
ಬದುಕಿನ ಒಂದು ತಿರುವಿನಲ್ಲಿ ನಿಂತು ಹಿಂತಿರುಗಿ ನೋಡಿದರೆ ನಮ್ಮಿಡೀ ಬದುಕೇ ಒಂದು ಸಿನಿಮಾದ ಹಾಗೆ ಕಾಣುತ್ತದೆ, ನಮಗೆ ನಾವೇ ಪಾತ್ರದಂತೆ ಕಾಣುತ್ತೇವೆ.. ಈ ಮಾತಿಗೆ ಸಾಕ್ಷಿಯಾಗಿ ನಿಲ್ಲುವ ಚಿತ್ರ ‘ಕಾಣೆಯಾದವರ ಬಗ್ಗೆ ಪ್ರಕಟಣೆ’. ಮೇಲ್ನೋಟಕ್ಕೆ ಇದು 60 ದಾಟಿದ ಹಿರಿಯರ ಬದುಕಿನ ಜರ್ನಿಯ ಕತೆಯಂತೆ ಕಂಡರೂ ಅದಕ್ಕಿಂತಲೂ ಹೆಚ್ಚಿನದನ್ನು ಹೇಳುವಲ್ಲಿ ಗೆದ್ದಿದೆ. ಥೈಲ್ಯಾಂಡ್‌ನ ಒಂದು ಪ್ರವಾಸಿ ತಾಣ. ಅಲ್ಲಿ ಒಂದೇ ಊರಿನ ಹಿನ್ನೆಲೆ ಇರುವ ಮೂವರು ಕುಚ್ಚಿಕು ಗೆಳೆಯರು ತಮ್ಮ 62ರ ಪ್ರೌಢ ವಯಸ್ಸಲ್ಲಿ ವಯಸ್ಸಿಗೆ ಮೀರಿದ ಚಟುವಟಿಕೆಗಳಲ್ಲಿ ಮುಳುಗಿದ್ದಾರೆ.
ಇನ್ನೊಂದೆಡೆ ಬೆಂಗಳೂರು ಪೊಲೀಸ್ ಸ್ಟೇಶನ್‌ನಲ್ಲಿ ಅವರು ಕಾಣೆಯಾದ ಬಗ್ಗೆ ಕೇಸು ದಾಖಲಾಗಿದೆ. ಅವರ ಮೇಲೆ ಒಂದು ಕೊಲೆ ಕೇಸು ಸುತ್ತಿಕೊಳ್ಳುತ್ತೆ. ಆ ಕೇಸಿನ ತನಿಖೆಯೂ ನಡೆಯುತ್ತಿದೆ. ಥೈಲ್ಯಾಂಡ್‌ನಲ್ಲಿ ಆಪದ್ಭಾಂಧವನಂತೆ ಸಿಕ್ಕ ಟೂರಿಸ್ಟ್ ಗೈಡ್ ನೆವದಲ್ಲಿ ಮೂವರು ಗೆಳೆಯರ ಬದುಕಿನ ಬಾಲ್ಯ, ಯೌವನ, ಮಧ್ಯವಯಸ್ಸಿನ ಕತೆಗಳು ತೆರೆದುಕೊಳ್ಳುತ್ತವೆ. ಅವರ ಗೆಳೆತನ ಹೇಗಿತ್ತು ಅನ್ನೋದರಿಂದ ಪ್ರೀತಿ, ಮದುವೆ, ಮಕ್ಕಳು, ಬದಲಾಗುವ ಬದುಕು, ಬದುಕಿನ ಇಳಿ ಸಂಜೆಯಲ್ಲಿ ಕಾಡುವ ಏಕಾಕಿತನ, ಜೀವನವನ್ನು ಅಲ್ಲಾಡಿಸುವಂಥಾ ಸಂಗತಿಗಳೆಲ್ಲ ತೆರೆದುಕೊಳ್ಳುತ್ತವೆ.
ಚಿತ್ರ: ಕಾಣೆಯಾದವರ ಬಗ್ಗೆ ಪ್ರಕಟಣೆ
ತಾರಾಗಣ: ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ, ಆಶಿಕಾ ರಂಗನಾಥ್, ಚಿಕ್ಕಣ್ಣ, ತಿಲಕ್
ನಿರ್ದೇಶನ: ಅನಿಲ್ ಕುಮಾರ್
ರೇಟಿಂಗ್: 3
ಮತ್ತೊಂದೆಳೆ ಥೈಲ್ಯಾಂಡ್‌ನ ಹೆಣ್ಣು, ಹೆಂಡ ಶೋಕಿ, ಅಲ್ಲಿನ ಪ್ರವಾಸಿ ತಾಣಗಳು, ಸಂಸ್ಕೃತಿಯ ಅನಾವರಣಕ್ಕೆ ಮೀಸಲು. ಇವರು ನಿಜಕ್ಕೂ ತಲೆ ಮರೆಸಿಕೊಂಡದ್ದಕ್ಕೇನು ಕಾರಣ, ಮುಂದಿನ ಪರಿಣಾಮ ಏನಾಗಿರುತ್ತದೆ ಅನ್ನೋದನ್ನು ತಿಳಿಯಲು ಚಿತ್ರದ ಕೊನೆಯವರೆಗೆ ಕಾಯಬೇಕು. ಕೊನೆಯಲ್ಲೊಂದು ಕಣ್ಣು ತೇವಗೊಳಿಸುವಂಥಾ ದೃಶ್ಯವೂ ಇದೆ. ಎಲ್ಲೂ ಬಿಗಿ ಕಳೆದುಕೊಳ್ಳದ, ಫೋಕಸ್ ಔಟ್ ಆಗದ ಕೊನೆಯವರೆಗೂ ಹದ, ಕುತೂಹಲ ಉಳಿಸಿಕೊಂಡಿರುವ ನಿರೂಪಣೆ ನಿರ್ದೇಶಕ ಅನಿಲ್ ಕುಮಾರ್ ಜಾಣ್ಮೆಯನ್ನು ತೋರಿಸುತ್ತೆ.
Shokiwala Film Review: ಶೋಕಿಯಲ್ಲಿ ವೇಗವಿಲ್ಲ, ಕತೆಯಲ್ಲಿ ಪ್ರೇಮವಿಲ್ಲ
ಹೆಣ್ಣು ಮಕ್ಕಳ ಬಗೆಗಿನ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು, ಸನ್ನಿವೇಶಗಳು, ಬೀಪ್, ಬ್ಲರ್ ಸೀನ್‌ಗಳನ್ನು ನೆಗೆಟಿವ್ ಪಾಯಿಂಟ್ ಅನ್ನಬಹುದು. ಆದರೆ ಆರಂಭದಿಂದ ಕೊನೆಯವರೆಗೂ ಆವರಿಸಿರುವ ಮೂವರು ಹಿರಿಯ ನಟರ ಜೋಶ್, ಪಾತ್ರಗಳಲ್ಲಿನ ಅವರ ತಾದಾತ್ಮ, ಅದ್ಭುತ ನಟನೆಗೆ ಫುಲ್ ಮಾರ್ಕ್ಸ್ ನೀಡದೇ ವಿಧಿಯಿಲ್ಲ. ಇಡೀ ಸಿನಿಮಾದಲ್ಲಿ ಸಹಜತೆ ಹರಿವು ಶ್ರೀಸಾಮಾನ್ಯನ ಬದುಕಿಗೆ ಕನೆಕ್ಟ್ ಆಗುವಂತಿದೆ. ಕೆಲವೊಂದು ಹಳೆಯ ಅಂಶಗಳಿದ್ದರೂ ಹೊಸ ಅಂಶಗಳೂ ಸಾಕಷ್ಟಿವೆ. ಹಾಡುಗಳು ಕತೆಗೆ ಪೂರಕ. ಸಿನಿಮಾಟೋಗ್ರಫಿ ಚೆನ್ನಾಗಿದೆ. ಸಂದೇಶ ಅನ್ನೋದು ಕ್ಲೀಷೆಯಾದರೂ ಸ್ಫೂರ್ತಿ ನೀಡುವ ಸಿನಿಮಾವಿದು ಅನ್ನೋದನ್ನು ಅಲ್ಲಗಳೆಯಲಾಗದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.