
- ರಶ್ಮಿ ಗೋಖಲೆ
ಮಳೆಗಾಲದ ದಿನಗಳಲ್ಲಿ ಒಂದು ದಿನ ಸಂಪೂರ್ಣವಾಗಿ ತೊಯ್ದು ತೊಪ್ಪೆಯಾಗಿ ಮಳೆಯಲ್ಲಿ ನಡೆಯುವ ಕಲ್ಪನೆ ಮಾಡಿಕೊಂಡರೆ ಎಷ್ಟು ಅದ್ಭುತವೆಂದು ಅನಿಸದೇ ಇರದು. ಅಂತಹ ಕಲ್ಪನೆಯೊಂದಿಗೆ ಬೆಂಗಳೂರಿನ ರೈನಥಾನ್ ತಂಡ ಪ್ರತೀ ಮಳೆಗಾಲದಲ್ಲೂ ಒಂದು ಅಥವಾ ಎರಡು ಆವೃತ್ತಿಗಳಲ್ಲಿ ಮಳೆನಡಿಗೆಯನ್ನು ಹಮ್ಮಿಕೊಳ್ಳುತ್ತದೆ.
ರೈನಥಾನ್ ಎಂದರೇನು?
ಮಳೆಯಿಂದ ರಕ್ಷಿಸಬಹುದಾದ ಕೊಡೆ, ರೈನ್ ಕೋಟ್ , ಟೋಪಿ ಮೊದಲಾದ ಯಾವುದೇ ರಕ್ಷಣಾ ಸಲಕರಣೆ ಇಲ್ಲದೇ ಒಂದಿಡೀ ದಿನ ಮಳೆಯಲ್ಲಿ ನೆನೆಯುತ್ತಾ ಸುಮಾರು 18- 20 ಕಿಮೀನಷ್ಟು ದೂರ ನಡೆಯುವುದು. ಇದು ಕೇವಲ ನಡಿಗೆಯಾಗಿರದೆ ಆಟಪಾಠಗಳೂ ಸೇರಿರುತ್ತವೆ.
ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ..ನೀವು ನೋಡ್ಲೇಬೇಕಾದ ಜಾಗಗಳಿವು
ಕಾಡಿನ ರಸ್ತೆಗಳಲ್ಲಿ ವಾಹನಗಳಲ್ಲಿ ಸಾಗುವಾಗಲೇ ಉಲ್ಲಸಿತ ಭಾವ ಆವರಿಸುತ್ತದೆ. ಇನ್ನು ಈ ಪ್ರದೇಶಗಳಲ್ಲಿ ನಡಿಗೆಯಲ್ಲಿ ಕ್ರಮಿಸಿದಾಗ ಆಗುವ ಆನಂದ ಅಂದಾಜು ಮಾಡಲೂ ಸಾಧ್ಯವಿಲ್ಲ. ಕಾವ್ಯವನ್ನು ಓದುವಾಗ ಪ್ರತಿಯೊಬ್ಬರೂ ಅವರವರಿಗೆ ಬೇಕಾದಂತೆ ಕಲ್ಪನೆ ಮಾಡಿಕೊಳ್ಳುವಂತೆ ರೈನಥಾನ್ ನಲ್ಲಿ ಭಾಗವಹಿಸುವವರೆಲ್ಲರೂ ಅವರವರ ರೀತಿಯಲ್ಲಿ ಸಂಭ್ರವಿಸುತ್ತಾರೆ. ಕೆಲವರು ಕಾಡಿನ ಅಗಾಧತೆಯನ್ನು ಅದರ ಸೃಷ್ಟಿ ವಿಶೇಷವನ್ನು ಮೆಚ್ಚಿಕೊಂಡರೆ ಹಲವರಿಗೆ ಪ್ರಕೃತಿಯ ಮಡಿಲಲ್ಲಿ ಫೋಟೋ ಹೊಡೆಸಿಕೊಳ್ಳುವುದೇ ಸಂಭ್ರಮ. ಕಾಡು ಹೂವುಗಳ, ಮರ ಬಳ್ಳಿಗಳ, ನದಿ ತೊರೆಗಳ ಫೋಟೋಗ್ರಫಿ ಹವ್ಯಾಸವಿದ್ದವರಿಗಂತೂ ಇಂಥಾ ಅನುಭವ ಒಂದು ಮೃಷ್ಟಾನ್ನ ಭೋಜನವೇ ಸರಿ.
ರೈನಥಾನ್ ಕಳೆದ 12 ವರ್ಷಗಳಿಂದ ಶಿಸ್ತಿನಿಂದ, ಜವಾಬ್ದಾರಿಯಿಂದ, ಎಲ್ಲಕ್ಕಿಂತ ಮಳೆಗಾಲದಲ್ಲಿ ಮಳೆಕಾಡುಗಳ ಬಗ್ಗೆ ಪ್ರೀತಿ ಮೂಡಿಸುವ ಪ್ರಯತ್ನದಲ್ಲಿ ಮುಂದಡಿ ಇಡುತ್ತಿದೆ. ಇದು ಬೆಂಗಳೂರಿನ ಕಿಶೋರ್ ಪಟವರ್ಧನ್ ಅವರ ಕನಸಿನ ಕೂಸು. ಅವರು 2012ರಲ್ಲಿ ಒಂದು ಸಂಜೆ ಮಳೆಯಲ್ಲಿ ನೆನೆಯುತ್ತಾ ಬೈಕ್ ಓಡಿಸಿಕೊಂಡು ಬರುವಾಗ ಹುಟ್ಟಿದ ಚೆಂದದ ಕಲ್ಪನೆ.
ಹೀಗೆ ಮಾಡಿದ್ರೆ ಮಳೆಗಾಲದಲ್ಲಿ 15 ದಿನ ಆದ್ರೂ ತರಕಾರಿಗಳು ಹಾಳಾಗಲ್ಲ…
ಮೊದಲ ರೈನಥಾನ್ 2012ರಲ್ಲಿ ಕೊಟ್ಟಿಗೆಹಾರದಿಂದ ಚಾರ್ಮಾಡಿವರೆಗಿನ 23 ಕಿಮೀ ದೂರವನ್ನು ಕ್ರಮಿಸುವುದರೊಂದಿಗೆ ಆರಂಭವಾಯ್ತು. ಜಲಪಾತಗಳಿಗೆ ಮೈಯೊಡ್ಡುತ್ತ, ಆಟವಾಡುತ್ತಾ ಮಳೆಯಲ್ಲಿ ತೋಯುತ್ತಾ ನಡೆದ ಆ ದಿನ ಅವಿಸ್ಮರಣೀಯ. ಅಂದಿನಿಂದ ಇಂದಿನವರೆಗೂ ನಡೆಯುತ್ತ ಬಂದಿದೆ. ಸುಮಾರು 18- 20 ಕಿಮೀ ನಷ್ಟು ದೂರದ ಮಳೆಯ ನಡಿಗೆ. ಕಾಡಿನಲ್ಲಿ ಬಿಸಿ ಚಹಾ, ತಿಂಡಿ ಹಾಗೂ ಮಧ್ಯಾಹ್ನದ ಊಟ.
ಸಾಧ್ಯವಾದಾಗ ಕಾಡಂಚಿನ ಸೌಲಭ್ಯವಂಚಿತ ಶಾಲೆಗಳಿಗೆ ಬ್ಯಾಗ್, ಪುಸ್ತಕ ಮುಂತಾದ ಅಗತ್ಯ ವಸ್ತುಗಳ ಪೂರೈಕೆ ಕೂಡ ತಂಡದಿಂದ ನಡೆದಿದೆ. ನೆನಪುಗಳ ಸರಮಾಲೆಯನ್ನೇ ಸೃಷ್ಟಿಸಿದಂತಹ ಹೊಸ ನೆನಪುಗಳನ್ನು ಕಟ್ಟಿಕೊಡಬಹುದಾದಂತಹ ರೈನಥಾನ್ ಮತ್ತೆ ಬಂದಿದೆ ಇದೇ ಆಗಸ್ಟ್ 5ರಂದು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆಯುವ ಸಾಧ್ಯತೆ ಇದೆ. ಎಲ್ಲಿ ಏನು ಅನ್ನೋ ವಿವರ ಸದ್ಯದಲ್ಲೇ ತಿಳಿಯಲಿದೆ. ಪಾಲ್ಗೊಳ್ಳಲು ಇಚ್ಛೆ ಉಳ್ಳವರು www.rainathon.com ಸಂಪರ್ಕಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.