ಜೀವನದ ಜಂಜಾಟಕ್ಕೆ ಕೊಡಿ ಗುದ್ದು: ಆಯಸ್ಸು ವೃದ್ಧಿಗೆ ಸಂಗೀತವೇ ಮದ್ದು

By Web DeskFirst Published Jul 24, 2019, 5:52 PM IST
Highlights

ಸಂಗೀತಕ್ಕೆ ಸಮ್ಮೋಹನಗೊಳಿಸುವ ಶಕ್ತಿ ಇರುವುದು ಬಹುತೇಕರ ಅನುಭವಕ್ಕೆ ಬಂದಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಗೀತ ಇಷ್ಟ. ಆದರೆ, ಸಂಗೀತವನ್ನೇ ಇಷ್ಟಪಡದವರಂತೂ ಇಲ್ಲವೇ ಇಲ್ಲ. ಈ ಸಂಗೀತವು ಆಯಸ್ಸನ್ನು ಕೂಡಾ ಹೆಚ್ಚುತ್ತದೆ ಎನ್ನುತ್ತಿದೆ ಹೊಸ ಅಧ್ಯಯನ. 

ಆಗಾಗ ಸಂಗೀತ ಕಚೇರಿಗಳಿಗೆ ಹೋಗುವುದು ನಿಮ್ಮ ಹಾಬಿಯೇ? ಹಾಗಿದ್ದರೆ, ನಿಮಗೇ ಗೊತ್ತಿಲ್ಲದೆ ನಿಮ್ಮ ಆಯಸ್ಸಿಗೆ ಮತ್ತಷ್ಟು ವರ್ಷಗಳನ್ನು ಸೇರಿಸಿಕೊಳ್ಳುತ್ತಿದ್ದೀರಿ. ಬ್ರಿಟಿಶ್ ಕನ್ಸರ್ಟ್ ವೆನೂ ಓ2 ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ವಾರಕ್ಕೊಮ್ಮೆ ಅಥವಾ ತಿಂಗಳಿಗೆರಜು ಬಾರಿ ಸಂಗೀತ ಕಚೇರಿಗಳಿಗೆ ಹೋಗುವ ಅಭ್ಯಾಸವಿದ್ದರೆ ಆಯಸ್ಸು ಹೆಚ್ಚುತ್ತದಂತೆ. ಅದೂ ಒಂದೆರಡು ವರ್ಷವಲ್ಲ ಸ್ವಾಮಿ, ಸುಮಾರು 10 ವರ್ಷಗಳು!

ಓ2 ಸಂಸ್ಥೆಯು ವರ್ತನಾ ವಿಜ್ಞಾನಿ ಪ್ಯಾಟ್ರಿಕ್ ಫ್ಯಾಗನ್ ಜೊತೆ ಸೇರಿ ಈ ಅಧ್ಯಯನ ನಡೆಸಿದ್ದು, ಸಂತೋಷ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಾದ ಯೋಗ, ಡಾಗ್ ವಾಕಿಂಗ್, ಮ್ಯೂಸಿಕ್ ಕನ್ಸರ್ಟ್ಸ್ ಮುಂತಾದವುಗಳ ಪರಿಣಾಮವನ್ನು ಅಭ್ಯಸಿಸಿದಾಗ ಸಂಗೀತ ಕಚೇರಿಗಳಿಗೆ ಹೋಗುವವರ ಆರೋಗ್ಯ ಹಾಗೂ ನೆಮ್ಮದಿ ಉಳಿದವುಕ್ಕಿಂತ ಶೇ.21ರಷ್ಟು ಹೆಚ್ಚು ಕಂಡುಬಂದಿದೆ.
ಇಲ್ಲಿ ವೆಲ್ ಬಿಯಿಂಗ್‌ನ್ನು ಆತ್ಮಗೌರವ, ಮತ್ತೊಬ್ಬರಿಗೆ ಹತ್ತಿರದವರಾಗುವುದು ಹಾಗೂ ಮಾನಸಿಕ ಪ್ರಚೋದನೆಯಾಗಿ ನೋಡಲಾಗಿತ್ತು. ಸಂಗೀತ ಕಚೇರಿಗಳಿಗೆ ಹೋಗಿ ಬಂದ ಬಳಿಕ ವ್ಯಕ್ತಿಯ ಆತ್ಮಗೌರವ ಹಾಗೂ ಮತ್ತೊಬ್ಬರಿಗೆ ಹತ್ತಿರವೆನಿಸುವ ಭಾವ ಶೇ.25ರಷ್ಟು ಹೆಚ್ಚಿದ್ದರೆ, ಶೇ.75ರಷ್ಟು ಮೆಂಟಲ್ ಸ್ಟಿಮುಲೇಶನ್ ಕಂಡುಬಂತು. ಒಂದು ಮ್ಯೂಸಿಕ್ ಕನ್ಸರ್ಟ್‌ಗೆ ಹೋಗಿ ಬಂದರೆ ಸಿಗುವ ಸಂತೋಷ ಅಲ್ಪಾವಧಿಯದು. ಆದರೆ, ಪದೇ ಪದೆ ಸಂಗೀತ ಕಚೇರಿಗಳಿಗೆ ಹೋಗುತ್ತಿದ್ದರೆ ಅದು ನಮ್ಮ ಮನಸ್ಸು, ಮೂಡ್ ಹಾಗೂ ಜೀವಿತಾವಧಿ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು ಎಂದು ವರದಿ ಹೇಳಿದೆ. 
ಅಂದ ಹಾಗೆ ನಿಯಮಿತವಾಗಿ ಸಂಗೀತ ಕೇಳುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?

- ಒತ್ತಡ ಇಳಿಕೆ
ನಿಧಾನಗತಿಯ ಇಂಪಾದ ಗೀತೆಗಳನ್ನು ಕೇಳುವುದರಿಂದ ಒತ್ತಡ ಹಾಗೂ ಆತಂಕ ಕಡಿಮೆಯಾಗುತ್ತದೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವವರು, ಶಸ್ತ್ರಚಿಕಿತ್ಸೆ ಆಗಬೇಕಾಗಿರುವವರು ಸಂಗೀತ ಕೇಳುತ್ತಿದ್ದರೆ, ಹೆಚ್ಚು ಧೈರ್ಯದಿಂದ ಚಿಕಿತ್ಸೆಯನ್ನು ಎದುರಿಸಬಲ್ಲರು ಎಂಬುದನ್ನು ಹಲವು ಉದಾಹರಣೆಗಳು ಸಾಬೀತುಪಡಿಸಿವೆ.

- ಆತಂಕ ನಿವಾರಣೆ
ಸಂಗೀತ ಕೇಳುತ್ತಾ ಸರಿಯಾದ ಆರೋಗ್ಯ ಕಾಳಜಿ ತೆಗೆದುಕೊಳ್ಳುವ ಕ್ಯಾನ್ಸರ್ ರೋಗಿಗಳಲ್ಲಿ ಕೇವಲ ಆರೋಗ್ಯ ಕಾಳಜಿ ವಹಿಸುವ ರೋಗಿಗಳಿಗಿಂತ ಕಡಿಮೆ ಆತಂಕವಿರುವುದನ್ನು ಅಧ್ಯಯನಗಳು ಕಂಡುಕೊಂಡಿವೆ.

- ನೆನಪಿನ ಶಕ್ತಿ ವೃದ್ಧಿ
ಪದೇ ಪದೆ ಒಂದೇ ರಿದಂ ಹಾಗೂ ರಾಗ ಕೇಳುವುದರಿಂದ ಮೆದುಳಿನಲ್ಲಿ ನೆನಪಿನ ಶಕ್ತಿ ವೃದ್ಧಿಸುವಂತ ವಿನ್ಯಾಸ ರಚನೆಯಾಗುತ್ತದೆ. ಸ್ಟ್ರೋಕ್ ಪೇಶೆಂಟ್‌ಗಳ ಕುರಿತ ಅಧ್ಯಯನದಲ್ಲಿ, ಸಂಗೀತವು ಅವರ ಮಾತಿನ ನೆನಪು ಹೆಚ್ಚಿಸಿ, ಗೊಂದಲ ಕಡಿಮೆಗೊಳಿಸಿ, ಹೆಚ್ಚು ಗಮನ ನೀಡುವ ಸಾಮರ್ಥ್ಯ ನೀಡಿದ್ದು ಸಾಬೀತಾಗಿದೆ. 

- ನೋವು ನಿವಾರಕ
ಶಸ್ತ್ರಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳು ಚಿಕಿತ್ಸೆಗೂ ಮುನ್ನ, ಚಿಕಿತ್ಸಾ ಸಮಯ ಹಾಗೂ ತದನಂತರದಲ್ಲಿ ಸಂಗೀತ ಕೇಳುತ್ತಿದ್ದರೆ ಅವರಲ್ಲಿ ನೋವು ಸಂಗೀತ ಕೇಳದವರಿಗಿಂತ ಕಡಿಮೆ ಇದ್ದಿದ್ದನ್ನು ಸಂಶೋಧಕರು ಸಾಬೀತುಪಡಿಸಿದ್ದಾರೆ. 

- ಪುಟ್ಟ ಮಗುವನ್ನು ಸಮಾಧಾನಿಸುತ್ತದೆ
ಲಾಲಿ ಹಾಡು ಕೇಳುತ್ತಾ ಮಲಗುವ ಮಕ್ಕಳು ಬೇಗ ಸಮಾಧಾನವಾಗುತ್ತಾರೆ. ಅಲ್ಲದೆ, ಅವರ ಹಾಲು ಕುಡಿವ ವಿನ್ಯಾಸ, ಗಮನ ನೀಡುವ ಕಲೆ ಎಲ್ಲವೂ ಉತ್ತಮಗೊಳ್ಳುತ್ತವೆ. 

ಖಿನ್ನತೆಗೂ ಮದ್ದು ಮ್ಯೂಸಿಕ್

- ಮೂಡ್ ಬೂಸ್ಟರ್
ಹಾಡಿಗೆ ಮೂಡ್ ಬದಲಿಸುವ ಶಕ್ತಿ ಇರುವುದು ನಮಗೆಲ್ಲ ಅನುಭವದಿಂದಲೇ ತಿಳಿದಿದೆ. ಸಂತೋಷದ ಭಾವಪೂರ್ಣ ಹಾಡುಗಳನ್ನು ಮತ್ತೆ ಮತ್ತೆ ಕೇಳುವುದರಿಂದ ಮನ ಮುದಗೊಂಡರೆ, ಎನರ್ಜಿ ಇರುವ ಹಾಡುಗಳು ನಮ್ಮಲ್ಲಿ ಹೊಸ ಎನರ್ಜಿ ಪ್ರವಹಿಸುತ್ತವೆ. ಕುಳಿತವರನ್ನು ಹುಚ್ಚೆಬ್ಬಿಸಿ ಕುಣಿಸುತ್ತವೆ. 

- ನಿದ್ರೆ
ನಿದ್ರಾಹೀನತೆಯಿಂದ ನರಳುವವರು ಮಾತ್ರೆ ಬದಲಾಗಿ ಸಂಗೀತ ಕೇಳುವುದು ಉತ್ತಮ. ಸಂಗೀತಕ್ಕೆ ದೈನಂದಿನ ಜಂಜಡದಲ್ಲಿ ಆತ್ಮಕ್ಕಂಟುವ ಧೂಳುಗಳನ್ನು ನಿವಾರಿಸುವ ಶಕ್ತಿ ಇದ್ದು, 45 ನಿಮಿಷಗಳ ಕಾಲ ರಿಲ್ಯಾಕ್ಸಿಂಗ್ ಸಂಗೀತ ಕೇಳಿದರೆ ನಿದ್ದೆ ಒದ್ದುಕೊಂಡು ಬರುತ್ತದೆ. 

ಲಾಠಿಯನ್ನೇ ಕೊಳಲು ಮಾಡಿಕೊಂಡು ಪೊಲೀಸ್

click me!