಮೋರ್‌, ಚೇತನ್‌ ಡಿಸೋಜಾ, ರವಿವರ್ಮ, ಛಾಯಾಗ್ರಾಹಕ ಸ್ವಾಮಿ ಜೆ ಗೌಡ ಹಾಗೂ ಅರ್ಜುನ್‌ ಜನ್ಯ ಅವರ ಹಿನ್ನೆಲೆ ಸಂಗೀತ. ರಘು ನಿಡುವಳ್ಳಿ ಸಂಭಾಷಣೆಗಳು ಅಲ್ಲಲ್ಲಿ ಫೈಯರ್‌ನಂತೆ. ಕತೆ ಹಳೆಯದು ಅನಿಸಿದರೂ ಅದನ್ನು ಹೇಳಿರುವ ಕ್ರಮ ಮತ್ತು ಇಂದಿಗೂ ಅದರ ಪ್ರಸ್ತುತ ಯಾವ ರೀತಿ ಇದೆ ಎಂಬುದನ್ನು ಹೊಸದಾಗಿ ಹೇಳಿರುವುದು ಚಿತ್ರದ ಪ್ಲಸ್‌ ಪಾಯಿಂಟ್‌ಗಳಲ್ಲಿ ಒಂದು.

click me!