ಕನ್ನಡದಲ್ಲಿ ಭರವಸೆಯ ಕಾಮಿಡಿ ನಟರು ಸಾಕಷ್ಟಿದ್ದಾರೆ. ಎಲ್ಲರನ್ನು ನಗಿಸುತ್ತಲೇ ಇರುವ ಇವರು ಈಗಿರುವ ಸ್ಥಾನಕ್ಕೆ ಏರಲು ಪಟ್ಟಿರುವ ಪಾಡು, ಹಾಕಿರುವ ಶ್ರಮ ಅಗಣಿತ. ಚಿಕ್ಕ ಚಿಕ್ಕ ಅವಕಾಶಗಳನ್ನೇ ಮೆಟ್ಟಿಲುಗಳಾಗಿ ಬಳಸಿಕೊಂಡು ದೊಡ್ಡ ಅವಕಾಶದತ್ತ ಸಾಗುತ್ತಿರುವ ಕನ್ನಡದ ಭರವಸೆಯ ನಟರ ಸಾಲಿನಲ್ಲಿ ನಿಲ್ಲುವವರು ಪವನ್. ನಾಟಕ, ಧಾರಾವಾಹಿ, ಚಲನಚಿತ್ರಗಳಲ್ಲಿ ನಟಿಸುತ್ತಾ ಬಂದಿರುವ ಪವನ್ ಅವರ ಬಣ್ಣದ ಬದುಕಿನ ಕಥಾನಕವಿದು.
ಇವರ ಮೂರ್ತಿ ಚಿಕ್ಕದಾದರೂ ಪ್ರತಿಭೆ ದೊಡ್ಡದು. ರಂಗಭೂಮಿಯಲ್ಲಿ ಎರಡು ದಶಕಗಳ ಕಾಲ ದುಡಿದು ಮಜಾ ಟಾಕೀಸ್, ಮಜಾ ವೀಕೆಂಡ್‌ಗಳಲ್ಲಿ ಎಲ್ಲರನ್ನೂ ನಕ್ಕು ನಗಿಸುತ್ತಿರುವುದರ ಜೊತೆಗೆ ಕಂಠಿ, ಆಕಾಶ್ ರೀತಿಯ ಹಿಟ್ ಚಿತ್ರಗಳಿಗೂ ಬಣ್ಣ ಹಚ್ಚಿದ್ದ ನಟ ಪವನ್ ಸಾಗಿ ಬಂದ ಹಾದಿ ಸಾಕಷ್ಟು ಕಠಿಣವಾದ್ದದ್ದು, ಟಿ.ಎಸ್. ನಾಗಾಭರಣ, ಬಿ.ವಿ. ಕಾರಂತರ ಗರಡಿಯಲ್ಲಿ ಬೆಳೆದ ಪವನ್ ಬೆನಕ ಸೇರಿಂದಂತೆ ಹಲವಾರು ನಾಟಕ ತಂಡಗಳಲ್ಲಿ ಇಂದಿಗೂ ಸಕ್ರಿಯ.
ಕುಳ್ಳನಾಗಿದ್ದಕ್ಕೆ ನಟನೆಗೆ ಬಂದೆ
undefined
ಪೈಲೆಟ್ ಆಗಬೇಕು ಎಂದು ಕನಸು ಹೊತ್ತಿದ್ದ ಗುಬ್ಬಿ ಮೂಲದ ಈ ಪ್ರತಿಭೆ ಮುಂದೆ ಆಗಿದ್ದು ನಟ, ನಿರ್ದೇಶಕ. ‘ನನಗೆ ಪೈಲೆಟ್ ಆಗಬೇಕು ಎನ್ನುವ ಆಸೆ ಇತ್ತು. ಆದರೆ ಎತ್ತರಕ್ಕೆ ಬೆಳೆಯಲೇ ಇಲ್ಲ. ಕುಳ್ಳ ಆಗಿದ್ದರಿಂದ ಆ ಆಸೆ ಕೈ ಬಿಟ್ಟೆ. ಒಮ್ಮೆ ಸಮ್ಮರ್ ಕ್ಯಾಂಪ್‌ನಲ್ಲಿ ಬೆನಕ ತಂಡ ಮಕ್ಕಳ ನಾಟಕ ಮಾಡಿಸುತ್ತಿತು ಮನೆಯವರು ಅಲ್ಲಿಗೆ ಸೇರಿಸಿದರು. ನಿಜವಾಗಿ ಹೇಳಬೇಕೆಂದರೆ ನನ್ನ ಜೀವನ ಶುರುವಾಗಿದ್ದೇ ಅಲ್ಲಿಂದ. ನಾಗಾಭರಣ, ಕಾರಂತರು ನನಗೆ ಗುರುವಾಗಿ ಸಾಕಷ್ಟು ಕಲಿಸಿದರು. ನಾಟಕ ಮಾಡುತ್ತಾ ಮಾಡುತ್ತಾ ಜೀವನ ತಿಳಿದುಕೊಂಡೆ’ ಎನ್ನುವ ಪವನ್ ಕೊಟ್ರೇಶಿ ಕನಸು, ಸಂಕ್ರಾಂತಿ, ಗೋಧೂಳಿ ಮೊದಲಾದ ಧಾರಾವಾಹಿಗಳಿಗೆ ಸಹ ನಿರ್ದೇಶಕನಾಗಿಯೂ ದುಡಿದವರು.
ಸಮಯ ಪ್ರಜ್ಞೆ ಕಲಿಸಿದ ಕಾರಂತರು
‘ಒಮ್ಮೆ ಏನಾಯಿತು ಎಂದರೆ, ನಾಟಕಕ್ಕೆ 9 ಗಂಟೆಗೆ ಹೋಗಬೇಕಿದ್ದ ನಾನು 9.30ಕ್ಕೆ ಹೋದೆ. ಆಗ ಎಲ್ಲರ ಮುಂದೆ ಕಾರಂತರು ‘ಯಾಕ್ ಲೇಟು’ ಎಂದರು, ನಾನು ಟ್ರಾಫಿಕ್ ಇತ್ತು ಎಂದೆ. ಆಗ ಅವರು ‘ಮನುಷ್ಯ ಸತ್ತರೆ ಮಾತ್ರ ಎಕ್ಸೂಸಿವ್. ಅದ್ನನು ಬಿಟ್ಟರೆ ಒಬ್ಬ ನಟ ಸಮಯಕ್ಕೆ ಸರಿಯಾಗಿ ಇರಬೇಕು. ನಿನ್ನೊಬ್ಬನಿಂದ ಇಷ್ಟೊಂದು ಜನರ ಸಮಯ ವ್ಯರ್ಥವಾಯಿತು. ನಟನಾದವನು ಸಮಯಕ್ಕೆ ಬೆಲೆ ನೀಡಿದರೆ ಮಾತ್ರ ಜಗತ್ತು ಅವನಿಗೆ ಬೆಲೆ ನೀಡುತ್ತೆ’ ಎಂದು ಹೇಳಿ ಬೈದಿದ್ದರು. ಅಂದಿನಿಂದ ಇಂದಿನವರೆಗೂ ಒಂದು ದಿನವೂ ನಾನು ಯಾರನ್ನೂ ಕಾಯಿಸಿಲ್ಲ’ ಎನ್ನುತ್ತಾರೆ ಪವನ್
ಡಿಪ್ರೆಷನ್‌ಗೆ ಹೋಗಿದ್ದೆ
‘ನಾಲ್ಕು ವರ್ಷದ ಹಿಂದೆ ನನಗೆ ನನ್ನದೇ ಆದ ಸಾಕಷ್ಟು ಕಮೀಟ್ಮೆಂಟ್ಗಳಿದ್ದವು. ಬೈಕ್‌ಗೆ ಪೆಟ್ರೋಲ್ ಹಾಕಿಸಿಕೊಳ್ಳಲೂ ಕಷ್ಟವಾಗುತ್ತಿತ್ತು. ಆದರೆ ನನಗೆ ಆಗ ಅವಕಾಶಗಳೇ ಇರಲಿಲ್ಲ. ಏನು ಮಾಡುವುದು ಎಂದು ಗೊಂದಲವಾಗಿ, ತಲೆ ಕೆಟ್ಟು, ಡಿಪ್ರೆಷನ್‌ಗೆ ಹೋಗಿದ್ದೆ. ನಟನಾಗಿದ್ದಕ್ಕೆ ಏನು ಸಿಕ್ಕಿತು, ಇವನು ಕೆಲಸಕ್ಕೆ ಬಾರದವನು, ಕೆಟ್ಟು ಹೋಗುತ್ತಾನೆ ಎಂದೆಲ್ಲಾ ನನ್ನ ಸಂಬಂಧಗಳು ಮಾತಾಡಿದರು. ಸಾಕಷ್ಟು ನೋವಾಗಿ ದಿನೇ ದಿನೆ ಕುಗ್ಗತೊಡಗಿದೆ. ಆಗ ಸಿಕ್ಕವರೇ ಸೃಜನ್ ಲೋಕೇಶ್. ಮಜಾ ಟಾಕೀಸ್ ಮಾಡುವಾಗಾಗ ಅವನೇ ಕರೆದು ಬಾ ನನ್ನ ಜೊತೆ ಕೆಲಸ ಮಾಡು ಎಂದ. ಅದೇ ನನ್ನ ನಟನಾ ಬದುಕಿನ ದೊಡ್ಡ ಟರ್ನಿಂಗ್ ಪಾಯಿಂಟ್. ಅಲ್ಲಿಯೇ ನನ್ನ ಪ್ರತಿಭೆಗೆ ಹೆಚ್ಚು ಅವಕಾಶ ದೊರಕಿದ್ದು’ ಎನ್ನುವ ಪವನ್ ಎರಡು ವರ್ಷಗಳ ಕಾಲ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಿದವರು.
ಖಿನ್ನತೆ ವಿರುದ್ಧ ಹೋರಾಡೋ ತಂತ್ರಗಳಿವು
ಅವಮಾನದಿಂದ ಮೇಲೆದ್ದೆ
‘ನಾನೊಂದು ಸಿನಿಮಾದಲ್ಲಿ 15 ದಿನ ಶೂಟಿಂಗ್ ಮಾಡಿದ್ದೆ. ಆ ಚಿತ್ರ ರಿಲೀಸ್ ಕೂಡ ಆಯ್ತು, ಆದರೆ ಸಿನಿಮಾ ನೋಡಿದಾಗ ನನ್ನದು ಇದ್ದಿದ್ದೂ ಎರಡು ಸೀನ್ ಮಾತ್ರ. ಸಾಕಷ್ಟು ಬೇಸರವಾಯಿತು. ಸಿನಿಮಾ ನೋಡಿ ಹೊರಗೆ ಬಂದಾಗ ತುಂಬಾ ಮಳೆ ಬರುತ್ತಿತ್ತು. ನನ್ನ ಬೈಕ್ ತಳ್ಳಿಕೊಂಡೇ ಮಳೆಯಲ್ಲಿ ನೆನೆದುಕೊಂಡು ಕಣ್ಣೀರು ಹಾಕುತ್ತಾ ಮನೆಯತ್ತ ನಡೆದುಕೊಂಡು ಬಂದೆ. ಆಗಲೇ ನಾನು ನಿರ್ಧಾರ ಮಾಡಿದ್ದು, ಇಲ್ಲೇ, ಇದೇ ಅವಮಾನ, ಅಪಮಾನದ ಬುಡದಿಂದಲೇ ಮೇಲೆದ್ದು ಬರಬೇಕು ಎಂದು. ಮತ್ತೊಂದು ಸಾರಿ ಶೂಟಿಂಗ್ ಸ್ಪಾಟ್‌ನಲ್ಲಿ ಚೇರ್ ಮೇಲೆ ಕೂತು ಊಟ ಮಾಡುತ್ತಿದ್ದಾಗ ಒಬ್ಬರು ಬಂದು ‘ಏ ಎದ್ದೇಳು ಮೇಲೆ, ಚೇರ್ ಮೇಲೆ ಬೇರೆ ಕೂತವ್ನೆ’ ಎಂದು ಗದರಿಸಿದರು. ಆಗ ನನಗೆ ಊಟವೇ ಸೇರಲಿಲ್ಲ. ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ. ಹಗಲು ರಾತ್ರಿ ದುಡಿದೆ. ಆಮೇಲೆ ಎಂಟು ವರ್ಷಗಳಾದ ಮೇಲೆ ಅವರೇ ನನಗೆ ಸಿಕ್ಕಿದರು. ನಾನೇ ಹೋಗಿ ಅಣ್ಣ ನೀನು ಅಂದು ಹಾಗೆ ಹೇಳಿದ್ದಕ್ಕೆ ನಾನಿಂದು ಒಂದು ಮಟ್ಟಕ್ಕೆ ಬಂದೆ ಎಂದು ಹೇಳಿದೆ’ ಎನ್ನುವ ಪವನ್ ಇಂದು ಸಾಕಷ್ಟು ಸಿನಿಮಾಗಳಲ್ಲಿ ಬೇಡಿಕೆ ಹೊಂದಿರುವ ಹಾಸ್ಯ ನಟ.
ವಿವಾಹಿತನನ್ನು ಮದುವೆಯಾಗಿ ಖಿನ್ನತೆಗೆ ಹೋದೆ
ಯಶ್ ಡೆಡಿಕೇಷನ್ ಇಷ್ಟ
‘ಯಶ್ ಬೆನಕದಲ್ಲಿ ನನ್ನ ಜೂನಿಯರ್. ಆದರೆ ಅವನ ಬಗ್ಗೆ ನನಗೆ ಎಲ್ಲಿಲ್ಲದ ಅಭಿಮಾನ. ಯಾಕೆಂದರೆ ಅವನು ರಂಗಭೂಮಿಯಲ್ಲಿ ತುಂಬಾ ದುಡಿದ. ಯಾವ ಕೆಲಸ ಕೊಟ್ಟರೂ ಮಾಡುತ್ತಿದ್ದ. ಮೂರು ಫ್ಲೋರ್‌ನಿಂದ ಕಾಸ್ಟೂಂ ಟ್ರಂಕ್‌ಗಳನ್ನು ಒಬ್ಬನೇ ಇಳಿಸುತ್ತಿದ್ದ. ಮೈಸೂರಿನಿಂದ ಬಂದು ಎಲ್ಲೋ ಉಳಿದುಕೊಂಡು ಅವನು ತೋರುತ್ತಿದ್ದ ಜೀವನ ಪ್ರೀತಿ ನನಗೆ ಇಷ್ಟ. ಸಜ್ಜನ್ ರಾವ್ ಸರ್ಕಲ್‌ಗೆ ಹೋದಾಗ ಅಲ್ಲಿ ಫುಟ್‌ಪಾತ್ ಮೇಲೆ ಅವನು ನಾನು, ನನ್ನ ಫ್ರೆಂಡ್ಸ್ ಎಲ್ಲಾ ಒಟ್ಟಿಗೆ ಸೇರಿ ಟೀ ಕುಡಿಯುತ್ತಿದ್ದ ನೆನಪು ಈಗಲೂ ನನ್ನಲ್ಲಿ ಉತ್ಸಾಹ ತುಂಬುತ್ತೆ’ ಎನ್ನುತ್ತಾರೆ ಪವನ್.