
White Hair Remedy: ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಮೊದಲೆಲ್ಲಾ ವಯಸ್ಸಾದ ಮೇಲೆ ಮಾತ್ರ ಕೂದಲು ಬಿಳಿಯಾಗುತ್ತಿತ್ತು. ಈಗ ಯುವಕರು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಜೀವನಶೈಲಿ, ಅನಾರೋಗ್ಯಕರ ಆಹಾರ, ಒತ್ತಡ, ಮಾಲಿನ್ಯ ಮತ್ತು ರಾಸಾಯನಿಕ ಆಧಾರಿತ ಉತ್ಪನ್ನಗಳ ಅತಿಯಾದ ಬಳಕೆ ಇದಕ್ಕೆ ಕಾರಣ ಎಂಬುದನ್ನು ಹೆಚ್ಚೇನು ಬಿಡಿಸಿ ಹೇಳಬೇಕಿಲ್ಲ. ಈಗ ಹೆಚ್ಚಿನ ಜನರು ಬಿಳಿ ಕೂದಲನ್ನು ಮರೆಮಾಡಲು ದುಬಾರಿ ಡೈ ಅಥವಾ ಹೇರ್ ಡೈ ಬಳಸುತ್ತಾರೆ. ಆದರೆ ಅಂತಹ ಉತ್ಪನ್ನಗಳು ಕಾಲಾನಂತರದಲ್ಲಿ ಕೂದಲನ್ನು ಡ್ಯಾಮೇಜ್ ಮಾಡಬಹುದು. ಹಾಗಾಗಿ ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ತುಂಬಾ ಸುಲಭ ಮತ್ತು ನೈಸರ್ಗಿಕ ಮಾರ್ಗ ಯಾವುದೆಂದು ನಿಮಗಿಲ್ಲಿ ಕೊಡಲಾಗಿದೆ. ಈ ವಿಶೇಷ ವಿಧಾನವನ್ನು ಪ್ರಸಿದ್ಧ ಆಯುರ್ವೇದ ವೈದ್ಯ ಸಲೀಂ ಜೈದಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಮತ್ತೇಕೆ ತಡ ಅವರು ವಿಡಿಯೋದಲ್ಲಿ ಹೇಳಿರುವುದೇನು ನೋಡೋಣ ಬನ್ನಿ...
ಆಯುರ್ವೇದದಲ್ಲಿ ಒಂದು ವಿಶೇಷ ಎಣ್ಣೆಯಿದೆ. ಇದು ಬಿಳಿ ಕೂದಲಿನ ಸಮಸ್ಯೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ ಎಂದು ಡಾ. ಜೈದಿ ಹೇಳುತ್ತಾರೆ. ಅಂದಹಾಗೆ ನೀವು ಮನೆಯಲ್ಲಿಯೇ ಆ ವಿಶೇಷ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಬಹುದು. ಪದಾರ್ಥಗಳನ್ನು ಸಂಗ್ರಹಿಸಿದರೆ ಎಣ್ಣೆ ಅರ್ಧ ತಯಾರಾದಂತೆ ಲೆಕ್ಕ. ಹಾಗಾದರೆ ಎಣ್ಣೆ ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ಅದನ್ನು ತಯಾರಿಸುವ ವಿಧಾನವನ್ನು ನೋಡೋಣ ಬನ್ನಿ...
ಎಣ್ಣೆ ತಯಾರಿಸಲು ಬೇಕಾಗುವ ಪದಾರ್ಥ
ಈ ಎಣ್ಣೆಯನ್ನು ತಯಾರಿಸಲು ನಿಮಗೆ 200 ಮಿಲಿ ಸಾಸಿವೆ ಎಣ್ಣೆ ಬೇಕು. ಜೊತೆಗೆ 20 ಗ್ರಾಂ ಭೃಂಗರಾಜ, 20 ಗ್ರಾಂ ಜಟಮಾನ್ಸಿ(Spikenard), 5 ಗ್ರಾಂ ಒಣ ಆಮ್ಲಾ ಮತ್ತು 25 ಗ್ರಾಂ ಮೆಂತ್ಯ ಬೀಜಗಳು ಬೇಕಾಗುತ್ತದೆ.
ತಯಾರಿಸುವುದು ಹೇಗೆ?
* ಇದಕ್ಕಾಗಿ ಮೊದಲು ಸಾಸಿವೆ ಎಣ್ಣೆಯನ್ನು ಶುದ್ಧವಾದ ಗಾಜಿನ ಜಾರ್‌ನಲ್ಲಿ ತುಂಬಿಸಿ.
* ಈಗ ಭೃಂಗರಾಜ ಮತ್ತು ಜಟಮಾನ್ಸಿಯನ್ನು ಸಣ್ಣ ತುಂಡುಗಳಾಗಿ ಮಾಡಿ ಎಣ್ಣೆಗೆ ಸೇರಿಸಿ.
* ಒಣ ಆಮ್ಲಾ ಮತ್ತು ಮೆಂತ್ಯ ಬೀಜಗಳನ್ನು ಲಘುವಾಗಿ ಪುಡಿಮಾಡಿ ಅದೇ ಎಣ್ಣೆಯಲ್ಲಿ ಮಿಶ್ರಣ ಮಾಡಿ.
* ಹೀಗೆ ಮಾಡಿದ ನಂತರ, ಈ ಜಾರ್ ಅನ್ನು 10-12 ದಿನಗಳ ಕಾಲ ಬಿಸಿಲಿನಲ್ಲಿ ಇರಿಸಿ.
* ನಂತರ ಈ ಎಣ್ಣೆಯನ್ನು ಕಬ್ಬಿಣದ ಬಾಣಲೆಯಲ್ಲಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ.
* ಎಣ್ಣೆ ಸ್ವಲ್ಪ ಕಾದ ನಂತರ ಗ್ಯಾಸ್ ಆಫ್ ಮಾಡಿ. ಎಣ್ಣೆ ತಣ್ಣಗಾಗಲು ಬಿಡಿ.
* ಅದು ತಣ್ಣಗಾದ ನಂತರ ನೀವು ಎಣ್ಣೆಯನ್ನು ಸಂಗ್ರಹಿಸಿಡಬಹುದು.
ಬಳಸುವುದು ಹೇಗೆ?
* ಮೊದಲ ತಿಂಗಳ ಕಾಲ ಪ್ರತಿದಿನ ಕೂದಲಿನ ಬೇರುಗಳಿಗೆ ಈ ಎಣ್ಣೆಯನ್ನು ಹಚ್ಚಲು ಡಾ. ಜೈದಿ ಶಿಫಾರಸು ಮಾಡಿದ್ದಾರೆ.
* ಅದೇ ಒಂದು ತಿಂಗಳ ನಂತರ ಪ್ರತಿ ದಿನ ಇದನ್ನು ಪರ್ಯಾಯವಾಗಿ ಹಚ್ಚಿ.
* ರಾತ್ರಿಯಿಡೀ ಎಣ್ಣೆಯನ್ನು ಕೂದಲಿನಲ್ಲಿ ಬಿಡಿ ಮತ್ತು ಮರುದಿನ ಬೆಳಗ್ಗೆ ಸೌಮ್ಯವಾದ ಸಲ್ಫೇಟ್ ಮುಕ್ತ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
* ಎಣ್ಣೆ ಹಚ್ಚಿ ಹೊರಗೆ ಹೋಗುವಾಗ ತಲೆಗೆ ಬಟ್ಟೆ ಕಟ್ಟಿಕೊಳ್ಳಿ.
ತಕ್ಷಣಕ್ಕೆ ಸಿಗುತ್ತೆ ರಿಸಲ್ಟ್
ಡಾ. ಜೈದಿ ಹೇಳುವಂತೆ ನಿಮ್ಮ ವಯಸ್ಸು 30-35 ವರ್ಷಕ್ಕಿಂತ ಕಡಿಮೆಯಿದ್ದರೆ ಈ ಪರಿಹಾರದಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗಬಹುದು. ಒಂದು ವೇಳೆ ನಿಮಗೆ ವಯಸ್ಸಾಗಿದ್ದರೆ ಕೂದಲು ಮತ್ತಷ್ಟು ಬಿಳಿ ಬಣ್ಣಕ್ಕೆ ತಿರುಗುವುದನ್ನು ನಿಲ್ಲಿಸಬಹುದು. ಈ ಪರಿಹಾರವನ್ನು ನಿಯಮಿತವಾಗಿ ಪ್ರಯತ್ನಿಸುವುದರಿಂದ ನೀವು 2-3 ತಿಂಗಳಲ್ಲಿ ವ್ಯತ್ಯಾಸವನ್ನು ನೋಡಲು ಪ್ರಾರಂಭಿಸುತ್ತೀರಿ. ಈ ಎಣ್ಣೆ ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ ನೀವು ಈ ಪರಿಹಾರವನ್ನು ಸಹ ಪ್ರಯತ್ನಿಸಬಹುದು.
Disclaimer: ಸಲಹೆಯನ್ನು ಒಳಗೊಂಡ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.