
Unde Koli Chicken Keema Saaru Recipe: ಮನೆಯಲ್ಲಿ ಸದಾ ಒಂದೇ ರೀತಿಯ ಚಿಕನ್ ಸಾಂಬಾರ್ ಅಥವಾ ಫ್ರೈ ತಿಂದು ಬೇಜಾರಾಗಿದ್ದರೆ, ನಾಲಿಗೆಗೆ ಹೊಸ ರುಚಿ ನೀಡಲು 'ಚಿಕನ್ ಕೈಮಾ ಉಂಡೆ ಸಾರು' (Chicken Keema Meatball Curry) ಮಾಡ್ಕೊಳ್ಳಿ. ದಕ್ಷಿಣ ಭಾರತದ ನಾಟಿ ಶೈಲಿಯ ಮಸಾಲೆ ಘಮವನ್ನು ಹೊಂದಿರುವ ಈ ಸ್ಪೆಷಲ್ ಕೈಮಾ ಉಂಡೆ ಸಾರನ್ನು ಸುಲಭವಾಗಿ ಮತ್ತು ಉಂಡೆಗಳು ಒಡೆಯದಂತೆ ಹೇಗೆ ಮಾಡುವುದು ಎಂಬುದರ ಸಂಪೂರ್ಣ ರೆಸಿಪಿ ಇಲ್ಲಿದೆ. ಅಂದಹಾಗೆ ಬಿಗ್ ಬಾಸ್ ಶೋನಲ್ಲಿ ತುಕಾಲಿ ಸ್ಟಾರ್ ಸಂತು ಅವರು ಆಸೆಪಟ್ಟು ಉಂಡೇಕೋಳಿ ತಿನ್ನಬೇಕು ಎಂದು ಕೇಳಿ ತರಿಸಿಕೊಂಡು ತಿಂದಿದ್ದರು.
ಚಿಕನ್ ಕೈಮಾ: ಅರ್ಧ ಕೆ.ಜಿ (ಮೂಳೆ ಇಲ್ಲದ ಚಿಕನ್ ಅನ್ನು ನುಣ್ಣಗೆ ರುಬ್ಬಿದ್ದು)
ಸಣ್ಣಗೆ ಹೆಚ್ಚಿದ ಈರುಳ್ಳಿ: 1
ಹಸಿಮೆಣಸಿನಕಾಯಿ ಪೇಸ್ಟ್:1 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು:ಸ್ವಲ್ಪ
ಅಚ್ಚಖಾರದ ಪುಡಿ: 1 ಚಮಚ
ಗರಂ ಮಸಾಲೆ ಪುಡಿ: ಅರ್ಧ ಚಮಚ
ಹುರಿಗಡಲೆ ಹಿಟ್ಟು: 2 ರಿಂದ 3 ಚಮಚ (ಇದು ಉಂಡೆ ಒಡೆಯದಂತೆ ಹಿಡಿದಿಡಲು ಸಹಾಯ ಮಾಡುತ್ತದೆ)
ಉಪ್ಪು: ರುಚಿಗೆ ತಕ್ಕಷ್ಟು
ಈರುಳ್ಳಿ:2 (ದೊಡ್ಡದಾಗಿ ಹೆಚ್ಚಿದ್ದು)
ಟೊಮೆಟೊ:2 (ದೊಡ್ಡದಾಗಿ ಹೆಚ್ಚಿದ್ದು)
ಹಸಿ ತೆಂಗಿನಕಾಯಿ ತುರಿ:ಅರ್ಧ ಕಪ್
ಶುಂಠಿ-ಬೆಳ್ಳುಳ್ಳಿ ಪೇಸ್ಟ್:1 ಚಮಚ
ಧನಿಯಾ ಪುಡಿ (ಸಾಂಬಾರ್ ಪುಡಿ): 2 ಚಮಚ
ಅಚ್ಚಖಾರದ ಪುಡಿ: 1 ಚಮಚ (ನಿಮ್ಮ ಖಾರಕ್ಕೆ ತಕ್ಕಂತೆ)
ಅರಿಶಿನ ಪುಡಿ: ಅರ್ಧ ಚಮಚ
ಮಸಾಲೆ: ಚಕ್ಕೆ 1 ಇಂಚು, ಲವಂಗ 3-4, ಏಲಕ್ಕಿ 1
ಎಣ್ಣೆ: 3-4 ಚಮಚ
ಉಪ್ಪು ಮತ್ತು ನೀರು: ಅಗತ್ಯಕ್ಕೆ ತಕ್ಕಷ್ಟು
ಹಂತ 1
*ಮೊದಲು ತೊಳೆದು ನೀರಿಲ್ಲದಂತೆ ಬಸಿದುಕೊಂಡ ಚಿಕನ್ ಕೈಮಾವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.
*ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಹುರಿಗಡಲೆ ಹಿಟ್ಟನ್ನು ಸೇರಿಸಿ ಮೃದುವಾಗಿ ನಾದಿಕೊಳ್ಳಿ. (ಇದು ಮಿಶ್ರಣದಲ್ಲಿರುವ ತೇವಾಂಶವನ್ನು ಹೀರಿಕೊಳ್ಳುತ್ತದೆ).
*ಈಗ ಈ ಮಿಶ್ರಣದಿಂದ ಸಣ್ಣ ಸಣ್ಣ ನಿಂಬೆಹಣ್ಣಿನ ಗಾತ್ರದ ಉಂಡೆಗಳನ್ನು ಕಟ್ಟಿ ಒಂದು ತಟ್ಟೆಯಲ್ಲಿ ಎತ್ತಿಟ್ಟುಕೊಳ್ಳಿ.
ಹಂತ 2
ಒಂದು ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ ಮತ್ತು ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ನಂತರ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಬಾಡಿಸಿ. ಇದು ತಣ್ಣಗಾದ ಮೇಲೆ, ಹುರಿದ ಈರುಳ್ಳಿ-ಟೊಮೆಟೊ ಜೊತೆಗೆ ಹಸಿ ತೆಂಗಿನಕಾಯಿ ತುರಿ ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಹಂತ 3
*ಈಗ ದೊಡ್ಡ ಪಾತ್ರೆ ಅಥವಾ ಅಗಲವಾದ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ.
*ಇದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಅರಿಶಿನ, ಧನಿಯಾ ಪುಡಿ (ಸಾಂಬಾರ್ ಪುಡಿ) ಮತ್ತು ಖಾರದ ಪುಡಿ ಹಾಕಿ ಕಡಿಮೆ ಉರಿಯಲ್ಲಿ ಒಂದು ನಿಮಿಷ ಕೈಯಾಡಿಸಿ.
*ಈಗ ರುಬ್ಬಿಟ್ಟುಕೊಂಡ ಮಸಾಲೆ ಪೇಸ್ಟ್ ಅನ್ನು ಹಾಕಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಹುರಿಯಿರಿ.
*ಬಳಿಕ ಸಾರಿಗೆ ಎಷ್ಟು ಬೇಕೋ ಅಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಸಾರನ್ನು ಚೆನ್ನಾಗಿ ಕುದಿಯಲು ಬಿಡಿ. (ನೆನಪಿರಲಿ, ಸಾರು ಸ್ವಲ್ಪ ತೆಳುವಾಗಿರಬೇಕು, ಏಕೆಂದರೆ ಉಂಡೆಗಳು ಬೆಂದ ಮೇಲೆ ಸಾರು ಗಟ್ಟಿಯಾಗುತ್ತದೆ).
ಹಂತ 4
*ಉಂಡೆಗಳನ್ನು ಬೇಯಿಸುವುದು (ಮುಖ್ಯವಾದ ಹಂತ). ಸಾರು ಕುದಿಯುವಾಗ, ಉರಿಯನ್ನು ಮಧ್ಯಮ ಮಟ್ಟಕ್ಕೆ ಇಟ್ಟು, ಮಾಡಿಟ್ಟುಕೊಂಡ ಚಿಕನ್ ಉಂಡೆಗಳನ್ನು ಒಂದೊಂದಾಗಿ ಜಾಗರೂಕತೆಯಿಂದ ಸಾರಿನೊಳಗೆ ಬಿಡಿ.
ಉಂಡೆಗಳನ್ನು ಸಾರಿಗೆ ಹಾಕಿದ ತಕ್ಷಣ ಚಮಚ ಅಥವಾ ಸೌಟು ಹಾಕಿ ಕೈಯಾಡಿಸಬೇಡಿ. ಹಾಗೆ ಮಾಡಿದರೆ ಉಂಡೆಗಳು ಒಡೆದು ಹೋಗುತ್ತವೆ.
*ಪಾತ್ರೆಯನ್ನು ಹಾಗೇ ಮುಚ್ಚಿಟ್ಟು 8-10 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಉಂಡೆಗಳು ಬೆಂದ ಮೇಲೆ ತಾವಾಗಿಯೇ ಸಾರಿನ ಮೇಲೆ ತೇಲಲು ಆರಂಭಿಸುತ್ತವೆ.
*ಈಗ ಮೆಲ್ಲನೆ ಸೌಟಿನಿಂದ ಒಮ್ಮೆ ಕೈಯಾಡಿಸಿ, ಉಂಡೆಗಳು ಒಳಗಿನಿಂದ ಚೆನ್ನಾಗಿ ಬೇಯಲು ಇನ್ನೂ 5 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ. ಅಷ್ಟೇ ಬಿಸಿ ಬಿಸಿಯಾದ ಉಂಡೆ ಕೋಳಿ ಕೈಮಾ ಸಾರು ರೆಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.