
ದಟ್ಟವಾದ ಮತ್ತು ಪರ್ವತಮಯ ಪ್ರದೇಶದಲ್ಲಿ ಕಳೆದುಹೋದ 18 ವರ್ಷದ ಯುವಕನನ್ನು ಅಂತಿಮವಾಗಿ ರಕ್ಷಿಸಲಾಗಿದೆ. ಹತ್ತು ದಿನಗಳಿಂದ ಈ ಹುಡುಗನ ಬಗ್ಗೆ ಯಾವುದೇ ಮಾಹಿತಿಯೂ ಇರಲಿಲ್ಲ. ಆಹಾರ ಮತ್ತು ನೀರಿಲ್ಲದೆ, ಟೂತ್‌ಪೇಸ್ಟ್ ಮತ್ತು ಹಿಮವನ್ನು ತಿಂದು 10 ದಿನಗಳ ಕಾಲ ಜೀವಂತವಾಗಿದ್ದೆ ಎಂದು ರಕ್ಷಿಸಲ್ಪಟ್ಟ ನಂತರ ಯುವಕ ಬಹಿರಂಗಪಡಿಸಿದ್ದಾನೆ.
ಫೆಬ್ರವರಿ 8 ರಂದು ಸನ್ ಎಂಬ ಯುವಕ ತನ್ನ ಏಕಾಂಗಿ ಪಾದಯಾತ್ರೆಯ ಸಾಹಸವನ್ನು ಪ್ರಾರಂಭಿಸಿದನು. ಈತನು ವಾಯುವ್ಯ ಚೀನಾದ ಷಾಂಕ್ಸಿ ಪ್ರಾಂತ್ಯದ ಕ್ವಿನ್ಲಿಂಗ್ ಪರ್ವತ ಶ್ರೇಣಿಗೆ ಪ್ರಯಾಣ ಬೆಳೆಸಿದ್ದನು. ಕ್ವಿನ್ಲಿಂಗ್ ಪರ್ವತ ಶ್ರೇಣಿಯು ಸರಾಸರಿ 2,500 ಮೀಟರ್ ಎತ್ತರ ಮತ್ತು ಸಸ್ಯ ಮತ್ತು ವನ್ಯಜೀವಿಗಳ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಈತ ಪ್ರಯಾಣ ಪ್ರಾರಂಭಿಸಿದ ಎರಡು ದಿನಗಳ ನಂತರ, ಎಲೆಕ್ಟ್ರಾನಿಕ್ ಉಪಕರಣಗಳ ಬ್ಯಾಟರಿ ಖಾಲಿಯಾದ ಕಾರಣ ಸನ್ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡನು.
ಇದಾದ ನಂತರ ಯುವಕ ಪರ್ವತ ಶ್ರೇಣಿಯಲ್ಲಿ ಸಿಕ್ಕಿಹಾಕಿಕೊಂಡು ದಾರಿ ತಪ್ಪಿ ಸಂಪೂರ್ಣವಾಗಿ ಹೊರಗಿನ ಪ್ರಪಂಚದ ಸಂಪರ್ಕವನ್ನು ಕಳೆದುಕೊಂಡನು. ಕಠಿಣ ಹವಾಮಾನದಿಂದ ಪಾರಾಗಲು ಯುವಕ ದೊಡ್ಡ ಬಂಡೆಯ ಕೆಳಭಾಗದಲ್ಲಿ ಆಶ್ರಯ ಪಡೆದನು. ಹುಲ್ಲು ಮತ್ತು ಎಲೆಗಳನ್ನು ಬಳಸಿ ತಾತ್ಕಾಲಿಕ ಹಾಸಿಗೆಯನ್ನು ನಿರ್ಮಿಸಿಕೊಂಡು ಅಲ್ಲೇ ವಾಸಿಸುತ್ತಿದ್ದನು.
ಇದನ್ನೂ ಓದಿ: ಆಸ್ತಿ-ಅಂತಸ್ತು ಬೇಡ, ಭಾರತದ 6 ಅಡಿ ಎತ್ತರದ ಕ್ರಿಕೆಟ್ ಆಡುವ ಹುಡುಗ ಬೇಕು; ರಷ್ಯನ್ ಸುಂದರಿ ಸಿಂಪಲ್ ಬೇಡಿಕೆ!
ಅದೃಷ್ಟವಶಾತ್, ಫೆಬ್ರವರಿ 17 ರಂದು ರಕ್ಷಣಾ ತಂಡದವರು ಸನ್‌ನನ್ನು ಹುಡುಕುವಲ್ಲಿ ಯಶಸ್ವಿಯಾದರು. ವರದಿಗಳ ಪ್ರಕಾರ, ಆತಂಕಿತ ಕುಟುಂಬದ ಕೋರಿಕೆಯ ಮೇರೆಗೆ ಸ್ಥಳೀಯ ರಕ್ಷಣಾ ತಂಡವು ಯುವಕನಿಗಾಗಿ ಹುಡುಕಾಟ ನಡೆಸಿತ್ತು. ದಾರಿ ತಪ್ಪಿ ಸಿಕ್ಕಿಹಾಕಿಕೊಂಡ ದಿನಗಳಲ್ಲಿ ತನ್ನಲ್ಲಿದ್ದ ಆಹಾರ ಪದಾರ್ಥಗಳು ಖಾಲಿಯಾದಾಗ ಟೂತ್‌ಪೇಸ್ಟ್, ಹಿಮ ಮತ್ತು ಹೊಳೆಯ ನೀರಿನಿಂದ ಜೀವ ಉಳಿಸಿಕೊಂಡೆ ಎಂದು ಈ ಯುವಕ ಹೇಳಿದ್ದಾನೆ. ನಾನು ಬದುಕಿ ಬರುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ರಕ್ಷಿಸಲ್ಪಟ್ಟ ನಂತರ ಸನ್ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದನು.
ಕ್ವಿನ್ಲಿಂಗ್ ಚೀನಾದಲ್ಲಿನ ಅತ್ಯಂತ ಸವಾಲಿನ ಐದು ಪಾದಯಾತ್ರೆಯ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಅಲ್ಲಿನ ಹವಾಮಾನವನ್ನು ಊಹಿಸಲು ಸಾಧ್ಯವಿಲ್ಲ. ಕಳೆದ ಎರಡು ದಶಕಗಳಲ್ಲಿ, ಈ ಮಾರ್ಗದಲ್ಲಿ 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಅಥವಾ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 2018 ರಲ್ಲಿ, ಸ್ಥಳೀಯ ಅಧಿಕಾರಿಗಳು ಪ್ರವಾಸಿಗರು ಪ್ರದೇಶವನ್ನು ಪ್ರವೇಶಿಸುವುದನ್ನು ನಿಷೇಧಿಸಿದ್ದರು. ಆದರೂ ಇಲ್ಲಿಗೆ ಅಕ್ರಮವಾಗಿ ಪ್ರವೇಶಿಸುವವರು ಇನ್ನೂ ಅನೇಕರಿದ್ದಾರೆ ಎಂದು ವರದಿಗಳು ಹೇಳುತ್ತವೆ. ಇಲ್ಲಿ ಕಾಣೆಯಾದ ನಂತರ ರಕ್ಷಿಸಲ್ಪಟ್ಟ ಮೊದಲ ವ್ಯಕ್ತಿ ಸನ್ ಎಂದು ಸ್ಥಳೀಯ ವರದಿಗಳು ಹೇಳಿಕೊಂಡಿವೆ.
ಇದನ್ನೂ ಓದಿ: ಮೀನಿಗೆ ಬೀರು ಕುಡಿಸಿದ ಕಿಡಿಗೇಡಿ: ವೀಡಿಯೋ ವೈರಲ್ ಆಗುತ್ತಿದ್ದಂತೆ ಆಕ್ರೋಶ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.