
ನವದೆಹಲಿ (ಜು.10) ಫಿನ್‌ಟೆಕ್ ಕಂಪನಿ ಮುಖ್ಯಸ್ಥ ವಿಮಾನದ ವಿಂಡೋ ಸೀಟಿನಲ್ಲಿ ಕುಳಿತಿದ್ದರು. ಆದರೆ 7 ವರ್ಷದ ಬಾಲಕ ತನಗೆ ವಿಂಡೋ ಸೀಟು ಬೇಕು ಎಂದು ಪಟ್ಟು ಹಿಡಿದಿದ್ದ. ಬಾಲಕನ ತಂದೆ ಕೊನೆಗೂ ಫಿನ್ ಟೆಕ್ ಕಂಪನಿ ಮುಖ್ಯಸ್ಥರ ಬಳಿಕ ಮನವಿ ಮಾಡಿದ್ದಾರೆ. ಬಾಲಕನ ಪಟ್ಟು, ತಂದೆಯ ಮನವಿಗಳಿಂದ ಕಂಪನಿ ಮುಖ್ಯಸ್ಥ ತನ್ನ ಪ್ರಯಾಣದ ವಿಂಡೋ ಸೀಟನ್ನು ಬಾಲಕನಿಗೆ ಬಿಟ್ಟುಕೊಟ್ಟಿದ್ದಾರೆ. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಬಾಲಕ ನಿದ್ದೆಗೆ ಜಾರಿದ್ದಾನೆ. ಲ್ಯಾಂಡ್ ಆಗೋ ವರೆಗೂ ಬಾಲಕ ನಿದ್ದೆ ಮಾಡಿದ್ದಾನೆ. ಬಾಲಕ ವಿಂಡೋ ಸೀಟ್ ಸದ್ಬಳಕೆ ಮಾಡಿಲ್ಲ, ಹಾಗಾಗಿ ಕ್ಷಮೆ ಇರಲಿ ಎಂದು ತಂದೆ ಹೇಳಿದ್ದಾರೆ. ಇತ್ತ ಫಿನ್‌ಟೆಕ್ ಕಂಪನಿ ಮುಖ್ಯಸ್ಥ ಇರಲಿ ಬಿಡಿ ಎಂದಿದ್ದಾರೆ. ಈ ವೇಳೆ ಬಾಲಕನ ತಂದೆ ಹೇಳಿದ ಕರುಳ ಹಿಂಡುವ ಕತೆ ಫಿನ್ ಟೆಕ್ ಕಂಪನಿ ಮುಖ್ಯಸ್ಥರ ಕಣ್ಣಾಲಿ ತೇವಗೊಳಿಸಿತ್ತು.
ಫಿನ್‌ಟೆಕ್ ಗ್ಲೋಬಲ್ ಎಕ್ಸಿಕ್ಯೂಟೀವ್ ಅನೂಪ್ ಕುಮಾರ್ ಬೇಡಿ ಈ ಘಟನೆ ಬಿಚ್ಚಿಟ್ಟಿದ್ದಾರೆ. ದೆಹಲಿಯಿಂದ ಪುಣೆ ಪ್ರಯಾಣಕ್ಕಾಗಿ ಅರುಣ್ ಕುಮಾರ್ ಬೇಡಿ ವಿಮಾನ ಹತ್ತಿದ್ದಾರೆ. ವಿಮಾನದ ಕಿಟಕಿ ಬದಿಯ ಸೀಟು ನಿಗದಿಯಾಗಿತ್ತು. ತಮ್ಮ ಸೀಟಿನಲ್ಲಿ ಕುಳಿತಕೊಂಡ ಕೆಲವೇ ಸಮಯದಲ್ಲಿ ತಂದೆ ಹಾಗೂ 7 ವಯಸ್ಸಿನ ಬಾಲಕ ಆಗಮಿಸಿದ್ದಾರೆ. ಅವರ ಸೀಟು ಅನೂಪ್ ಕುಮಾರ್ ಬೇಡಿಯ ಪಕ್ಕದ ಸೀಟುಗಳು.
ಬಾಲಕ ವಿಮಾನ ನಿಲ್ದಾಣಕ್ಕೆ ಬರುವ ಮೊದಲೇ ತನಗೆ ವಿಂಡೋ ಸೀಟು ಬೇಕು ಎಂದು ಪಟ್ಟು ಹಿಡಿದಿದ್ದಾನೆ. ತಂದೆಗೆ ಏನು ಮಾಡಬೇಕು ಎಂದು ತೋಚಿಲ್ಲ. ವಿಮಾನದ ಒಳ ಬಂದು ನೋಡಿದರೆ ತಮ್ಮ ಎರಡು ಸೀಟಿನಲ್ಲಿ ವಿಂಡೋ ಸೀಟಿಲ್ಲ. ಇನ್ನು ವಿಂಡೋ ಸೀಟಿನಲ್ಲಿ ಕುಳಿತ ವ್ಯಕ್ತಿ ಸೂಟು, ಬೂಟ್ ತೊಟ್ಟ ವ್ಯಕ್ತಿ. ದೊಡ್ಡ ವ್ಯಕ್ತಿ ಅನ್ನೋ ಕಾರಣಕ್ಕೆ ತಂದೆಗೆ ಅವರ ಬಳಿ ಮನವಿ ಮಾಡಲು ಸಾಧ್ಯವಾಗಲಿಲ್ಲ. ಮಗನನ್ನೇ ಮುಂದಿನ ಬಾರಿ ಟೂರು ಕರೆದುಕೊಂಡು ಹೋಗುವಾಗ ವಿಂಡೋ ಸೀಟಿನಲ್ಲಿ ಹೋಗೋಣ ಎಂದೆಲ್ಲಾ ತಂದೆ ಹೇಳಿದರೂ ಬಾಲಕ ಮಾತ್ರ ಕೇಳುತ್ತಲೇ ಇಲ್ಲ. ತನಗೆ ವಿಂಡೋ ಸೀಟು ಬೇಕೆಂದು ಪಟ್ಟು ಹಿಡಿದಿದ್ದಾನೆ. ಕೊನೆಗೆ ಬೇರೆ ದಾರಿ ಇಲ್ಲದೆ ವಿಂಡೋ ಸೀಟಿನಲ್ಲಿ ಕುಳಿತ ವ್ಯಕ್ತಿ ಬಳಿ ಮಗನ ವಿಂಡೋ ಸೀಟಿಗಾಗಿ ಅಳುತ್ತಿದ್ದಾನೆ. ಬಿಟ್ಟು ಕೊಡಲು ಸಾಧ್ಯವೆ ಎಂದು ಕೇಳಿದ್ದಾರೆ. ಇತ್ತ ಅನೂಪ್ ಕುಮಾರ್ ಬೇಡಿ ಸರಿ ಎಂದು ಸೀಟು ಬಿಟ್ಟುಕೊಟ್ಟಿದ್ದಾರೆ.
ವಿಮಾನ ರನ್‌ವೇನಲ್ಲಿ ವೇಗವಾಗಿ ಸಾಗುತ್ತಿದ್ದಂತೆ 7 ವರ್ಷದ ಬಾಲಕ ಮಲಗಿದ್ದಾನೆ. ದೆಹಲಿಯಿಂದ ಪುಣೆಯ ಇಡೀ ಪ್ರಯಾಣದಲ್ಲಿ ಬಾಲಕ ಆಗಸದಲ್ಲಿ ವಿಮಾನ ಪ್ರಯಾಣದ ಆನಂದ ಅನುಭವಿಸಲೇ ಇಲ್ಲ. ಇಡೀ ಪ್ರಯಾಣದಲ್ಲಿ ಮಲಗಿದ್ದ. ಹೀಗಾಗಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ನನ್ನ ಮಗ ವಿಂಡೋ ಸೀಟ್ ಸದ್ಬಳಕೆ ಮಾಡಲಿಲ್ಲ . ಹೀಗಾಗಿ ಕ್ಷಮೆ ಇರಲಿ ಎಂದಿದ್ದಾರೆ. ಇದಕ್ಕೆ ಇರಲಿ ಬಿಡಿ, ಆತ ಸುಸ್ತಾಗಿರಬೇಕು ಎಂದ ಅರುಣ್ ಕುಮಾರ್ ಬೇಡಿಗೆ ಕೆಲ ಹೊತ್ತಲ್ಲೇ ಬಾಲಕನ ಕರುಳು ಹಿಂಡುವ ಕತೆ ಕೇಳಿ ಭಾವುಕರಾಗಿದ್ದಾರೆ.
ವಿಮಾನ ಪುಣೆಯಲ್ಲಿ ಲ್ಯಾಂಡಿಂಗ್ ಆಗಲು ಸಜ್ಜಾಗಿತ್ತು. ಇತ್ತ ಮಗ ವಿಂಡೋ ಸೀಟು ಹಠಕ್ಕೆ ಬಿದ್ದು ಪಡೆದರೂ ಏನು ನೋಡಲೇ ಇಲ್ಲ. ಆತ ಸುಸ್ತಾಗಿರಬೇಕು ಎಂದು ಅನೂಪ್ ಕುಮಾರ್ ಬೇಡಿ ಹೇಳುತ್ತಿದ್ದಂತೆ ಬಾಲಕನ ತಂದೆಯ ಕಣ್ಣಂಚಿನಿಂದ ಕಣ್ಣೀರು ಜಿನುಗಿತ್ತು. ಫಿನ್‌ಟೆಕ್ ಕಂಪನಿ ಮುಖ್ಯಸ್ಥರಿಗೆ ಏನಾಯಿತು ಅನ್ನೋದು ತಿಳಿಯಲಿಲ್ಲ. ಅಷ್ಟರಲ್ಲೇ ಬಾಲಕನ ತಂದೆ, ಹೌದು ಸರ್, ಆತ ಸುಸ್ತಾಗಿದ್ದಾನೆ ಎಂದು ಘಟನೆ ವಿವರಿಸಿದ್ದಾರೆ. ತಂದೆ ಹಾಗೂ ಬಾಲಕನ ಮನೆ ಪುಣೆ. ಕಳೆದ 8 ತಿಂಗಳಿಂದ ಈ ಬಾಲಕ ದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಅಪ್ಲಾಸ್ಟಿಕ್ ಅನಿಮಿಯಾ ಅನ್ನೋ ಗಂಭೀರ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ. ಸತತ 8 ತಿಂಗಳಿನಿಂದ ನಾವಿಬ್ಬರು ದೆಹಲಿಯ ಆಸ್ಪತ್ರೆಯಲ್ಲೇ ಇದ್ದೆವು. ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ನೀಡಲಾಗಿತ್ತು. ಮೊನ್ನೆಯಷ್ಟೇ ವೈದ್ಯರು ಬಾಲಕ ಗುಣಮುಖನಾಗಿದ್ದಾನೆ. ಈಗ ಪ್ರಯಾಣ ಮಾಡಬಹುದು ಎಂದು ಹೇಳಿದ್ದರು. ಹೀಗಾಗಿ ಟಿಕೆಟ್ ಬುಕ್ ಮಾಡಿ 8 ತಿಂಗಳ ಬಳಿಕ ಮನೆಗೆ ತೆರಳುತ್ತಿದ್ದೇವೆ ಎಂದು ಬಾಲಕನ ತಂದೆ ಭಾವುಕರಾಗಿ ಹೇಳಿದ್ದಾರೆ.
ನನ್ನ ಮಗನಿಗೆ ವಿಂಡೋ ಸೀಟ್ ಅತ್ಯಂತ ಮುಖ್ಯವಾಗಿತ್ತು ಸರ್. ವಿಮಾನ ನಿಲ್ದಾಣದ ಹತ್ತಿರಕ್ಕೆ ಬರುತ್ತಿದ್ದಂತೆ ನನ್ನ ಮಗ, ನಾನು ವಿಂಡೋ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ. ವಿಮಾನಗಳು ಮೋಡಗಳ ಮೇಲಿನಿಂದ ಹಾರುವಾಗ ನಾನು ದೇವರಿಗೆ ಹತ್ತಿರವಾಗುತ್ತೇನೆ. ಈ ವೇಳೆ ನನ್ನ ಆರೋಗ್ಯ ಸಮಸ್ಯೆ ಗುಣಪಡಿಸಿ, ನನ್ನನ್ನು ಬುದುಕಿಸಿದ ಹಾಗೂ ನನಗೆ ಮನಗೆ ಮರಳಲು ಅವಕಾಶ ನೀಡಿದ ದೇವರಿಗೆ ಕೈಮುಗಿದು ಧನ್ಯವಾದ ಹೇಳುತ್ತೇನೆ ಎಂದಿದ್ದ ಎಂದು ತಂದೆ ಕಣ್ಣೀರಿಟ್ಟು ವಿವರಿಸಿದ್ದಾರೆ.
ಬಾಲಕನ ತಂದೆ ಮಾತುಗಳನ್ನು ಕೇಳಿ ಅನೂಪ್ ಕುಮಾರ್ ಬೇಡಿ ಭಾವುಕರಾಗಿದ್ದಾರೆ. ಅನೂಪ್ ಕುಮಾರ್ ಬೇಡಿದೆ ಮಾತುಗಳು ಬರಲಿಲ್ಲ. ಕೊನೆಗೆ ವಿಮಾನದಿಂದ ಇಳಿಯುವಾಗ ಮತ್ತೊಮ್ಮೆ ಅನೂಪ್ ಕುಮಾರ್ ಕೈಹಿಡಿದು ನನ್ನ ಮಗನಿಗಾಗಿ ಸೀಟು ಬಿಟ್ಟುಕೊಟ್ಟ ಸಹಕರಿಸಿದ್ದೀರಿ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸಿದರು. ತಂದೆ ಹಾಗೂ ಮಗನ ಮಾತುಗಳು ನನಗೆ ಬದುಕಿನಲ್ಲಿ ಅತೀ ದೊಡ್ಡ ಪಾಠ ಕಲಿಸಿತು ಎಂದು ಅನೂಪ್ ಕುಮಾರ್ ಬೇಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.