
ಮನೆಯಲ್ಲಿ ಅತ್ಯಂತ ನೆಮ್ಮದಿ ನೀಡುವ ಜಾಗ ಯಾವ್ದು? ಯುವಕರಿಂದ ಬರೋ ಉತ್ತರ ಬಾತ್ ರೂಮ್ (Bathroom). ಗಂಟೆಗಟ್ಟಲೆ ಬಾತ್ ರೂಮಿನಲ್ಲಿ ಕುಳಿತ್ರೂ ಅನೇಕರಿಗೆ ಬೇಸರ ಬರೋದಿಲ್ಲ. ಹೊಸ ಐಡಿಯಾ ಬರೋ ಜಾಗ ಅದು ಗೊತ್ತಾ ಎನ್ನುವವರಿದ್ದಾರೆ. ಬಾತ್ ರೂಮಿನಲ್ಲಿ ಮೊಬೈಲ್ ನೋಡ್ತಾ, ಡೈರಿ ಬರೀತಾ, ಧ್ಯಾನ ಮಾಡ್ತಾ, ಕೆಲ್ಸ ಮಾಡ್ತಾ ಇಲ್ಲ ಕೆಲ ಸಮಯ ಹಾಗೇ ಸುಮ್ಮನೆ ಕುಳಿತುಕೊಳ್ಳುವ ಜನರಿದ್ದಾರೆ. ಜೆನ್ ಝಡ್ ನ ಯುವಕರಿಗೆ ಬಾತ್ ರೂಮ್ ಮನೆಯ ಫೆವರೆಟ್ ಜಾಗವಾಗಿದೆ. ಮೂಡ್ ಫ್ರೆಶ್ ಮಾಡಲು ಜನರು ಬಾತ್ ರೂಮ್ ಗೆ ವಿಶೇಷ ಡಿಕೋರೇಶನ್ ಮಾಡ್ತಿದ್ದಾರೆ. ಚೆನ್ನಾಗಿರುವ ಸೆಂಟ್ ಬಳಸ್ತಿದ್ದಾನೆ. ಇದನ್ನು ಈಗ ಬಾತ್ ರೂಮ್ ಕ್ಯಾಂಪಿಂಗ್ ಅಂತ ಕರೆಯಲಾಗ್ತಿದೆ.
ಇಡೀ ದಿನ ಓದು, ಕೆಲ್ಸ ಅಂತ ಬ್ಯುಸಿ ಇರುವ ಜನರಿಗೆ ಮನೆಗೆ ಬಂದ್ರೂ ನೆಮ್ಮದಿ ಇರೋದಿಲ್ಲ. ಮನೆ ಕೆಲ್ಸ, ಮಕ್ಕಳ ಕಿರಿಕಿರಿ ಇಲ್ಲ ಸಂಗಾತಿ ಗಲಾಟೆ. ಇದ್ರಿಂದೆಲ್ಲ ಮುಕ್ತಿ ಪಡೆದು ಶಾಂತವಾಗಿ, ತಮಗಾಗಿ ಮೀಸಲಿಡುವ ಜಾಗ ಅಂದ್ರೆ ಅದು ಬಾತ್ ರೂಮ್. ಅನೇಕರು ಬಾತ್ ರೂಮಿನಲ್ಲಿ ತಮ್ಮನ್ನು ತಾವು ಬಂಧಿ ಮಾಡ್ಕೊಳ್ತಾರೆ. ಬಾತ್ ರೂಮ್ ನಿಂದ ಹೊರಗೆ ಬರ್ತಿದ್ದಂತೆ ಹೊಸ ಉತ್ಸಾಹ ಬರುತ್ತೆ, ನೆಮ್ಮದಿ ಸಿಕ್ಕ ಅನುಭವವಾಗುತ್ತೆ ಎನ್ನುವವರಿದ್ದಾರೆ. ಮನೆಯಲ್ಲಿ ಒಬ್ಬನೇ ದುಡಿಯುವ ವ್ಯಕ್ತಿ ಇದ್ರೆ ಆತ ತನ್ನ ಭಾವನೆಗಳನ್ನು ಮನೆಯವರ ಮುಂದೆ ಕಟ್ಟಿ ಇಡ್ತಾನೆ. ಮಕ್ಕಳಿಗೆ, ಹಿರಿಯರಿಗೆ ತನ್ನ ನೋವು ಕಾಣ್ಬಾರದು ಎನ್ನುವ ಉದ್ದೇಶಕ್ಕೆ ಎಲ್ಲವನ್ನೂ ಬಚ್ಚಿಡುತ್ತಾನೆ. ಅವನ ಭಾವನೆಗೆ ಜಾಗ ಸಿಗೋದು ಬಾತ್ ರೂಮ್. ಇದನ್ನು ಸುರಕ್ಷಿತ ಸ್ಥಳ ಎಂದೂ ಕರೆಯಲಾಗ್ತಿದೆ.
ಬಾತ್ ರೂಮ್ ಕ್ಯಾಂಪಿಂಗ್ (Bathroom Camping) ಬಗ್ಗೆ ತಜ್ಞರು ಹೇಳೋದೇನು? : ಬಾತ್ ರೂಮ್ ಕ್ಯಾಂಪಿಂಗ್ ನಗರಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಈಗಿನ ಯುವಕರು ತಮ್ಮ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡ್ತಿದ್ದಾರೆ. ಸಮಸ್ಯೆ ಬಂದಾಗ ಮನಸ್ಸನ್ನು ರಿಲ್ಯಾಕ್ಸ್ ಮಾಡಲು ಬಾತ್ ರೂಮ್ ಮೊರೆ ಹೋಗ್ತಿದ್ದಾರೆ. ಸ್ವಲ್ಪ ಸಮಯ ಬಾತ್ ರೂಮಿನಲ್ಲಿ ರೀಲ್ಸ್ ನೋಡ್ಲಿ, ಕಣ್ಣು ಮುಚ್ಚಿ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಲಿ ಇಲ್ಲ ಯಾವುದಾದ್ರೂ ಇ ಬುಕ್ ಓದಲಿ, ಅಲ್ಲಿ ಏನು ಮಾಡ್ತಾರೆ ಅನ್ನೋದು ಅವರ ಆಯ್ಕೆಯಾದ್ರೂ ಅಲ್ಲಿ ಅವರು ಮಾಡುವ ಕೆಲಸ ಅವರ ಮನಸ್ಸನ್ನು ನಿರಾಳಗೊಳಿಸುತ್ತದೆ. ಅವರ ಕೆಲಸಕ್ಕೆ ಅಡ್ಡಿಯಾಗುವವರು ಯಾರೂ ಇಲ್ಲ ಎಂದು ತಜ್ಞರು ಹೇಳ್ತಾರೆ.
ಬಾತ್ ರೂಮ್ ಕ್ಯಾಂಪಿಂಗ್ ನಿಂದ ಹಾನಿ ಏನು? : ಮನಸ್ಸನ್ನು ರಿಲ್ಯಾಕ್ಸ್ ಮಾಡಲು ಸ್ವಲ್ಪ ಸಮಯ ಬಾತ್ ರೂಮಿನಲ್ಲಿ ಬಂಧಿಯಾಗೋದು ಒಳ್ಳೆಯದು. ವ್ಯಕ್ತಿ ಪದೇ ಪದೇ ಏಕಾಂಗಿಯಾಗಿರಲು ಬಯಸ್ತಾನೆ, ಸಮಾಜದಿಂದ ದೂರ ಇರ್ತಾನೆ ಎಂದಾಗ ಅದನ್ನು ಕೇವಲ ಹವ್ಯಾಸವೆಂದು ಪರಿಗಣಿಸಲು ಸಾಧ್ಯವಿಲ್ಲ. ಅದು ಆತಂಕ, ಅತಿಯಾದ ಪ್ರಚೋದನೆ, ನಿಮ್ಮನ್ನು ನಾಶ ಮಾಡುವ ಸಮಸ್ಯೆ ಆಗಿರಬಹುದು.
ಇಷ್ಟೇ ಅಲ್ಲ ಬಾತ್ ರೂಮಿನಂತಹ ತೇವಾಂಶ ಇರುವ ವಾತಾವರಣದಲ್ಲಿ ದೀರ್ಘಕಾಲ ಕಳೆಯುವುದರಿಂದ ಹಲವಾರು ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡ್ಬಹುದು. ನಿಮ್ಗೆ ಅದ್ರ ಪರಿಣಾಮ ತಕ್ಷಣ ಕಾಣಿಸಿಕೊಂಡಿಲ್ಲ ಎಂದ್ರೂ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಆಗ್ಬಹುದು. ಚರ್ಮದ ಸೋಂಕಿನಿಂದ ಮೂತ್ರ ವಿಸರ್ಜನೆಯ ಸಮಸ್ಯೆಗಳವರೆಗೆ ಅನೇಕ ಆರೋಗ್ಯ ಸಮಸ್ಯೆ ಕಾಡುತ್ತದೆ. ತೇವಾಂಶವುಳ್ಳ, ಆರ್ದ್ರ ವಾತಾವರಣ ಸೂಕ್ಷ್ಮಜೀವಿಗಳ ಬೆಳವಣಿಗೆ ಹೆಚ್ಚಿಸುತ್ತದೆ. ದೀರ್ಘಕಾಲ ಕುಳಿತುಕೊಳ್ಳುವುದು ಕೂಡ ಉತ್ತಮವಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.