ಮಂಗಳೂರು ಶೈಲಿ ಬಂಗುಡೆ ಮೀನು ಗಸಿ ಮಾಡೋದು ಹೇಗೆ ಗೊತ್ತಾ?

By Suvarna NewsFirst Published Jan 24, 2020, 12:51 PM IST
Highlights

ನಾನ್‍ವೆಜ್ ಪ್ರಿಯರಿಗೆ ಮೀನು ಸಾರು ಅಂದ್ರೆ ಬಾಯಲ್ಲಿ ನೀರು ಬರುವುದು ಗ್ಯಾರಂಟಿ. ಅದರಲ್ಲೂ ಮಂಗಳೂರಿನವರು ಮಾಡುವ ಮೀನು ಸಾರು ಅಂದ್ರೆ ಕೇಳಬೇಕೆ? ಅವರು ಅದೇನು ಸಾಮಗ್ರಿ ಹಾಕಿ ಸಾರು ಮಾಡುತ್ತಾರೇನೋ,ಆ ಟೇಸ್ಟ್ ನಾವು ಮಾಡಿದ ಸಾರಿಗೆ ಯಾಕೆ ಬರಲ್ಲ ಎನ್ನುವವರಿಗೆ ಇಲ್ಲಿದೆ ಮಂಗಳೂರು ಶೈಲಿಯ ಬಂಗುಡೆ ಮೀನು ಗಸಿ (ಸಾರು) ರೆಸಿಪಿ.

ಮೀನು ಕರಾವಳಿ ಜನರ ಅಚ್ಚುಮೆಚ್ಚಿನ ಆಹಾರ. ಮೀನು ಬಾಯಿಗೆ ರುಚಿ ನೀಡುವ ಜೊತೆಗೆ ಮಿದುಳನ್ನು ಚುರುಕುಗೊಳಿಸುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಮಿದುಳಿನ ಆರೋಗ್ಯಕ್ಕೆ ಅಗತ್ಯವಾದ ಫಾಲಿಕ್ ಆಸಿಡ್ ಮೀನಿನಲ್ಲಿ ಯಥೇಚ್ಛವಾಗಿದೆ. ಇದೇ ಕಾರಣಕ್ಕೆ ಯಾರಾದರೂ ತುಂಬಾ ಬುದ್ಧಿವಂತರಿದ್ದರೆ ‘ನಿನ್ನದು ಮೀನು ತಿಂದ ತಲೆ’ ಎಂದು ತಮಾಷೆ ಮಾಡುವುದನ್ನು ನೋಡಿರಬಹುದು.ಮೀನಿನಿಂದ ನಾನಾ ತರಹದ ಖಾದ್ಯಗಳನ್ನು ಎಲ್ಲ ಊರಿನಲ್ಲೂ ಸಿದ್ಧಪಡಿಸಲಾಗುತ್ತದೆ. ಆದರೆ,ಮೀನಿನ ರುಚಿ ತಿಳಿಯಬೇಕೆಂದ್ರೆ ಕರಾವಳಿಯವರು ಮಾಡುವ ಮೀನಿನ ಖಾದ್ಯಗಳನ್ನು ಒಮ್ಮೆ ಸವಿಯಲೇಬೇಕು. ನಾವು ಎಷ್ಟೇ ಚೆನ್ನಾಗಿ ಮಾಡಿದರೂ ಮಂಗಳೂರಿನವರು ಮಾಡುವಂತೆ ರುಚಿಯಾದ ಮೀನಿನ ಸಾರು ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಮಂಗಳೂರು ಶೈಲಿಯ ಬಂಗುಡೆ ಮೀನಿನ ಗಸಿ ರೆಸಿಪಿ.

ರುಚಿರುಚಿ ನೀರುದೋಸೆ ಮಾಡೋದು ಹೇಗೆ?

ಬೇಕಾಗುವ ಸಾಮಗ್ರಿಗಳು:
ಬಂಗುಡೆ ಮೀನು-4
ಕೊತ್ತಂಬರಿ ಬೀಜ-2 ಟೇಬಲ್ ಚಮಚ
ಜೀರಿಗೆ-1 ಟೇಬಲ್ ಚಮಚ
ಮೆಂತೆ-1/4 ಟೀ ಚಮಚ
ಅಜ್ವಾನ-1/4 ಟೀ ಚಮಚ
ಅರಿಶಿಣ-1/2 ಟೀ ಚಮಚ
ಕೆಂಪು ಮೆಣಸು-8-10
ಕರಿಮೆಣಸು-1/4 ಟೀ ಸ್ಪೂನ್
ಎಣ್ಣೆ-1 ಟೀ ಚಮಚ
ತುರಿದ ತೆಂಗಿನಕಾಯಿ-2 ಕಪ್
ಈರುಳ್ಳಿ-1
ಬೆಳ್ಳುಳ್ಳಿ-5-6 ಎಸಳುಗಳು
ಹುಣಸೆಹುಳಿ-ಒಂದು ಲಿಂಬೆ ಹಣ್ಣಿನ ಗಾತ್ರ
ಹಸಿಮೆಣಸಿನಕಾಯಿ-1-2
ಸಣ್ಣಗೆ ಹಚ್ಚಿದ ಶುಂಠಿ- 1 ಟೀ ಚಮಚ
ಕೊತ್ತಂಬರಿ ಸೊಪ್ಪು
ಉಪ್ಪು-ರುಚಿಗೆ ತಕ್ಕಷ್ಟು

ಆಲಿಯಾ ಭಟ್ ಹೇಳಿ ಕೊಡೋ ಪಲ್ಯ ಟ್ರೈ ಮಾಡಿ ನೋಡಿ

ಮಾಡುವ ವಿಧಾನ:
-ಕ್ಲೀನ್ ಮಾಡಿರುವ ಬಂಗುಡೆ ಮೀನನ್ನು ತುಂಡುಗಳನ್ನಾಗಿ ಮಾಡಿ. ಒಂದು ಮೀನಿನಲ್ಲಿ ಮೂರು ತುಂಡುಗಳಾಗುವಂತೆ ನೋಡಿಕೊಳ್ಳಿ (ತುಂಬಾ ದೊಡ್ಡ ತುಂಡುಗಳನ್ನಾಗಿ ಕತ್ತರಿಸಿದರೆ ಉಪ್ಪು, ಖಾರ ಚೆನ್ನಾಗಿ ಹಿಡಿಯುವುದಿಲ್ಲ).ಆ ಬಳಿಕ ಇವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಅರಿಶಿಣ ಮತ್ತು ಉಪ್ಪು ಬೆರೆಸಿ ಪಕ್ಕಕ್ಕಿಡಿ.
-ಪ್ಯಾನ್ ಸ್ಟೌವ್ ಮೇಲಿಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ತಕ್ಷಣ ಕೊತ್ತಂಬರಿ, ಜೀರಿಗೆ, ಅಜ್ವಾನ ಹಾಗೂ ಕರಿಮೆಣಸು ಹಾಕಿ ಪ್ರೈ ಮಾಡಿ.ಬಳಿಕ ಇದನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ.
-ಅದೇ ಪ್ಯಾನ್‍ಗೆ ಕೆಂಪು ಮೆಣಸು ಹಾಕಿ ಪ್ರೈ ಮಾಡಿ.
-ಹುಣಸೆಹುಳಿಯನ್ನು ಅಡುಗೆ ಸಿದ್ಧಪಡಿಸುವುದಕ್ಕೆ 10 ನಿಮಿಷ ಮುಂಚಿತವಾಗಿ ಅರ್ಧಲೋಟ ಬಿಸಿನೀರಿನಲ್ಲಿ ನೆನೆಹಾಕಿಡಿ. ಆ ಬಳಿಕ ಇದನ್ನು ಚೆನ್ನಾಗಿ ಕಿವುಚಿ ರಸವನ್ನು ಮಾತ್ರ ಸೋಸಿಟ್ಟುಕೊಳ್ಳಿ.
-ಈಗ ಹುರಿದ ಕೆಂಪುಮೆಣಸು ಹಾಗೂ ಎಲ್ಲ ಮಸಾಲ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ವರ್ಗಾಯಿಸಿ ಹುಣಸೆಹುಳಿ ರಸ, ಬೆಳ್ಳುಳ್ಳಿ ಹಾಗೂ ತೆಂಗಿನ ತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಮೀನಿಗೆ ಮಸಾಲವನ್ನು ಮಿಕ್ಸಿಗಿಂತ ಗ್ರೆಂಡರ್‍ನಲ್ಲಿ ರುಬ್ಬಿಕೊಂಡರೆ ಚೆನ್ನಾಗಿ ನುಣ್ಣಗಾಗುವ ಜೊತೆಗೆ ರುಚಿಯೂ ಸಖತ್ ಆಗಿರುತ್ತದೆ.
-ರುಬ್ಬಿದ ಮಸಾಲವನ್ನು ಒಂದು ಪಾತ್ರೆಗೆ ವರ್ಗಾಯಿಸಿ,ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ. ಬಂಗುಡಿ ಮೀನಿನ ಸಾರು ಜಾಸ್ತಿ ನೀರಾದರೆ ಚೆನ್ನಾಗಿರುವುದಿಲ್ಲ. ಹೀಗಾಗಿ ಹೆಚ್ಚು ನೀರು ಸೇರಿಸಬೇಡಿ.

ಮನೇಲೇ ಮಾಡಿ ನೋಡಿ ಸಿಂಪಲ್ಲಾಗೊಂದು ವೆಜ್ ಕಟ್ಲೇಟ್

-ಮಸಾಲಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಸ್ವಲ್ಪ ಉಪ್ಪು ಹಾಗೂ ಶುಂಠಿ ಸೇರಿಸಿ ಕುದಿಸಿ. ಸಾರು ಕುದಿಯಲು ಪ್ರಾರಂಭಿಸಿದಾಗ ಹಸಿಮೆಣಸನ್ನು ಕತ್ತರಿಸಿ ಹಾಕಿ.ಈ ಮಿಶ್ರಣವನ್ನು 5 ನಿಮಿಷಗಳ ಕಾಲ ಕುದಿಸಿ.
-ಚೆನ್ನಾಗಿ ಕುದ್ದಿರುವ ಮಸಾಲಕ್ಕೆ ಈಗಾಗಲೇ ಉಪ್ಪು ಮತ್ತು ಅರಿಶಿಣ ಹಾಕಿರುವ ಮೀನಿನ ತುಂಡುಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ 2-3 ನಿಮಿಷ ಕುದಿಸಿ.ಮೀನು ಬೇಗ ಬೇಯುವ ಕಾರಣ ಹೆಚ್ಚು ಹೊತ್ತು ಕುದಿಸಬೇಡಿ. ಜಾಸ್ತಿ ಕುದಿಸಿದರೆ ಮೀನು ಕರಗಿ ಹೋಗುತ್ತದೆ.
-ಕೊನೆಯಲ್ಲಿ ಅಗತ್ಯವಿದ್ದರೆ ಮಾತ್ರ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹಚ್ಚಿ ಹಾಕಿ. 
-ಕುಚ್ಚಲಕ್ಕಿ ಅನ್ನಕ್ಕೆ ಬಂಗುಡೆ ಮೀನಿನ ಸಾರು ಒಳ್ಳೆಯ ಕಾಂಬಿನೇಷನ್. 

click me!