ನೀರು ದೋಸೆ ಅಂದ್ರೆ ಸಾಕು, ನೀವು ಮಂಗ್ಳೂರು ಕಡೆಯವ್ರಾ ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಮಂಗಳೂರು ಕಡೆಯ ರೆಸ್ಟೊರೆಂಟ್‌ಗಳಿಗೆ ಹೋದ್ರಂತೂ ಇದು ತಿನ್ಲೇ ಬೇಕಾದ ರೆಸಿಪಿ. ಅಂಥಾ ನೀರು ದೋಸೆ ರೆಸಿಪಿ ಇಲ್ಲಿದೆ.
ನೀರು ದೋಸೆ ಅಂದ್ರೆ ಸಾಕು, ನೀವು ಮಂಗ್ಲೂರು ಕಡೆಯವ್ರಾ ಅನ್ನೋ ಪ್ರಶ್ನೆ ಬಂದೇ ಬರುತ್ತೆ. ಮಂಗಳೂರು ಕಡೆಯ ರೆಸ್ಟೊರೆಂಟ್ ಗಳಿಗೆ ಹೋದ್ರಂತೂ ಇದು ತಿನ್ಲೇ ಬೇಕಾದ ರೆಸಿಪಿ. ಇನ್ನು ಬೆಂಗಳೂರಿಂದ ಚಾರ್ಮಾಡಿ ಹಾದಿಯಾಗಿ ಧರ್ಮಸ್ಥಳದ ಕಡೆ ಹೋದ್ರೆ ಎಷ್ಟೇ ರಾತ್ರಿಯಾದ್ರೂ ಸರಿ, ಚಾರ್ಮಾಡಿಯಲ್ಲೊಂದು ಸ್ಟಾಪ್ ಕೊಡ್ಲೇ ಬೇಕು. ಇಲ್ಲಿಯ ತಟ್ಟಿ ಹೊಟೇಲ್ ಗಳಲ್ಲಿ ಮಧ್ಯರಾತ್ರಿ ನೀರ್ ದೋಸೆ, ಗಸಿ ತಿನ್ನೋ ಮಜಾನೇ ಬೇರೆ. ಆದರೆ ಕರಾವಳಿ ಕಡೆಯವ್ರು ಮಾತ್ರ ಇಲ್ಲಿ ಸ್ಟಾಪ್ ಕೊಡಲ್ಲ. ಏಕೆಂದರೆ ಇಲ್ಲಿಗಿಂತ ರುಚಿ, ಶುಚಿಯಾದ ನೀರು ದೋಸೆ ಮಾಡೋದು ಅವ್ರಿಗೆ ಕರತಲಾಮಲಕ. ಅಂಥಾ ನೀರು ದೋಸೆ ರೆಸಿಪಿ ಇಲ್ಲಿದೆ.
ಸಾಫ್ಟ್ ಇಡ್ಲಿ ಮಾಡೋದು ನಿಮಗೆ ಗೊತ್ತಾ? ಕತ್ರಿನಾ ಕೈಫ್ ಹೇಳಿಕೊಡ್ತಾರೆ.
ಏನೇನು ಸಾಮಗ್ರಿ ಬೇಕು?
ದೋಸೆ ಅಕ್ಕಿ, ತೆಂಗಿನ ಕಾಯಿ ತುರಿ ಸ್ವಲ್ಪ, ಉಪ್ಪು, ನೀರು.
ಮಾಡೋ ವಿಧಾನ
- ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಹಿಂದಿನ ರಾತ್ರಿ ನೆನೆಹಾಕಿ.
- ಬೆಳಗ್ಗೆದ್ದು ಅಕ್ಕಿಯ ಚೊತೆಗೆ ತುರಿದ ತೆಂಗಿನ ಕಾಯಿ, ಉಪ್ಪು, ನೀರು ಸೇರಿಸಿ ನುಣ್ಣಗೆ ರುಬ್ಬಿ.
- ಕಾಫಿ, ಟೀ ಹದಕ್ಕೆ ಬರಬೇಕು ಹಿಟ್ಟು. ಆ ಲೆವೆಲ್ ಗೆ ಹಿಟ್ಟು ರೆಡಿ ಮಾಡ್ಕೊಳ್ಳಿ. ಈ ಹಿಟ್ಟು ಅತೀ ನೀರಾದ್ರೂ ಕಷ್ಟ, ದಪ್ಪಗಾದ್ರೂ ಕಷ್ಟ. ದಪ್ಪ ಕಾಫಿಯ ಹದ ಅಂದುಕೊಳ್ಳಬಹುದೇನೋ.
- ಇದಕ್ಕೆ ಒಂದು ಹದಕ್ಕೆ ಉಪ್ಪು ಸೇರಿಸಿ. ಹೌದೋ ಅಲ್ವೋ ಅನ್ನೋವಷ್ಟು ನಾಲಿಗೆಗೆ ತಾಗಿದ್ರೆ ಸಾಕು. ಜಾಸ್ತಿ ಉಪ್ಪು ಬಿದ್ರೆ ದೋಸೆ ತಿನ್ನಕ್ಕಾಗಲ್ಲ. ಕಡಿಮೆ ಆದ್ರೆ ಚಟ್ನಿ ಜೊತೆಗೆ ಸೇರಿಸಿ ತಿನ್ನುವಾಗ ಅಷ್ಟಾಗಿ ಗೊತ್ತಾಗಲ್ಲ.
- ಸ್ಟೌ ಆನ್ ಮಾಡಿ. ಬೆಂಕಿ ಹೈ ಫ್ಲೇಮ್ ನಲ್ಲಿರಲಿ. ನಾನ್ ಸ್ಟಿಕ್ ತವಾಕ್ಕಿಂತ ಕಬ್ಬಿಣದ ಅಥವಾ ಕಲ್ಲಿನ ಕಾವಲಿಯಾದರೆ ಒಳ್ಳೆಯದು. ಅದಿಲ್ಲ ಅಂದರೆ ನಾನ್ ಸ್ಟಿಕ್ ಆದ್ರೂ ನಡಿಯುತ್ತೆ.
- ತವಾ ಅಥವಾ ಕಾವಲಿ ಚೆನ್ನಾಗಿ ಕಾದಮೇಲೆ ಸ್ವಲ್ಪ ಹಿಟ್ಟು ಕಾವಲಿ ಮೇಲೆ ಸಿಂಪಡಿಸಿ. ಅದು ಜುಂಯ್ ಅಂತ ಸೌಂಡ್ ಮಾಡಿದ್ರೆ ಕಾವಲಿ ಕಾದಿದೆ ಅಂತ ಅರ್ಥ.
- ಇದರ ಮೇಲೆ ತೆಳುವಾಗಿ ಹಿಟ್ಟು ಹಾಕಿ. ಸೌಟಿಂದ ಒತ್ತೋದು ಬೇಡ. ಮಾಡರೇಟ್ ನಿಂದ ಹೈ ಫ್ಲೇಮ್ ಇರಲಿ.
- ದೋಸೆಯ ಮೇಲೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಸವರಿ.
- ಕಾದ ಮೇಲೆ ದೋಸೆ ತೆಗೆಯಿರಿ. ಇದನ್ನು ಉಲ್ಟಾ ಹಾಕೋದು ಬೇಡ.
ಮನೇಲೇ ಮಾಡಿ ನೋಡಿ ಸಿಂಪಲ್ಲಾಗೊಂದು ವೆಜ್ ಕಟ್ಲೇಟ್
ಈ ದೋಸೆಗೆ ಸೈಡ್ಸ್ ಆಗಿ ಕಾಯಿ ಚಟ್ನಿ ಮಾಡಬಹುದು.
ಏನೇನು ಸಾಮಗ್ರಿ ಬೇಕು?
ಒಂದು ಕಪ್ ಕಾಯಿ ತುರಿ, ಹಸಿ ಮೆಣಸು ಖಾರಕ್ಕೆ ತಕ್ಕಂತೆ ಎರಡು ಅಥವಾ ಮೂರು, ಸ್ವಲ್ಪ ಹುಣಸೆ ಹುಳಿ, ಉಪ್ಪು, ಕರಿಬೇವು, ಇಂಗು, ಜೀರಿಗೆ, ಸಾಸಿವೆ, ಒಣ ಮೆಣಸು.
ಮಾಡೋ ವಿಧಾನ
- ಜಾರ್ ಗೆ ಕಾಯಿ ತುರಿ, ಹಸಿ ಮೆಣಸು, ಹುಣಸೇ ಹುಳಿ, ಉಪ್ಪು ಹಾಕಿ.
- ಇದನ್ನು ತರಿ ತರಿಯಾಗಿ ರುಬ್ಬಿ.
- ಐದಾರು ಎಳೆ ಕರಿಬೇವಿನ ಸೊಪ್ಪು ಹಾಕಿ ಮತ್ತೊಂದು ರೌಂಡ್ ಮಿಕ್ಸಿ ತಿರುಗಿಸಿ.
- ಈಗ ಚಟ್ನಿ ರೆಡಿಯಾಯ್ತು. ಇದಕ್ಕೆ ಒಗ್ಗರಣೆಗೆ ರೆಡಿ ಮಾಡಿ.
- ಸಾಸಿವೆ, ಜೀರಿಗೆ, ಒಣ ಮೆಣಸು ಹಾಕಿ ಒಗ್ಗರಣೆ ಮಾಡಿ. ಸಾಸಿವೆ ಸಿಡಿಯುವಾಗ ಇಂಗು ಮತ್ತು ಕರಿಬೇವು ಹಾಕಿ.
ನೀರ್ ದೋಸೆಯನ್ನು ಚಟ್ನಿ ಅಲ್ಲದೇ ಕಾಯಿ ಬೆಲ್ಲ ಹಾಕಿ ತಿಂದರೂ ಸಖತ್ ರುಚಿ. ಮಲೆನಾಡಿನ ಕಡೆ, ಕರಾವಳಿಯಲ್ಲೂ ಇದು ಫೇಮಸ್ಸು. ಮಾಡೋದು ಬಹು ಸುಲಭ. ಕಾಯಿ ತುರಿಗೆ ಬೆಲ್ಲವನ್ನು ತುರಿದು ಹಾಕಿ ಮಿಕ್ಸ್ ಮಾಡಬೇಕು. ಬೇಕಿದ್ರೆ ಸ್ವಲ್ಪ ಏಲಕ್ಕಿ ಪುಡಿ ಹಾಕಬಹುದು. ನೀರು ದೋಸೆಯನ್ನು ಸಾಂಬಾರ್, ಮೊಸರಿನ ಜೊತೆಗೆ ತಿಂದರೂ ಸಖತ್ ರುಚಿಯಾಗುತ್ತೆ.
ಈ ವಿಧಾನ ಅಲ್ಲದೇ ಇನ್ನೂ ಕೆಲವು ಬಗೆಯಲ್ಲಿ ನೀರು ದೋಸೆ ಮಾಡುತ್ತಾರೆ. ಕಾಯಿ ತುರಿ ಹಾಕದೇ ಬರೀ ಅಕ್ಕಿಯಲ್ಲಿ ಕೆಲವರು ದೋಸೆ ಮಾಡ್ತಾರೆ. ಇದರ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತೆ. ಕಾಯಿ ಹಾಕಿ ಮಾಡಿದ ನೀರ್ ದೋಸೆಗಿಂತ ಇದು ಹೆಚ್ಚು ತೆಳುವಾಗುತ್ತೆ.
ಇನ್ನೊಂದು ವಿಧಾನ ಅಂದರೆ ಮೇಲೆ ತಿಳಿಸಿದ ನೀರ್ ದೋಸೆ ಹಿಟ್ಟಿಗೆ ಸಾಸಿವೆ, ಚೀರಿಗೆ, ಕರಿಬೇವು, ಒಣಮೆಣಸಿನ ಒಗ್ಗರಣೆ ಕೊಟ್ಟು, ಆಮೇಲೆ ಹುಯ್ಯುತ್ತಾರೆ. ಇದರ ರುಚಿ ಸಖತ್ತಾಗಿರುತ್ತೆ.