
ನಾವು ನೀವು ಅಂತಲ್ಲ, ಎಲ್ಲರೂ ಅಷ್ಟೇ...ಹಲ್ಲುಜ್ಜುವ ಬ್ರಷ್ ಹಳೆಯದಾದರೆ ಅದನ್ನು ಎಸೆಯುತ್ತೇವೆ. ಆದರೆ ಹಳೆಯ ಟೂತ್ ಬ್ರಷ್‌ಗಳು ಮನೆಯಲ್ಲಿ ಅನೇಕ ಸಣ್ಣ ಮತ್ತು ದೊಡ್ಡ ಕೆಲಸಗಳಲ್ಲಿ ತುಂಬಾ ಉಪಯುಕ್ತವೆಂದು ನಿಮಗೆ ತಿಳಿದಿದೆಯೇ?. ಹೌದು, ಇದರ ಗಟ್ಟಿಯಾದ ಮತ್ತು ಕಿರಿದಾದ ಬಿರುಗೂದಲುಗಳು ಬಟ್ಟೆ ಅಥವಾ ಪೊರಕೆಯೂ ಸಾಮಾನ್ಯವಾಗಿ ತಲುಪಲು ಸಾಧ್ಯವಾಗದ ಸ್ಥಳಗಳನ್ನು ತಲುಪಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಸಮಯ ಮತ್ತು ಹಣವೂ ಉಳಿತಾಯವಾಗುತ್ತದೆ. ಅಡುಗೆಮನೆ, ಸ್ನಾನಗೃಹ ಮತ್ತು ಇತರ ಮೂಲೆಗಳನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿಡಲು ಇದು ಸಿಂಪಲ್ ಉಪಕರಣ. ಹಾಗೆಯೇ ಬುದ್ಧಿವಂತ ಮಾರ್ಗವಾಗಿದೆ. ನಿಮ್ಮ ದೈನಂದಿನ ಕೆಲಸವನ್ನು ಸುಲಭಗೊಳಿಸುವ ಹಳೆಯ ಹಲ್ಲುಜ್ಜುವ ಬ್ರಷ್‌ನ 5 ಅದ್ಭುತ ಉಪಯೋಗಗಳ ಬಗ್ಗೆ ನಾವಿಂದು ನೋಡೋಣ...
ಆಭರಣಗಳನ್ನು ಸ್ವಚ್ಛಗೊಳಿಸಲು
ಹಲ್ಲುಜ್ಜುವ ಹಳೆಯ ಬ್ರಷ್‌ನ ಸೂಕ್ಷ್ಮ ಬಿರುಗೂದಲುಗಳು ಆಭರಣಗಳ ಸೂಕ್ಷ್ಮ ವಿನ್ಯಾಸಗಳಲ್ಲಿ ಸಿಲುಕಿರುವ ಕೊಳಕು ಮತ್ತು ಧೂಳನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಸೌಮ್ಯವಾದ ಸೋಪ್ ಅಥವಾ ಜ್ಯುವೆಲರಿ ಕ್ಲೀನರ್ ಅನ್ನು ಬ್ರಷ್ ಮೇಲೆ ಹಾಕಿ ನಂತರ ನಿಮ್ಮ ಆಭರಣಗಳನ್ನು ಕ್ಲೀನ್ ಮಾಡುವುದರಿಂದ ಇದು ನಿಮ್ಮ ಆಭರಣಗಳ ಹೊಳಪನ್ನು ಮರಳಿ ತರಬಹುದು. ಉಂಗುರಗಳು, ಚೈನು ಮತ್ತು ಕಿವಿಯೋಲೆಗಳನ್ನು ಸ್ವಚ್ಛಗೊಳಿಸಲು ಇದು ವಿಶೇಷವಾಗಿ ಉಪಯುಕ್ತವಾಗಿದೆ.
ಎಲೆಕ್ಟ್ರಾನಿಕ್ಸ್ ಐಟಂ ಸ್ವಚ್ಛಗೊಳಿಸಲು
ಕಂಪ್ಯೂಟರ್ ಕೀಬೋರ್ಡ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ಲ್ಯಾಪ್‌ಟಾಪ್, ಫ್ಯಾನ್ ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸ್ವಚ್ಛಗೊಳಿಸಲು ಟೂತ್ ಬ್ರಷ್ ತುಂಬಾ ಸಹಾಯಕವಾಗಿದೆ. ಕೀಪ್ಯಾಡ್ ಮಧ್ಯೆ ಜಮೆಯಾಗಿರುವ ಧೂಳನ್ನು ತೆಗೆದುಹಾಕಲು ಇದು ಸೂಕ್ತ. ಇದರ ಸೂಕ್ಷ್ಮ ಬಿರುಗೂದಲುಗಳು ಯಾವುದೇ ಹಾನಿಯನ್ನುಂಟುಮಾಡದೆ ಧೂಳನ್ನು ತೆಗೆದುಹಾಕುತ್ತವೆ. ಆದರೆ ಬ್ರಷ್ ಸಂಪೂರ್ಣವಾಗಿ ಒಣಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
ಶೂ ಸ್ವಚ್ಛಗೊಳಿಸಲು
ಶೂಗಳು ಮತ್ತು ಚಪ್ಪಲಿಗಳ ಮೂಲೆಗಳನ್ನು ಸ್ವಚ್ಛಗೊಳಿಸಲು ಮತ್ತು ಅವುಗಳಲ್ಲಿ ಸಿಲುಕಿರುವ ಕೊಳೆಯನ್ನು ತೆಗೆದುಹಾಕಲು ಹಲ್ಲುಜ್ಜುವ ಬ್ರಷ್ ಸೂಕ್ತವಾಗಿದೆ. ವಿಶೇಷವಾಗಿ ಸ್ಪೊರ್ಟ್ಸ್ ಅಥವಾ ಕ್ಯಾನ್ವಾಸ್ ಬೂಟುಗಳನ್ನು ಡೀಪ್ ಆಗಿ ಸ್ವಚ್ಛಗೊಳಿಸಲು ಬ್ರಷ್ ಬಳಸಿ, ಸ್ವಲ್ಪ ಡಿಟರ್ಜೆಂಟ್ ಅಥವಾ ಅಡುಗೆ ಸೋಡಾ ಸೇರಿಸಿ ಬ್ರಷ್ ಮಾಡಿದರೆ ಶೂಗಳು ಹೊಳೆಯುತ್ತವೆ.
ಟೈಲ್ಸ್ ಸ್ವಚ್ಛಗೊಳಿಸಲು
ಸ್ನಾನಗೃಹ ಅಥವಾ ಅಡುಗೆಮನೆಯ ಅಂಚುಗಳ ನಡುವಿನ ಗೆರೆಗಳಲ್ಲಿ ಕಪ್ಪು ಕಲೆಗಳು ಹೆಚ್ಚಾಗಿ ಸಂಗ್ರಹವಾಗುತ್ತವೆ. ಈ ಸ್ಥಳಗಳನ್ನು ಹಳೆಯ ಹಲ್ಲುಜ್ಜುವ ಬ್ರಷ್‌ನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು ಸ್ವಲ್ಪ ವಿನೆಗರ್ ಮತ್ತು ಅಡುಗೆ ಸೋಡಾ ಬೆರೆಸಿ ಬ್ರಷ್ ಮಾಡಿದರೆ ಟೈಲ್ಸ್ ಮತ್ತೆ ಹೊಸದಾಗಿ ಹೊಳೆಯುತ್ತವೆ.
ಹೇರ್ ಬ್ರಷ್ ಮತ್ತು ಬಾಚಣಿಗೆಗಳನ್ನು ಸ್ವಚ್ಛಗೊಳಿಸಲು
ಬಾಚಣಿಕೆಯಲ್ಲಿ ಸಿಲುಕಿರುವ ಕೊಳೆ ಮತ್ತು ಎಣ್ಣೆಯ ಶೇಷವನ್ನು ತೆಗೆದುಹಾಕಲು ಹಲ್ಲುಜ್ಜುವ ಬ್ರಷ್ ಬಳಸಿ. ಹೇರ್ ಬ್ರಷ್ ನಡುವೆ ಸಿಲುಕಿಕೊಂಡಿರುವ ಕೂದಲು ಮತ್ತು ಧೂಳನ್ನು ತೆಗೆದುಹಾಕಿ ಮತ್ತು ಬ್ರಷ್ ಅನ್ನು ಸಾಬೂನು ನೀರಿನಿಂದ ಸ್ವಚ್ಛಗೊಳಿಸಿ. ಈ ವಿಧಾನವು ಮಹಿಳೆಯರ ಹೇರ್ ಬ್ರಷ್‌ಗಳಿಗೆ ವಿಶೇಷವಾಗಿ ಉಪಯುಕ್ತವಾಗಿದೆ.
ಅಡುಗೆ ಸಾಮಗ್ರಿಗಳನ್ನು ಸ್ವಚ್ಛಗೊಳಿಸಲು
ಗ್ಯಾಸ್ ಸ್ಟವ್ ಬರ್ನರ್ ಕ್ಲೀನಿಂಗ್ ಅಥವಾ ಬಣ್ಣ ಬದಲಾದ ಗ್ಯಾಸ್ ಸ್ಟವ್ ಬತ್ತಿಗಳನ್ನು ತೊಳೆಯಲು ಇದು ಸೂಕ್ತ. ಕೈ ತಲುಪದ ಮಿಕ್ಸರ್ ಜಾರ್ ಬ್ಲೇಡ್/ಬೇಸ್ ಭಾಗ ತೊಳೆಯಲೂ ಉಪಯುಕ್ತ.
ನೇಲ್ ಆರ್ಟ್ ಮಾಡಲು
ಹೌದು, ನಿಮಗೆ ಆಶ್ಚರ್ಯವೆನಿಸಿದರೂ ಹೀಗೂ ಮಾಡಬಹುದು. ಬ್ರಷ್‌ನ ತುದಿಯನ್ನು ಬಳಸಿಕೊಂಡು ಸೃಜನಾತ್ಮಕ ಶೈಲಿಯಲ್ಲಿ ನೇಲ್ ಆರ್ಟ್ ಮಾಡಬಹುದು.
ಸೂಚನೆ: ಟೂತ್‌ಬ್ರಷ್ ಬಳಸುವ ಮೊದಲು ಚೆನ್ನಾಗಿ ತೊಳೆಯಿರಿ ಮತ್ತು ಒಣಗಿಸಿ. ದಿನ ನಿತ್ಯ ಬಳಸುವ ಟೂತ್‌ಬ್ರಷ್‌ಗಳನ್ನು ಮನೆಯ ಕೆಲಸಗಳಿಗೆ ಬಳಸಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.