ಜಗತ್ತಿನ ಎತ್ತರದ ಯುದ್ಧಭೂಮಿಯಲ್ಲಿ ಯೋಧರ ಬದುಕು ಹೇಗಿರುತ್ತದೆ ಗೊತ್ತಾ?

By Web DeskFirst Published Sep 25, 2019, 1:19 PM IST
Highlights

ನೋಡಲು ಕೈಲಾಸ, ಕೊಂಚ ಎಡವಿದರೂ ಮರೆಸೇಬಿಡುತ್ತದೆ ನಿಮ್ಮ ವಿಳಾಸ- ಸಿಯಾಚಿನ್ ಎಂಬ ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಇರುವುದೇ ಹಾಗೆ. ಇದು ಕಣ್ಣಿಗಷ್ಟೇ ತಂಪಲ್ಲ. ದೇಹವನ್ನು ಕ್ಷಣಮಾತ್ರದಲ್ಲಿ ಕೊರಡಾಗಿಸುವಷ್ಟು ತಂಪು. ಅಂದರೆ, ಮೈನಸ್ 60 ಡಿಗ್ರಿ ತಾಪಮಾನ. ಇಂಥ ಈ ರುದ್ರಭೀಭತ್ಸ ಪ್ರದೇಶದಲ್ಲಿ ನಮ್ಮ ಯೋಧರು ಪ್ರತಿ ನಿತ್ಯ ಅನುಭವಿಸುವ ಕಷ್ಟಕೋಟಲೆಗಳ ಸಣ್ಣದೊಂದು ಝಲಕ್ ಇಲ್ಲಿದೆ...

ಭಾರತ- ಪಾಕಿಸ್ತಾನ ನಡುವಿನ ಗಡಿ ನಿಯಂತ್ರಣ ರೇಖೆ ಬಳಿ ಇರುವ ಸಿಯಾಚಿನ್ ಜಗತ್ತಿನ ಅತಿ ಎತ್ತರದ ಯುದ್ಧಭೂಮಿ. ಇದು ವಿಶ್ವದ ಎರಡನೇ ಹಾಗೂ ಕಾರಕೋರಂ ರೇಂಜ್‌ನ ಅತಿ ಉದ್ದದ ಹಿಮನದಿಯಾಗಿದ್ದು, ಸುಮಾರು 78 ಕಿಲೋಮೀಟರುಗಳಷ್ಟು ಉದ್ದವಿದೆ.

ಹೀಗೆ ಎಲ್ಲೆಲ್ಲೂ ಹಾಸಿರುವ ಹಿಮವೋ ಹಿಮದ ಗುಡ್ಡೆಗಳ ಮೇಲೆ ಕೂಡಾ ನಮ್ಮ ಯೋಧರು ಸದಾ ಸೇವೆಗೆ ಸಿದ್ಧರಾಗಿ ಇರುತ್ತಾರೆಂದರೆ ಅವರಿಗೆ ಸಲಾಂ ಎನ್ನದೆ ಹೇಳಲು ಬೇರೆ ಪದಗಳಿಲ್ಲ. ವರ್ಷಪೂರ್ತಿ ಮೈನಸ್‌ನಲ್ಲೇ ಇರುವ ತಾಪಮಾನದ ನಡುವೆ ಅವರು ಹೇಗೆ ಜೀವನ ನಡೆಸುತ್ತಾರೆ ಎಂದು ಆಶ್ಚರ್ಯವಾಗುತ್ತದೆಯಲ್ಲವೇ? 

ಭೂತದ ಕಾಟ ಕಾಡುವ ಭಾರತದ 6 ರೈಲು ನಿಲ್ದಾಣಗಳು

ಇಂಥ ಸ್ಥಳದಲ್ಲಿ ಬದುಕು ನಡೆಸಬೇಕೆಂದರೆ ಯೋಧರು ಕೇವಲ ದೈಹಿಕವಾಗಿ ಸದೃಢರಾಗಿದ್ದರೆ ಸಾಲದು, ಅವರ ಮಾನಸಿಕ ಸದೃಢತೆ ಸಿಕ್ಕಾಪಟ್ಟೆಯೇ ಇರಬೇಕು. ಕೇವಲ ಜೀವಿಸಲು ಬೇಕಾದ ಹವಾಮಾನವಿಲ್ಲ ಎಂಬುದಷ್ಟೇ ಅಲ್ಲ, ಮೂಲಸೌಕರ್ಯಗಳು ಕೂಡಾ ಇಲ್ಲಿ ಸೊನ್ನೆಯೇ. ಸಮುದ್ರ ಮಟ್ಟದಿಂದ 5700 ಅಡಿ ಎತ್ತರದಲ್ಲಿರುವ ಈ ಹಿಮಗಡ್ಡೆಯ ನಡುವೆ ಯೋಧರು ಹೇಗೆ ಆ್ಯಕ್ಟಿವ್ ಆಗಿರುತ್ತಾರೆಂಬುದು ನಮ್ಮ ಕಲ್ಪನೆಗೆ ಕೂಡಾ ನಿಲುಕದ ಪ್ರಶ್ನೆಯೇ. ಆದರೂ, ಈ ಬಗ್ಗೆ ಅಲ್ಪಸ್ವಲ್ಪ ತಿಳಿವಳಿಕೆ ಬೇಕೆಂದರೆ, ಸಿಯಾಚಿನ್ ಹಿಮನದಿಯ ಕುರಿತ ಕೆಲ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ನೋಡಿ...

ಫ್ರಾಸ್ಟ್‌ಬೈಟ್‌ನ ಅಪಾಯ

ಅತಿಯಾದ ತಣ್ಣಗಿನ ವಸ್ತುವಿಗೆ ದೇಹದ ಅಂಗಗಳು ತಾಕಿದಾಗ ಮೂಗು, ಕಣ್ಣು, ಕಿವಿ, ಕೆನ್ನೆ, ಬೆರಳುಗಳಂಥ ಸಣ್ಣ ಪುಟ್ಟ ಅಂಗಗಳು ಮರಗಟ್ಟಿ, ಗಟ್ಟಿಯಾಗಿ ಫ್ರೀಜ್ ಆಗಿಹೋಗುತ್ತವೆ. ಕೆಲ ಪ್ರಕರಣಗಳಲ್ಲಿ ನರಗಳಿಗೆ ಹಾನಿಯಾಗಬಹುದು, ಮತ್ತೆ ಕೆಲವರಿಗೆ ಇನ್ಫೆಕ್ಷನ್ ಆಗಬಹುದು. ಚರ್ಮ ಹಾಗೂ ಅದರೊಳಗಿನ ಟಿಶ್ಯೂಗಳು ಫ್ರೀಜ್ ಆಗುವುದೇ ಫ್ರಾಸ್ಟ್‌ಬೈಟ್. ಸಿಯಾಚಿನ್‌ನ ಹವಾಮಾನಕ್ಕೆ ಕೂಡಾ ಕೇವಲ 15 ಸೆಕೆಂಡ್‌ಗಳಿಗೆ ಚರ್ಮ ತಾಕಿದರೂ ಫ್ರಾಸ್ಟ್‌ಬೈಟ್ ಆಗೇ ಬಿಡುತ್ತದೆ. ಯೋಧ ಮೈಮರೆತು ಒಂದು ಕ್ಷಣ ಬರಿಗೈಲಿ ಗನ್  ಮುಟ್ಟಿದರೂ, ಅದು ಆತನ ಜೀವನದ ಅತಿ ದೊಡ್ಡ ತಪ್ಪಾಗಿ ಬಿಡಲಿದೆ. ಏಕೆಂದರೆ ಇದರಿಂದ ಆತ ಬೆರಳುಗಳನ್ನು ಕಳೆದುಕೊಳ್ಳಬೇಕಾಗಿ ಬರಬಹುದು. ತೀರಾ ಗಂಭೀರವಾದ ಪ್ರಕರಣಗಳಲ್ಲಿ ಅಂಗಗಳು ಹಾಗೆಯೇ ಉದುರಿ ಬೀಳಬಹುದು!

ಹವಾಮಾನ  ಪರಿಸ್ಥಿತಿ

ಡಾರ್ಕ್ ಟೂರಿಸಂ; ಕ್ರೂರವಾದ ಕಣ್ಣೀರ ಕಥೆ ಹೇಳುವ ತಾಣಗಳಿವು

ಸಮುದ್ರ ಮಟ್ಟದಿಂದ 5000 ಅಡಿಗಳ ಮೇಲೆ ಕೊರೆವ ಮೈನಸ್ 60 ಡಿಗ್ರಿ ತಾಪಮಾನ ನಮ್ಮಂಥ ಜೀವಿಗಳಿಗಾಗಿಯಂತೂ ಖಂಡಿತಾ ವಿನ್ಯಾಸವಾದುದಲ್ಲ. ಅಲ್ಲಿ ಯಾರೂ ಹೆಚ್ಚು ಕಾಲ ಬಾಳಲಾರರು. ಇಂಥ ಅತ್ಯಪಾಯಕಾರಿ ಸ್ಥಳದಲ್ಲಿ ಯೋಧರು ಬದುಕಲು, ನಮ್ಮೆಲ್ಲರನ್ನು ರಕ್ಷಿಸಲು ಒದ್ದಾಡುತ್ತಾ ಇರುತ್ತಾರೆ. ಈ ಹವಾಮಾನದಲ್ಲಿ ಹೆಚ್ಚು ಕಾಲ ಇರುವುದರಿಂದ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಮಿತಿಯಿರದ ಕಷ್ಟ

ಕೆಲವೊಮ್ಮೆ ಜನನಿಬಿಡ ಪ್ರದೇಶಕ್ಕೆ ಬರಬೇಕೆಂದರೆ ಯೋಧರು 128 ಕಿಲೋಮೀಟರ್ ದೂರ ನಡೆದೇ ಬರಬೇಕು. ಏನಿಲ್ಲವೆಂದರೂ ಕನಿಷ್ಠ 28 ದಿನಗಳು ಬೇಕಾಗುತ್ತವೆ. ಬಹುತೇಕ ಸಮಯ ಫೈಬರ್‌ಗ್ಲಾಸ್‌ನಿಂದ ಮಾಡಿದ ಟೆಂಟ್‌ ಒಂದರಲ್ಲಿ ಸುಮಾರು 6 ಜನ ಯೋಧರು ಹೊಂದಾಣಿಕೆ ಮಾಡಿಕೊಂಡಿರಬೇಕಾಗುತ್ತದೆ. ಇದು ಕಿಂಗ್ ಸೈಜ್ ಹಾಸಿಗೆಗಿಂತ ದೊಡ್ಡದೇನಲ್ಲ. ಇಂಥ ಸಂದರ್ಭದಲ್ಲಿ ಅವರನ್ನು ಬೆಚ್ಚಗಿಟ್ಟುಕೊಳ್ಳಲು ಸೀಮೆಎಣ್ಣೆ ಹೊರತಾಗಿ ಬೇರೇನೂ ಇರುವುದಿಲ್ಲ. 

ಹಿಮಪಾತ ಹಾಗೂ ಹಿಮಬಿರುಗಾಳಿ 

ಇಲ್ಲಿ ಹಿಮದ ಬಿರುಗಾಳಿ ಎದ್ದರೆ ಮೂರು ವಾರಗಳ ಕಾಲ ಅದು ಹಾಗೇ ರುದ್ರತಾಂಡವವಾಡಬಹುದು.  ಇಷ್ಟು ಎತ್ತರದಲ್ಲಿ ಗಾಳಿಯು ಸೆಕೆಂಡುಗಳಲ್ಲಿ ಗಂಟೆಗೆ 100 ಮೀಟರ್‌ನಷ್ಟು ವೇಗವಾಗಿ ಬೀಸಬಹುದು. ಇದರಿಂದ ತಾಪಮಾನ ಮೈನಸ್ 60 ಡಿಗ್ರಿಗೆ ಇಳಿಯುತ್ತದೆ. ಇನ್ನು ಇಲ್ಲಿ ವಾರ್ಷಿಕ 3 ಡಜನ್ ಅಡಿಗಳಷ್ಟು ಸ್ನೋಫಾಲ್ ಆಗುತ್ತದೆ. ಹೀಗೆ ಹಿಮಪಾತವಾಗುವಾಗ ಯೋಧರು ನಿರಂತರವಾಗಿ ಶೊವೆಲ್ ಬಳಸುತ್ತಲೇ ಇರಬೇಕು. ಇಲ್ಲದಿದ್ದಲ್ಲಿ ಅವರ ಮಿಲಿಟರಿ ಪೋಸ್ಟ್ ಕ್ಷಣಾರ್ಧದಲ್ಲಿ ನಿರ್ನಾಮವಾಗುತ್ತದೆ. 

ಸುಖ ಪ್ರಯಾಣಕ್ಕೆ ಸಪ್ತ ಸೂತ್ರಗಳು!

ತಾಜಾ ಆಹಾರ

ಇಂಥ ಸ್ಥಳದಲ್ಲಿ ತಾಜಾ ಆಹಾರ ಸಿಗುವುದು ಕಷ್ಟಸಾಧ್ಯವೇ. ಅಷ್ಟೊಂದು ದಿನಗಳ ಕಾಲ ಯೋಧರು ತಾಜಾ ಆಹಾರವನ್ನೇ ಸೇವಿಸದೆ ಹೇಗೆ ಬದುಕುತ್ತಾರೆಂಬುದು ಚಮತ್ಕಾರದಂತೆಯೇ ಭಾಸವಾಗುತ್ತದೆ. ಸಿಯಾಚಿನ್‌ನಲ್ಲಿ ತಿನ್ನಲು ನೀವು ಸೇಬು ಹಣ್ಣನ್ನು ತೆಗೆದುಕೊಂಡು ಹೋದರೆ ಮರುಬೆಳಗ್ಗೆ ನೋಡುವಷ್ಟರಲ್ಲಿ ಅದು ಕಲ್ಲಿನಂತಾಗಿರುತ್ತದೆ. 

ತರಬೇತಿ

ಈ ಮೇಲಿನ ಸ್ಥಳದಲ್ಲಿ ಭಾರತೀಯ ಸೇನೆಯು ತಮ್ಮ ಸಮಯದ ಶೇ.80ರಷ್ಟನ್ನು ಯೋಧರನ್ನು ನಿಯೋಜಿಸುವುದರಲ್ಲೇ ಕಳೆಯುತ್ತದೆ. ಇಲ್ಲಿ ಸೇನೆಯ ಸೈನ್‌ಬೋರ್ಡ್ "ನಮ್ಮ ದಿನಚರಿಯೇ ಅತಿ ಕಷ್ಟಕರವಾದುದು. ಅಸಾಧ್ಯ ಎಂಬುದಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು"  ಎನ್ನುತ್ತದೆ. 

ಅಗತ್ಯ ವಸ್ತು ಪೂರೈಕೆ

ಸೇನೆಯ ಪೈಲಟ್‌ಗಳು ತಮ್ಮ ಹೆಲಿಕಾಪ್ಟರನ್ನು ಈ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು ಹರಸಾಹಸ ಮಾಡಬೇಕಾಗುತ್ತದೆ. ಪ್ರತಿದಿನ ಅವರು ಇಲ್ಲಿನ ಮಿಲಿಟರಿ ಪೋಸ್ಟ್‌ಗಳ ಬಳಿ ಅಗತ್ಯ ವಸ್ತುಗಳನ್ನು ಹಾಕಿ ಹೋಗುತ್ತಾರೆ. ಹೀಗೆ ಸಪ್ಲೈಗಳನ್ನು ಹಾಕಲು ಪೈಲಟ್‌ಗಳಿಗೆ ಒಂದು ನಿಮಿಷ ಕೂಡಾ ಸಮಯವಿರುವುದಿಲ್ಲ. ಏಕೆಂದರೆ, ಕೆಲವೇ 100 ಮೀಟರ್‌ಗಳ ಅಂತರದಲ್ಲಿ ಶತ್ರು ಸೇನೆಯ ಪೋಸ್ಟ್ ಇದೆ. 

click me!