ನಟ ರಾಕ್ಷಸ ಡಾಲಿ ಧನಂಜಯ್ ಮತ್ತು ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಅಭಿನಯಿಸಿರುವ ಮಾನ್ಸೂನ್ ರಾಗ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ ನೋಡಿ.....
ಆರ್ ಕೇಶವಮೂರ್ತಿ
ಇಲ್ಲಿ ನಾಲ್ಕು ಪ್ರೇಮ ಕತೆಗಳಿವೆ. ಒಂದೊಂದು ಕತೆ ನೋಡುಗರನ್ನು ತೀವ್ರವಾಗಿ ಕಾಡುವಂತೆ ನಿರ್ದೇಶಕ ಎಸ್ ರವೀಂದ್ರನಾಥ್ ಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ನಾಲ್ಕೂ ಪ್ರೇಮ ಕತೆಗಳು ಒಟ್ಟಿಗೆ ಒಂದೇ ದಾರಿಯಲ್ಲಿ ಪಯಣಿಸುತ್ತವೆ. ಸುಂದರ್, ಜೋಸೆಫ್, ಕಟ್ಟೆ, ರಾಜು ಹಾಗೂ ಸುಚಿತ್ರಾ, ರಾಗಸುಧಾ, ಆಸ್ಮಾ, ಹಾಸಿನಿ ಅವರ ಜೀವನದ ಕತೆಯಂತೆ ಸಾಗಿ ಕೊನೆಗೆ ಒಂದೇ ಕಡೆ ಮುಕ್ತಾಯ ಆಗುತ್ತವೆ. ಅಂದರೆ ಹಲವು ನದಿಗಳು ಹರಿಯುತ್ತ ಒಂದು ಸಮುದ್ರವಾದಂತೆ ‘ಮಾನ್ಸೂನ್ ರಾಗ’ ಅಲೆಗಳಂತೆ ತಣ್ಣಗೆ ನೋಡುಗರಲ್ಲಿ ಕೂರುತ್ತದೆ. ಹಾಗಾದರೆ ಈ ನಾಲ್ಕೂ ಕತೆಗಳು ಒಬ್ಬರದ್ದೇನಾ, ಬೇರೆ ಬೇರೆಯವರದ್ದಾ ಎನ್ನುವ ಕುತೂಹಲಕ್ಕೆ ಸಿನಿಮಾ ನೋಡಬೇಕು.
ತಾರಾಗಣ: ಅಚ್ಯುತ್ ಕುಮಾರ್, ಸುಹಾಸಿನಿ, ಧನಂಜಯ್, ರಚಿತಾರಾಮ್, ಯಶಾ ಶಿವಕುಮಾರ್, ಶಿವಾಂಕ್, ಶೋಭರಾಜ್, ಶ್ರೀಧರ್, ಶಶಿಧರ್
ನಿರ್ದೇಶನ: ಎಸ್ ರವೀಂದ್ರನಾಥ್
ರೇಟಿಂಗ್: 3
ಸದಾ ಸುರಿಯುವ ಮಳೆ ಪ್ರದೇಶದ ಹಿನ್ನೆಲೆಯಲ್ಲಿ ಬೇರೆ ಬೇರೆ ಕಾಲಘಟ್ಟದಲ್ಲಿ ಚಿತ್ರದ ಕತೆ ಸಾಗುತ್ತದೆ. ಹೈಸ್ಕೂಲ್, ಹದಿಹರೆಯದ, ಯೌವ್ವನ ಮತ್ತು ನಡು ವಯಸ್ಸು ದಾಟಿರುವ ಈ ಒಂದೊಂದು ಕಾಲದ ಪ್ರೇಮ ಕತೆಯನ್ನು ನೋಡುತ್ತಾ ಹೋದಂತೆ ತೆಲುಗಿನ ‘ಕೇರಾಫ್ ಕಂಚರಪಾಲೆಂ’ ಸಿನಿಮಾ ನೆನಪಾದರೆ ಅಚ್ಚರಿ ಇಲ್ಲ. ಯಾಕೆಂದರೆ ಈಗಾಗಲೇ ತೆಲುಗಿನಲ್ಲಿ ಬಂದು ಹೋಗಿರುವ ‘ಕೇರಾಫ್ ಕಂಚರಪಾಲೆಂ’ ಚಿತ್ರದ ಕೆಲವಾರು ಅಂಶಗಳ ಹೊರತಾಗಿ ಸೀನ್ ಟು ಸೀನ್ ರೀಮೇಕ್ ‘ಮಾನ್ಸೂನ್ ರಾಗ’. ಹೀಗಾಗಿ ಮೂಲ ಚಿತ್ರ ನೋಡಿದವರಿಗೆ ಕೊನೆಯಲ್ಲಿ ಬರುವ ತಿರುವು ಥ್ರಿಲ್ ಆಗದೆ ಇರಬಹುದು!
ಅಷ್ಟಾಗಿ ಗೊತ್ತಿಲ್ಲದ, ಜನಪ್ರಿಯತೆ ಇಲ್ಲದ ಸಾಮಾನ್ಯ ಕಲಾವಿದರೊಂದಿಗೆ ಮೂಡಿ ಬಂದ ‘ಕೇರಾಫ್ ಕಂಚರಪಾಲೆಂ’ ಚಿತ್ರ, ಕನ್ನಡಕ್ಕೆ ಬರುವ ಹೊತ್ತಿಗೆ ಜನಪ್ರಿಯ ತಾರೆಗಳಾದ ಡಾಲಿ ಧನಂಜಯ್, ರಚಿತಾರಾಮ್, ಸುಹಾಸಿನಿ, ಅಚ್ಯುತ್ ಕುಮಾರ್, ಶೋಭರಾಜ್, ಯಶಾ ಶಿವಕುಮಾರ್ ‘ಮಾನ್ಸೂನ್ ರಾಗ’ ಚಿತ್ರದ ಪಿಲ್ಲರ್‌ಗಳಾಗುತ್ತಾರೆ. ಕಡಿಮೆ ಬಜೆಟ್, ರಿಯಲಿಸ್ಟಿಕ್ ಆಗಿರುವ ಮೂಲ ಚಿತ್ರವನ್ನು ಕಮರ್ಷಿಯಲ್ ಚಿತ್ರವಾಗಿ ಕನ್ನಡಕ್ಕೆ ತರಲಾಗಿದೆ. ಅಂದರೆ ಕನ್ನಡದ ‘ತಿಥಿ’ ಚಿತ್ರವನ್ನು ತೆಲುಗಿನಲ್ಲಿ ರಾಣಾ ದಗ್ಗುಬಾಟಿ ನಟನೆಯಲ್ಲಿ ರೀಮೇಕ್ ಮಾಡಿದಂತೆ! ಮಳೆ, ಫೈಟು, ಹಾಡು, ಡೈಲಾಗ್‌ಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಛಾಯಾಗ್ರಾಹಕ ಎಸ್ ಕೆ ರಾವ್, ಚಿತ್ರದ ಸಂಕಲನಕಾರ ಚಿತ್ರದ ತಾಂತ್ರಿಕತೆಯ ಮರೆಗು ಹೆಚ್ಚಿಸಿದ್ದು, ಮೇಕಿಂಗ್ ಹಾಗೂ ತಾಂತ್ರಿಕತೆ, ರಾಗಸುಧಾ ಪಾತ್ರದ ಹಾಡು, ಮಳೆ ಮತ್ತು ಹಿನ್ನೆಲೆ ಸಂಗೀತ ಮೂಲ ಚಿತ್ರಕ್ಕಿಂತಲೂ ಚೆನ್ನಾಗಿದೆ.
LUCKY MAN REVIEW ಲಕ್ಕಿಮ್ಯಾನ್ ಚಿತ್ರದ ನಿಜವಾದ ಅದೃಷ್ಟಪುನೀತ್
ಪ್ರಬುದ್ಧ ಪ್ರೇಮಿಯಾಗಿ ಧನಂಜಯ್, ಭಿನ್ನ ಪಾತ್ರದಲ್ಲಿ ರಚಿತಾರಾಮ್ ಕಾಣಿಸಿಕೊಂಡರೆ, ಯಶಾ ಶಿವಕುಮಾರ್ ಅವರ ರಾಗಸುಧಾ ಪಾತ್ರ ಕತೆಗೆ ಲವಲವಿಕೆ ಮೂಡಿಸುತ್ತದೆ. ಹೈಸ್ಕೂಲ್ ಜೋಡಿ ಹಾಗೂ 40ರ ನಂತರದ ಜೋಡಿ ಅಚ್ಯುತ್ ಕುಮಾರ್ ಹಾಗೂ ಸುಹಾಸಿನಿ ಇಡೀ ಚಿತ್ರದ ಹೈಲೈಟ್.
ಫ್ಲೈಟ್ ಲೇಟ್ ಆಗಿದ್ದಕ್ಕೆ ಹೋಟೆಲ್ ಸಿಕ್ಕಿಲ್ಲ, ಆಸ್ಪತ್ರೆಯಲ್ಲಿ ಒಂದು ದಿನ ಕಳೆದೆ: ನಟಿ ಸುಹಾಸಿನಿ
ವೃತ್ತಿಪರ ಕಲಾವಿದರು ಅಲ್ಲದವರು ಮಾಡಿರುವ ಚಿತ್ರವನ್ನು ಜನಪ್ರಿಯ ಕಲಾವಿದರೊಂದಿಗೆ ರೀಮೇಕ್ ಮಾಡುವಾಗ ನೇಟಿವಿಟಿ ಹಾಗೂ ಮೂಲ ಚಿತ್ರದಲ್ಲಿ ಇರುವ ಚಿತ್ರಕಥೆಯ ಆತ್ಮ ದಾರಿ ತಪ್ಪುತ್ತದೆ. ಯಾಕೆಂದರೆ ಮೂಲ ಚಿತ್ರ ಚಿತ್ರಕಥೆ ಮೇಲೆ ನಿಂತಿದೆ. ಹೀಗಾಗಿ ನಾಲ್ಕು ಪ್ರೇಮ ಕತೆಗಳು ಒಂದೇನಾ, ಬೇರೆಯವರದ್ದಾ ಎಂದು ನಂಬಿಸುವುದು ಕಷ್ಟವಾಗುತ್ತದೆ. ಆ ಕಷ್ಟಚಿತ್ರದ ಆರಂಭದಿಂದಲೂ ನಿರ್ದೇಶಕರು ಎದುರಿಸಿದ್ದಾರೆ. ಆದರೂ ಮೂಲ ಚಿತ್ರ ನೋಡದೆ ಇರುವವರಿಗೆ ‘ಮಾನ್ಸೂನ್ ರಾಗ’ ಇಷ್ಟವಾಗುತ್ತದೆ. ನಿರ್ಮಾಪಕ ಎ ಆರ್ ವಿಖ್ಯಾತ್, ನಿರ್ದೇಶಕ ಎಸ್ ರವೀಂದ್ರನಾಥ್ ತಂಡಕ್ಕೆ ತಾಂತ್ರಿಕತೆಯ ಪ್ರತಿಭೆ, ಸಿನಿಮಾ ಭಾಷೆ ಚೆನ್ನಾಗಿ ಸಿದ್ಧಿಸಿದೆ. ಅವರ ಈ ಪ್ರತಿಭೆ ಬೇರೆ ಭಾಷೆಯ ಚಿತ್ರಗಳನ್ನು ಗುಟ್ಟಾಗಿ ರೀಮೇಕ್ ಮಾಡುವುದಕ್ಕೆ ವ್ಯಯಿಸುವ ಬದಲು, ಸ್ವಮೇಕ್ ಕತೆಗಳ ಕಡೆ ಗಮನ ಕೊಟ್ಟರೆ ಒಳ್ಳೆಯ ಸಿನಿಮಾಗಳು ಅವರಿಂದ ಮೂಡಿ ಬರುವುದು ಪಕ್ಕಾ.