ಇತ್ತೀಚಿನ ದಿನಗಳಲ್ಲಿ ಹಸಿರು ಮೆಣಸಿನಕಾಯಿಯ ಬೆಲೆ ಎಷ್ಟಿದೆ ಎಂದರೆ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಕೆಲವು ರಾಜ್ಯಗಳಲ್ಲಿಯಂತೂ ಮೆಣಸಿನಕಾಯಿಯನ್ನು ಕೆಜಿಗೆ 180 ರಿಂದ 200 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮಾರ್ಕೆಟ್‌ಗೆ ಹೋದರೆ 10 ರೂ.ಗೆ ಕೇವಲ 4 ಅಥವಾ 5 ಮೆಣಸಿನಕಾಯಿಗಳು ಮಾತ್ರ ಲಭ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಪ್ರತಿಯೊಬ್ಬ ಗೃಹಿಣಿಯೂ ಈಗ ಮೆಣಸಿನಕಾಯಿ ತಿನ್ನೋದನ್ನೇ ನಿಲ್ಲಿಸಬೇಕೇ? ಎಂದು ಯೋಚಿಸುವಂತಾಗಿದೆ.
ಆದ್ರೆ ಹೀಗೆಲ್ಲಾ ಯೋಚಿಸುವ ಬದಲು ನೀವೇ ಮೆಣಸಿನಕಾಯಿ ಬೆಳೆದರೆ...ಹೌದು, ಇಂದು ನಾವು ನಿಮಗೆ ಅಗ್ಗ ಮತ್ತು ಪರಿಣಾಮಕಾರಿ ಉಪಾಯ ಹೇಳ್ತೇವೆ. ಅದರ ಮೂಲಕ ನೀವು ನಿಮ್ಮ ಮನೆಯ ಟೆರೇಸ್ ಅಥವಾ ಬಾಲ್ಕನಿಯಲ್ಲಿರುವ ಕುಂಡದಲ್ಲಿ ಹಸಿರು ಮೆಣಸಿನಕಾಯಿ ಗಿಡವನ್ನು ಬೆಳೆಸಬಹುದು. ಅದು ಕೂಡ ಯಾವುದೇ ದುಬಾರಿ ವೆಚ್ಚವಿಲ್ಲದೆ. ವಿಶೇಷವೆಂದರೆ ನೀವು ಕೇವಲ ಎರಡು ಪದಾರ್ಥ ಮಾತ್ರ ಬಳಸಬೇಕಾಗುತ್ತದೆ. ಅಂದಹಾಗೆ ಅದು ನಿಮಗೆ ಮನೆಯಲ್ಲೇ ಸುಲಭವಾಗಿ ಲಭ್ಯವಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಅನಿಯಮಿತ ಮಳೆ, ಬೆಳೆ ಹಾನಿ ಮತ್ತು ಡೀಸೆಲ್ ಮತ್ತು ರಸಗೊಬ್ಬರ ಬೆಲೆಗಳ ಹೆಚ್ಚಳದಿಂದಾಗಿ ಹಸಿರು ಮೆಣಸಿನಕಾಯಿ ಉತ್ಪಾದನೆ ಕಡಿಮೆಯಾಗಿದೆ. ಆದರೆ ಬೇಡಿಕೆ ಸ್ಥಿರವಾಗಿದೆ. ಇದೇ ಮೆಣಸಿನಕಾಯಿಯ ಬೆಲೆ ಗಗನಕ್ಕೇರಲು ಕಾರಣ. ಅದೆಲ್ಲಾ ಬಿಡಿ, ಈಗ ಮನೆಯಲ್ಲಿ ಪಾಟ್‌ನಲ್ಲಿ ಮೆಣಸಿನಕಾಯಿಯನ್ನು ಹೇಗೆ ಬೆಳೆಸುವುದು ಎಂದು ತಿಳಿಯೋಣ...
ಬೇಕಾಗುವ ಸಾಮಗ್ರಿಗಳು:
1. ಮಧ್ಯಮ ಗಾತ್ರದ ಮಡಕೆ ಅಥವಾ ಬಕೆಟ್ (ರಂಧ್ರಗಳೊಂದಿಗೆ)
2. ಸ್ವಲ್ಪ ಉತ್ತಮ ಮಣ್ಣು (ಮೇಲಾಗಿ ತೋಟದ ಮಣ್ಣು)
3. ಮನೆಯಲ್ಲಿ ತಯಾರಿಸಿದ ಮೆಣಸಿನಕಾಯಿ ಬೀಜಗಳು (ಒಣ ಅಥವಾ ತಾಜಾ ಮೆಣಸಿನಕಾಯಿಯ ಒಳಗಿನಿಂದ ತೆಗೆಯಬಹುದು)
4. ಎರಡು ಪ್ರಮುಖ ಪದಾರ್ಥಗಳು- ಮಜ್ಜಿಗೆ ನೀರು ಮತ್ತು ಬೂದಿ
ಹಂತ ಹಂತವಾಗಿ ಬೆಳೆಯುವುದು ಹೇಗೆ?
1.ಬೀಜಗಳನ್ನು ತಯಾರಿಸಿ
ಮನೆಯಲ್ಲಿ ಉಳಿದಿರುವ ಹಸಿರು ಮೆಣಸಿನಕಾಯಿಗಳನ್ನು ಎರಡು ದಿನಗಳವರೆಗೆ ಒಣಗಿಸಿ ಮತ್ತು ಅವುಗಳ ಬೀಜಗಳನ್ನು ಹೊರತೆಗೆಯಿರಿ. ಬೀಜಗಳನ್ನು ಒಂದು ದಿನ ನೀರಿನಲ್ಲಿ ನೆನೆಸಿ, ಇದರಿಂದ ಮೊಳಕೆಯೊಡೆಯುವಿಕೆ ವೇಗವಾಗಿರುತ್ತದೆ.
2.ಸ್ವಲ್ಪ ಬೂದಿ ಹಾಕಿ
ಪಾಟ್ ಕೆಳಭಾಗದಲ್ಲಿ ಸ್ವಲ್ಪ ಬೂದಿಯನ್ನು ಹಾಕಿ. ಬೂದಿ ಮಣ್ಣನ್ನು ಮೃದುಗೊಳಿಸುತ್ತದೆ ಮತ್ತು ಎಲೆಗಳು ಸುಡದಂತೆ ರಕ್ಷಿಸುತ್ತದೆ.
3.ಮಣ್ಣು ಸೇರಿಸಿ
ಈಗ ಪಾಟ್ ಅನ್ನು ಮಣ್ಣಿನಿಂದ ತುಂಬಿಸಿ. ಅದಕ್ಕೆ ಮಜ್ಜಿಗೆ ಸೇರಿಸಿ. ಮಜ್ಜಿಗೆ ಸಸ್ಯಕ್ಕೆ ನೈಸರ್ಗಿಕ ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮಣ್ಣಿನ pH ಅನ್ನು ಸಮತೋಲನಗೊಳಿಸುತ್ತದೆ.
4.ಬೀಜಗಳನ್ನು ಬಿತ್ತಿ
ಈಗ ಬೀಜಗಳನ್ನು ಒಂದು ಇಂಚಿನ ದೂರದಲ್ಲಿ ಮಣ್ಣಿನಲ್ಲಿ ಹಾಕಿ. ಮತ್ತೆ ಮೇಲಿನಿಂದ ಸ್ವಲ್ಪ ಮಣ್ಣಿನಿಂದ ಮುಚ್ಚಿ.
5. ನೀರು ಹಾಕಿ
ಪ್ರತಿದಿನ ಬೆಳಗ್ಗೆ ಸ್ವಲ್ಪ ನೀರು ಹಾಕಿ. ಆದರೆ ಹೆಚ್ಚು ನೀರು ನೀಡುವುದರಿಂದ ಬೀಜಗಳು ಕೊಳೆಯಬಹುದು ಎಂಬುದನ್ನು ನೆನಪಿನಲ್ಲಿಡಿ.
ಕೇವಲ ಒಂದು ವಾರದಲ್ಲಿ, ಸಣ್ಣ ಗಿಡಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸುಮಾರು 30 ರಿಂದ 40 ದಿನಗಳಲ್ಲಿ ಮೆಣಸಿನಕಾಯಿ ಹೂವುಗಳು ಮತ್ತು ನಂತರ ಮೆಣಸಿನಕಾಯಿಗಳು ಬೆಳೆಯಲು ಪ್ರಾರಂಭಿಸುತ್ತವೆ. ನೀವು ಪ್ರತಿ 10 ದಿನಗಳಿಗೊಮ್ಮೆ ಮಜ್ಜಿಗೆ ಮತ್ತು ಬೂದಿಯನ್ನು ಸೇರಿಸುತ್ತಿದ್ದರೆ, ನೀವು ಅದೇ ಪಾಟ್‌ನಿಂದ 10-15 ಬಾರಿ ತಾಜಾ ಹಸಿರು ಮೆಣಸಿನಕಾಯಿಗಳನ್ನು ಪಡೆಯುತ್ತೀರಿ.
ಪ್ರತಿದಿನ ಮಜ್ಜಿಗೆ ಲಭ್ಯವಿಲ್ಲದಿದ್ದರೆ, ವಾರಕ್ಕೊಮ್ಮೆಯಾದರೂ ಹಾಕಿ. ಒಂದು ಪಾಟ್‌ನಲ್ಲಿ ನಾಲ್ಕು ಗಿಡಗಳಿಗಿಂತ ಹೆಚ್ಚು ಇಡಬೇಡಿ. ಇಲ್ಲದಿದ್ದರೆ ಬೆಳವಣಿಗೆ ನಿಧಾನವಾಗುತ್ತದೆ. ಮೆಣಸಿನಕಾಯಿಗಳನ್ನು ಬಿಸಿಲಿನ ಸ್ಥಳದಲ್ಲಿ ಇರಿಸಿ. ಅದು ಕನಿಷ್ಠ 5-6 ಗಂಟೆಗಳ ಕಾಲ ಸೂರ್ಯನ ಬೆಳಕನ್ನು ಪಡೆಯಬೇಕು. ಈ ಸಂಪೂರ್ಣ ಪ್ರಕ್ರಿಯೆಯ ನಂತರ ನೀವು ಇನ್ನು ಮುಂದೆ ದುಬಾರಿ ಮೆಣಸಿನಕಾಯಿಗಳನ್ನು ಖರೀದಿಸಬೇಕಾಗಿಲ್ಲ.
ಒಮ್ಮೆ ಕಷ್ಟಪಟ್ಟು ಕೆಲಸ ಮಾಡಿದರೆ ನಂತರ ವರ್ಷವಿಡೀ ಮನೆಯಲ್ಲಿ ಬೆಳೆದ ಹಸಿರು ಮೆಣಸಿನಕಾಯಿಗಳನ್ನು ತಿನ್ನಬಹುದು. ಇದು ಹಣವನ್ನು ಉಳಿಸುವುದಲ್ಲದೆ, ರಾಸಾಯನಿಕ ಮುಕ್ತ ತಾಜಾ ಮತ್ತು ಮನೆಯಲ್ಲಿ ಬೆಳೆದ ಮೆಣಸಿನಕಾಯಿ ಸೇವಿಸಬಹುದು. ಇದು ಆಹಾರದ ರುಚಿಯನ್ನೂ ಹೆಚ್ಚಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.