
ಆಗಷ್ಟೇ ಸ್ಕೂಲ್‌ನಿಂದ ಬಂದ ಮಗುವಿನ ಬಗ್ಗೆ ಅಕ್ಕರೆ, ಮುದ್ದು ಮಾಡ್ಬೇಕು ಅಂತ ಹತ್ರ ಹೋಗ್ತೀರಿ. ಮಗು ನಿಮ್ಮನ್ನು ಆಚೆ ತಳ್ಳುತ್ತೆ. ನಿಮ್ಮ ಅಕ್ಕರೆಯನ್ನು ಸಂಪೂರ್ಣ ನಿರ್ಲಕ್ಷಿಸುತ್ತೆ. ಮುಂದಿನದು ಆತಂಕ, ನೋವು, ಸಿಟ್ಟು ಎಲ್ಲ ಒಟ್ಟೊಟ್ಟಿಗೆ ಬರುವ ಸಂದರ್ಭ. ಪಾಪುಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಿದೆ.
ಅದಕ್ಕೀಗ ನಾನು ಬೇಡ ಅಂತ ಮನಸ್ಸು ಕುಸಿಯುತ್ತೆ. ಮೊದ ಮೊದಲು ಅಷ್ಟು ಪ್ರೀತಿ ತೋರಿಸುತ್ತಿದ್ದ ಗಂಡನಿಗೂ ಈಗೀಗ ನನ್ನ ಬಗ್ಗೆ ನಿರ್ಲಕ್ಷ್ಯ. ಈಗ ಪಾಪೂಗೂ ನಾನು ಬೇಡ. ಯಾರಿಗೂ ಬೇಡ ಅಂದರೆ ಯಾಕೆ ಬದುಕಿರ‌್ಬೇಕು ಅಂತ ಒಂದು ಕಡೆ ಹತಾಶಗೊಳ್ಳೋ ಮನಸ್ಸು. ಅಷ್ಟರಲ್ಲೇ ಸಿಟ್ಟು ಒತ್ತರಿಸಿ ಬಂದು, .. ಹೋಗಿ ಹೋಗಿ ಇಂಥವರನ್ನು ಹಚ್ಕೊಳ್ತೀನಲ್ಲ, ತಾಯಿ ಪ್ರೀತಿಯಿಲ್ಲದ ಎಷ್ಟು ಜನ ಮಕ್ಕಳಿದ್ದಾರೆ, ಅವರಿಗಾದರೂ ಪ್ರೀತಿ ಕೊಟ್ಟರೆ ಒಂದಿಷ್ಟು ಬೆಲೆ ಇರ‌್ತಿತ್ತು.. ಯೋಚನೆ ಮುಂದುವರಿಯುತ್ತೆ, ಕೊನೆಗೆ ನಮಗೆ ನಾವೇ ಸಮಾಧಾನ ಮಾಡ್ಕೊಳ್ತೀವಿ. ಈಗೊಂದು ಪ್ರಶ್ನೆ - ಇಷ್ಟೆಲ್ಲ ಆ್ಯಂಗಲ್‌ನಲ್ಲಿ ಯೋಚಿಸುವ ನಮ್ಮ ಮನಸ್ಸು ಮಗು ಯಾಕೆ ಹಾಗಾಡ್ತಿದೆ ಅಂತ ಯಾಕೆ ಯೋಚಿಸೋದಿಲ್ಲ. ಮಗುವಿನ ಈ ವರ್ತನೆಗೆ ಕಾರಣ ತಿಳ್ಕೊಂಡರೆ ಇಷ್ಟೆಲ್ಲ ನೋವು ಪಡುವ ಪ್ರಸಂಗವೇ ಬರುತ್ತಿರಲಿಲ್ಲ.
ಮಗುವಿನ ಮನಸ್ಸು ಕೆಟ್ಟಿರಬಹುದು. ಮಕ್ಕಳಿಗೂ ಮನಸು ಹಾಳಾಗೋದು, ಮೂಡ್ ಸ್ವಿಂಗ್ ಆಗೋದೆಲ್ಲ ಇರುತ್ತಾ ಅಂತ ಕೆಲವು ಪೋಷಕರು ಅಚ್ಚರಿಪಡುತ್ತಾರೆ. ಪಾಪು ಏನೋ ಯೋಚಿಸ್ತಿದ್ದರೆ ಇಷ್ಟು ಚಿಕ್ಕ ಮಕ್ಕಳಿಗೆ ಏನಂಥ ಯೋಚನೆ ಅಂತ ಉಡಾಫೆಯ ಮಾತಾಡ್ತಾರೆ. ಆದರೆ ಶಾಲೆಯಲ್ಲಾದ ಯಾವುದೋ ಘಟನೆ ಈಕೆಯಲ್ಲಿ ಕಿರಿಕಿರಿ ಹುಟ್ಟಿಸಿರಬಹುದು. ಆ ಇರಿಟೇಶನ್ ಇನ್ನೂ ಮನಸ್ಸಲ್ಲುಳಿದು ನಿಮ್ಮ ಪ್ರೀತಿಯನ್ನು ಆಸ್ವಾದಿಸುವ ಮೂಡ್ ಇಲ್ಲದಿರಬಹುದು.
ಮನಸ್ಸು ತಿಳಿಯಾಗಲು ಟೈಮ್ ಕೊಡಿ
ಸರಿ, ಮಗುವಿಗೆ ಮನಸ್ಸು ಅಪ್‌ಸೆಟ್ ಆಗಿದೆ. ಹೀಗಂದ ಕೂಡಲೇ ಅವಳನ್ನು ಖುಷಿ ಪಡಿಸಲು, ಬೇಜಾರನ್ನು ಇಳಿಸಲು ಪ್ರಯತ್ನ ಮಾಡುತ್ತೇವೆ. ಆದರೆ ತಜ್ಞರು ಹೇಳುವ ಪ್ರಕಾರ, ಮಗುವಿಗೆ ಒಂದಿಷ್ಟು ಸಮಯ ಬೇಸರದಲ್ಲಿರಲು ಬಿಡುವುದೂ ಒಳ್ಳೆಯದು.
ಮಗು ಅದಾಗಿಯೇ ಬೇಜಾರಿನಿಂದ ಹೊರಬರಬೇಕು. ಅದು ಸ್ವಾಭಾವಿಕ. ಹೀಗೆ ಸಹಜವಾಗಿ ಮನಸ್ಸು ಶಾಂತವಾದರೆ ಉದ್ವೇಗ, ಆತಂಕದಂಥ ಸಮಸ್ಯೆಗಳು
ಮುಂದೆ ಹತ್ತಿರ ಸುಳಿಯಲ್ಲ. ಆಮೇಲೆ ನೀವು ಪ್ರೀತಿ ತೋರಿಸಿದಾಗ ಅವಳು ಪಾಸಿಟಿವ್ ಆಗಿ ಸ್ಪಂದಿಸುತ್ತಾಳೆ. ತಪ್ಪು ನಿಮ್ಮಿಂದಲೂ ಆಗಿರಬಹುದು. ಮಗುವಿಗೆ ಅಮ್ಮ, ಅಪ್ಪನ ಬಗ್ಗೆ ಬಹಳ ನಿರೀಕ್ಷೆಗಳಿರುತ್ತವೆ.
ಶಾಲೆಯ ಸಂಗತಿಗಳು, ಗೆಳೆಯರ ವಿಷಯ ಎಲ್ಲವನ್ನೂ ಪೋಷಕರ ಬಳಿ ಹೇಳಲು ಅದು ಕಾತರದಿಂದ ಕಾಯುತ್ತಿರಬಹುದು. ಆದರೆ ನಿಮಗೆ ಅವಳ ಮಾತಿಗೆ ಕಿವಿಗೊಡಲು ಸಮಯ ಸಿಗದಿರಬಹುದು. ಕೆಲವೊಮ್ಮೆ ಮಗುವಿನ ಜೊತೆಗೆ ಮಾತನಾಡುತ್ತಿರುವಾಗಲೇ ಯಾವುದಾದರೊಂದು ಫೋನ್ ಬಂದು ನಿಮ್ಮ ಗಮನ ಅತ್ತ ಹೋಗಿರಬಹುದು. ಆಮೇಲೆ ವಿಷಯ ಮರೆತಿರಬಹುದು. ಆದರೆ ನೀವು ಅದರ ಕತೆ ಕೇಳಬೇಕು ಅಂದುಕೊಂಡಿದ್ದ ಮಗುವಿಗೆ ಇದರಿಂದ ಬೇಸರವಾಗಿರಬಹುದು. ಹಾಗಾಗಿ ನೀವು ಪ್ರೀತಿಯಿಂದ ಮುದ್ದು ಮಾಡಲು ಬಂದಾಗ ನಿರಾಕರಿಸಬಹುದು.
ಮಗುವಿನ ನಿರಾಕರಣೆಯನ್ನೂ ಗೌರವಿಸಿ
ಮಗುವಿನ ನಿರಾಕರಣೆಗೆ ಹತ್ತಾರು ಕಾರಣಗಳಿರಬಹುದು. ಆ ಬಗ್ಗೆ ಹೆಚ್ಚಿನ ಗಮನ ಬೇಕು. ಅದು ಸ್ವತಂತ್ರವಾಗಿ ಬೆಳೆಯಲು ಬಯಸಿರಬಹುದು. ಇದು ನಮಗೆ ನೋವು ತರುವ ವಿಚಾರವಾದರೂ ಮಗುವಿನ ಹಿತದೃಷ್ಟಿಯಿಂದ ಅದಕ್ಕೆ ಗೌರವ ಕೊಡುವುದು ಒಳ್ಳೆಯದು. ಆದರೆ ಯಾವುದಕ್ಕೂ ಇದೇ ಕಾರಣ ಹೌದಾ ಅಂತ ಕನ್‌ಫರ್ಮ್ ಮಾಡ್ಕೊಳ್ಳಿ.
ಈ ಸೂಚನೆ ಅನುಸರಿಸಿದರೆ ಒಳ್ಳೆಯದು
1. ಕೆಲವೊಮ್ಮೆ ಗಂಟೆಗಟ್ಟಲೆ ಮಗು ಆ ಮೂಡ್‌ನಿಂದ ಹೊರಬರದಿದ್ದರೆ ಅದಕ್ಕೆ ಖುಷಿ ಕೊಡುವ ಚಟುವಟಿಕೆಯತ್ತ ಮಗುವನ್ನು ಸೆಳೆಯಿರಿ.
2. ಪದೇ ಪದೇ ಮಗು ನಿಮ್ಮ ಪ್ರೀತಿಯನ್ನು ನಿರಾಕರಿಸುತ್ತಿದ್ದರೆ ಬೇರೇನಾದರೂ ಕಾರಣ ಇರಬಹುದಾ ಅಂತ ಚೆಕ್ ಮಾಡಿ.
3. ಅತಿಯಾದ ಮುದ್ದೂ ಕಿರಿಕಿರಿ ತರಿಸುತ್ತೆ. ಈ ಬಗ್ಗೆ ಗಮನವಿರಲಿ.
4. ಮಗುವಿಗೆ ಶಾರೀರಿಕ ತೊಂದರೆ ಇರಬಹುದು. ಅದನ್ನು ಹೇಳಲು ಬರದಿರಬಹುದು. ಮಗುವಿನ ಈ ವರ್ತನೆ ಹೆಚ್ಚಾದರೆ ಒಮ್ಮೆ ಮಕ್ಕಳ ತಜ್ಞರನ್ನು ಸಂಪರ್ಕಿಸಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.