
ಬೆಂಗಳೂರು (ನ. 14): ವಿಶ್ವಸಂಸ್ಥೆಯು ನವೆಂಬರ 20 ನ್ನು ‘ವಿಶ್ವ ಮಕ್ಕಳ ದಿನ’ವನ್ನಾಗಿ ಘೋಷಿಸಿದೆ. ಹಲವು ದೇಶಗಳು ನ.20 ಕ್ಕೆ ಬದಲಾಗಿ ತಮ್ಮ ಅನುಕೂಲಕ್ಕೆ ತಕ್ಕ ದಿನಗಳಲ್ಲಿ ಮಕ್ಕಳ ದಿನ ಆಚರಿಸುತ್ತಿವೆ. ಬಹುತೇಕ ದೇಶಗಳು (50ಕ್ಕೂ ಹೆಚ್ಚು) ಜೂನ್ 1 ರಂದು ಮಕ್ಕಳ ದಿನ ಆಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಮಕ್ಕಳ ದಿನಾಚರಣೆ ಹೇಗಿರುತ್ತದೆ, ಅಲ್ಲಿನ ವಿಶೇಷತೆ ಏನು ಎಂಬ ವಿವರ ಇಲ್ಲಿದೆ
ಜಪಾನ್‌ನಲ್ಲಿ ಕಿಡ್ಸ್ ಒಲಂಪಿಕ್
ಜಪಾನಿನಲ್ಲಿ ಪ್ರತಿವರ್ಷ ಐದನೇ ತಿಂಗಳ 5 ನೇ ದಿನದಂದು ಮಕ್ಕಳ ದಿನಾಚರಣೆ ಅಥವಾ ‘ಕೊದೊಮೊ ನೊಹಿ’ ಆಚರಿಸುತ್ತಾರೆ. ಆ ದಿನ ಕುಟುಂಬದವರೆಲ್ಲಾ ಸೇರಿ ಬಣ್ಣಬಣ್ಣದ ಗಾಳಿಪಟಗಳನ್ನು ಮಾಡಿ ಮಕ್ಕಳೊಂದಿಗೆ ಆಟವಾಡುತ್ತಾರೆ. ಶಕ್ತಿ ಮತ್ತು ಶೌರ್ಯವನ್ನು ಸಂಕೇತಿಸಲು ಸಮುರಾಯ್‌ಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಾರೆ. ಜಪಾನ್ ರಾಜಧಾನಿ ಟೋಕಿಯೋದಲ್ಲಿ ‘ಕಿಡ್ಸ್ ಒಲಿಂಪಿಕ್ಸ್’ ಕೂಡ ಆಯೋಜಿಸಿರುತ್ತಾರೆ. ಅಲ್ಲಿ ಸಾವಿರಾರು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ಮೆಕ್ಸಿಕೋದಲ್ಲಿ ಪಾಠದ ಬದಲಿಗೆ ಪಾರ್ಟಿ
ಮೆಕ್ಸಿಕೋದಲ್ಲಿ ‘ಎಲ್ ದಿಯಾ ದೆಲ್ ನಿನೊ’ ಎಂದು ಕರೆಯಲಾಗುವ ಮಕ್ಕಳ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 20 ರಂದು ಆಚರಣೆ ಮಾಡುತ್ತಾರೆ. ಆ ದಿನ ಶಾಲೆಗಳು, ಪಾರ್ಕ್‌ಗಳಲ್ಲಿ ವಿವಿಧ ಸಂಘಟನೆಗಳು ಮಕ್ಕಳಿಗಾಗಿ
ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಶಾಲೆಗಳಲ್ಲಿ ಅಂದು ಪಾಠ ಇರುವುದಿಲ್ಲ, ಬದಲಿಗೆ ಪಾರ್ಟಿ ಇರುತ್ತದೆ. ತರಹೇವಾರಿ ಆಹಾರ ಸವಿಯಲು ಅವಕಾಶ ಹಾಗೂ ಕ್ರೀಡೆಗಳನ್ನು ಆಯೋಜಿಸಿರುತ್ತಾರೆ. ಲೈವ್ ಮ್ಯೂಸಿಕ್,
ಸೂತ್ರದ ಬೊಂಬೆಯಾಟ ಮುಂತಾದ ಮನರಂಜನೆಗಳಿರುತ್ತವೆ.
ಥಾಯ್ಲೆಂಡ್‌ನಲ್ಲಿ ಬಸ್ಸು, ಪಾರ್ಕ್‌ಗೆ ಫ್ರಿ ಎಂಟ್ರಿ
ಥಾಯ್ಲೆಂಡ್‌ನಲ್ಲಿ ಪ್ರತಿ ವರ್ಷ ಜನವರಿ ಎರಡನೇ ಶನಿವಾರವನ್ನು ಮಕ್ಕಳ ದಿನವೆಂದು ಆಚರಿಸುತ್ತಾರೆ. ಮಕ್ಕಳು ದೇಶದ ಅತ್ಯಮೂಲ್ಯ ಸಂಪನ್ಮೂಲ ಎಂದು ಪರಿಗಣಿಸಿ ಈ ದಿನ ಮಕ್ಕಳಿಗೆ ಅವರ ಮಹತ್ವದ ಬಗ್ಗೆ ಮತ್ತು ಮಕ್ಕಳನ್ನು ಬೆಳೆಸುವ ಸಮಾಜದ ಜವಾಬ್ದಾರಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲಾಗುತ್ತದೆ. ಆ ದಿನ ಥಾಯ್ಲೆಂಡ್‌ನ ಬಸ್ಸು, ಪಾರ್ಕ್, ಝೂ, ಸರ್ಕಾರಿ ಕಚೇರಿಗಳು ಅಥವಾ ಸರ್ಕಾರಿ ಕಾರ್ಯಾಲಯ, ಸೇನಾ ಕಾರ್ಯಲಯಗಳಿಗೆ ಉಚಿತ
ಪ್ರವೇಶವಿರುತ್ತದೆ. ಜೊತೆಗೆ ಮಕ್ಕಳಿಗೆ ಯುದ್ಧ ವಿಮಾನಗಳ ಪರಿಚಯ ಮಾಡಿಕೊಡಲು ರಾಯಲ್ ಥೈ ಏರ‌್ಸಫೋರ್ಸ್ ಅನುಮತಿ ನೀಡುತ್ತದೆ.
ಟರ್ಕಿಯಲ್ಲಿ ಮಕ್ಕಳಿಂದ ಸಾಂಕೇತಿಕ ಆಡಳಿತ
ಟರ್ಕಿಯಲ್ಲಿ ಪ್ರತಿ ವರ್ಷ ಏಪ್ರಿಲ್ 23 ರನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಾರೆ. ಆ ದಿನ ಮಕ್ಕಳು ಟರ್ಕಿ ಪಾರ್ಲಿಮೆಂಟ್‌ನಲ್ಲಿ ಕುಳಿತು ಸಾಂಕೇತಿಕವಾಗಿ ಸರ್ಕಾರ ನಡೆಸುತ್ತಾರೆ. ಆ ದಿನ ದೇಶಾದ್ಯಂತ ಮಕ್ಕಳ ದಿನಾಚಣೆಯನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಜೊತೆಗೆ ವಿದೇಶಗಳಿಂದಲೂ ಮಕ್ಕಳನ್ನು ಆಹ್ವಾನಿಸುತ್ತಾರೆ. ಜೊತೆಗೆ ಅವರಿಗೆ ಸಾಂಪ್ರದಾಯಿಕ ಉಡುಗೆ ತೊಡುವ ಸ್ಪರ್ಧೆ ಏರ್ಪಡಿಸುತ್ತಾರೆ.
ಬಾಂಗ್ಲಾದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ
ಮೊದಲು, ಬಾಂಗ್ಲಾದೇಶದ ಪಿತಾಮಹ ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮದಿನದ ನೆನಪಿಗಾಗಿ ಮಾರ್ಚ್ 20 ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತಿತ್ತು. ೨೦೦೦ನೇ ಇಸವಿ ನಂತರ ಬಾಂಗ್ಲಾ ಸರ್ಕಾರ ನವೆಂಬರ್ 20 ನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಿದೆ. ಮಕ್ಕಳ ದಿನಾಚರಣೆಯಂದು ಮಕ್ಕಳ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.