ಔತ್ತಮ್ಯದ ಗೀಳಿನಲ್ಲಿ

By Kannadaprabha NewsFirst Published Oct 15, 2023, 3:42 PM IST
Highlights

ಅತ್ಯಂತ ಸರಳವಾದ ಅಡುಗೆ ತಿಳಿಸಾರು. ಅಂತಹ ತಿಳಿಸಾರನ್ನು ಮಾಡುವಾಗ ಹದ, ಔತ್ತಮ್ಯ, ಎಲ್ಲಿ ಸಿದ್ಧಿಸುತ್ತದೆ ಅಂತ ಧ್ಯಾನಿಸುತ್ತಾ, ‘ನೋಡಿ ಎಲ್ಲಾ ಮಾಡಿ ಮುಗಿಸಿದ ನಂತರ ಹಾಗೇ ಒಂದು ಚಿಟಿಕಿ ಇಂಗು ಹಾಕುತ್ತಾರಲ್ಲಾ ಸಾರಿಗೆ, ಆಹಾ! ಅದೆಷ್ಟು ದಿವ್ಯವಾಗಿರುತ್ತದೆ!’ ಎಂದರು.

- ಶೈಲಜ ಮತ್ತು ವೇಣುಗೋಪಾಲ್

ತನ್ನ ಬದುಕಿನ ಒಂದು ಹಂತದಲ್ಲಿ ಸರೋದ್‌ ವಾದನನ ಜೊತೆಗೆ ಬೆರೆತುಹೋದವರು ಪಂ.ರಾಜೀವ್‌ ತಾರಾನಾಥ್‌. ಸರೋದ್‌ ಜೊತೆಗಿನ ಅವರ ಸಂಬಂಧ, ಅನುಬಂಧವನ್ನಿಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಸರೋದ್ ಕಂಡರೇ ಆಗದಿದ್ದ, ಅದೊಂದು ಕರ್ಕಶ ವಾದ್ಯ ಎಂದು ನಿರ್ಧರಿಸಿದ್ದ ರಾಜೀವ್ ತಾರಾನಾಥರು ಸರೋದ್‌ಗೆ ಅಂಟಿಕೊಂಡಿದ್ದು ಆಕಸ್ಮಿಕ. ಪಂಡಿತ್ ರವಿಶಂಕರ್ ಸಿತಾರ್ ಕೇಳಲು ಹೋಗಿದ್ದ ಅವರಿಗೆ ಜೊತೆಯಲ್ಲಿ ನುಡಿಸುತ್ತಿದ್ದ ಅಲಿ ಅಕ್ಬರ್‌ ಖಾನ್ ಅವರ ಸರೋದನ್ನು ಕೇಳಿಸಿಕೊಳ್ಳುವುದು ಅನಿವಾರ್ಯವಾಯಿತು. ಸಿತಾರಿಗೇ ಗಮನ ಕೊಡಬೇಕು ಅಂತ ಅಂದುಕೊಂಡಿದ್ದರೂ ಖಾನ್ ಸಾಹೇಬರ ಆಕಾಶದಲ್ಲಿ ಸಂಚರಿಸುತ್ತಿದ್ದ ಸರೋದ್ ನಾದ ಪರವಶಗೊಳಿಸಿಬಿಟ್ಟಿತು. ಅವರೇ ಹೇಳುವಂತೆ ‘The music itself was towering’. ಸಂಗೀತ ನಿಂತ ಕೂಡಲೇ ಉಳಿದದ್ದೆಲ್ಲ ಬರೀ ಭ್ರಮೆ, ಉಸ್ತಾದ್ ಅಲಿ ಅಕ್ಬರ್‌ ಖಾನ್ ಅವರ ಸಂಗೀತ ಮಾತ್ರ ಸತ್ಯ ಎನಿಸಿಬಿಟ್ಟಿತು. ಆ ಕ್ಷಣದಿಂದ ಆ ಬೋಳು ಮಂಡೆ ಬುದ್ಧನಂತೆ ಕಾಣುತ್ತಿದ್ದ ಅಲಿ ಅಕ್ಬರ್ ಖಾನ್ ಅವರಿಂದ ಸರೋದ್ ಕಲಿಯುವ ಹಾಗೂ ಅವರ ಟವರಿಂಗ್ ಮ್ಯೂಸಿಕ್‌ಅನ್ನು ತಾವೂ ಸಾಧಿಸಬೇಕೆಂಬ ಗೀಳು ಅಂಟಿಕೊಂಡಿತು.

ನಾವು ರಾಗಮಾಲಕ್ಕಾಗಿ ಅವರ ಸಂಗೀತಾತ್ಮಕ ಚಿಂತನೆಗಳ ಬಗ್ಗೆ ಬರೆಯಬೇಕೆಂದು ಅವರನ್ನು ಹೋಗಿ ಕಂಡಾಗಲೂ ಅವರು ಹೇಳಿದ್ದು ಇದನ್ನೇ. ‘ಏನ್ರಿ ಇದು, ಸಂಗೀತದ ಬಗ್ಗೆ, ಸಂಗೀತ ಕುರಿತು ಅಂತ? ಸಂಗೀತದಲ್ಲಿ ಕುರಿತು, ಬಗ್ಗೆ ಇಲ್ಲ ಕಣ್ರೀ. ಸಂಗೀತ ಇದೆ. ಹಾಡ್ಬೇಕು ಇಲ್ಲ ಬಾರಿಸ್ಬೇಕು. ಔತ್ತಮ್ಯದ ಬೆನ್ನು ಹತ್ತಬೇಕ್ರಿ’ ಅಂತದ್ರು.

ಕೆವಿ ತಿರುಮಲೇಶ್; ಹೊರನಾಡಿನ ಪರಮ ಕವಿ

ಔತ್ತಮ್ಯ ಅನ್ನೋ ಪದ ಅವರ ಬಾಯಲ್ಲಿ ನುಡಿದ ಸೊಗಸಿಗೆ, ಅದು ಸ್ಫುರಿಸಿದ ಅರ್ಥಕ್ಕೆ ನಮಗೆ ರೋಮಾಂಚನವಾಗಿಬಿಟ್ಟಿತು. ‘ಔ’ಗೆ ಅವರು ನೀಡಿದ ದೀರ್ಘ, ‘ತ್ತ’ಗೆ ಅವರು ನೀಡಿದ ಎಕ್ಸ್‌ಟ್ರಾ ಒತ್ತು ಆ ಪದಕ್ಕೆ ಘನತೆಯನ್ನೂ, ಅಸಾಧಾರಣ ತೂಕವನ್ನು ನೀಡಿತ್ತು. ಇಂಗ್ಲಿಷಿನ ಎಕ್ಸಲೆನ್ಸ್‌ಗೆ ಆ ಪದವನ್ನು ಬೇರಾರೂ ಬಳಸಿದ್ದನ್ನು ಕೊನೇ ಪಕ್ಷ ನಾವು ಕೇಳಿರಲಿಲ್ಲ. ಈ ಔತ್ತಮ್ಯದ ಹುಡಕಾಟದ ಹಾದಿ ಮುಂದೆ ಅವರ ಮಾತಿನಲ್ಲಿ ಬಿಚ್ಚಿಕೊಳ್ಳುತ್ತಾ ಹೋಯಿತು. ಔತ್ತಮ್ಯದ ಗೀಳಿನಲ್ಲಿ ಹೊರಟಾಗ ದೊರಕಿದ ಅಪೂರ್ವವಾದ ಗುರುಗಳು ‘ನೀನ್ಯಾಕೆ ಈಗ ಸಂಗೀತ ಕಲಿಯುತ್ತೀಯಾ? ನಿನಗೆ ಎಷ್ಟೊಂದು ಅವಕಾಶವಿದೆ. ಜೊತೆಗೆ ನೀನು ಬೆಳೆದಿದ್ದೀಯ. ಶೈಕ್ಷಣಿಕವಾಗಿ ತುಂಬಾ ಮುಂದಿದ್ದೀಯ. ನೀನು ಒಳ್ಳೆಯ ಅಧಿಕಾರಿಯಾಗಬಹುದು. ಪ್ರೊಫೆಸರ್ ಆಗಬಹುದು. ಏನೇನೋ ಆಗಬಹುದು’ ಅಂತ ಕೇಳಿದಾಗ ತಾರಾನಾಥರು ಆ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟುಬಿಟ್ಟರು. ಸಾಹಿತ್ಯಲೋಕದಲ್ಲಿ ವಿಮರ್ಶೆಯ ಚಕ್ರವರ್ತಿಯಾಗಿ ಮೆರೆಯುತ್ತಿದ್ದಾಗ, ‘You must have a critical sensibility’ ಎನ್ನುವ ಮಾತೇ ರಾಜೀವ ತಾರಾನಾಥರಾಗಿದ್ದಾಗ, ಸಂಗೀತದಲ್ಲಿ ಔತ್ತಮ್ಯ ಸಾಧ್ಯವಾಗುವುದು ‘ಗುರುವಿನ ಗುಲಾಮನಾದಾಗ ಮಾತ್ರ’ ಎಂದು ತೀವ್ರವಾಗಿ ಅನ್ನಿಸಿ. ತಮ್ಮ ಕಂಫರ್ಟ್ ಜೋನ್, ಅಪಾರ ಖ್ಯಾತಿ, ಸ್ಥಾನಮಾನಗಳು ಏನೂ ಅಲ್ಲವೆಂಬ ನಿರ್ಲಿಪ್ತತೆಯಿಂದ ಅವುಗಳನ್ನು ತೊರೆದು, ಹಿಂತಿರುಗಿ ನೋಡದೆ ನಡೆದುಬಿಟ್ಟರು.

ಔತ್ತಮ್ಯದ ಹಾದಿಯಲ್ಲಿ ಕೈಹಿಡಿದು ನಡೆಸಿ ಮಾರ್ಗದರ್ಶನ ಮಾಡುವುದು ಸಾಧನೆ ಮತ್ತು ಸಾಧನೆಯ ಹಂಬಲ. ಸಾಧನೆಯ ಮೂಲಕ ಏನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು? ‘ನನ್ನ ತಲೆಯಲ್ಲಿ ಬಂದು ಹೋಗುವ ಎಲ್ಲಾ ಆಲೋಚನೆಗಳು ಕೈಯಲ್ಲಿ ಬರೋದಕ್ಕೆ ಸಾಧ್ಯ ಆಗಬೇಕು. ನನ್ನ ಮನಸ್ಸಿನ ಕಲ್ಪನೆಗಳು ಬೆರಳಿಗೆ ಬಂದು, ಬೆರಳುಗಳೇ ನನ್ನ ಕಲ್ಪನೆಗಳಾಗಿಬಿಡಬೇಕು. ಆಶ್ಚರ್ಯವೆಂದರೆ ನೀವು ಹೆಚ್ಚೆಚ್ಚು ಸಾಧಿಸಿದಷ್ಟು ನಿಮ್ಮ ಕಲ್ಪನೆಗಳು ಹೆಚ್ಚೆಚ್ಚು ಗರಿಗೆದರಿಕೊಂಡು ಬೆಳೆಯುತ್ತಾ ಹೋಗುತ್ತವೆ! ಏಕೆಂದರೆ ನಮ್ಮ ಕಲ್ಪನೆಗಳು ಯಾವಾಗಲೂ ನಮಗಿರುವ ನುಡಿಸುವ ಅಥವಾ ಹಾಡುವ ಸಾಮರ್ಥ್ಯಕ್ಕೆ ಸೀಮಿತಗೊಂಡಿರುತ್ತವೆ. ಇದಕ್ಕಾಗಿಯೇ ನಾವು ಅಭ್ಯಾಸ ಮಾಡುವುದು, ಸಾಧನೆ ಮಾಡುವುದು. ನೀವು ಹೆಚ್ಚೆಚ್ಚು ಕಲಿತು, ಸಾಧನೆ ಮಾಡಿದಂತೆಲ್ಲಾ ನಿಮ್ಮ ಬೆರಳುಗಳು ಹೆಚ್ಚೆಚ್ಚು ಕೌಶಲವನ್ನು, ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ. ಬೆರಳುಗಳ ಸಾಧ್ಯತೆಗಳೂ ಹೆಚ್ಚುತ್ತಾ ಹೋಗುತ್ತವೆ. ನಮ್ಮ ಸಾಮರ್ಥ್ಯ ಹೆಚ್ಚಾದಂತೆ, ನಮ್ಮ ಕಲ್ಪನೆಗಳೂ ಬೆಳೆಯುತ್ತವೆ. ನೀವು ಔತ್ತಮ್ಯದ ಕಡೆಗೆ ಹೋದಷ್ಟೂ ನಿಮಗೆ ಹೆಚ್ಚೆಚ್ಚು ಕಾಣಿಸಲು ಶುರುವಾಗುತ್ತದೆ. ನೀವು ಹೆಚ್ಚು ಮೇಲೆ ಹೋದಷ್ಟೂ ನಿಮಗೆ ಹೆಚ್ಚು ಕಾಣುತ್ತದೆ. ಒಂದು ಇನ್ನೊಂದನ್ನು ಹೆಚ್ಚಿಸುತ್ತಾ ಹೋಗುತ್ತದೆ. ಮೇಲೆ ಹೋದಷ್ಟೂ ನಿಮಗೆ ಇನ್ನಷ್ಟನ್ನು ಕಾಣುವ ತವಕ ಉಂಟಾಗುತ್ತದೆ. ಇದಕ್ಕೆ ಕೊನೆಯೇ ಇಲ್ಲ. ಈ ಕ್ರಿಯೆಯೇ ತುಂಬು ತೃಪ್ತಿಯನ್ನು, ಒಂದು ಪೂರ್ಣತೆಯ ಭಾವವನ್ನು ತಂದುಕೊಡುವಂತಹುದು. ಹಾಗಾಗಿ ನಾವೆಲ್ಲಾ ಹಾತೊರೆಯುವುದು ಈ ಔತ್ತಮ್ಯಕ್ಕಾಗಿಯೇ. ನಮ್ಮ ಇಡೀ ಪಯಣವೇ ಈ ಔತ್ತಮ್ಯದೆಡೆಗೆ.’

ಕೃತಕ ಬರಹಗಾರ; ಕಂಪ್ಯೂಟರ್‌ ಕೈ ಬರೆಯುತ್ತದೆ

ಎಲ್ಲರೂ ಭಾವಿಸಿರುವಂತೆ ಕಲಾವಿದನೊಬ್ಬ ಕಚೇರಿಯನ್ನು ಯಶಸ್ವಿಯಾಗಿ ನುಡಿಸುವುದೇ ಔತ್ತಮ್ಯವಲ್ಲ. ‘ಒಂದು ಕಛೇರಿಯಲ್ಲಿ ನುಡಿಸುವಾಗ ಸಿಗುವ ತೃಪ್ತಿಗಿಂತ, ನಮ್ಮಷ್ಟಕ್ಕೇ ನುಡಿಸಿಕೊಳ್ಳುವಾಗ ನಮಗೆ ಹೆಚ್ಚೆಚ್ಚು ತೃಪ್ತಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಅದು ನಿಜವಾಗಿ ಔತ್ತಮ್ಯದ ಹಾದಿಯಲ್ಲಿ ಬಹು ಮುಖ್ಯವಾದ ಹೆಜ್ಜೆ. ನಾವು ಪಡೆದುಕೊಳ್ಳುವ ಪರಿಣತಿಯಿಂದ ನಮಗೆ ಇನ್ನೂ ಹೆಚ್ಚು ಗಂಭೀರವಾದ, ಗಟ್ಟಿಯಾದ ಸಂಗೀತವನ್ನು ಸೃಷ್ಟಿಸುವ ಸಾಮರ್ಥ್ಯ ಬರುತ್ತದೆ. ಒಂದು ಕಲೆಯನ್ನು, ಸಂಗೀತವನ್ನು ತುಂಬಾ ಗಂಭೀರವಾಗಿ ಒಂದು ಶಿಸ್ತು ಎಂದು ಪರಿಗಣಿಸಿದಾಗ ಅದು ನಿಮ್ಮ ಬದುಕೇ ಆಗಿಬಿಡುತ್ತದೆ. ಅದರಲ್ಲಿ ನೀವು ಪೂರ್ಣಪ್ರಮಾಣದ ತೃಪ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ. ಪರಿಣತಿಯ ಕ್ಷೇತ್ರ ಯಾವುದೇ ಆಗಿರಬಹುದು, ಆದರೆ ಗಂಭೀರವಾಗಿ ತೊಡಗಿಕೊಳ್ಳುವ ಪ್ರಕ್ರಿಯೆ ಮಾತ್ರ ಒಂದೇ ರೀತಿಯದು. ನೀವು ಅದರಲ್ಲೇ ಮುಳುಗಿಹೋಗಬೇಕು ಅಲಿ ಅಕ್ಬರ್‌ ಖಾನ್ ಸಾಹೇಬರಂತೆ.

ಸಂಗೀತದಲ್ಲಿ ಮಾತ್ರವಲ್ಲ, ರಾಜೀವ ತಾರಾನಾಥರ ಇಡೀ ಬದುಕು ಔತ್ತಮ್ಯದ ಹುಡುಕಾಟವಾಗಿತ್ತು. ಅದು ತಿರುಚಿನಾಪಳ್ಳಿಯಲ್ಲಿ ಪ್ರಯೋಗ ಮಾಡಿದ ಕೋಳಿಸಾಕಣೆ ಇರಬಹುದು ಅಥವಾ ಸಾಹಿತ್ಯದ ಅಧ್ಯಾಪನ ಇಲ್ಲವೇ ಸಂಗೀತದ ಅಧ್ಯಾಪನ ಇರಬಹುದು, ಕೊನೆಗೆ ಅಡುಗೆ ಮಾಡುವುದು ಇರಬಹುದು ಹೀಗೆ ಔತ್ತಮ್ಯದ ಹುಡುಕಾಟ ಎಲ್ಲದರಲ್ಲೂ ಇತ್ತು. ಅತ್ಯಂತ ಸರಳವಾದ ಅಡುಗೆ ತಿಳಿಸಾರು. ಅಂತಹ ತಿಳಿಸಾರನ್ನು ಮಾಡುವಾಗ ಹದ, ಔತ್ತಮ್ಯ, ಎಲ್ಲಿ ಸಿದ್ಧಿಸುತ್ತದೆ ಅಂತ ಧ್ಯಾನಿಸುತ್ತಾ, ‘ನೋಡಿ ಎಲ್ಲಾ ಮಾಡಿ ಮುಗಿಸಿದ ನಂತರ ಹಾಗೇ ಒಂದು ಚಿಟಿಕಿ ಇಂಗು ಹಾಕುತ್ತಾರಲ್ಲಾ ಸಾರಿಗೆ, ಆಹಾ! ಅದೆಷ್ಟು ದಿವ್ಯವಾಗಿರುತ್ತದೆ!’ ಎಂದರು.

click me!