ಐಸಿ 814 ದಿ ಕಂದಹಾರ್ ಹೈಜಾಕ್ ಕಥೆ ಹೇಳೋ ಚಿತ್ರವಿದು!

By Suvarna NewsFirst Published Sep 18, 2024, 1:21 PM IST
Highlights

ಕಂದಹಾರ್ ವಿಮಾನ ಹೈಜಾಕ್ ಪ್ರಕರಣ ಭಾರತೀಯರ ಹೃದಯದಲ್ಲಿ ತಲ್ಲಣ ಹುಟ್ಟಿಸುವಂಥ ಘಟನೆ. ಪ್ರಯಾಣಿಕರಿನ್ನು ಬಿಡಿಸಿಕೊಂಡು ಬಂದಾಗ, ಗೆದ್ವಾ? ಕೇಳಿದ್ದಕ್ಕೆ ಕೊಟ್ಟ ಉತ್ತರ ಮನಸ್ಸಿಗೆ ನಾಟುತ್ತದೆ.

-ವೀಣಾ ರಾವ್, ಕನ್ನಡಪ್ರಭ

ಜೀವ ಬಿಗಿ ಹಿಡಿದು ನೋಡುವಂಥ ನೈಜ ಘಟನೆಯಾಧಾರಿತ ಥ್ರಿಲ್ಲರ್ ವೆಬ್ ಸರಣಿ. ನೆಟ್‌ಫ್ಲಿಕ್ಸ್‌ನಲ್ಲಿ ಓಡುತ್ತಿರುವ ಐಸಿ 814 ಆರು ಎಪಿಸೋಡ್ಸ್ ಇವೆ. 1999 ರಲ್ಲಿ ಭಾರತೀಯ ವಿಮಾನವನ್ನು ಹೈಜಾಕ್ ಮಾಡಿ, ಕಂದಹಾರ್‌ನಲ್ಲಿ ಏಳು ದಿನಗಳ ಕಾಲ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ನೈಜ ಘಟನೆಯಾದಾರಿತ ಸರಣಿ ಇದು. ಈ ವಿಮಾನದ ಪೈಲಟ್ ಕ್ಯಾಪ್ಟನ್ ದೇವಿಶರಣ್ ಬರೆದ ‘ಫ್ಲೈಟ್ ಇಂಟು ಫಿಯರ್’ ಪುಸ್ತಕದ ಆಧಾರದ ಮೇಲೆ ಚಿತ್ರೀಕರಿಸಲಾಗಿದೆ.

Latest Videos

ಅನುಭವ್ ಸಿನ್ಹಾ ನಿರ್ದೇಶನದ ಈ ಸರಣಿಯಲ್ಲಿ ನಾಸಿರುದ್ದೀನ್ ಶಾ, ಕುಮುದ್ ಮಿಶ್ರಾ, ಪಂಕಜ್ ಕಪೂರ್, ಕನ್ವರ್‌ಜಿತ್ ಸಿಂಗ್, ವಿಜಯ್ ವರ್ಮಾ, ದಿಯಾ ಮಿರ್ಜಾ, ಅರವಿಂದ್ ಸ್ವಾಮಿ, ಮನೋಜ್ ಪಹ್ವಾ, ಆದಿತ್ಯ ಶ್ರೀವಾಸ್ತವ, ದಿಬೇಂದು ಭಟ್ಟಾಚಾರ್ಯ, ಸುಶಾಂತ್ ಸಿಂಗ್ ಮುಂತಾದ ಘಟಾನುಘಟಿಗಳು ಇದ್ದಾರೆ. ವಿಜಯ್ ವರ್ಮಾ ಪೈಲಟ್ ಆಗಿ ಸ್ಮರಣೀಯ ಅಭಿನಯ ನೀಡಿದ್ದಾರೆ. ಮಿಕ್ಕ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

1999 ಡಿಸೆಂಬರ್ 24 ರಂದು ಖಠ್ಮಂಡುವಿನಿಂದ ದೆಹಲಿಗೆ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ನ ವಿಮಾನ ಐಸಿ 814 ಉಗ್ರಗಾಮಿಗಳ ಹಿಡಿತಕ್ಕೆ ಸಿಕ್ಕು ಹೈಜಾಕ್ ಆಗುತ್ತದೆ. ವಿಮಾನವನ್ನು ಸಂಪೂರ್ಣ  ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಭಯೋತ್ಪಾದಕರು ಗನ್ ಪಾಯಿಂಟಿನಲ್ಲಿ ಪೈಲಟ್‌ನನ್ನು ಹೆದರಿಸಿ ವಿಮಾನವನ್ನು ಕಂದಹಾರ್ ಗೆ ಒಯ್ಯುತ್ತಾರೆ. ಮಧ್ಯದಲ್ಲಿ ಇಂಧನ ಕೊರತೆಯಿಂದ ದುಬೈಯಲ್ಲಿ ಕೆಲವು ಕಾಲ ಇಳಿಯುವ ವಿಮಾನ ಭಯೋತ್ಪಾಕರ ಮರ್ಜಿಯಂತೆ ಕೆಲವು ಪ್ರಯಾಣಿಕರನ್ನು ದುಬೈ ವಿಮಾನ ನಿಲ್ದಾಣದಲ್ಲಿ ಇಳಿಸಿಬಿಡುತ್ತದೆ. ತಮ್ಮಿಚ್ಛೆಯಂತೆ ಪ್ರಯಾಣಿಕರನ್ನು ಅಲ್ಲಿ ಇಳಿಸುವ ಭಯೋತ್ಪಾದಕರ ತಂಡ ಯಾವ ವಿವೇಚನೆಯನ್ನೂ ಬಳಸುವುದಿಲ್ಲ. ಜೊತೆಯಾಗಿ ಬಂದ ಎಷ್ಟೋ ಸಂಸಾರಗಳು ಹಾಗೂ ಪತಿ-ಪತ್ನಿಯರು ಇಲ್ಲಿ ಬೇರೆ ಬೇರೆಯಾಗಿಬಿಡುತ್ತಾರೆ. ನಮ್ಮ ಜೊತೆ ನಮ್ಮ ಸಂಬಂಧಿಕರನ್ನು ಬಿಡಿ ಎಂದು ಕೇಳಿಕೊಂಡರೂ ಹೈಜಾಕರ್ಸ್ ಕನಿಕರ ತೋರಿಸುವುದಿಲ್ಲ. ಏನಾದರೂ ಮಾತನಾಡಲು ಎದ್ದುನಿಂತ ಪ್ರಯಾಣಿಕರಿಗೆ ಹೊಡೆತ ಬೀಳುತ್ತದೆ. ಭಯೋತ್ಪಾದಕರನ್ನು ಪ್ರಶ್ನಿಸಲು ಬಂದ ಗನಸಖಿಯರು ಕೂಡ ಏಟು ತಿನ್ನುತ್ತಾರೆ.  ಐವರು ಭಯೋತ್ಪಾದಕರು ಇರುತ್ತಾರೆ. ಎಲ್ಲರ ಕೈಯಲ್ಲಿಯೂ ಗನ್. ಸಹಜವಾಗಿಯೇ ಪ್ರಯಾಣಿಕರು ನಡುಗಿ ಬಿಡುತ್ತಾರೆ.

ಮನೋರಥಂಗಳ್: ಅಪ್ಪಟ ದೇಸಿ ಸೊಗಡಿನ ದೃಶ್ಯಕಾವ್ಯ

ಪೈಲಟ್ ಮೂಲಕ ಭಾರತ ಸರ್ಕಾರವನ್ನು ಸಂಪರ್ಕಿಸುವ ಭಯೋತ್ಪಾದಕರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಎರಡು ದಿನ ಸಮಯ ತೆಗೆದು ಕೊಳ್ಳುತ್ತಾರೆ. ದೆಹಲಿಯಿಂದ  ಹೊರಡುವ ಒಂದು ಆಂಗ್ಲ ಪತ್ರಿಕೆ ಸಂಪಾದಕರಿಗೆ ಹೇಗೋ ಈ ಸುದ್ದಿ ಗೊತ್ತಾಗಿ ಅವರಿಂದ ರಾ (RAW) ಅಧಿಕಾರಿ ರಂಜನ್ ಮಿಶ್ರಾಗೆ ತಿಳಿಯುತ್ತದೆ. ಅವರು ತಕ್ಷಣ ಅದನ್ನು ರಾ ಮುಖ್ಯಸ್ಥ ವಿ.ಕೆ ಅಗರವಾಲ್ ಅವರಿಗೆ ತಿಳಿಸುತ್ತಾರೆ. ಅಲ್ಲಿಂದ ವಿದೇಶಾಂಗ ಸಚಿವಾಲಯಕ್ಕೆ ಸುದ್ದಿ ತಲುಪುತ್ತದೆ. ಹೀಗೆ ಮಿಂಚಿನ ವೇಗದಲ್ಲಿ ಸುದ್ದಿ ಎಲ್ಲ ವಿಭಾಗಕ್ಕೂ ತಲುಪುತ್ತದೆ. ಅಧಿಕಾರಿಗಳು ಚುರುಕಾಗುತ್ತಾರೆ. ತಕ್ಷಣ ಮೀಟಿಂಗ್ ಕರೆಯುತ್ತಾರೆ, ಏನೇನು ಕ್ರಮ ಕೈಗೊಳ್ಳಬೇಕು ಚರ್ಚಿಸುತ್ತಾರೆ. ರಾ ಮುಖ್ಯಸ್ಥ ಅಗರವಾಲ್ ತಮ್ಮಗೂಢಚಾರರಿಗೆ ಸುದ್ದಿ ಮುಟ್ಟಿಸಿ ಇದರ ಪೂರ್ವೋತ್ತರಗಳನ್ನು ವಿಚಾರಿಸಲು ಆದೇಶಿಸುತ್ತಾರೆ.

ರಾ ಗೂಢಚಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಇದು ಯಾವ ಭಯೋತ್ಪಾದಕ ಗುಂಪಿನಿಂದ ಆಗಿರಬಹುದು ಎಂದು ತಕ್ಷಣ ಕಾರ್ಯಾಚರಣೆ ಕೈಗೊಂಡು ಒಂದಷ್ಟು ಮಾಹಿತಿ ಕಲೆ ಹಾಕುತ್ತಾರೆ. ಈ ಮಾಹಿತಿ ಪ್ರಕಾರ ವಿಮಾನದಲ್ಲಿ 17  ಕೆಜಿಆರ್‌ಡಿಎಕ್ಸ್ ಸ್ಫೋಟಕಗಳಿರುವ ಸುದ್ದಿ ದೊರೆಯುತ್ತದೆ. ಅದನ್ನು ಯಾರು, ಎಲ್ಲಿಂದ ತಂದರೆಂಬ  ಬಗ್ಗೆ ತೀವ್ರ ಶೋಧ ಮುಂದುವರೆಯುತ್ತದೆ. ಉನ್ನತ ಮಟ್ಟದಲ್ಲಿ ಮೀಟಿಂಗ್‌ಗಳು ನಡೆದು, ಏನೇನು ಕ್ರಮ ಕೈಗೊಳ್ಳಬೇಕೆಂಬ ಚರ್ಚೆಗಳಾಗುತ್ತದೆ. ಈ ಮಧ್ಯೆ ವಿಷಯ ಮೀಡೀಯಾದವರಿಂದ ಜನಸಾಮಾನ್ಯರಿಗೆ ತಿಳಿದು ಕಂಗಾಲಾಗುತ್ತಾರೆ. ಭೀತರಾಗುತ್ತಾರೆ. ವಿಮಾನದಲ್ಲಿ ಸಿಕ್ಕಿಕೊಂಡ ತಮ್ಮ ತಮ್ಮ ಪರಿವಾರ ಬಂಧುಗಳ ಪರಿಸ್ಥಿತಿ ಬಗ್ಗೆ ಕಳವಳಗೊಳ್ಳುತ್ತಾರೆ.

ವಿದೇಶಾಂಗ ಸಚಿವಾಲಯದಿಂದ ಗಂಟೆಗೊಮ್ಮೆ ಪ್ರೆಸ್‌ಮೀಟ್ ನಡೆಯುತ್ತದೆ. ತಾವು ಎಲ್ಲ ಪ್ರಯಾಣಿಕರನ್ನೂ ಕ್ಷೇಮವಾಗಿ ಬಿಡಿಸಿಕೊಂಡು ಬರುವೆವೆಂದು ಸಚಿವಾಲಯ ಅಧಿಕಾರಿಗಳು ಆಶ್ವಾಸನೆ ಕೊಡುತ್ತಾರೆ. ಜನಗಳ ಗೊಂದಲ ಗಲಾಟೆ ಮಿತಿ ಮೀರುತ್ತದೆ. ಎಲ್ಲೆಲ್ಲೂ ಅಳು, ಕೋಪ, ಬೈಯ್ಗಳ ಶಾಪ ರೋದನೆ ತಾರಕ್ಕೇರುತ್ತದೆ.

ಮಗಳನ್ನು ಬಲೆಗೆ ಬೀಳಿಸಿದ 'ಸೈತಾನ್': ಮನಸ್ಸನ್ನು ವಶಕ್ಕೆ ಪಡೆದು, ತನ್ನಿಷ್ಟದಂತೆ ಕುಣಿಸುವ ಶೈತಾನ

ಹೈಜಾಕರ್ಸ್ ವಿಮಾನವನ್ನು ಮೊದಲು ಅಮೃತ್ಸರಕ್ಕೆ ಕೊಂಡೊಯ್ಯಲು ಹೇಳುತ್ತಾರೆ. ಆದರೆ ತಾಂತ್ರಿಕ ಕಾರಣಗಳಿಂದ ಅಲ್ಲಿ ವಿಮಾನ ಇಳಿಸಲು ಆಗುವುದಿಲ್ಲ. ವಿಮಾನದಲ್ಲಿ ಇಂಧನ ಖಾಲಿ ಆಗುವ ಭಯ ಇದ್ದೇ ಇರುತ್ತದೆ. ಇಂಧನ ಖಾಲಿಯಾದರೆ ವಿಮಾನ ನೆಲಕ್ಕಪ್ಪಳಿಸುತ್ತದೆ. ಎಲ್ಲರೂ ಸಾಯುತ್ತಾರೆ. ಅಮೃತಸರದಲ್ಲಿ ವಿಮಾನ ಇಳಿಯದ ಕಾರಣ ಲಾಹೋರ್ ಪಾಕಿಸ್ತಾನಕ್ಕೆ ಬರುತ್ತದೆ. ಅಲ್ಲಿ ಕೆಲವು ಕಾಲ ನಿಲ್ಲುತ್ತದೆ ಆದರೆ ಅಲ್ಲಿಂದಲೂ ಹೈಜಾಕರ್ಸ್ ವಿಮಾನವನ್ನು ಹೊರಡಿಸುತ್ತಾರೆ. ಕ್ಯಾಪ್ಟನ್ ಎಷ್ಟು ಕೇಳಿಕೊಂಡರೂ ಅವರು ಕನಿಕರ ತೋರುವುದೇ ಇಲ್ಲ. ವಿಮಾನದಲ್ಲಿ ಇರುವ ಪ್ರಯಾಣಿಕರ ರೋದನ ಕೂಗಾಟ ಚೀರಾಟ ತಾರಕಕ್ಕೆ ಏರುತ್ತದೆ. ಹೈಜಾಕರ್ಸ್ ವಿಮಾನ ಕಂದಹಾರಕ್ಕೆ ಹೋಗಲಿ ಎನ್ನುತ್ತಾರೆ. ಆದರೆ ಇಂಧನ ಇಲ್ಲ ಕಾರಣ ಅಷ್ಟು ದೂರ ಪಯಣಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಪೈಲೆಟ್ ದೇವಿ ಶರಣ್. ಹೈಜಾಕರ್ಸ್ ವಿಮಾನವನ್ನು ದುಬೈಗೆ ತಿರುಗಿಸಿ ಎಂದು ಆದೇಶಿಸುತ್ತಾರೆ. ಎಲ್ಲವೂ ಗನ್ ಪಾಯಿಂಟಿನಲ್ಲಿ ಆದೇಶಗಳು, ಆಜ್ಞೆಗಳು. ನವಿರಾದ ಮೃದುಮಾತು ಕಳಕಳಿ ಇಲ್ಲವೇ ಇಲ್ಲ. ದುಬೈನಲ್ಲಿ ಇಂಧನ ತುಂಬಿಸಿ ಕೊಳ್ಳುತ್ತಾರೆ.

ಹೈಜಾಕರ್ಸ್ ಕ್ರೂರಿಗಳು ಯುಕ್ತಾಯುಕ್ತ ವಿವೇಚನೆ ಇಲ್ಲದವರು. ಕ್ಯಾಪ್ಟನ್ ದೇವಿಶರಣ್‌ಗೂ ಹೊಡೆಯುತ್ತಾರೆ. ಕೋಪದಿಂದ ಇಬ್ಬರು ಪ್ರಯಾಣಿಕರಿಗೆ ಚಾಕುವಿನಿಂದ ಸಿಕ್ಕಸಿಕ್ಕಲ್ಲಿ ಚುಚ್ಚುತ್ತಾರೆ. ಒಬ್ಬ ಪ್ರಯಾಣಿಕ ರೂಪೇಶ್ ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆಯುತ್ತಾರೆ. ಹೊಸದಾಗಿ ಮದುವೆಯಾದ ರೂಪೇಶ್ ತಮ್ಮ ಹೆಂಡತಿಯೊಂದಿಗೆ ಪಯಣಿಸುತ್ತಿರುತ್ತಾನೆ. ರೂಪೇಶ್‌ನನ್ನು ಹೆಂಡತಿಯಿಂದ ದೂರ ಕೂಡಿಸಿರುತ್ತಾರೆ, ಹಾಗಾಗಿ ಅವನ ಹೆಂಡತಿಗೆ ಅವನ ಸಾವು ಕೊನೆಯ ತನಕ ಗೊತ್ತಾಗುವುದೇ ಇಲ್ಲ. ಅವಳು ಗಂಡನಿಗಾಗಿ ಅಳುವುದು, ಆಗಾಗ ಎಚ್ಚರ ತಪ್ಪುವುದು, ಬಡಬಡಿಸುವುದು ಎಲ್ಲರಿಗೂ ಕಣ್ಣೀರು ತರಿಸುತ್ತದೆ. ಪ್ರಯಾಣಿಕರ ಸುರಕ್ಷತೆಗಾಗಿ ಕಳವಳದಿಂದ ಓಡಾಡುತ್ತಿದ್ದ ಗಗನಸಖಿಯರಿಗೂ ಹೈಜಾಕರ್ಸ್ ಹೊಡೆಯುತ್ತಾರೆ. ವಿಮಾನದಲ್ಲಿ ಒಂದು ಭಯದ ವಾತಾವರಣವನ್ನು ಸೃಷ್ಟಿಸುತ್ತಾರೆ. ಎಲ್ಲರೂ ತಾವು ಹೇಳಿದಂತೆ ಕೇಳಬೇಕು, ಉಲ್ಟಾ ಪ್ರಶ್ನಿಸಬಾರದು. ಏನಾದರೂ ಬುದ್ಧಿವಂತಿಕೆ ಪ್ರದರ್ಶಿಸಿದರೆ ಹೆಣವಾಗುತ್ತೀರಿ ಎಂಬ ಎಚ್ಚರಿಕೆಯನ್ನು ಕ್ರೂರವಾಗಿ ಪದೇ ಪದೇ ಹೇಳುತ್ತಿರುತ್ತಾರೆ. ಅಷ್ಟೆಲ್ಲವಾದರೂ ಕ್ಯಾಪ್ಟನ್ ತನ್ನ ಬುದ್ಧಿ ಸಮತೋಲನವನ್ನು ಕಳೆದುಕೊಳ್ಳದೆ ಪ್ರಯಾಣಿಕರಿಗೆ ಮೈಕಿನಲ್ಲಿ ಪದೇ ಪದೇ ಧೈರ್ಯ ಹೇಳುತ್ತಿರುತ್ತಾರೆ. ಆಗಾಗ ಕ್ಯಾಪ್ಟನ್‌ಗೂ ತಮ್ಮ ಪತ್ನಿ ಹಾಗೂ ಮಕ್ಕಳು ಮನಸ್ಸಿನಲ್ಲಿ ಮೂಡಿ ಕಣ್ಣು ತೇವವಾಗುತ್ತದೆ. ಈ ದೃಶ್ಯವನ್ನು ನೋಡುವ ಎಂಥವರಿಗೂ ಹೃದಯ ಆರ್ದ್ರವಾಗದೇ ಇರದು. ವಿಮಾನಕ್ಕೆ ಕ್ಯಾಪ್ಟನ್ ಜೀವಾಳ. ಸೂಕ್ಷ್ಮ ಪರಿಸ್ಥಿತಿಗಳಲ್ಲಿ ಕ್ಯಾಪ್ಟನ್ ಧೈರ್ಯ ಕಳೆದು ಕೊಂಡರೆ ಪ್ರಯಾಣಿಕರೆಲ್ಲರಿಗೂ ಆಪತ್ತು ತಪ್ಪಿದ್ದಲ್ಲ. ಇಲ್ಲಿ ವಿಮಾನ ಚಾಲಕ ಕ್ಯಾಪ್ಟನ್ ದೇವಿ ಶರಣ್ ತೋರಿದ ಧೈರ್ಯ ಹಾಗೂ ಪ್ರಬ್ರುದ್ಧತೆ ಅಸದೃಶ್ಯವಾದದ್ದು. ಅದನ್ನು ವಿವರಿಸಲು ಪದಗಳೇ ಇಲ್ಲ. ಹಾಗೆಯೇ ಆ ಪಾತ್ರ ಮಾಡಿದ ವಿಜಯ್ ವರ್ಮಾ ತಾವೇ ಆ ಪಾತ್ರದಲ್ಲಿ ಜೀವಿಸಿದ್ದಾರೆ. ಅಷ್ಟೊಂದು ತನ್ಮಯರಾಗಿ ನಟಿಸಿದ್ದಾರೆ.

1999ರಲ್ಲಿ ಕಂದಹಾರ್ ತಾಲಿಬಾನಿಗಳ ಆಡಳಿತದಲ್ಲಿತ್ತು. ಕಂದಹಾರ್‌ನಲ್ಲಿ ಇಳಿಯುವ ವಿಮಾನವನ್ನು ತಾಲಿಬಾನಿ ಸೈನಿಕರು ಸುತ್ತುವರೆಯುತ್ತಾರೆ. ವಿಮಾನದಲ್ಲಿ ಇರುವ ಪ್ರಯಾಣಿಕರಿಗೆ ಯಾವುದೇ ಹಾನಿ ಮಾಡಬಾರದೆಂದು ರಕ್ತಪಾತ ನಮಗೆ ಇಷ್ಟವಿಲ್ಲವೆಂದು ಹೈಜಾಕರ್ಸ್‌ಗೆ ಎಚ್ಚರಿಸುತ್ತಾರೆ. ಪ್ರಯಾಣಿಕರಿಗೆ ಕುಡಿಯುವ ನೀರು ಮತ್ತು ಆಹಾರದ ವ್ಯವಸ್ಥೆ ಮಾಡುತ್ತಾರೆ. ಭಾರತದಿಂದ ಮುಖ್ಯ ಸಂಧಾನಕಾರ ಅಜಿತ್ ದೋವಲ್ (ಮನೋಜ್ ಪಹ್ವಾ) ನೇತೃತ್ವದಲ್ಲಿ ಒಂದು ಸಂಧಾನಕಾರರ ಟೀಂ ಕಂದಹಾರ್‌ಗೆ ಬಂದಿಳಿಯುತ್ತದೆ. ಹೈಜಾಕರ್ಸ್ ಐಸಿಸ್ ಭಯೋತ್ಪಾದಕರ ಬೆಂಬಲಿಗರು. ಅವರ ಬೇಡಿಕೆ ಏನೆಂದರೆ ಭಾರತದ ವಿವಿಧ ಕಾರಾಗೃಹಗಳಲ್ಲಿ ಇರುವ ಭಯೋತ್ಪಾದಕರಾದ ಅಹಮದ್ ಓಮರ್ ಸಯೀದ್ ಶೇಕ್, ಮಸೂದ್ ಅಜ಼ರ್ ಮತ್ತು ಮುಷ್ತಾಕ್ ಅಹಮದ್ ಝಕಾರ್ ಇವರನ್ನು ಬಿಡುಗಡೆ ಮಾಡಿಸುವುದಾಗಿರುತ್ತದೆ. ಸಂಧಾನಕಾರರ ಮುಖ್ಯಸ್ಥರಾಗಿ ಮನೋಜ್ ಪಹ್ವಾ ಉತ್ತಮವಾಗಿ ಅಭಿನಯಿಸಿದ್ದಾರೆ.

ಮಹಾರಾಜ ರಿವ್ಯೂ, ಆಧ್ಯಾತ್ಮಿಕ ಗುರು ಜೆಜೆಯದ್ದೇ ಆಳ್ವಿಕೆ: ನಂಬಿಕೆ ವಿರುದ್ಧ ಪತ್ರಕರ್ತನ ಹೋರಾಟ!

ಸತತ ಏಳು ದಿನಗಳ ಕಾಲ ಒತ್ತೆಯಾಳುಗಳಾಗಿದ್ದ ಪ್ರಯಾಣಿಕರ ಸುರಕ್ಷತೆ ಹಾಗೂ ಪ್ರಜೆಗಳ ಒತ್ತಾಯಕ್ಕೆ ಮಣಿದು ಅಂತೂ ಭಾರತ ಸರ್ಕಾರ ಈ ನಾಲ್ಕೂ ಜನ ಭಯೋತ್ಪಾದಕರನ್ನು ಬಿಡುಗಡೆ ಮಾಡಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆಯಿಸಿಕೊಳ್ಳುತ್ತದೆ. ಹೆಚ್ಚು ಸಾವು-ನೋವುಗಳೇನೂ ಆಗದಿದ್ದರೂ ರೂಪೇಶ್ ಸಾವಿಗೆ ಮನಸ್ಸು ತಳಮಳಗೊಳ್ಳುತ್ತದೆ. 

ಉಸಿರು ಬಿಗಿ ಹಿಡಿದು, ನೋಡಬಹುದಾದ ಸೀರೀಸ್. 90ರ ದಶಕದಲ್ಲಿ ನಡೆದ ಈ ಘಟನೆ ನೆನಪು ಇದ್ದರವರಿಗಂತೂ ರೋಚಕ ಅನುಭವ ಕೊಡುತ್ತದೆ. ಕಳವಳಗೊಳ್ಳುವಂತೆ ಮಾಡುತ್ತದೆ. ಗಗನಸಖಿಯರ ಕೆಲಸ ಎಷ್ಟು ಕಠಿಣವಾದದ್ದು ಎಂಬ ಅರಿವಾಗುತ್ತದೆ. ತಮಗೆ ಏನೇ ತೊಂದರೆಯಾದರೂ ವಿಮಾನ ಸಿಬ್ಬಂದಿ ಗಗನಸಖಿಯರೇ ಆಗಲಿ, ಪೈಲೆಟ್ ಆಗಲಿ, ಇತರ ಸಿಬ್ಬಂದಿಯೇ ಆಗಲಿ ತಮ್ಮ ಪ್ರಾಣಕ್ಕೆ ಅಪಾಯವಿದ್ದರೂ, ತೋರ್ಪಡಿಸಿಕೊಳ್ಳದೆ  ಪ್ರಯಾಣಿಕರ ಕ್ಷೇಮಕ್ಕೆ ಗಮನ ಕೊಡಬೇಕು. ಪ್ರಯಾಣಿಕರಿಗೆ ಧೈರ್ಯ ತುಂಬಬೇಕು. ತಮ್ಮ ಜೀವ ಬಲಿ ಕೊಟ್ಟಾದರೂ ಪ್ರಯಾಣಿಕರ ಜೀವ ಉಳಿಸಲು ಹೋರಾಡಬೇಕು. ವಿಮಾನ ಸಿಬ್ಬಂದಿಯೂ ಯಾವ ಸೈನಿಕರಿಗೂ ಕಡಿಮೆ ಇಲ್ಲ ಎಂಬ ಸತ್ಯ ಈ ಸರಣಿ ನೋಡುವಾಗ ತಿಳಿಯುತ್ತದೆ.

ಹೊರಗಿನಿಂದ ನಾವು ವಿಮಾನ ಸಿಬ್ಬಂದಿ ಎಂದರೆ ಬಿಳಿ ಕಾಲರ್ ಕೆಲಸ ಎಂದುಕೊಳ್ಳುತ್ತೇವೆ. ಅವರ ಇಸ್ತ್ರಿ ಮಾಡಿದ ಸಮವಸ್ತ್ರ, ಅವರ ಗತ್ತು, ಗಂಭೀರತೆ, ಅವರಿಗೆ ಸಿಗುವ ಸಂಬಳ ಸವಲತ್ತು ಅವರಿಗೆ ಸಿಗುವ ಮರ್ಯಾದೆ, ಗೌರವ ಇವುಗಳ ಬಗ್ಗೆ ಜನಸಾಮಾನ್ಯನ ಗಮನ ಇರುತ್ತದೆಯೇ ವಿನಾ ವಿಮಾನದಲ್ಲಿ ಅಪಾಯ ಎದುರಾದಾಗ ಸಿಬ್ಬಂದಿ ಹೇಗೆ ತಮ್ಮ ಜೀವದ ಹಂಗು ತೊರೆದು ಹೋರಾಡುತ್ತಾರೆ. ನಮಗೆ ಅಸಹ್ಯ ಎನಿಸುವ ಕೆಲಸಗಳನ್ನು ಅವರು ಅನಿವಾರ್ಯವಾಗಿ ಮಾಡ ಬೇಕಾಗುತ್ತದೆ ಎಂಬುದಕ್ಕೆ ಒಂದು ನಿದರ್ಶನ. ಪೈಲಟ್ ದೇವಿಶರಣ್ ವಿಮಾನ ಶೌಚಾಲಯ ಶುಚಿಗೊಳಿಸುವುದು. ಶೌಚಾಲಯದಲ್ಲಿ ಸಂಡಾಸು ಕಟ್ಟಿಕೊಂಡು ದುರ್ವಾಸನೆ ಹೊಡೆಯುತ್ತ ಶೌಚಾಲಯ ಪೂರ್ತಿ ಕೊಳಕು ಗಲೀಜಿನಿಂದ ತುಂಬಿ ಹೋಗಿದ್ದಾಗ ಒಬ್ಬ ಗಗನಸಖಿ ಹಾಗೂ ಕ್ಯಾಪ್ಟನ್ ಅದನ್ನು ಶುಚಿಗೊಳಿಸುವುದು ಮತ್ತು ಅಡಚಣೆಯಾಗಿದ್ದಕ್ಕೆ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸುವುದು, ನೋಡುಗರ ಹೃದಯವನ್ನು ಕರಗಿಸುತ್ತದೆ. ಅಸಹ್ಯಿಸಿಕೊಳ್ಳದೆ ಪ್ರಯಾಣಿಕರ ಅನುಕೂಲಕ್ಕೆ ಆದ್ಯತೆ ಕೊಡುವ ತಮಗೇ ಜೀವದ ಬೆದರಿಕೆ ಇದ್ದರೂ ತೋರಿಸಿಕೊಳ್ಳದೆ ಜೀವದ ಹಂಗು ತೊರೆದು ಪ್ರಯಾಣಿಕರನ್ನು ಕಾಪಾಡಲು ಧಾವಿಸುವ ಈ ವಿಮಾನ ಸಿಬ್ಬಂದಿಗೆ ಹ್ಯಾಟ್ಸಾಫ್. ಹೃದಯಪೂರ್ವಕ ನಮನಗಳನ್ನು ಅರ್ಪಿಸಲೇಬೇಕು.

ಹೈಜಾಕರ್ಸ್ ಬೇಡಿಕೆಯಿಟ್ಟಿದ್ದ ಭಯೋತ್ಪಾದಕರನ್ನು ಬಿಡುಗಡೆ ಮಾಡಿ, ಒತ್ತೆಯಾಳುಗಳನ್ನು ಬಿಡಿಸಿ ಕೊಂಡಾಗ ಎಲ್ಲರೂ ಸಾಲಾಗಿ ಬಂದು ವಿದೇಶಾಂಗ ಸಚಿವರಿಗೆ ನಮನ ಸಲ್ಲಿಸಿ, ಧನ್ಯವಾದ ಅರ್ಪಿಸುವುದು ನೋಡುವಾಗ ಹೃದಯ ತುಂಬಿ ಬರುತ್ತದೆ. ಎಲ್ಲರ ಮನಸ್ಸೂ ನಿರಾಳ. ಆದರೆ ಪೈಲೆಟ್ ಕ್ಯಾಪ್ಟನ್ ದೇವಿಶರಣ್ ವಿದೇಶಾಂಗ ಸಚಿವರ ಮುಂದೆ ಬಂದು ಧನ್ಯವಾದ ಅರ್ಪಿಸಿದಾಗ ಸಚಿವರು ಕ್ಯಾಪ್ಟನ್‌ಗೆ ಸೆಲ್ಯೂಟ್ ಹೊಡೆದು, ಅಪ್ಪಿಕೊಳ್ಳುವುದನ್ನು ನೋಡುವಾಗಲಂತೂ ಕಣ್ಣೀರು ಧಾರೆಯಾಗುತ್ತದೆ. ಮನಸ್ಸು ಹೃದಯ ಉಬ್ಬುತ್ತದೆ. ಪ್ರಯಾಣಿಕರ ಕ್ಷೇಮಕ್ಕೇ ಮೊದಲ ಆದ್ಯತೆ ಕೊಡುವ ಇಂಥ ಪೈಲಟ್ಸ್ ಸಂತತಿ ಸಾವಿರವಾಗಲೆಂದು ಮನಸ್ಸು ಮೂಕವಾಗಿ ಹಾರೈಸುತ್ತದೆ.

ಕೊನೆಯದಾಗಿ ವಿದೇಶಾಂಗ ಸಚಿವಾಲಯದ ಸಿಬ್ಬಂದಿ ದೂರದಲ್ಲಿ ನಿಂತು ಈ ವಿದ್ಯಮಾನಗಳನ್ನು ಗಮನಿಸುವಾಗ ಒಬ್ಬರು ಕೇಳುತ್ತಾರೆ, 'ನಾವು ಗೆದ್ವಾ?' ಇನ್ನೊಬ್ಬರು ಉತ್ತರಿಸುತ್ತಾರೆ ,'ನಾವು ಹೋರಾಟ ಅಂತೂ ಮಾಡಿದ್ದೇವೆ'. ಪ್ರಯಾಣಿಕರನ್ನು ಜೀವಂತವಾಗಿ ಉಳಿಸಿಕೊಳ್ಳುವುದಕ್ಕಾಗಿ ಹೋರಾಡಿಯೂ ಹೈಜಾಕರ್ಸ್ ಬೇಡಿಕೆಗೆ ಅಸ್ತು ಎಂದು ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದು, ಗೆದ್ದರೂ ಅದು ಗೆಲುವಿನ ಅನುಭವ ಕೊಡದ ಸಂದರ್ಭವಾಗಿತ್ತು. ಸೋಲು ಗೆಲುವಿನ ನಡುವೆ, ಕಂಡೂ ಕಾಣದ ಒಂದು ಗೆರೆ. ಈ ನಾಲ್ವರೂ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದಕ್ಕೆ ಭಾರತ ಮುಂದಿನ ದಿನಗಳಲ್ಲಿ ಎಂಥ ಬೆಲೆ ತೆರಬೇಕಾಯಿತು. ಎಷ್ಟೆಷ್ಟು ಸಾವುನೋವುಗಳನ್ನು ನೋಡಬೇಕಾಯಿತು ಎಂಬುದು ಪ್ರತಿಯೊಬ್ಬರಿಗೂ ಗೊತ್ತು.

ಶರ್ಮಾಜಿಕೀ ಬೇಟಿ: ಮಹಿಳಾ ಕೇಂದ್ರಿತ ಚಿತ್ರದ ಹೆಸರು ಮಾತ್ರ ಹೀಗೆ!

ಈ ಸರಣಿಯಲ್ಲಿ ಕಂಡೂ ಕಾಣದ ಕೆಲವು ಅಪಭ್ರಂಶಗಳಿವೆ. ಹೈಜಾಕರ್ಸ್ ನೈಜ ಹೆಸರನ್ನು ಮರೆಮಾಚಿ ಚೀಫ್, ಡಾಕ್ಟರ್ ಎಂಬ ಕೋಡ್  ಹೆಸರನ್ನು ಇಟ್ಟಿದ್ದಾರೆ. ಹೈಜಾಕರ್ಸ್ ಕೊಂಚ ಸಂವೇದನಾ ಶೀಲರಂತೆ ಸಂಧಾನಕಾರರನ್ನು, ದುರ್ಬಲರಂತೆ ತೋರಿಸಿದ್ದಾರೆ ಎಂಬ ಆರೋಪವೂ ಇದೆ. ಇದಕ್ಕೆಲ್ಲ ಕೇಂದ್ರ ಸರ್ಕಾರ ನೆಟ್‌ಫ್ಲಿಕ್ಸ್ ಸ್ಪಷ್ಟನೆ ಕೇಳಿದೆ. ನೆಟ್‌ಫ್ಲಿಕ್ಸ್‌ ವರಿಷ್ಠರು ಕೇಂದ್ರಕ್ಕೆ ಸ್ಪಷ್ಟನೆ ನೀಡಿ, ವಿವಾದ ಬಗೆಹರಿಸಿಕೊಂಡಿದ್ದಾರೆ. ಸಮಾಜವನ್ನು ತಲ್ಲಣಗೊಳಿಸಿದ್ದ ಇಂಥ ಘಟನೆಗಳನ್ನು ಸರಣಿಗೆ ಅಳವಡಿಸುವಾಗ ಮಾನವೀಯತೆಯ ನೆಲೆಗಟ್ಟಿನಲ್ಲೇ ಚಿತ್ರಿಸಬೇಕೇ ವಿನಾ ಮನರಂಜನೆಯ ಉದ್ದೇಶ ಸಲ್ಲದು.

click me!