ಲೈಂಗಿಕ ದೌರ್ಜನ್ಯ ಉನ್ನತ ಹುದ್ದೆಯಲ್ಲಿರುವ ಮಹಿಳೆಯನ್ನೂ ಬಿಟ್ಟಿಲ್ಲ!

By Suvarna NewsFirst Published Jan 18, 2020, 7:38 PM IST
Highlights

ಉನ್ನತ ಹುದ್ದೆಯಲ್ಲಿರುವ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ ಎಂಬ ಭಾವನೆ ನಿಮ್ಮ ಮನಸ್ಸಿನಲ್ಲಿದ್ದರೆ,ಈಗಲೇ ತೆಗೆದುಹಾಕಿ. ಹೊಸ ಅಧ್ಯಯನವೊಂದರ ಪ್ರಕಾರ ಕೆಳಹಂತದಲ್ಲಿರುವ ಮಹಿಳಾ ಉದ್ಯೋಗಿಗಳಿಗಿಂತ ಉನ್ನತ ಹುದ್ದೆಯಲ್ಲಿರುವ ಮಹಿಳೆ ಹೆಚ್ಚು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾಳಂತೆ.

ಉದ್ಯೋಗ ಸ್ಥಳ ಕೂಡ ಮಹಿಳೆಗೆ ಸುರಕ್ಷಿತವಲ್ಲ.ಅಲ್ಲಿಯೂ ಆಕೆ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತದೆ ಎಂಬುದಕ್ಕೆ ಅನೇಕ ಘಟನೆಗಳು ಜ್ವಲಂತ ಸಾಕ್ಷಿಯಾಗಿ ನಮ್ಮ ಮುಂದೆ ನಿಂತಿವೆ. ಆದರೆ,ಉನ್ನತ ಹುದ್ದೆಯಲ್ಲಿರುವ,ಅಧಿಕಾರ ಹೊಂದಿರುವ ಮಹಿಳೆಗಿಂತ ಕೆಳ ಹಂತದಲ್ಲಿರುವ ಮಹಿಳಾ ಉದ್ಯೋಗಿಗಳು ಲೈಂಗಿಕ ಕಿರುಕುಳಕ್ಕೆ ಹೆಚ್ಚು ಒಳಗಾಗುತ್ತಾರೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ, ಹೊಸ ಅಧ್ಯಯನವೊಂದು ಈ ನಂಬಿಕೆಯನ್ನು ಸುಳ್ಳಾಗಿಸಿದೆ. ಇದರ ಪ್ರಕಾರ ಉನ್ನತ ಹುದ್ದೆಯಲ್ಲಿರುವ ಮಹಿಳೆಯರು ಕೆಳ ಹಂತದ ಮಹಿಳಾ ಉದ್ಯೋಗಿಗಳಿಗಿಂತ ಹೆಚ್ಚು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.

ಉದ್ಯೋಗಸ್ಥ ಮಹಿಳೆಯರಿಗೂ ಮುಂದೆ ಒಳ್ಳೇ ಕಾಲವೈತೆ

ಏನಿದು ಅಧ್ಯಯನ: ಔದ್ಯೋಗಿಕ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳಲ್ಲಿ ಲೈಂಗಿಕ ಕಿರುಕುಳದ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ಸ್ವೀಡನ್‍ನ ಸ್ಟಾಕ್‍ಹಾಲ್ಮ್ ವಿಶ್ವವಿದ್ಯಾಲಯದ ಸಂಶೋಧಕರು ಅಮೆರಿಕ ಹಾಗೂ ಜಪಾನ್‍ ಸಂಶೋಧಕರೊಂದಿಗೆ ಜಂಟಿಯಾಗಿ ಅಧ್ಯಯನ ನಡೆಸಿದ್ದಾರೆ.ಸ್ವೀಡನ್, ಅಮೆರಿಕ ಹಾಗೂ ಜಪಾನ್‍ನ ವಿವಿಧ ಸಂಸ್ಥೆಗಳಲ್ಲಿರುವ ಸಾವಿರಾರು ಮಹಿಳಾ ಉದ್ಯೋಗಿಗಳನ್ನು ಈ ಸಮೀಕ್ಷೆಗೊಳಪಡಿಸಲಾಗಿತ್ತು.ಈ ಅಧ್ಯಯನದ ಪ್ರಕಾರ ಮೇಲ್ವಿಚಾರಣೆ ಸೇರಿದಂತೆ ಉನ್ನತ ಹುದ್ದೆಯಲ್ಲಿರುವ ಮಹಿಳೆಯರು ಕೆಳ ಹಂತದಲ್ಲಿರುವ ಮಹಿಳಾ ಉದ್ಯೋಗಿಗಳಿಗಿಂತ ಶೇ.30 ರಿಂದ ಶೇ.100ರಷ್ಟು ಹೆಚ್ಚು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯದ ಜೊತೆಗೆ ಅದಕ್ಕೆ ಅವರ ಪ್ರತಿಕ್ರಿಯೆ ಹೇಗಿರುತ್ತದೆ,ಅದರಿಂದಾಗುವ ಸಾಮಾಜಿಕ ಹಾಗೂ ವೃತ್ತಿ ಸಂಬಂಧಿ ಪರಿಣಾಮಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. 

ಡಬಲ್ ಅಟ್ಯಾಕ್: ಉನ್ನತ ಹುದ್ದೆಯಲ್ಲಿರುವ ಮಹಿಳೆ ತನ್ನ ಮೇಲಧಿಕಾರಿಗಳು ಹಾಗೂ ಅಧೀನ ಪುರುಷ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ ಎಂದು ಅಧ್ಯಯನ ತಿಳಿಸಿದೆ. ಅಷ್ಟೇ ಅಲ್ಲ,ಇದರೊಂದಿಗೆ ಮಹಿಳಾ ಅಧಿಕಾರಿಗಳ ಸಾಮಾಜಿಕ ಹಾಗೂ ವೃತ್ತಿ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮಗಳನ್ನುಂಟು ಮಾಡುವ ಕಾರ್ಯಗಳನ್ನು ಕೂಡ ಅವರ ಅಧೀನದಲ್ಲಿರುವ ಪುರುಷ ಸಿಬ್ಬಂದಿ ಮಾಡುತ್ತಾರಂತೆ. ಪ್ರಮೋಷನ್ ಕೈತಪ್ಪಿ ಹೋಗುವಂತೆ ಮಾಡುವುದು ಇಲ್ಲವೆ ವಿಶೇಷ ತರಬೇತಿಗೆ ಅವರು ಹಾಜರಾಗದಂತೆ ಷಡ್ಯಂತ್ರ ರೂಪಿಸುವುದು ಸೇರಿದಂತೆ ಮಹಿಳಾ ಅಧಿಕಾರಿಗಳ ವೃತ್ತಿ ಬದುಕಿಗೆ ಹಿನ್ನಡೆಯುಂಟು ಮಾಡುವ ಕಾರ್ಯಗಳನ್ನು ಪುರುಷ ಸಿಬ್ಬಂದಿ ಮಾಡುತ್ತಾರೆ ಎಂದು ಕೂಡ ಈ ಅಧ್ಯಯನ ಹೇಳಿದೆ. 

ಉದ್ಯೋಗಸ್ಥೆ ಅಮ್ಮನಿಗಿಂತ ಮನೇಲಿರೋ ಅಮ್ಮಂಗೆ ಎಷ್ಟು ಕಷ್ಟ ಗೊತ್ತಾ?

ಹೀಗೆಲ್ಲ ಮಾಡಿದ್ರೆ ಅದು ಲೈಂಗಿಕ ಕಿರುಕುಳ: ಭಾರತದಲ್ಲಿ ಉದ್ಯೋಗ ಸ್ಥಳದಲ್ಲಿ ಯಾವ ವಿಧದ ವರ್ತನೆಗಳನ್ನು ಲೈಂಗಿಕ ಕಿರುಕುಳವೆಂದು ಪರಿಗಣಿಸಬಹುದು ಎಂಬ ಕುರಿತು ಸುಪ್ರೀಂಕೋರ್ಟ್ ಮಾರ್ಗಸೂಚಿಯೊಂದನ್ನು ನೀಡಿದೆ. ಅದರ ಅನ್ವಯ ಆಫೀಸ್‍ನಲ್ಲಿ ಮಹಿಳೆಯೊಂದಿಗೆ ಪುರುಷ ಸಹೋದ್ಯೋಗಿಗಳು ಅಥವಾ ಬಾಸ್ ಈ ಕೆಳಗಿನ ವರ್ತನೆಗಳನ್ನು ತೋರಿದರೆ ಆಕೆ ಅವರ ವಿರುದ್ಧ ಕ್ರಮಕ್ಕೆ ಕಾನೂನಿನ ಮೊರೆ ಹೋಗಬಹುದು.
• ದೈಹಿಕ ಸಂಪರ್ಕ • ಲೈಂಗಿಕ ಬೇಡಿಕೆ ಅಥವಾ ಅದಕ್ಕೆ ಸಂಬಂಧಿಸಿದ ವರ್ತನೆ •ಲೈಂಗಿಕತೆಗೆ ಸಂಬಂಧಿಸಿದ ಹೇಳಿಕೆಗಳು • ಪೋರ್ನ್ ವಿಡಿಯೋಗಳನ್ನು ತೋರಿಸುವುದು•  ಲೈಂಗಿಕ ಭಾವನೆಗಳನ್ನೊಳಗೊಂಡ ದೈಹಿಕ, ಮೌಖಿಕ ಅಥವಾ ಮೌಖಿಕವಲ್ಲದ ರೀತಿಯ ವರ್ತನೆ.

ಬಾಯಿ ಮುಚ್ಚಿಕೊಂಡು ಕೂರಬೇಡಿ: ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ಅನುಭವಕ್ಕೆ ಬಂದ ತಕ್ಷಣ ಬಹುತೇಕ ಮಹಿಳೆಯರು ಮಾಡುವ ದೊಡ್ಡ ತಪ್ಪು ಪ್ರತಿಭಟಿಸದೆ ಸುಮ್ಮನಿದ್ದು ಬಿಡುವುದು. ಒಂದು ವೇಳೆ ಈ ಬಗ್ಗೆ ಮಾತನಾಡಿದರೆ ಬೇರೆಯವರು ನನ್ನನ್ನು ಅನುಮಾನಿಸಬಹುದು ಎಂಬ ಹಿಂಜರಿಕೆ ಕೆಲವರದ್ದು.ಇನ್ನು ಕಿರುಕುಳ ನೀಡುತ್ತಿರುವ ವ್ಯಕ್ತಿ ಬಾಸ್ ಆಗಿದ್ದರಂತೂ ಈ ಬಗ್ಗೆ ಬಾಯಿ ಬಿಟ್ಟರೆ ಎಲ್ಲಿ ಕೆಲಸ ಕಳೆದುಕೊಳ್ಳಬೇಕಾಗುತ್ತದೋ ಎಂಬ ಭಯ. ಆದರೆ, ಲೈಂಗಿಕ ಕಿರುಕುಳಕ್ಕೆ ಒಳಗಾದಾಗ ಮಾತನಾಡದೆ ಸುಮ್ಮನಿದ್ದರೆ ಮತ್ತಷ್ಟು ತೊಂದರೆ ಖಚಿತ.ಆದಕಾರಣ ಅವರು ಬಾಸ್ ಆಗಿರಲಿ ಅಥವಾ ನಿಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರುಷ ಸಿಬ್ಬಂದಿಯೇ ಆಗಿರಲಿ.ಅವರ ನಡವಳಿಕ ಬಗ್ಗೆ ನೇರವಾಗಿ ಅವರೊಂದಿಗೇ ಮಾತನಾಡಿ.ಇಂಥ ವರ್ತನೆ ಮರುಕಳಿಸದಂತೆ ಎಚ್ಚರಿಕೆ ನೀಡಿ.

ಕಠಿಣ ಕಾನೂನಿದ್ದರೂ ನಿಲ್ಲದ ಸ್ತ್ರೀ ದೌರ್ಜನ್ಯ

ಎಚ್‍ಆರ್ಗೆ ದೂರು ನೀಡಿ: ಬಾಸ್‍ನಿಂದ ಕಿರುಕುಳವಾಗುತ್ತಿದ್ದರೆ ಕಂಪೆನಿಯ ಎಚ್‍ಆರ್ಗೆ ನೇರವಾಗಿ ನಿಮ್ಮ ದೂರು ಸಲ್ಲಿಸಬಹುದು. ಈಗಂತೂ ಬಹುತೇಕ ಕಂಪೆನಿಗಳಲ್ಲಿ ಲೈಂಗಿಕ ಕಿರುಕುಳ ತಡೆಗೆ ಸಂಬಂಧಿಸಿ ಸಮಿತಿ ರಚಿಸಿರುತ್ತಾರೆ. ಅವರ ಮುಂದೆಯೂ ನಿಮ್ಮ ದೂರು ಮಂಡಿಸಬಹುದು.ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ ಎಂಬ ಮಾತನ್ನು ಸದಾ ನೆನಪಿಟ್ಟುಕೊಳ್ಳಿ. ಹೆಣ್ಣೆಂಬ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕಾದ ಅಗತ್ಯವಿಲ್ಲ.ಪ್ರತಿಭಟಿಸುವ ಹಕ್ಕು ಕೂಡ ಆಕೆಗಿದೆ ಎಂಬುದು ನೆನಪಿರಲಿ. 
 

click me!