
ತನ್ನ ದೊಡ್ಡ ಕಣ್ಣುಗಳಲ್ಲೇ ಭೀತಿ, ಆತಂಕ, ನೋವು, ನಿರಾಸೆ ಎಲ್ಲವನ್ನೂ ಹೇಳುವ ನಟ ಇರ್ಫಾನ್ ಖಾನ್‌ಗೆ ಹೈ ಗ್ರೇಡ್ ಎಂಡೋಕ್ರೈನ್ ಕ್ಯಾನ್ಸರ್. ಹಾರ್ಮೋನ್‌ಗಳಿಗೆ ಸಂಬಂಧಿಸಿದ ಈ ಸಮಸ್ಯೆ ಬಹಳ ಅಪರೂಪದ್ದು.
ಹಿಂದೆ ಸ್ಟೀವ್ ಜಾಬ್ಸ್ ಗೂ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್ ಬಂದಿತ್ತು. ಮೇದೋಜೀರಕ ಗ್ರಂಥಿಯಲ್ಲಿ ಶುರುವಾದ ಕ್ಯಾನ್ಸರ್ ಲಿವರ್‌ಗೂ ಹರಡಿತ್ತು. ಇದರಿಂದಲೇ ಬ್ಯುಸಿನೆಸ್ ಜಗತ್ತಿನ ಆ ದೈತ್ಯ ಮೃತಪಟ್ಟಿದ್ದರು. ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್ ಬಗ್ಗೆ ಇರ್ಫಾನ್ ಖಾನ್‌ಗೆ ತಿಳಿದದ್ದು ಆತನಿಗೆ ಈ ಕ್ಯಾನ್ಸರ್ ಬಂದಿದೆ ಅಂತ ಗೊತ್ತಾದಾಗಲೇ. ಆದರೆ ಅದು ಗೊತ್ತಾಗುವ ಹೊತ್ತಿಗೆ ತುಸು ತಡವಾಗಿತ್ತು. ಈ ಕ್ಯಾನ್ಸರ್ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅರ್ಬುದ ರೋಗದಂತಲ್ಲ.
ಆರಂಭಿಕ ಹಂತದಲ್ಲಿ ಇದು ಸಣ್ಣದೊಂದು ಸುಳಿವನ್ನೂ ಬಿಟ್ಟುಕೊಡುವುದಿಲ್ಲ. ಕೆಲವೊಮ್ಮೆ ಯಾವುದೋ ಆರೋಗ್ಯ ಸಮಸ್ಯೆಯ ಬಗ್ಗೆ ಟೆಸ್ಟ್ ಮಾಡಿಸಿದಾಗ ಈ ಕ್ಯಾನ್ಸರ್ ಸುಳಿವು ಸಿಗಬಹುದು. ಈ ಕ್ಯಾನ್ಸರ್ ಯಾಕೆ ಬರುತ್ತೆ ಅನ್ನೋದು ಇನ್ನೂ ವೈದ್ಯಲೋಕಕ್ಕೆ ಸವಾಲಾಗಿಯೇ ಉಳಿದಿದೆ. ಕೆಲವೊಮ್ಮೆ ಜೆನೆಟಿಕಲ್ ಕಾರಣಗಳಿಗೆ ಬರುತ್ತೆ.
ಈ ಕ್ಯಾನ್ಸರ್ ಬಂದಿದೆ ಅಂತ ಗೊತ್ತಾಗೋದು ಹೇಗೆ?
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ಸಂದೀಪ್ ನಾಯಕ್ ಪಿ. ಅವರು, ನ್ಯೂರೋ ಎಂಡೊಕ್ರೈನ್ ಕ್ಯಾನ್ಸರ್‌ನ ಲಕ್ಷಣಗಳನ್ನು ಹೀಗೆ ವಿವರಿಸುತ್ತಾರೆ.
ಈ ಕ್ಯಾನ್ಸರ್ ದೇಹದ ಯಾವ ಭಾಗಕ್ಕೂ ಬರಬಹುದು. ಯಾವ ಭಾಗಕ್ಕೆ ಬಂದಿದೆ ಅನ್ನುವುದರ ಮೇಲೆ ಅದರ ಗುಣಲಕ್ಷಣ ನಿರ್ಧಾರವಾಗುತ್ತದೆ. ಮೇದೋಜೀರಕ ಗ್ರಂಥಿಯಲ್ಲಿ ಕ್ಯಾನ್ಸರ್ ಕಾಣಿಸಿಕೊಂಡರೆ ಆರಂಭಿಕ ಹಂತದಲ್ಲಿ ಯಾವ ಗುಣಲಕ್ಷಣಗಳೂ ಕಂಡುಬರಲ್ಲ. ಬೇರ‌್ಯಾವುದೋ ಸಮಸ್ಯೆಗೆ ಟೆಸ್ಟ್ ಮಾಡುವಾಗ ಕ್ಯಾನ್ಸರ್ ಇರುವುದು ಗೊತ್ತಾಗುತ್ತದೆ. ಅನ್ನನಾಳದಲ್ಲಿ ಬಂದರೆ, ಕ್ಯಾನ್ಸರ್ ಗಡ್ಡೆಗಳು ಅನ್ನನಾಳವನ್ನು ಬ್ಲಾಕ್ ಮಾಡುವಾಗಲೇ ಈ ಕ್ಯಾನ್ಸರ್‌ನ ಸುಳಿವು ಸಿಗುವುದು. ಸಣ್ಣ ಕರುಳು, ಹೊಟ್ಟೆಯಲ್ಲಾದರೆ ಬ್ಲೀಡಿಂಗ್ ಮೂಲಕ ಕ್ಯಾನ್ಸರ್ ಇರುವುದು ತಿಳಿಯಬಹುದು. ಒಂದು ವೇಳೆ ಮೇದೋಜೀರಕ ಗ್ರಂಥಿಯಿಂದ ಯಕೃತ್ ಅರ್ಥಾತ್ ಲಿವರ್‌ಗೆ ಹರಡಿದರೆ ಆಗ ಲಿವರ್‌ನಲ್ಲಿ ಸ್ರವಿಸುವಿಕೆ ಉಂಟಾಗಬಹುದು.
ಈ ಕ್ಯಾನ್ಸರ್ ದೇಹದ ಭಾಗವನ್ನು ಆಕ್ರಮಿಸಿಕೊಂಡಾಗ ನರದ ಚಟುವಟಿಕೆ ಇರುವಲ್ಲಿ ಉಂಟಾಗುವ ಹಾರ್ಮೋನಲ್ ಸ್ರವಿಸುವಿಕೆಯಿಂದ ವರ್ತನೆಗಳಲ್ಲಿ ಬದಲಾವಣೆ ಕಾಣಬಹುದು. ಬಿ.ಪಿ ಜಾಸ್ತಿಯಾಗಬಹುದು. ಮೈಯೆಲ್ಲ ಜುಮ್ ಅನ್ನುವಂಥ ಅನುಭವವಾಗಬಹುದು. ಜ್ವರ ಬರಬಹುದು. ಕೆಲವೊಂದು ಅಂಗಗಳಿಗೆ ಹಬ್ಬಿದ ಕ್ಯಾನ್ಸರ್‌ನಿಂದ ಮೆನೊಪಾಸ್ ಸಂದರ್ಭದಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂಥ ಕಿರಿಕಿರಿ, ಉದ್ವಿಗ್ನತೆ, ಸಿಟ್ಟು, ಭಯದಂಥ ಮಾನಸಿಕ ಸ್ಥಿತಿ ಉಂಟಾಗಬಹುದು. ಆರಂಭದಲ್ಲಿ ನಿಧಾನವಾಗಿ ಹರಡುವ ಕ್ಯಾನ್ಸರ್ ಒಂದು ಸ್ಟೇಜ್ ದಾಟಿದ ಬಳಿಕ ವೇಗವಾಗಿ ಆವರಿಸುತ್ತದೆ.
ಚಿಕಿತ್ಸೆ ಇದೆಯಾ?
ಉಳಿದ ಕ್ಯಾನ್ಸರ್‌ಗೆ ಹೋಲಿಸಿದರೆ ಅವುಗಳಷ್ಟು ತೀವ್ರತೆ ಈ ನ್ಯೂರೋಎಂಡೊಕ್ರೈನ್ ಕ್ಯಾನ್ಸರ್‌ಗಳಿಗಿರುವುದಿಲ್ಲ. ಉಳಿದ ಕ್ಯಾನ್ಸರ್‌ಗಳಲ್ಲಿ ನಾಲ್ಕನೇ ಸ್ಟೇಜ್‌ನಲ್ಲಿದ್ದವರ ಜೀವಿತಾವಧಿ ಕಡಿಮೆ ಇರುತ್ತದೆ. ಈ ಕ್ಯಾನ್ಸರ್‌ನಲ್ಲಿ ನಾಲ್ಕನೇ ಸ್ಟೇಜ್‌ನಲ್ಲಿರುವವರೂ 10 ರಿಂದ 15 ವರ್ಷ ಬದುಕಿದ ಉದಾಹರಣೆ ಇದೆ. ಆದರೆ ಮೂರು ಅಥವಾ ನಾಲ್ಕನೇ ಹಂತದಲ್ಲಿರುವ ಹೈಗ್ರೇಡ್ ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್ ಅಂದರೆ ರಿಸ್ಕ್ ಹೆಚ್ಚು. ಆರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಅಂದರೆ ಸರ್ಜರಿಯಿಂದ ಶಮನ ಮಾಡಬಹುದು. ಅದರೆ ಸರ್ಜರಿಯಿಂದ ಶಮನವಾಗುವ ಮಟ್ಟವನ್ನು ಮೀರಿ ಬೆಳೆದಿದ್ದರೆ ಹೈ ಗ್ರೇಡ್ ಅಂದ್ರೆ ಔಟ್‌ಕಮ್ಸ್ ಹೇಗಿರುತ್ತೆ ಅಂತ ಹೇಳಕ್ಕಾಗಲ್ಲ. ಸ್ಟೇಜ್ ಮೇಲೆ ಡಿಪೆಂಡ್ ಆಗುತ್ತೆ.
ಮೊದಲ ಹಂತದಲ್ಲಿದ್ದರೆ ಸರ್ಜರಿ ಮಾಡಿ ತೆಗೆಯುವ ಹಾಗಿದ್ದರೆ ರೋಗಿ ಹುಷಾರಾಗಬಲ್ಲ. ನಂತರದ ಹಂತಗಳಲ್ಲಿ ಈ ಕ್ಯಾನ್ಸರ್ ಬಹಳ ವೇಗವಾಗಿ, ತುಂಬ ಅಗ್ರೆಸ್ಸಿವ್ ಆಗಿ ಬೆಳೆಯುತ್ತೆ. ಆಗ ಫಲಿತಾಂಶ ಕೆಟ್ಟದಾಗಿರುತ್ತೆ.
-ಪ್ರಿಯಾ ಕೇರ್ವಾಶೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.