
-ಜೋಗಿ
ಸಾಗರದ ಮಮತಾ ಓದಿದ ಹನಿಗವಿತೆಯೊಂದು ಸೋಷಲ್ ಮೀಡಿಯಾದಲ್ಲಿ ರೀಲ್ಸ್ ನೋಡುತ್ತಾ ಸಂತೋಷವಾಗಿರುವ ಅನೇಕರನ್ನು ಕಂಗೆಡಿಸಿದೆ. ಹಿತವಾದ ಮುದ್ದುಮುದ್ದು ಪದಗಳ, ನಿರಾತಂಕ ಪದ್ಯಗಳನ್ನು ತೊಡೆತಟ್ಟುತ್ತಾ ಕೇಳಿಸಿಕೊಂಡು ಸುಖವಾಗಿದ್ದವರೆಲ್ಲ ಬೆಚ್ಚಿ ಬಿದ್ದು ಕವಿತೆ ಹೀಗೂ ಇರಬಹುದೇ ಎಂದು ಗಾಬರಿಯಾಗಿದ್ದಾರೆ. ಹೆಣ್ಣೊಬ್ಬಳು ಹೀಗೆ ಬರೆಯಬಹುದೇ ಎಂಬುದು ಈ ದಿಗ್ಭ್ರಮೆಗೆ ಮೊದಲ ಕಾರಣ. ಹಾಗೆ ಬರೆದದ್ದನ್ನು ಎಲ್ಲರೆದುರೂ ಎಷ್ಟೊಂದು ನಿರ್ಬಿಢೆಯಿಂದ ಹೇಳಿಕೊಂಡಿರುವುದು ಆಘಾತವನ್ನು ಇಮ್ಮಡಿಗೊಳಿಸಿದೆ. ಇನ್ನು ಕವಿತೆಯ ಕಾಲ ಮುಗಿಯಿತು. ಎಲ್ಲಿಗೆ ಬಂತು ನೋಡಿ ಕಾವ್ಯ ಅನ್ನುವ ಮಾತುಗಳನ್ನು ಕೇಳಿ ಕವಿತೆ ಮುಗುಳ್ನಗುತ್ತಿರಬಹುದು.
ಹೀಗೆ ಬೆಚ್ಚಿಬೀಳಿಸುವುದು ಕವಿತೆಗೆ ಹೊಸತೇನಲ್ಲ. ಕವಿತೆ ಕೆಂಪಗೆ ಕಾದ ಸರಳು. ಅದು ಯಾವಾಗ ಬರೆಯಿಡುತ್ತದೆ ಎನ್ನುವುದನ್ನು ಊಹಿಸುವುದು ಕಷ್ಟ. ಸಿದ್ಧಲಿಂಗಯ್ಯ ಇಕ್ರಲಾ, ವದೀರ್ಲಾ ಅಂದಾಗ, ಗೋಪಾಲಕೃಷ್ಣ ಅಡಿಗರು ತಕ್ಕ ತೊಡೆನಡುವೆ ಧಾತುಸ್ಖಲನದೆಚ್ಚರವ ಕರುಣಿಸು ಎಂದಾಗ, ಪ್ರತಿಭಾ ನಾವು ಹುಡುಗಿಯರೇ ಹೀಗೆ ಅಂತ ಬರೆದಾಗ, ಕಮಲಾದಾಸ್ I am sinner, I am saint. I am the beloved and the Betrayed ಎಂಬ ಸಾಲುಗಳನ್ನು ಗಂಡಸಿನ ಧಿಮಾಕಿನತ್ತ ತಣ್ಣಗೆ ಎಸೆದಾಗ ‘ಅಪ್ಪಟ ಕಾವ್ಯರಸಿಕ’ರು ಬೆದರಿದ್ದಾರೆ. ಆ ಸಾಲುಗಳು ಹುಟ್ಟಿಸಿದ ಪರಿಣಾಮಕ್ಕೆ ಅಂಜಿದ್ದಾರೆ. ಆ ಅಂಜಿಕೆಯನ್ನು ಅಸಹ್ಯ ಎಂಬಂತೆ ಬಿಂಬಿಸಲು ಯತ್ನಿಸಿದ್ದಾರೆ. ಕವಿತೆಯನ್ನು ಖಂಡಿಸಿದ್ದಾರೆ. ‘ಒಳ್ಳೆಯ ಪದ್ಯ’ ಬರೆಯುವಂತೆ ‘ಕವಿಯನ್ನು ದಾರಿಗೆ ತರಲು’ ನೋಡಿದ್ದಾರೆ. ಪದ್ಯ ಎಂಥ ಕಿಲಾಡಿ ಎಂದರೆ ಅದು ಕವಿಯನ್ನೂ ಧಿಕ್ಕರಿಸಿ ಹೊರಹೊಮ್ಮುತ್ತದೆ. ಕವಿಗೇ ಗೊತ್ತಾಗದಂತೆ ಅದು ದಂಗೆಯೇಳುತ್ತಿರುತ್ತದೆ. ಬರೆದವನು ಕವಿಯೇ ಇರಬಹುದು, ಬರೆಸುವುದು ಕಾಲ ಮತ್ತು ದೇಶ.
ಮಮತಾ ಕವಿತೆ ಓದಿದ ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಆದರೆ ಕವಿಗೋಷ್ಠಿಯಲ್ಲಿ ಇರಲಿಲ್ಲ. ಅಲ್ಲಿಗೆ ಹೋಗಿದ್ದವರ ಹತ್ತಿರ ಮಮತಾ ಕವಿತೆ ಓದಿದಾಗ ಸಭೆಯೇನಾದರೂ ತಲ್ಲಣಿಸಿತೇ ಎಂದು ಕೇಳಿದೆ. ಅಂಥದ್ದೇನೂ ಆಗಿಲ್ಲ, ಚಪ್ಪಾಳೆ ಬಿತ್ತು ಅಂದರು. ಮಮತಾರ ಇದೇ ಕವಿತೆಯಿರುವ ಸಂಕಲನ ಪದಸಂಚಾರ ಮಾರುಕಟ್ಟೆಗೆ ಬಂದು ನಾಲ್ಕೈದು ತಿಂಗಳಾಯಿತು. ಅದನ್ನು ಓದಿದವರ ಬಳಿ ಆ ಕವಿತೆಯೇನಾದರೂ ಕಿರಿಕಿರಿ ಮಾಡಿತೇ ಎಂದು ಕೇಳಿದೆ. ಸಂಕಲನದಲ್ಲಿ ಆ ಪದ್ಯ ಓದಿದ್ದೇ ನೆನಪಿಲ್ಲ ಅಂತ ಕೆಲವರು, ಸುಮ್ಮನೆ ಓದಿಕೊಂಡು ಹೋದೆ, ಏನೂ ಅನ್ನಿಸಲಿಲ್ಲ ಅಂತ ಹಲವರು ಹೇಳಿದರು. ಹಾಗಿದ್ದರೆ ಈಗ ಯಾಕೆ ಕವಿತೆ ಹುಯಿಲೆಬ್ಬಿಸಿದೆ?
ಕವಿತೆ ಸತ್ಯ ಹೇಳುತ್ತಿರುತ್ತದೆ. ಕವಿತೆ ನಮ್ಮ ನಂಬಿಕೆಗಳನ್ನು ಅಲ್ಲಾಡಿಸುತ್ತಿರುತ್ತದೆ. ಕವಿತೆ ನಮಗೆ ಕೇಳಲು ಇಷ್ಟವಿಲ್ಲದ ಸಂಗತಿಗಳನ್ನು ಹೇಳುತ್ತಿರುತ್ತದೆ. ಕವಿತೆ ಸ್ಟೀರಿಯೋಟೈಪ್ –ರೂಢಮಾದರಿಯನ್ನು ಮುರಿಯುತ್ತಿರುತ್ತದೆ. ಹೆಣ್ಣು ಇಂತಿಂಥ ಪದಗಳನ್ನು ಸಾರ್ವಜನಿಕವಾಗಿ ಉಚ್ಚರಿಸಕೂಡದು ಅಂತ ರೂಢ ಮಾದರಿ ಹೇಳುತ್ತಿದ್ದರೆ, ಕವಿತೆ ಅದನ್ನೆಲ್ಲ ಲೆಕ್ಕಿಸದೇ, ಹೆಣ್ಣಿನಿಂದಲೇ ಅಂಥ ಪದಗಳನ್ನು ಹೇಳಿಸುವ ಮೂಲಕ ಪ್ರತಿಗಾಮಿಗಳ ಅಹಂಕಾರವನ್ನು ಮಣಿಸಲು ನೋಡುತ್ತದೆ. ಅಂಥ ಕವಿತೆಯನ್ನು ಎದುರಿಸುವ ಮಾರ್ಗ ನಮಗೆ ಗೊತ್ತಿರುವುದಿಲ್ಲ.
ಇದನ್ನೂ ಓದಿ: ಉಪ್ರೇಂದ್ರನ 'ನಾನು' ಕವಯತ್ರಿ ಮಮತಾ ಸಾಗರ್ 'ನಾನು' ನಡುವೆ ಚಟ್ನಿಯಾದ ಫ್ಯಾನು!
ಒಂದು ಕವಿತೆಯನ್ನು ನಾವು ಏನು ಮಾಡಬಹುದು ಯೋಚಿಸಿ. ದಿನಕ್ಕೆ ಏನಿಲ್ಲವೆಂದರೂ ನೂರು ಕವಿತೆಗಳು ಕಣ್ಣಿಗೆ ಬೀಳುತ್ತಿರುತ್ತವೆ. ಅವುಗಳ ಮೇಲೆ ಕಣ್ಣಾಡಿಸಿ ಮುಂದಕ್ಕೆ ಸಾಗುತ್ತೇವೆಯೇ ಹೊರತು, ಅದು ನಮ್ಮ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಕವಿತೆ ಸಾಯುವುದು ನಿರ್ಲಕ್ಷ್ಯದಿಂದ, ಬೆಳೆಯುವುದು ಪ್ರತಿರೋಧದಿಂದ. ತನ್ನನ್ನು ವಿರೋಧಿಸುವವರ ಪಡೆಯನ್ನು ಹುಟ್ಟುಹಾಕುವುದನ್ನೂ ಕವಿತೆಯೇ ಮಾಡುತ್ತಿರುತ್ತದೆ. ಅದು ಕವಿತೆಗೆ ಇರುವ ಶಕ್ತಿ.
ಯಾರೋ ಹೇಳಿದರು: ಮಮತಾ ಕವಿತೆ ಕೆಟ್ಟದಾಗಿದೆ.
-ಕೆಟ್ಟ ಕವಿತೆಯನ್ನು ಬರೆಯುವ ಹಕ್ಕು ಕವಿಗಿದೆ. ಅದನ್ನು ಓದದೇ ಇರುವ ಸ್ವಾತಂತ್ರ್ಯ ನಮಗಿದೆ.
ಮತ್ಯಾರೋ ಹೇಳಿದರು: ಮಮತಾ ಸಾಗರ ಆ ಕವಿತೆ ಕವನ ಸಂಕಲನದಲ್ಲಿ ಇದ್ದರೆ ಹೀಗಾಗುತ್ತಿರಲಿಲ್ಲ. ಅವರು ಓದಿದ್ದರಿಂದಲೇ ಇಷ್ಟೆಲ್ಲ ರಾದ್ಧಾಂತವಾಗಿದೆ.
-ಕವಿತೆ ಇರುವುದು ಬಚ್ಚಿಡುವುದಕ್ಕೆ ಅಲ್ಲ, ಬಿಚ್ಚಿಡುವುದಕ್ಕೆ.
ಇನ್ನೆಲ್ಲೋ ಓದಿದೆ: ಮಮತಾ ಕವಿತೆಯನ್ನು ಇದುವರೆಗೆ ಕವಿತೆಗಳನ್ನೇ ಓದದವರು ಕೇಳಿಸಿಕೊಂಡು ಗಾಬರಿಯಾಗಿದ್ದಾರೆ. ಅವರು ಓದಿರುವ ವೇದಿಕೆ ಸರಿಯಿಲ್ಲ. ಅಂಥವರ ಮುಂದೆ ಕವಿತೆ ಓದಬಾರದು.
-ಅಂಥ ವೇದಿಕೆಯಲ್ಲೇ ಕವಿತೆಯನ್ನು ಓದಬೇಕು. ಕವಿತೆ ಏನು ಮಹಾ ಮಾಡುತ್ತದೆ ಅನ್ನುವವರಿಗೂ ಕವಿತೆಯ ತಾಕತ್ತು ಗೊತ್ತಾಗುತ್ತದೆ.
ಇನ್ನಾರೋ ಹೇಳಿದರು: ಇವರಿಗೆಲ್ಲ ಕವಿತೆ ಅರ್ಥವೇ ಆಗಿಲ್ಲ. ಅದಕ್ಕೇ ಹೀಗಾಡುತ್ತಿದ್ದಾರೆ.
-ಅದೂ ಸುಳ್ಳು. ಕವಿತೆ ಅರ್ಥವಾಗಿದ್ದರಿಂದಲೇ ಸಿಟ್ಟಾಗಿದ್ದಾರೆ. ಆದರೆ ಅನೇಕರಿಗೆ ಅದು ಅರ್ಥವಾಗಿದೆ ಎಂದು ಒಪ್ಪಿಕೊಳ್ಳುವ ಧೈರ್ಯವಿಲ್ಲ.
ಆರು ಸಾಲುಗಳನ್ನು ಬರೆದು ತಲ್ಲಣ ಉಂಟು ಮಾಡಬಹುದು ಅನ್ನುವುದು ಬರಹಗಾರರೆಲ್ಲ ಸಂಭ್ರಮ ಪಡಬೇಕಾದ ಸಂಗತಿ. ನಮ್ಮ ಮುಂದೆ ಜಡ ಓದುಗರಿಲ್ಲ ಅನ್ನುವುದಕ್ಕಿಂತ ಸಂತೋಷದ ವಿಷಯ ಮತ್ತೇನಿದೆ? ಭಾಷೆಯೂ ಜಡವಾಗಿಲ್ಲ ಅನ್ನುವುದನ್ನೂ ಇಂಥ ಸಂದರ್ಭಗಳು ತೋರಿಸಿಕೊಡುತ್ತವೆ.
ಮಮತಾ ಸಾಗರ ಅವರ ಕವಿತೆ ಯಾಕೆ ಸಿಟ್ಟು ತರಿಸಿತು? ಅದು ಕೆಟ್ಟ ಕವಿತೆ ಅನ್ನುವ ಕಾರಣಕ್ಕೆ ಅಂತ ನಾನು ಅಂದುಕೊಂಡಿಲ್ಲ. ಕೆಟ್ಟ ಕವಿತೆ ಓದಿದಾಗ ಅಯ್ಯೋ ಪಾಪ ಅನ್ನಿಸುತ್ತದೆ. ಅದನ್ನು ಮನಸ್ಸು ತಕ್ಷಣವೇ ಅಳಿಸಿಹಾಕುತ್ತದೆ. ಹೆಚ್ಚೆಂದರೆ ಕವಿ ಮೂರ್ಖ ಅನ್ನಿಸಬಹುದು. ಆದರೆ ಸತ್ಯ ಹೇಳುವ ಕವಿತೆ ಮಾತ್ರ ಕಾಡುತ್ತದೆ, ಬಾಧಿಸುತ್ತದೆ, ನಮ್ಮನ್ನು ಸಿಟ್ಟಾಗುವಂತೆ ಮಾಡುತ್ತದೆ.
ಮಮತಾ ಕವಿತೆ ಬಹಳ ಸರಳವಾಗಿ ಬಹಳಷ್ಟು ಮಂದಿಯ ಮನಸ್ಸಲ್ಲಿ ಇರುವುದನ್ನೇ ಹೇಳಿದೆ. ಹೆಣ್ಣು ಎಂದರೆ ಬಹುತೇಕ ಮಂದಿ ಏನು ಅಂದುಕೊಂಡಿದ್ದಾರೋ ಅದನ್ನು ಕವಿತೆ ಹೇಳುತ್ತದೆ. ಆದರೆ ತಾನು ಹಾಗೆ ಅಂದುಕೊಂಡಿದ್ದೇನೆ ಅಂತ ಒಪ್ಪಿಕೊಳ್ಳುವ ದೈರ್ಯ ಇಲ್ಲದವರು ಕವಿತೆಯನ್ನು ವಿರೋಧಿಸುತ್ತಾರೆ. ನಾಶ ಮಾಡಲು ನೋಡುತ್ತಾರೆ. ಯಾಕೆಂದರೆ ನಾನು ಹಾಗೆ ಅಂದುಕೊಂಡಿಲ್ಲ. ನನ್ನ ಪಾಲಿಗೆ ಹೆಣ್ಣು ಅಷ್ಟೇ ಅಲ್ಲ, ಪೂಜನೀಯಳು ಅಂತೆಲ್ಲ ನಂಬಿಸಲು ನೋಡುವವರಿಗೆ ಈ ಕವಿತೆಯ ಸಾಲು ಆಘಾತಕಾರಿಯಾಗಿಯೇ ಕಾಣಿಸುತ್ತವೆ.
ಹೆಣ್ಣನ್ನು ನಮ್ಮ ಮಹಾಕವಿಗಳ ಸೌಂದರ್ಯಪ್ರಜ್ಞೆ ಚಿತ್ರಿಸಿರುವುದೇ ಹಾಗೆ. ಎಲ್ಲಾ ಸಂಸ್ಕೃತ ಮತ್ತು ಹಳೆಗನ್ನಡದ ಕವಿಗಳು ಆಕೆಯ ದೇಹದ ಚೆಲುವನ್ನು ವರ್ಣಿಸುತ್ತಲೇ ಬಂದಿದ್ದಾರೆ. ಆ ವರ್ಣನೆಯಿಂದ ಪಾರಾಗುವುದು ಹೆಣ್ಣಿಗಷ್ಟೇ ಅಲ್ಲ, ಗಂಡಿಗೂ ಸುಲಭವಲ್ಲ. ಶೂರ, ಧೀರ, ಎಂದಿಗೂ ಅಳದೇ ಇರುವವನು ಮುಂತಾದ ರೂಢಿಗತ ನಂಬಿಕೆಯಿಂದ ಪಾರಾಗಲು ಗಂಡಸು ಎಷ್ಟು ಪಾಡುಪಡುತ್ತಾನೋ ಹೆಣ್ಣು ತನ್ನನ್ನು ರೂಪಿಸಿರುವ ನಂಬಿಕೆಗಳಿಂದ ಪಾರಾಗಲು ಅದಕ್ಕಿಂತ ಹೆಚ್ಚು ಒದ್ದಾಡಬೇಕಿದೆ. ಅಂಥ ಹೊತ್ತಲ್ಲಿ ಗಂಡಸೇ ನಿನ್ನ ಕಣ್ಣಲ್ಲಿ ನಾನು ಇಷ್ಟೇ ಅಲ್ಲವೇ ಎಂಬ ದಿಟ್ಟತನದ ಪ್ರಶ್ನೆಯನ್ನೂ ಆಕೆ ಕೇಳಬೇಕಾಗುತ್ತದೆ. ಮಮತಾ ಅದನ್ನು ಕೇಳಿದ್ದಾರೆ.
ಇದನ್ನೂ ಓದಿ: ದುಡಿವ ಹೆಣ್ಣುಮಕ್ಕಳಿಗೆ ಅಪ್ಪ-ಅಮ್ಮನೇ ವಿಲನ್? ಛಿದ್ರವಾಗ್ತಿದೆ ಮದುವೆಯ ಕನಸು...
ಹೆಣ್ಣನ್ನು ಅರ್ಥಮಾಡಿಕೊಳ್ಳುವ, ಗೌರವಿಸುವ, ಆಕೆಯನ್ನೂ ತನ್ನ ಒಂದು ಭಾಗ ಎಂದು ಭಾವಿಸುವವರಿಗೆ ಈ ಕವಿತೆಯ ಅಂತರಾರ್ಥ ತಿಳಿಯುತ್ತದೆ. ಮಿಕ್ಕವರಿಗೆ ಅದು ಹೊಳೆಯಲು ಇನ್ನೊಂದಷ್ಟು ಸಮಯ ಬೇಕಾಗಬಹುದು. ಕವಿತೆಯ ಅಂತರಾತ್ಮ ತಿಳಿಯದೇ ಇರುವವರನ್ನು ನಾವು ಗೇಲಿ ಮಾಡಬೇಕಾಗಿಲ್ಲ. ಕವಿತೆ ಎಲ್ಲರಿಗೂ ತಿಳಿಯಬೇಕು ಅಂತೇನೂ ಇಲ್ಲವಲ್ಲ. ಆದರೆ ತನಗೆ ತಿಳಿಯದೇ ಹೋದದ್ದೆಲ್ಲ ಬರೆಯಲಿಕ್ಕೂ ಓದಲಿಕ್ಕೂ ಅನರ್ಹ ಅಂಥ ಭಾವಿಸುವುದು ಮಾತ್ರ ಮೂರ್ಖತನ.
ಇಂಗ್ಲಿಷಿನಲ್ಲಿ ಬಂದಿರುವ, ಬರುತ್ತಿರುವ ವಜೈನಾ ಕವಿತೆಗಳು, ಪುಸ್ಸಿ ಕ್ರಾಂತಿ, ವಜೈನಾ ಡಯಲಾಗ್- ಮುಂತಾದವುಗಳನ್ನು ಅನುವಾದಿಸಿ, ಅವುಗಳ ಬಗ್ಗೆ ಬರೆದು ಮಮತಾ ಕವಿತೆಯನ್ನು ಸಮರ್ಥಿಸಿಕೊಳ್ಳಬಹುದು. ಹಾಗೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಕವಿತೆ ದೇಶ, ಭಾಷೆ, ಕಾಲ ಮತ್ತು ತನ್ನ ನೆಲದ ಹಂಗಿನಿಂದ ಅಷ್ಟು ಸುಲಭವಾಗಿ ತಪ್ಪಿಸಿಕೊಳ್ಳಲಾಗುವುದಿಲ್ಲ. ಈ ಆರು ಸಾಲುಗಳು ಕವಿತೆಯಷ್ಟೇ ಅಲ್ಲ, ಪ್ರತಿಪಾದನೆ ಮತ್ತು ಪ್ರತಿರೋಧ ಕೂಡ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.