ನಿದ್ದೆಯಿಂದೆದ್ದ ಮೇಲೂ ಅಮಲೇ? ಸರಿಯಾಗಿ ನಿದ್ರಿಸೋದು ಹೇಗೆ?

By Web DeskFirst Published Jul 8, 2019, 3:10 PM IST
Highlights

ಬೆಳಗಿನ ಪುಟಾಣಿ ನಿದ್ರೆಗಳು ಡಲ್ ಆದ ದೇಹ ಆಗ ಮನಸ್ಸನ್ನು ಚೇತೋಹಾರಿಯಾಗಿಡಬಲ್ಲವು. ನಿದ್ದೆ ಹೋಗಿಸಲು ಕಾಫಿ ಕುಡಿಯುವುದಕ್ಕಿಂತ ಪುಟ್ಟ ನಿದ್ರೆ ಮಾಡಿ ಏಳುವುದು ಹೆಚ್ಚು ಸಹಾಯಕ. ಆದರೆ, ಯಾವ ಹೊತ್ತಿನಲ್ಲಿ, ಎಷ್ಟು ಸಮಯ ನಿದ್ರೆ ಮಾಡಬೇಕು ಗೊತ್ತಾ?

45 ನಿಮಿಷ ನಿದ್ದೆ ಮಾಡೋಣ ಅಂತ  ಮಲಗಿರ್ತೀರಿ. ಆದರೆ, ಕಣ್ಣು ಬಿಡುವಾಗ ಸಮಯ ಹೋಗಲಿ,  ದಿನ ಯಾವ್ದು, ಎಲ್ಲಿ ಮಲಗಿದ್ದೀರಾ ಎಂದೇ ತಿಳಿಯಲ್ಲ. ಏಳೋಕೆ ದೇಹ ಸಹಕಾರ ಕೊಡಲ್ಲ, ಮೆದುಳು ಕೆಲಸ ಮಾಡಲು ತಯಾರಿಲ್ಲ. ರಿಫ್ರೆಶ್ ಆಗೋಕೆ ಅಂತ ಮಲಗಿ ಮತ್ತಷ್ಟು ಸುಸ್ತಾಗಿ ಹೋಗಿರ್ತೀರಿ. ಈ ಅನುಭವ ನಿಮಗೆ ಸಾಮಾನ್ಯ ಎಂದಾಗಿದ್ರೆ ನೀವು ನಿದ್ರಿಸುವ ರೀತಿಯಲ್ಲಿ ಸ್ವಲ್ಪ ಬದಲಾವಣೆ ಬೇಕು. ಹೌದು, ನಾವು ಹೇಗೆ ನಿದ್ರಿಸುತ್ತೇವೆ ಎಂಬುದರ ಆಧಾರದ ಮೇಲೆ ನಿದ್ರೆಯಿಂದ ರಿಚಾರ್ಜ್ ಆಗುತ್ತೇವೋ ಅಥವಾ ಚಾರ್ಜ್ ಕಳೆದುಕೊಳ್ಳುತ್ತೇವೋ ಎಂಬುದು ಅವಲಂಬಿತವಾಗಿದೆ. 

ಬೆಳಗಿನ ಪುಟಾಣಿ ನಿದ್ರೆ ಪುಟಾಣಿಯಾಗಿರಬೇಕು. ಸ್ವಲ್ಪ ಹೆಚ್ಚಾದರೂ ಅದು ಸಮಸ್ಯೆ ತರುತ್ತದೆ. ಇದರ ಹಿಂದಿರುವ ವಿಲನ್ ಸ್ಲೀಪ್ ಇನರ್ಶಿಯ.  ಏನಿದು ಸ್ಲೀಪ್ ಇನರ್ಶಿಯಾ?

ನೀವು ಎದ್ದೇಳಬೇಕೆಂದುಕೊಳ್ಳುತ್ತೀರಿ. ಆದರೆ ಮೆದುಳು ಏಳಲು ರೆಡಿ ಇರುವುದಿಲ್ಲ, ನಿದ್ರೆಯ ಪೂರ್ತಿ ಸೈಕಲ್ ಮುಗಿಸದೆ ಎಚ್ಚರಾಗಲು ಅದಕ್ಕೆ ಇಷ್ಟವಿಲ್ಲ. ಇದೇ ಸ್ಲೀಪ್ ಇನರ್ಶಿಯಾ. ಮನಸ್ಸು ಏಳಬೇಕೆಂದರೂ ದೇಹ ಸಹಕಾರ ಕೊಡುವುದಿಲ್ಲ. ಸಾಮಾನ್ಯವಾಗಿ ಹೆಚ್ಚು ನಿದ್ದೆಗೆಟ್ಟಾಗ ಸ್ಟ್ರಾಂಗ್ ಆದ ಸ್ಲೀಪ್ ಇನರ್ಶಿಯಾಕ್ಕೆ ಒಳಗಾಗುತ್ತೀರಿ. ಅನುವಂಶೀಯತೆ ಕೂಡಾ ಈ ಸ್ಲೀಪ್ ಇನರ್ಶಿಯಾಕ್ಕೆ ಕಾರಣವಾಗಬಹುದು. 

ಈ ಅಮಲಿಗೆ ಇನ್ನೊಂದು ಕಾರಣವೆಂದರೆ, ಮಲಗಬೇಕಾದ್ದಕ್ಕಿಂತ ಹೆಚ್ಚು ಸಮಯ ಮಲಗುವುದು. ಸಣ್ಣ ನಿದ್ರೆಯ ಉದ್ದ 20 ನಿಮಿಷಗಳನ್ನು ಮೀರಬಾರದು. ಹೆಚ್ಚೆಂದರೆ 30 ನಿಮಿಷದವರೆಗೆ ಎಳೆಯಬಹುದು. ಆ ನಂತರದಲ್ಲೂ ಏಳದಿದ್ದರೆ ಈ ಗೊಂದಲ, ಸ್ಲೀಪ್ ಇನರ್ಶಿಯಾ ತಲೆದೋರುತ್ತದೆ. ಏಕೆಂದರೆ 20-30 ನಿಮಿಷಕ್ಕಿಂತ ಹೆಚ್ಚು ಮಲಗಿದಾಗ ನಿದ್ರೆಯ ಸೈಕಲ್ ಡೀಪ್ ಸ್ಲೀಪ್‌ನತ್ತ ತೆರಳುತ್ತದೆ. ಒಮ್ಮೆ ಡೀಪ್ ಸ್ಲೀಪ್‌ಗೆ ತೆರಳಿದ ಮೇಲೆ ಸೈಕಲ್ ಪೂರ್ತಿ ಮುಗಿಯದೆ ಎಚ್ಚರಗೊಳ್ಳಲು ದೇಹ, ಮೆದುಳು ಎರಡೂ ತಯಾರಿರುವುದಿಲ್ಲ. ಏಕೆಂದರೆ, ನಿಮ್ಮ ಜೈವಿಕ ಗಡಿಯಾರ ಕೂಡಾ ಈ ನಿದ್ರಾ ಸೈಕಲ್‌ಗೆ ಹೊಂದಿಕೊಂಡುಬಿಟ್ಟಿರುತ್ತದೆ. 

ತಲೆ ಬುಡದಲ್ಲಿ ಇದನ್ನೆಲ್ಲ ಇಟ್ಕೊಂಡ್ರೆ ಕಾಡುತ್ತೆ ಮನೋರೋಗ!

ನಿಮ್ಮಿಂದ ಈ ಅಮಲಿನ ಸ್ಥಿತಿಯಿಂದ ಹೊರಬರುವುದು ಕಷ್ಟವಾದರೆ ಬೆಳಗಿನ ಪುಟಾಣಿ ನಿದ್ರೆಗಳನ್ನು ಸರಿಯಾಗಿ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ.

1. ಪವರ್ ನ್ಯಾಪ್

ಓದುವಾಗ ಮಧ್ಯದಲ್ಲಿ 10 ನಿಮಿಷ ಮಲಗಬೇಕೆನಿಸಿದರೆ, ಕಚೇರಿಯಲ್ಲಿ ನಿದ್ರೆ ತಾಳಲಾರದೆ ಪುಟ್ಟ ನಿದ್ರೆ ತೆಗೆದು ಕೆಲಸ ಮಾಡೋಣ ಎಂದುಕೊಂಡರೆ ಅಥವಾ ಮಧ್ಯಾಹ್ನ ಊಟವಾದ ಮೇಲೆ ಸಣ್ಣ ನಿದ್ರೆ ಪೂರೈಸಿ ಬೇರೆ ಕೆಲಸಗಳತ್ತ ಗಮನ ಹರಿಸುವ ಯೋಚನೆ ಇದ್ದರೆ ನಿಮ್ಮ ನಿದ್ರೆಯನ್ನು 20 ನಿಮಿಷಕ್ಕೆ ಸೀಮಿತಗೊಳಿಸಿ. 20 ನಿಮಿಷಕ್ಕೆ ಅಲಾರಾಂ ಇಟ್ಟುಕೊಳ್ಳಿ. ಇನ್ನೂ ಒಂದೈದು ನಿಮಿಷ ಹೆಚ್ಚೂ ಕಡಿಮೆಯಾದರೆ ಪರವಾಗಿಲ್ಲ. ಈ ಪವರ್ ನ್ಯಾಪ್ ಎಂದರೇ ಹಾಗೆ, ಡೀಪ್ ಸ್ಲೀಪ್‌ಗೆ ಹೋಗುವ ಮುನ್ನವೇ ಎದ್ದುಬಿಡುವುದು. 

2. ರಾತ್ರಿ ನಿದ್ರೆಯಾಗದ್ದಕ್ಕೆ ಇದು ಪರಿಹಾರವಲ್ಲ

ಅಯ್ಯೋ ಅರ್ಧರಾತ್ರಿ ಎಚ್ಚರಾಗಿ ಸುಮಾರು ಎರಡು ಗಂಟೆಗಳ ಕಾಲ ನಿದ್ರೆಯೇ ಬರಲಿಲ್ಲ, ರಾತ್ರಿ ಮಲಗುವಾಗ ತಡವಾಗಿತ್ತು, ಹೀಗಾಗಿ ನಿದ್ರೆ ಸರಿಯಾಗಲಿಲ್ಲ ಎನ್ನುವ ಕಾರಣಗಳಿಂದ ಹಗಲಿನಲ್ಲಿ ನಿದ್ರಿಸುವುದು ಸರಿಯಲ್ಲ. ಇದರಿಂದ ಮರುರಾತ್ರಿಯೂ ನಿದ್ರೆ ಸರಿಯಾಗುವುದಿಲ್ಲ. ಹಗಲಿನಲ್ಲೇ ಆ ನಿದ್ರೆ ಆಗಿಬಿಟ್ಟಿರುತ್ತದಲ್ಲ... ಹಾಗಾಗಿ, ಎಷ್ಟೇ ನಿದ್ರೆಗೆಟ್ಟರೂ ಪವರ್ ನ್ಯಾಪ್ ಸಾಕು ರಿಫ್ರೆಶ್ ಆಗಲು. ಅದಕ್ಕಿಂತ ಹೆಚ್ಚಿನ ನಿದ್ರೆ ಬೇಡ. ಹಗಲಿಡೀ ದುಡಿದು ದಣಿದಾಗಲೇ ರಾತ್ರಿ ಸೌಂಡ್ ಸ್ಲೀಪ್ ಆವರಿಸಿಕೊಳ್ಳಲು ಸಾಧ್ಯ.

ಸೌಂಡ್ ಸ್ಲೀಪ್‌ಗೆ ಹೀಗೆ ಮಾಡಿ ಎನ್ನುತ್ತದೆ ವಾಸ್ತು ಶಾಸ್ತ್ರ

3. ನಿಮ್ಮ ಪವರ್ ನ್ಯಾಪ್ ಮಧ್ಯಾಹ್ನಕ್ಕೆ ಸೀಮಿತವಾಗಲಿ

ಊಟವಾದ ಬಳಿಕ ನಿದ್ರೆ ಒತ್ತಿಕೊಂಡು ಬರುವುದು ಸಾಮಾನ್ಯ ವಿಷಯ. ಅಲ್ಲದೆ, ಇದು ಅತ್ಯುತ್ತಮ ಪವರ್ ನ್ಯಾಪ್‌ಗೆ ಹೇಳಿ ಮಾಡಿಸಿದ ಸಮಯ. ಅದರಲ್ಲೂ ಸಂಜೆಯ ಹೊತ್ತು ಪವರ್ ನ್ಯಾಪ್ ಬೇಡವೇ ಬೇಡ. ಇದು ರಾತ್ರಿಯ ನಿದ್ರಾ ಸೈಕಲನ್ನು ಏರುಪೇರು ಮಾಡುತ್ತದೆ. ನಮಗೆಲ್ಲರಿಗೂ ಮಧ್ಯಾಹ್ನ ಊಟವಾದ ಬಳಿಕ ಮಂಪರು ಆವರಿಸುವುದು ಸಾಮಾನ್ಯ. ಈ ಹೊತ್ತಿನಲ್ಲಿ ಅದನ್ನು ತಡೆದಿಟ್ಟುಕೊಳ್ಳುವ ಬದಲು 20 ನಿಮಿಷ ಮಲಗೆದ್ದರೆ ನಂತರದ ಕೆಲಸದಲ್ಲಿ ಕ್ಷಮತೆ ಹೆಚ್ಚಾಗುತ್ತದೆ. ಅಲ್ಲದೆ, ಇದು ಆರೋಗ್ಯಕಾರಿ ಅಭ್ಯಾಸ ಕೂಡಾ. ಇನ್ನೂ ಉತ್ತಮವೆಂದರೆ ಒಂದು ಕಾಫಿ ಕುಡಿದು ತಕ್ಷಣ ನಿದ್ರಿಸುವುದು. ಏಳುತ್ತಿದ್ದ ಹಾಗೆ ಕೆಫಿನ್ ಕೆಲಸ ಆರಂಭಿಸಿಬಿಡುತ್ತದೆ. ನೀವು ಹೆಚ್ಚು ಎನರ್ಜಿಯಿಂದ ಕೆಲಸ ಮಾಡಬಲ್ಲಿರಿ. 

4. ನಿಮಗೆ  ನಿದ್ರೆಯ ಅಗತ್ಯವಿದೆಯೇ?

ನಿದ್ರೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಸುಖ. ಮಲಗುವುದನ್ನು ಬಹುತೇಕರು ಎಂಜಾಯ್ ಮಾಡುತ್ತಾರೆ. ಆದರೆ ಅದಕ್ಕಾಗಿ ಬೆಳಗಿನ ಹೊತ್ತಿನಲ್ಲಿ ಮಲಗಬೇಡಿ. ನಿಜವಾಗಿಯೂ ನಿಮಗೆ ನಿದ್ರೆ ಅಗತ್ಯವಿದೆಯೇ ಎಂಬುದನ್ನು ಯೋಚಿಸಿ. ಸಣ್ಣ ನಿದ್ರೆ ತೆಗೆಯೋಣ ಎಂದು ಮಲಗಿರುತ್ತೀರಿ. ಎಷ್ಟು ಹೊತ್ತಾದರೂ ಹಾಸಿಗೆಯಲ್ಲಿ ಹೊರಳುತ್ತಿರುತ್ತೀರಿ ಎಂದರೆ ನಿಮಗೆ ನಿದ್ರೆ ಬೇಕಾಗಿಲ್ಲ ಎಂದರ್ಥ. 20 ನಿಮಿಷದೊಳಗೆ ನಿದ್ರೆಗೆ ಜಾರಲು ಸಾಧ್ಯವಾಗಲಿಲ್ಲವೆಂದರೆ ಮಲಗುವ ಅವಶ್ಯಕತೆ ಇಲ್ಲ ಎಂದು ತಿಳಿದುಕೊಳ್ಳಿ. 

click me!