'ಗುಂಡಮ್ಮ' ಸತಿಯಾದರೆ ಪತಿಯ ಸಂತೋಷಕ್ಕಿರದು ಮಿತಿ!

By Web Desk  |  First Published Jul 16, 2019, 12:56 PM IST

ಈ ಸಂಶೋಧನೆ ನಿಮ್ಮ ಆಲೋಚನೆಯನ್ನೇ ಬದಲಿಸಬಹುದು. ಹುಡುಗಿ ಡುಮ್ಮಿ ಎಂದೇ ರಿಜೆಕ್ಟ್  ಮಾಡುತ್ತಿದ್ದೀರಾದರೆ, ನೀವು ನಿಮ್ಮ ಭವಿಷ್ಯದ ಸಂತೋಷಕ್ಕೆ ಕಲ್ಲು ಹಾಕಿಕೊಳ್ಳುತ್ತಿದ್ದೀರೆಂದೇ ಅರ್ಥ! ಏಕೆಂದರೆ ಪತ್ನಿ ಡುಮ್ಮುಕ್ಕಿದ್ದರೆ, ಅಂಥವರ ಪತಿ ಇತರರಿಗಿಂತ 10 ಪಟ್ಟು ಹೆಚ್ಚು  ಸಂತೋಷವಾಗಿರುತ್ತಾರೆ ಎನ್ನುತ್ತಿದೆ ಈ ಅಧ್ಯಯನ ವರದಿ.
 


ವಿವಾಹವಾಗುವ ಹುಡುಗಿಯು ತೆಳ್ಳಗೆ ಬಳುಕುವ ಬಳ್ಳಿಯಂತಿರಬೇಕು, ಫಿಗರ್ ಸೂಪರ್ ಆಗಿರಬೇಕು ಎಂದು ಬಹುತೇಕ ಯುವಕರು ಕನಸು ಕಂಡಿರುತ್ತಾರೆ. ಆದರೆ, ಖುಷಿಯಾಗಿರಬೇಕು ಎಂದು ಮದುವೆಯಾಗುವವರು ನೀವಾದರೆ, ವಿಜ್ಞಾನವನ್ನು ನಂಬುವವರಾದರೆ ಈ ಕನಸನ್ನು ಬದಲಿಸಿಕೊಳ್ಳಲೇಬೇಕು. ಹೌದು, ಡುಮ್ಮು ಡುಮ್ಮನೆಯ ಮುದ್ದಾದ ಯುವತಿ ಸತಿಯಾದರೆ ಸಂತೋಷಕ್ಕಿರದು ಮಿತಿ ಎಂದು ಇಲ್ಲೊಂದು ಅಧ್ಯಯನ ಸಾಬೀತುಪಡಿಸಿದೆ.

ಸಾಮಾನ್ಯವಾಗಿ ದಪ್ಪಗಿರುವವರನ್ನು ಆಕರ್ಷಕರಲ್ಲ, ಸೋಮಾರಿ ಇತ್ಯಾದಿಯಾಗಿ ಪರಿಗಣಿಸಲಾಗುತ್ತದೆ. ಅವರನ್ನು ಗುಣ, ಬುದ್ಧಿವಂತಿಕೆಯ ಹೊರತಾಗಿ ಗಾತ್ರ ಹಾಗೂ ಅಂದದ ಮೇಲೆ ಜಡ್ಡ್ ಮಾಡುವುದೇ ಹೆಚ್ಚು. ಅಪರಿಚಿತರು ಕೂಡಾ ದಪ್ಪಗಿರುವವರನ್ನು ಆಡಿಕೊಳ್ಳುವುದಿದೆ. ಇನ್ನು ಪರಿಚಿತರ ವಲಯದಲ್ಲಿ 'ನಿನ್ನ ಯಾರು ಮದುವೆಯಾಗುತ್ತಾರೆ' ಎಂಬ ಅಸಂಬದ್ಧ ತಮಾಷೆ ಪ್ರಶ್ನೆಯು ಅವರನ್ನು ನೋಯಿಸುತ್ತದೆ ಎಂದೂ ಯೋಚಿಸದೆ ತೂರಿ ಬರುತ್ತಲೇ ಇರುತ್ತದೆ. ಹೀಗೆ ದಪ್ಪಗಿರುವವರ ಕಾಲೆಳೆಯುವವರು ಈ ಸುದ್ದಿ ಓದಲೇಬೇಕು.  

Latest Videos

undefined

ಅಜಯ್-ಕಾಜೋಲ್ ಸುಖ ಸಂಸಾರದ ಬಗ್ಗೆ ಯಾರಿಗೂ ಗೊತ್ತಿರದ ಗುಟ್ಟು!

ಡುಮ್ಮನೆ ಪತ್ನಿಯ ಸಂಗಾತಿಯಾದವರು, ಇತರ ಪತಿ ಮಹಾಶಯರಿಗಿಂತ 10 ಪಟ್ಟು ಹೆಚ್ಚು ಸಂತೋಷವಾಗಿರುತ್ತಾರೆ, ಹೀಗಾಗಿ ಹೆಚ್ಚು ನಗುತ್ತಾರೆ ಎನ್ನುತ್ತಾರೆ ಮೆಕ್ಸಿಕೋದ ನ್ಯಾಷನಲ್ ಆಟೋನೋಮಸ್ ಯೂನಿವರ್ಸಿಟಿಯ ಸಂಶೋಧಕಾರರು. ನೂರಾರು ದಂಪತಿಯನ್ನು ಸರ್ವೆಗೊಳಪಡಿಸಿದ ಬಳಿಕ ಉತ್ತರಗಳನ್ನು ತಾಳೆ ಹಾಕಿದ ಸಂಶೋಧಕರು ಈ ವಿಷಯ ಕಂಡುಕೊಂಡಿದ್ದಾರೆ. 

ದಪ್ಪಗಿರುವವರು ಹೆಚ್ಚು ಜಾಲಿಯಾಗಿರುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಇದೀಗ ದಪ್ಪಗಿರುವವರ ಜೊತೆ ಇರುವವರೂ ಹೆಚ್ಚು ಖುಷಿಯಾಗಿರುತ್ತಾರೆಂಬುದು ಹೊಸ ವಿಷಯ. ಅಷ್ಟೇ ಅಲ್ಲ, ಸಂಬಂಧಗಳನ್ನು ನಿಭಾಯಿಸುವಲ್ಲಿ, ಸಂಬಂಧದ ಮಧ್ಯೆ ಏಳುವ ಬಿರುಕುಗಳನ್ನು ತುಂಬುವಲ್ಲಿ ತೂಕದ ಮಹಿಳೆಯರು ತೆಳ್ಳಗಿನ ಯುವತಿಯರಿಗಿಂತ ಒಂದು ತೂಕ ಹೆಚ್ಚೇ ಎಂದೂ ಅಧ್ಯಯನ ಹೇಳಿದೆ.

ಸಂಶೋಧಕರು ತೂಕದ ತಕ್ಕಡಿಯಲ್ಲಿ ಮಹಿಳೆಯರ ಗುಣಗಳನ್ನೂ ಅಳೆದು ತೆಗೆದಿದ್ದು, ತೆಳ್ಳಗಿನ ಮಹಿಳೆಯರು ಹೆಚ್ಚು ರಿಸರ್ವ್ಡ್ ಹಾಗೂ ಅನ್‌ಫ್ರೆಂಡ್ಲೀ ಆಗಿರುತ್ತಾರೆ. ಜೊತೆಗೆ ಯಾವ ಭಾವನೆಯನ್ನೂ ಹೆಚ್ಚು ವ್ಯಕ್ತಪಡಿಸುವುದಿಲ್ಲ, ಆದ್ದರಿಂದ ಇದು ಸಂಬಂಧದ ನಡುವೆ ಸಂತೋಷದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. 

ಸುಖ ದಾಂಪತ್ಯಕ್ಕೆ ಕಬೀರರ ಸೂತ್ರ, ನೀವೂ ಅಪ್ಲೈ ಮಾಡಿ ಕೊಂಡ್ರೆ ಬದುಕು ಸುಸೂತ್ರ

ಇನ್ನು ದಪ್ಪಗಿರುವವರಿಗೆ ಮಗುವನ್ನು ಹೊರಲು ಸಮಸ್ಯೆ ಎನಿಸುವುದಿಲ್ಲ, ಅವರು ಸುಲಭವಾಗಿ ಪ್ರಗ್ನೆನ್ಸಿಯನ್ನು ನಿಭಾಯಿಸಬಲ್ಲರು, ಅವರ ಸಂಗಾತಿಯು ಹೆಚ್ಚು ಕಾಲ ಬಾಳುತ್ತಾರೆ ಎಂದೂ ಸಂಶೋಧಕರು ತೂಕದ ಮಹಿಳೆಯರಿಗೆ ಖುಷಿ ಪಡಲು ಮತ್ತಷ್ಟು ಅವರ ಫ್ಯಾಟ್ ದೇಹದ ಪಾಸಿಟಿವ್ ವಿಷಯಗಳನ್ನು ಶ್ಲಾಘಿಸಿದ್ದಾರೆ. ಸದಾ ಡುಮ್ಮಿ, ದುಡುಮಿ, ತೂಕ ಇಳಿಸು, ಡಯಟ್ ಮಾಡು, ತೆಳ್ಳಗಾದರೆ ಇಂತಿಂಥ ಲಾಭಗಳಿವೆ ಎಂಬ ಮಾತುಗಳನ್ನೇ ಕೇಳಿ ಕೇಳಿ ಬೇಸರವಾದ ದಪ್ಪಗಿನ ಮಹಿಳೆಯರು ಈ ಅಧ್ಯಯನ ವರದಿಯನ್ನು ಸರ್ಟಿಫಿಕೇಟ್‌ನಂತೆ ಸದಾ ತಮ್ಮೊಂದಿಗಿಟ್ಟುಕೊಂಡು ಓಡಾಡಬಹುದು. ಯಾರೇ ಚುಡಾಯಿಸಲು ಬಂದರೆ, ತಕ್ಷಣ ಅವರಿಗೆ ವರದಿ ತೋರಿಸಿ ಬಾಯಿ ಮುಚ್ಚಿಸಬಹುದು! 

ಆದರೆ, ಅಧ್ಯಯನ ವರದಿ ಏನೇ ಹೇಳಲಿ, ನಿಮ್ಮ ಗಾತ್ರ ಏನೇ ಇರಲಿ, ನೀವು ಫಿಟ್ ಆಗಿ, ಆರೋಗ್ಯವಾಗಿ, ನಿಮ್ಮ ಬದುಕಿನ ಸಂಪೂರ್ಣ ಹೊಣೆ ಹೊತ್ತುಕೊಂಡು ಇರುವುದು ಮುಖ್ಯ. ನಿಮ್ಮನ್ನು ನೀವು ಖುಷಿಯಾಗಿಟ್ಟುಕೊಳ್ಳಬಲ್ಲಿರಾದರೆ, ನಿಮ್ಮೊಳಗೆ ಶಾಂತಿಯಿದ್ದರೆ ಖಂಡಿತಾ ನಿಮ್ಮ ಸಂಗಾತಿಯನ್ನು ಖುಷಿಯಾಗಿಡುವ ತಾಕತ್ತು ನಿಮ್ಮಲ್ಲಿರುತ್ತದೆ ಅಲ್ಲವೇ ? 

click me!