
ಕೊರೊನಾ ನಂತರದ ದಿನಗಳಲ್ಲಿ 'ವರ್ಕ್ ಫ್ರಂ ಹೋಮ್' (WFH) ಎಂಬುದು ಬಹುತೇಕ ಐಟಿ ಮತ್ತು ಕಾರ್ಪೊರೇಟ್ ಉದ್ಯೋಗಿಗಳ ಜೀವನದ ಭಾಗವಾಗಿಬಿಟ್ಟಿದೆ. ಆಫೀಸ್‌ಗೆ ಹೋಗುವ ಕಿರಿಕಿರಿ ಇಲ್ಲ, ಟ್ರಾಫಿಕ್ ಸಮಸ್ಯೆ ಇಲ್ಲ ಎಂದು ಸಂಭ್ರಮಿಸುವವರ ನಡುವೆ, ಮನೆಯಲ್ಲೇ ಕುಳಿತು ಕೆಲಸ ಮಾಡುವುದು ಒಂಟಿತನಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬ ಸತ್ಯವನ್ನೂ ಅನೇಕರು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 'ನಮಾನ್' ಎಂಬ ಯುವಕ ಹಂಚಿಕೊಂಡ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನಮಾನ್ ತನ್ನ ವಿಡಿಯೋದಲ್ಲಿ ವರ್ಕ್ ಫ್ರಂ ಹೋಮ್‌ನಿಂದ ತಾನು ಅನುಭವಿಸುತ್ತಿರುವ ಬೇಸರ ಮತ್ತು ಒಂಟಿತನದ ಬಗ್ಗೆ ಬಹಳ ಮಾರ್ಮಿಕವಾಗಿ ಮಾತನಾಡಿದ್ದಾನೆ. "ಒಂದು ಕಾಲದಲ್ಲಿ ಮನೆಯಿಂದಲೇ ಕೆಲಸ ಮಾಡುವುದು ನನ್ನ ಪಾಲಿನ ದೊಡ್ಡ ಕನಸಾಗಿತ್ತು. ಆಫೀಸ್‌ಗೆ ಹೋಗಿ ಬರುವ ಸಮಯ ಉಳಿಯುತ್ತದೆ ಎಂದು ಖುಷಿ ಪಟ್ಟಿದ್ದೆ. ಆದರೆ, ಈಗ ಒಂದು ತಿಂಗಳಿನಿಂದ ಯಾರೊಂದಿಗೂ ನೇರವಾಗಿ ಮಾತನಾಡಿಲ್ಲ. ಆಫೀಸ್‌ನ ಸಣ್ಣಪುಟ್ಟ ಹರಟೆ, ಸಹೋದ್ಯೋಗಿಗಳ ಜೊತೆಗಿನ ಒಡನಾಟ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಮಯ ಉಳಿದಿರಬಹುದು, ಆದರೆ ಜೀವನದಲ್ಲಿ ಒಂದು ರೀತಿಯ ವಿಚಿತ್ರವಾದ ಶೂನ್ಯ ಕಾಡುತ್ತಿದೆ" ಎಂದು ಆತ ಹೇಳಿಕೊಂಡಿದ್ದಾನೆ.
ನಮಾನ್ ಮನುಷ್ಯನ ಮನಸ್ಥಿತಿಯ ಬಗ್ಗೆಯೂ ಬೆಳಕು ಚೆಲ್ಲಿದ್ದಾನೆ. 'ನಮಗೆ ಕೆಲಸ ಇಲ್ಲದಿದ್ದಾಗ ಒಂದು ಕೆಲಸ ಸಿಕ್ಕರೆ ಸಾಕು ಎನ್ನಿಸುತ್ತದೆ. ಕೆಲಸ ಸಿಕ್ಕ ಮೇಲೆ ಸ್ವಾತಂತ್ರ್ಯ ಬೇಕು ಎಂದು ಹಂಬಲಿಸುತ್ತೇವೆ. ಪ್ರತಿಯೊಂದಕ್ಕೂ ಮೇಲಾಧಿಕಾರಿಗಳ ಅನುಮತಿ ಪಡೆಯಬೇಕಾದಾಗ ನಮಗೆ ಬೇಸರವಾಗುತ್ತದೆ. ನಾವು ಇರುವ ಸ್ಥಿತಿಯಲ್ಲಿ ನಾವೆಂದು ತೃಪ್ತರಾಗಿರುವುದಿಲ್ಲ' ಎಂದು ಆತ ವಿಶ್ಲೇಷಿಸಿದ್ದಾನೆ. ಗುರಿಗಳ ಬೆನ್ನತ್ತಿ ಓಡುವ ಈ ಹಾದಿಯಲ್ಲಿ ನಾವು ಪ್ರಕ್ರಿಯೆಯನ್ನೇ ಮರೆತುಬಿಡುತ್ತಿದ್ದೇವೆ ಎಂಬುದು ಆತನ ಅಭಿಪ್ರಾಯ.
ವಿಡಿಯೋದ ಅಂತ್ಯದಲ್ಲಿ ನಮಾನ್ ಒಂದು ಉತ್ತಮ ಸಂದೇಶವನ್ನೂ ನೀಡಿದ್ದಾನೆ. "ನಾವು ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸುತ್ತೇವೆ. ಆದರೆ, ನಾವು ತಲುಪುವ ಗುರಿಯಷ್ಟೇ ನಾವು ಕ್ರಮಿಸುವ ಹಾದಿಯೂ ಮುಖ್ಯ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿದ್ದರೂ ಆ ಕ್ಷಣವನ್ನು ಅನುಭವಿಸಲು ಕಲಿಯಿರಿ" ಎಂದು ಸಲಹೆ ನೀಡಿದ್ದಾನೆ.
ಈ ವಿಡಿಯೋಗೆ ಸಾವಿರಾರು ಜನರು ಸಹಮತ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, "ಆಫೀಸ್‌ಗೆ ಹೋಗುವುದು ಕೇವಲ ಕೆಲಸಕ್ಕಾಗಿ ಅಲ್ಲ, ಅದು ಸಾಮಾಜಿಕ ಬದುಕಿನ ಭಾಗವೂ ಹೌದು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ, "ಮ್ಯಾನೇಜರ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಲು ಶುರು ಮಾಡಿದಾಗ ಇಂತಹ ಜ್ಞಾನೋದಯವಾಗುತ್ತದೆ' ಎಂದು ಕಾಮೆಂಟ್ ಮಾಡುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಒಟ್ಟಿನಲ್ಲಿ, ಆಧುನಿಕ ಕೆಲಸದ ಸಂಸ್ಕೃತಿಯು ಮನುಷ್ಯನನ್ನು ಹೇಗೆ ಮಾನಸಿಕವಾಗಿ ಪ್ರತ್ಯೇಕಿಸುತ್ತಿದೆ ಎಂಬುದಕ್ಕೆ ಈ ವಿಡಿಯೋ ಕನ್ನಡಿ ಹಿಡಿದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.