Kasuti Short Film Review: ಜೀವನದ ವೃತ್ತಿಯೊಳಗೆ ಕಾಯಕ ಬದುಕಿನ 'ಕಸೂತಿ'

By Govindaraj SFirst Published Jun 8, 2022, 4:59 PM IST
Highlights

ಕಥೆಯ ಪೂರ್ತಿ ಅರವಿಂದ ಇದ್ದರೂ ಸಹಾ ಆತನ ಭಾವನೆಗಳು ಸಿನೆಮಾದ ಒಪನಿಂಗ್ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಹಿನ್ನಲೆ ಧ್ವನಿಗೆ ಸೀಮಿತವಾದದ್ದು ಚಿತ್ರದ ಸ್ವಾರಸ್ಯವನ್ನು ಅರ್ಥೈಸುವಲ್ಲಿ ಪುಷ್ಟಿ ನೀಡುತ್ತದೆ.

ದಿವ್ಯಶ್ರೀ ವಜ್ರದುಂಬಿ, ಪ್ರಥಮ ಎಂ.ಸಿ.ಜೆ. ವಿವೇಕಾನಂದ ಕಾಲೇಜು, ಪುತ್ತೂರು.

ತೊಂಬತ್ತರ ದಶಕದ ಕನ್ನಡ ಸಿನಿಮಾ ರಂಗದ ಚಿತ್ರಣವನ್ನು ಬಿಂಬಿಸುವಂತೆ ಮನೆ ಗೋಡೆಗೆ ನೇತು ಹಾಕಿದ ರಾಜ್‌ಕುಮಾರ್, ವಿಷ್ಣುವರ್ಧನ್ ಚಿತ್ರಗಳ ಪೋಸ್ಟರ್‌ಗಳ ಮೂಲಕ 'ಕಸೂತಿ' ಕಿರು ಚಿತ್ರ ತೆರೆದುಕೊಳ್ಳುತ್ತದೆ. ಹಿನ್ನೆಲೆ ಧ್ವನಿಯೊಂದಿಗೆ ಆರಂಭವಾಗುವ ಕಥೆಯಲ್ಲಿ ಪ್ರೀತಿಸಿ ಮದುವೆಯಾದ ಕಥಾ ನಾಯಕಿಯ ಪತಿಯ ಅಚಾನಕ್ ಅನಾರೋಗ್ಯದಿಂದ, ಸಂಸಾರದ ಜವಾಬ್ಧಾರಿಯನ್ನು ಹೊರುವ ಅನಿವಾರ್ಯತೆಯೊಂದಿಗೆ ಮನೋಸ್ಥೈರ್ಯ ಕುಗ್ಗದಂತೆ ಆರತಿ ಎನ್ನುವ ಪಾತ್ರ ಎದುರಿಸುವ ಸವಾಲುಗಳ ಸುತ್ತ ಹೆಣೆದ ಕಥೆಯೇ ಕಸೂತಿ. ಸಿನಿಮಾದ ಕಥೆಯಲ್ಲಿ ಬರುವ ಕೆಲವು ಪಾತ್ರಗಳು ಕತೆಯ ದಿಕ್ಕನ್ನು ಬದಲಾಯಿಸುತ್ತದೆ. 

ಇದರಲ್ಲಿ ಕಥೆ ಹೆಣೆಯೋ ಮುಖಾಂತರ ನಿರ್ದೇಶಕನಾಗುವ ಗುರಿ ಹೊಂದಿದ್ದ ಆರತಿಯ ಗಂಡ ಅರವಿಂದ್ ಅಪಘಾತದಿಂದ ಸಿನಿರಂಗದ ಪಯಣಕ್ಕೆ ಇತಿಶ್ರೀ ಹಾಡಬೇಕಾಗುತ್ತದೆ. ಕಥೆಯ ಪೂರ್ತಿ ಅರವಿಂದ ಇದ್ದರೂ ಸಹಾ ಆತನ ಭಾವನೆಗಳು ಸಿನೆಮಾದ ಒಪನಿಂಗ್ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಹಿನ್ನಲೆ ಧ್ವನಿಗೆ ಸೀಮಿತವಾದದ್ದು ಚಿತ್ರದ ಸ್ವಾರಸ್ಯವನ್ನು ಅರ್ಥೈಸುವಲ್ಲಿ ಪುಷ್ಟಿ ನೀಡುತ್ತದೆ. ಒಂದೆಡೆ ಭಾವನೆಗಳನ್ನು ವ್ಯಕ್ತಪಡಿಸಲಾಗದ ಸ್ಥಿತಿಯಲ್ಲಿರುವ ಪತಿ. ಇನ್ನೊಂದೆಡೆ ನಿರ್ಭಾವುಕ ತಂದೆ. ಮತ್ತೊಂದೆಡೆ ಆರ್ಥಿಕ ಸಮಸ್ಯೆಗಳು. ಕಸೂತಿಯನ್ನೇ ನಂಬಿ ಜೀವನ ನಿರ್ವಹಿಸುತ್ತಿದ್ದ ಆರತಿ ವೃತ್ತಿಯಲ್ಲೂ ಹಿನ್ನಡೆ ಕಾಣುತ್ತಾಳೆ. 

ಡೆಲಿವರಿ ಗರ್ಲ್ಸ್‌ ಜೀವನನೇ ಹೀಗೆ ಗುರು: ಸತ್ಯ ಬಿಚ್ಚಿಟ್ಟ 'ಲಾಸ್ಟ್‌ ಆರ್ಡರ್'!

ಆದರೆ ಬದುಕಿನ ನಕಾರಾತ್ಮಕ ತಿರುವುಗಳಿಗೆ ಕಂಗೆಡದೆ ಎದುರಿಸುವ ಧೈರ್ಯ ತೋರಿದರೂ, ಅನಿರೀಕ್ಷಿತ  ಸವಾಲುಗಳು ಉದ್ಯೋಗಕ್ಕೂ ಕುತ್ತು ತಂದ ಸಂಧರ್ಭ ಎದುರಾಗುತ್ತದೆ. ಖ್ಯಾತ ಚಿತ್ರ ನಟಿಯೊಬ್ಬರಿಗೆ ಕಾಸ್ಟ್ಯೂಮ್ ಹೊಲಿಯುತ್ತಿದ್ದ ಆರತಿಗೆ  ಕಾರಣಾಂತರಗಳಿಂದ ನಟಿಯ ಮುಂದಿನ  ಸಿನಿಮಾಗಳಿಗೆ ಕಸೂತಿಯ ಅವಕಾಶ ಕೈ ತಪ್ಪಿಹೋಗುತ್ತದೆ. ಇದು ಮೊದಲೇ ಆರ್ಥಿಕವಾಗಿ ಕುಗ್ಗಿದ್ದ ಆಕೆಯನ್ನು ಇನ್ನಷ್ಟು ಕಷ್ಟಕ್ಕೆ ತಂದೊಡ್ಡುತ್ತದೆ. ಇನ್ನೊಂದೆಡೆ ಮಗಳ ಸಂಸಾರಿಕ ಜೀವನದ ಬಗ್ಗೆ ಅಸಹನೆ  ಮತ್ತು ಈ ಸಂಬಂಧದ ಬಗೆಗೆ ನಿರ್ಲಿಪ್ತ ಭಾವನೆ ಹೊಂದಿದ ತಂದೆಯ ಭಾವಗಳನ್ನು ಚಿತ್ರದ ಆರಂಭದಿಂದ ಅಂತ್ಯದವರೆಗೂ ಹಲವು ಸನ್ನಿವೇಶಗಳ ಮೂಲಕ ಭಾವನಾತ್ಮಕವಾಗಿ ಪ್ರಸ್ತುತಪಡಿಸಲಾಗಿದೆ. 

ನಿಷ್ಪ್ರಯೋಜಕ ತಂದೆಯು ಆಕೆಯ ಸಹಾಯಕ್ಕೆ ನಿಲ್ಲದಿದ್ದ ಸಂದರ್ಭದಲ್ಲಿ ಕಥಾನಾಯಕಿ ಆರತಿ ಆ ಜನಪ್ರಿಯ ನಟಿಗೆ ಬರೆದ ಪತ್ರ ಜೊತೆಗಿನ ಉಡುಗೊರೆಯೊಂದು ಕಥೆಯ ದಿಕ್ಕನ್ನೇ ಬದಲಾಯಿಸುತ್ತದೆ. ಇದು ಚಿತ್ರದ ಅಂತ್ಯದಲ್ಲಿ ಆಕೆಯ ಜೀವನದ ತಿರುವಿಗೆ ಕಾರಣವಾಗುತ್ತದೆ. ಆರತಿ ಹಾಗೂ ಆಕೆಯ ಪತಿಯ ಚಿತ್ರರಂಗದ ಜೊತೆಗಿನ ನಂಟನ್ನು ಸಿನಿಮಾ ಕ್ಲೈಮ್ಯಾಕ್ಸ್  ಹಂತದಲ್ಲಿ ಆಕೆಯ ಕಸೂತಿ ಹಾಗೂ ಆತನ ಸಿನಿಮಾ ಕನಸಿನ ಸಮ್ಮಿಲನದ ದೃಶ್ಯಗಳ ಜೊತೆಗೆ ನಿರ್ದೇಶಕನ ಕಲಾ ಕಲ್ಪನೆ, ಕ್ಯಾಮರಾ  ಕೈಚಳಕ ಹಾಗೂ  ಸೃಜನಶೀಲ ಸಂಕಲನದ ಮೂಲಕ ಪ್ರಸ್ತುತಪಡಿಸಿ ಪ್ರೇಕ್ಷಕನ ಮನ ಗೆಲ್ಲುತ್ತದೆ  ಈ ಕಿರು ಸಿನಿಮಾ. 

ಚಿತ್ರದ ಸಂಭಾಷಣೆ  ಮತ್ತು ನಟನೆ 'ಕಸೂತಿ' ಯನ್ನು  ಅಂದಗಾಣಿಸುವಲ್ಲಿ ಯಶಸ್ವಿಯಾಗಿದೆ. ಸಿನಿಮಾದ  ಮೊದಲಾರ್ಧ ಆರತಿಯ ಕಷ್ಟಗಳನ್ನು ತೋರ್ಪಡಿಸಿದರೆ, ದ್ವಿತಿಯಾರ್ಧದಲ್ಲಿ ಆಕೆ ಅವುಗಳನ್ನ ಮೆಟ್ಟಿ ನಿಲ್ಲುವ ಹಾದಿಯ ಕುರಿತು ಕಥೆ ಸಕಾರಾತ್ಮವಾಗಿ ಸಾಗುತ್ತದೆ. ಅದೆಷ್ಟೊ ಹೆಣ್ಣು ಮಕ್ಕಳು ಸಂಸಾರದ ಜವಾಬ್ಧಾರಿ ಹೊತ್ತು ಜೀವನ ನಡೆಸುತ್ತಿರುತ್ತಾರೆ. ಇಂತಹ ಹೆಣ್ಣು ಮಕ್ಕಳ ಬದುಕಿನ ಪ್ರತಿರೂಪವಾಗಿ ಆರತಿ  ಭಾಸವಾಗುತ್ತಾಳೆ. ಈ ಕಥಾ ಹಂದರವನ್ನು 90ರ ದಶಕದ ಕಾಲಘಟ್ಟದ ಆಧಾರದ ಮೇಲೆ ನಿರ್ಮಿಸಲಾಗಿದೆ. 

ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟ ಶಿವಣ್ಣನಿಗೆ ಮಗಳು ನಿವೇದಿತಾ ಸಾಥ್

ಸಿನಿಮಾದ ಸಂಪೂರ್ಣ ಸಾರಥ್ಯ ವಹಿಸಿದ  ಗೌತಮ್ ಸೊರಟುರು ಅವರ ನಿರ್ದೇಶನ, ಕಥೆ, ಛಾಯಾಗ್ರಹಣ, ಸಂಕಲನದ ಮೂಲಕ  ಭವಿಷ್ಯದ ಕನ್ನಡ ಚಿತ್ರರಂಗದ ಭರವಸೆಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಇನ್ನು ಚಿತ್ರದಲ್ಲಿ ಲಿಖಿತಾ ಅನಂತ್, ರಾಘು ಸಮಷ್ಟಿ, ಪ್ರಸನ್ನ, ಹರ್ಷವಧನ್ ಪ್ರಸಾದ್, ರಕ್ಷಿತ್ ಸೋಮಶೇಖರ್, ಶಶಿಕಲಾ ಪಾಪಣ್ಣ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ಉರುವತ್ತಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಎಂಟು ವಿಭಾಗಳಲ್ಲಿ ಪ್ರಶಸ್ತಿಗಳು ಲಭಿಸಿರುವುದು ಈ ಕಿರುಚಿತ್ರದ ಹಿರಿಮೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಇಪ್ಪತ್ತು ನಿಮಿಷಗಳ ಈ ಸಿನಿಮಾ ಉತ್ತಮ ಅನುಭವದ ಜೊತೆಗೆ ಬದುಕಿನ ಪಾಠ ನೀಡುವುದರಲ್ಲಿ ಎರಡು ಮಾತಿಲ್ಲ.
 

click me!