
ಸಾರ್ವಜನಿಕ ಶೌಚಾಲಯಗಳು ಲಕ್ಷಾಂತರ ಬ್ಯಾಕ್ಟೀರಿಯಾಗಳಿಗೆ ಸ್ವರ್ಗ. ಮನುಷ್ಯರಿಗೆ ನರಕ. ಈ ಕೊಟ್ಟಾ ಕೊಳಕು ಶೌಚಾಲಯಗಳನ್ನು ಬಳಸಿದರೆ ಗಟ್ ಇನ್ಫೆಕ್ಷನ್, ಮೂತ್ರನಾಳದ ಸೋಂಕು, ವೈರಲ್ ಇನ್ಫೆಕ್ಷನ್, ಚರ್ಮದ ಸೋಂಕು ಸುಲಭವಾಗಿ ಹರಡುತ್ತವೆ. ಇದರಿಂದ ವಾಂತಿ, ಬೇಧಿ, ತುರಿಕೆ, ಜ್ವರ, ಮೂತ್ರನಾಳದಲ್ಲಿ ಉರಿ, ಊತ ಮುಂತಾದ ಕಾಯಿಲೆಗಳಿಂದ ನರಳಬೇಕಾದೀತು. ಹೀಗಾಗಿ, ಆದಷ್ಟು ಸಾರ್ವಜನಿಕ ಶೌಚಾಲಯ ಬಳಸುವ ಅನಿವಾರ್ಯತೆ ಒದಗಿದಾಗ ಒಂದಿಷ್ಟು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
1. ಬಾಗಿಲುಗಳ ಹ್ಯಾಂಡಲ್ ಮುಟ್ಟಬೇಡಿ
ಪಬ್ಲಿಕ್ ಟಾಯ್ಲೆಟ್‌ನ ಸೇಫ್ ಬಳಕೆಯ ಮುಖ್ಯ ನಿಯಮವೆಂದರೆ ಗೋಡೆ, ಬಾಗಿಲು ಸೇರಿದಂತೆ ಒಳಗಿನ ಯಾವ ವಸ್ತುಗಳನ್ನೂ ಮುಟ್ಟದಿರುವುದು. ಅವುಗಳಲ್ಲಿ ಮೊದಲನೆಯದು ಬಾಗಿಲಿನ ಹಿಡಿ. ಹೌದು, ಟಾಯ್ಲೆಟ್ ಬಳಸಿ ಬಂದವರೆಲ್ಲ ಮುಟ್ಟಿ ಮುಟ್ಟಿ ಡೋರ್ ನಾಬ್‌ಗಳು ಗಬ್ಬೆದ್ದು ಕ್ರಿಮಿಗಳಿಂದ ತುಂಬಿರುತ್ತವೆ. ಹೀಗಾಗಿ, ಅವನ್ನು ನೇರವಾಗಿ ಮುಟ್ಟಬೇಡಿ. ಟಿಶ್ಯೂ ಪೇಪರ್ ಬಳಸಿ ಬಾಗಿಲು ತೆರೆಯಿರಿ.
ಬ್ರೆಸ್ಟ್ ಚೆಕ್ ಮಾಡ್ಕೊಳ್ಳಿ: ಕ್ಯಾನ್ಸರ್ ಬಾರದಂತೆ ನೋಡ್ಕೊಳ್ಳಿ!
2. ಸೀಟ್ ಮೇಲೆ ಕೂರಲು ಟಾಯ್ಲೆಟ್ ಪೇಪರ್ ಬಳಸಿ
ಟಾಯ್ಲೆಟ್ ಸೀಟ್‌ಗಳ ಮೇಲೆ ಮತ್ತೊಬ್ಬರ ಶೌಚದ ಪಳೆಯುಳಿಕೆಗಳು ಕಂಡೂ ಕಾಣದಂತೆ ಕೂತಿರುತ್ತವೆ. ಹೀಗಾಗಿ, ಮೊದಲು ಟಿಶ್ಯೂ ಒಂದರಿಂದ ಸೀಟನ್ನು ಒರೆಸಿ, ನಂತರ ಸುತ್ತಲೂ ಟಾಯ್ಲೆಟ್ ಪೇಪರ್ ಹಾಕಿಕೊಂಡು ಅದರ ಮೇಲೆ ಕುಳಿತುಕೊಳ್ಳಿ. ಇಲ್ಲವೇ ಸ್ಪ್ರೆೇ ಸ್ಯಾನಿಟೈಸರ್‌ಗಳನ್ನು ಕೊಂಡೊಯ್ದರೆ ಸೀಟ್ ಮೇಲೆ ಸ್ಪ್ರೇ ಮಾಡಿ, ಒರೆಸಿ ಬಳಸಬಹುದು. ಇದರಿಂದ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇಲ್ಲವೇ ಟಾಯ್ಲೆಟ್ ಸೀಟ್ ಕವರ್‌ಗಳನ್ನು ಎಲ್ಲೆಡೆ ಕೊಂಡೊಯ್ಯುವ ಅಭ್ಯಾಸ ಇಟ್ಟುಕೊಳ್ಳಿ.
3. ಫ್ಲಶ್ ಮಾಡಿ, ಆದರೆ ಫ್ಲಶ್ ಬಟನ್ ನೇರ ಸ್ಪರ್ಶ ಬೇಡ
ಟಾಯ್ಲೆಟ್ ಬಳಕೆಯ ಬಳಿಕ ಕಡ್ಡಾಯವಾಗಿ ಫ್ಲಶ್ ಮಾಡಿ. ಆದರೆ ಫ್ಲಶ್ ಬಟನ್ ಮುಟ್ಟಬೇಡಿ. ಅವೂ ಕೂಡಾ ಕೀಟಾಣುಗಳ ಆವಾಸಸ್ಥಾನ. ಟಿಶ್ಯೂ ಹಿಡಿದುಕೊಂಡೇ ಫ್ಲಶ್ ಮಾಡಬಹುದು. ಅದರಲ್ಲೇ ಬಾಗಿಲನ್ನು ತೆರೆದು, ಟಾಯ್ಲೆಟ್ ಪೇಪರನ್ನು ಫ್ಲಶ್‌ಗೆ ಇಲ್ಲವೇ ಡಸ್ಟ್‌ಬಿನ್‌ಗೆ ಹಾಕಿ. ಆದಷ್ಟು ಬೇಗ ಹೊರ ದಾಟಿಕೊಳ್ಳಿ. ಏಕೆಂದರೆ ಫ್ಲಶ್ ಮಾಡಿದಾಗ ಗಾಳಿಯಲ್ಲಿ ಜೆರ್ಮ್ಸ್ ಹರಡಬಹುದು.
4. ಕೈ ತೊಳೆದುಕೊಳ್ಳಿ
ಇಷ್ಟೆಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು ಎಲ್ಲಿಯೂ ನೇರವಾಗಿ ಮುಟ್ಟದೆ ಟಾಯ್ಲೆಟ್ ಬಳಸಿದಿರಾದರೂ ಒಮ್ಮೆ ಹ್ಯಾಂಡ್‌ವಾಷ್ ಬಳಸಿ 20 ಸೆಕೆಂಡ್‌ಗಳ ಕಾಲ ಚೆನ್ನಾಗಿ ಕೈ ತೊಳೆದುಕೊಳ್ಳಿ. ಡ್ರೈಯರ್ ಅಥವಾ ಪೇಪರ್ ಟವೆಲ್ ಬಳಸಿ ಕೈ ಡ್ರೈ ಮಾಡಿಕೊಂಡ ಬಳಿಕವಷ್ಟೇ ಹೊರ ನಡೆಯಿರಿ.
ಸನ್‌ಸ್ಕ್ರೀನ್ ಕಂಪನಿಗಳು ಹೆದರಿಸುವಷ್ಟು ಸೂರ್ಯರಶ್ಮಿ ಕೆಟ್ಟದ್ದೇ?
5. ಇಂಡಿಯನ್ ಸ್ಟೈಲ್ ಟಾಯ್ಲೆಟ್ ಬಳಸಿ
ಇಷ್ಟೆಲ್ಲ ಒದ್ದಾಟವೇ ಬೇಡ ಎಂದರೆ ಸಾಧ್ಯವಾದಲ್ಲೆಲ್ಲ ಭಾರತೀಯ ಶೈಲಿಯ ಟಾಯ್ಲೆಟ್ ಬಳಸಿ. ಅಲ್ಲಿ ಕೂಡಾ ಬಕೆಟ್, ನಲ್ಲಿ ಮುಟ್ಟುವಾಗ ಮೇಲಿನದೇ ಎಚ್ಚರ ವಹಿಸಬೇಕು.
6. ನಿಮ್ಮ ಬ್ಯಾಗ್‌ನ್ನು ಜರ್ಮ್ಸ್‌ನಿಂದ ರಕ್ಷಿಸಿ
ಪಬ್ಲಿಕ್ ಟಾಯ್ಲೆಟ್ ಬಳಸುವಾಗ ನಿಮ್ಮ ಫೋನ್ ಅಥವಾ ಬ್ಯಾಗನ್ನು ಅಲ್ಲಿಯೇ ಮೇಲಿಡುವ ಕೆಲಸ ಬೇಡವೇ ಬೇಡ. ಇದರಿಂದ ಟಾಯ್ಲೆಟ್ನಲ್ಲಿರುವ ಕೀಟಾಣುಗಳು ನಿಮ್ಮ ಫೋನ್ ಹಾಗೂ ಬ್ಯಾಗಿಗಂಟಿಕೊಳ್ಳುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.