ಹಬ್ಬಕ್ಕೆ ಹೊಸ ಸೀರೆ ಬಂತು, ಬ್ಲೌಸ್‌ ಕಥೆ ಏನು?

By Web DeskFirst Published Aug 8, 2019, 10:11 AM IST
Highlights

ಸಾವಿರ ರುಪಾಯಿ ಸೀರೆಯ ಬ್ಲೌಸ್‌ ಹೊಲಿಸಿದ್ದಕ್ಕೆ ಮೂರು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣ ತೆರಬೇಕು, ಅಷ್ಟಾಗಿಯೂ ಬ್ಲೌಸ್‌ ಮಾಮೂಲಿನ ಹಾಗಿದ್ರೆ ಹೆಣ್ಮಕ್ಕಳ ದುಃಖ ಯಾರಿಗೂ ಬೇಡ. ಹಬ್ಬದ ಟೈಮ್‌ನಲ್ಲಿ ಹೆಣ್ಮಕ್ಕಳ ಖುಷಿ ಹೆಚ್ಚಿಸುವ, ಕ್ರಿಯೇಟಿವ್‌ ಜೊತೆಗೆ ಟ್ರೆಂಡಿ ಅನಿಸಿಕೊಂಡಿರುವ ಕೆಲವು ಸಾರಿ ಬ್ಲೌಸ್‌ ಡಿಸೈನ್‌ಗಳು ಇಲ್ಲಿವೆ.

- ನಿಶಾಂತ ಕಮ್ಮರಡಿ

‘ಲೈಫ್‌ನಲ್ಲಿ ಏನ್ಬೇಕಾದ್ರೂ ಮಾಡ್ಬಹುದು ಮಗಾ, ಹಬ್ಬದ ಟೈಮ್‌ನಲ್ಲಿ ಹೆಂಗಸರ ಜೊತೆ ಶಾಪಿಂಗ್‌ ಹೋಗೋ ಕಷ್ಟಯಾರ್ಗೂ ಬೇಡ. ಅದಾದ್ರೂ ಓಕೆ, ಆಮೇಲೆ ಲಕ್ಷಾಂತರ ಬ್ಲೌಸ್‌ ಡಿಸೈನ್‌ಗಳನ್ನು ಹರವಿಟ್ಟುಕೊಂಡು, ಇದ್ರಲ್ಲಿ ಯಾವ ಡಿಸೈನ್‌ ಬ್ಲೌಸ್‌ ಚೆನ್ನಾಗಿರುತ್ತೆ ಅಂತ ಕೇಳೋ ಹಿಂಸೆ, ನಾವು ಏನಂದ್ರೂ ಅವರಿಗೆ ಸರಿ ಹೋಗಲ್ಲ...’

ಮದುವೆ ಆದ ಮೇಲೆ ಬಲು ಅಪರೂಪವಾಗಿದ್ದ ಗೆಳೆಯ ಮೊನ್ನೆ ಮೊನ್ನೆ ಸಿಕ್ಕವನು ಒಂದೇ ಸವನೆ ಗೋಳೋ ಅಂದ. ವಿಷಯ ಬೇರೆಯವ್ರಿಗೆ ಸಿಲ್ಲಿ, ಅನುಭವಿಸಿದವ್ರಿಗಷ್ಟೇ ಅದರ ಭಯಾನಕತೆಯ ಅರಿವಾಗಿರುತ್ತೆ. ಇರಲಿ, ಗೆಳೆಯ, ಅವನ ಸಂಗಾತಿಯೂ ಸೇರಿದಂತೆ, ಹಬ್ಬದ ಸೀರೆಗೆ ಬ್ಲೌಸ್‌ ಹೊಲಿಸಿಕೊಳ್ಳಹೊರಟ ಎಲ್ಲ ಮುಗುದೆಯರಿಗೆ ಈ ಬರಹ ಅರ್ಪಣೆ. ಬ್ಲೌಸ್‌ ಹೊಲಿಸಿಕೊಳ್ಳೋ ವಿಚಾರವಾಗಿ ಒಂದಿಷ್ಟುಹೊಸ ಐಡಿಯಾಗಳು ನಿಮಗಿಲ್ಲಿ ಕಾಣಿಸಿದರೆ ನಮ್ಮ ಪ್ರಯತ್ನ ಸಾರ್ಥಕ.

ಸೀರೆಯ ಬಣ್ಣ, ವಿನ್ಯಾಸಕ್ಕೆ ಅನುಗುಣವಾಗಿ ಬ್ಲೌಸ್‌ ಡಿಸೈನ್‌ ಇರಲಿ

ಬ್ಲೌಸ್‌ ಡಿಸೈನ್‌ ಹೀಗೇ ಇರಲಿ ಅಂತ ರಾಜಾರೋಷವಾಗಿ ಷರಾ ಬರೆಯಲಿಕ್ಕಾಗುವುದಿಲ್ಲ. ಸೀರೆಯ ವಿನ್ಯಾಸಕ್ಕೆ ತಕ್ಕಂತ ಬ್ಲೌಸ್‌ಗಳಿದ್ದರೆ ಚೆನ್ನ. ಹೊಸದಾಗಿ ಬಂದ ಡಿಸೈನ್‌ ಒಂದರಲ್ಲಿ ಸಾಂಪ್ರದಾಯಿಕ ರೇಷ್ಮೆ ಸೀರೆಯ ಬ್ಲೌಸ್‌ ಹೊಲಿಸಿದ್ರೆ ಅಭಾಸವಾಗುತ್ತೆ. ಅಂಥ ಸೀರೆಗಳ ಬ್ಲೌಸ್‌ ವಿನ್ಯಾಸಕ್ಕೆ ಹೆಚ್ಚೆಂದರೆ ಸಮಕಾಲೀನ ಟ್ರೆಂಡ್‌ ಬಳಸಬಹುದೇ ವಿನಃ ಸಂಪೂರ್ಣ ಮಾಡರ್ನ್‌ ಆಗಿರುವ ಪಾರ್ಟಿಗೆ ಉಡುವಂಥ ಸೀರೆಬ್ಲೌಸ್‌ನ ವಿನ್ಯಾಸ ಮಾಡಲಾಗದು. ಉದಾಹರಣೆ ಬೆಲ್ಟ್‌ ಸೀರೆ ವಿನ್ಯಾಸವನ್ನು ರೇಷ್ಮೆ ಸೀರೆಗೆ ಮಾಡಿದ್ರೆ ಹೇಗಿರುತ್ತೆ ಊಹಿಸಿ, ನಗು ಬಂದ್ರೆ ತಡ್ಕೊಳ್ಳಿ.

ಸಾಂಪ್ರದಾಯಿಕ ಸೀರೆ ಬ್ಲೌಸ್‌ ಡಿಸೈನ್‌ಗಳು

ರೇಷ್ಮೆ ಸೀರೆ ಬ್ಲೌಸ್‌ ವಿನ್ಯಾಸವನ್ನು ಪಾರಂಪರಿಕತೆ ಇಟ್ಟುಕೊಂಡೇ ಚೆಂದವಾಗಿ ಡಿಸೈನ್‌ ಮಾಡಬಹುದು.

- ಗಿಡ್ಡ ತೋಳಿನ ಕೆಳಭಾಗದಲ್ಲಿ ವಿ ಕಟ್‌ ಮಾಡಿ ಅಲ್ಲಿ ಚೆಂದದೊಂದು ಚಿಟ್ಟೆಯನ್ನೋ, ಹೂವಿನ ವಿನ್ಯಾಸವನ್ನೋ ಬಳಸಬಹುದು. ಅದರ ಕೆಳಗೇ ಪಾರಂಪರಿಕ ತೋಳಬಂದಿ ತೊಟ್ಟರೆ ಆ ಸೊಗಸೇ ಬೇರೆ.

- ಸಾಂಪ್ರದಾಯಿಕ ಸೀರೆ ಬ್ಲೌಸ್‌ನಲ್ಲಿ ಈಗ ಬಂದಿರುವ ಮತ್ತೊಂದು ಸ್ಟೈಲ್‌ ಕೋಲ್ಡ್‌ ಶೋಲ್ಡರ್‌ ಡಿಸೈನ್‌ ಅಂದರೆ ತೋಳಿನ ಮೇಲ್ಭಾಗದಲ್ಲಿರುವ ರೌಂಡ್‌, ವಿ, ಮೊದಲಾದ ಶೇಪ್‌ನ ಕಟ್‌ಗಳು. ಇದರಲ್ಲಿರುವ ಖಾಲಿ ಜಾಗ ಇರುತ್ತಲ್ಲಾ, ಅಲ್ಲಿ ತೋಳಬಂಧಿ ತರದ ಡಿಸೈನ್‌ಗಳನ್ನು ಬ್ಲೌಸ್‌ನಲ್ಲೇ ಮಾಡುವುದು. ಅದು ಲೇಯರ್‌ ಲೇಯರ್‌ ಆಗಿದ್ದರೆ ಭರ್ಜರಿ ಲುಕ್ಕು. ಮೊಣಕೈವರೆಗೆ ಇಳಿದ ಸ್ಲೀವ್ಸ್ ಕೆಳಭಾಗಕ್ಕೆ ಜರಿ ವರ್ಕ್ ಜೊತೆಗೆ ದೇವರ ಚಿತ್ರವಿರುವ ತೋಳಬಂಧಿ ಡಿಸೈನ್‌ಅನ್ನು ಬ್ಲೌಸ್‌ನಲ್ಲೇ ಮಾಡುವುದು. ಇದಕ್ಕೆ ಹೆಚ್ಚು ಸಮಯ, ಕ್ರಿಯೇಟಿವಿಟಿ ಬೇಕು.

- ‘ಪವರ್‌ ಪಫ್‌’ ವಿನ್ಯಾಸ ಮತ್ತೆ ಬಂದಿದೆ. ಇದು ಸಾಂಪ್ರದಾಯಿಕ ಸೀರೆಗೆ ಬೆಸ್ಟ್‌. ಪುಟ್ಟಸ್ಲೀವ್‌್ಸ ಇಟ್ಟು ಮೇಲ್ಭಾಗದಲ್ಲಿ ಮಾತ್ರ ಕಾಣುವಂತೆ ಕೊಂಚ ಪಫ್‌ ಇಡೋದು. ಇದು ಸಖತ್‌ ಟ್ರೆಂಡಿಯೂ ಹೌದು.

ಮತ್ತೆ ಬಂದಿದೆ ಟೀ ಲೆನ್ತ್ ಟ್ರೆಂಡ್; ಮುಜುಗರಕ್ಕೆ ಹೇಳಿ ಬೈ!

- ಕೊಂಚ ಕೆಳಗಿಳಿಯುವ ತೋಳು ಅಂದರೆ ಹಾಫ್‌ ಸ್ಲೀವ್‌್ಸ. ಮೊಣಕೈಯಷ್ಟಕ್ಕೆ ಬರುವ ತೋಳಿಗೆ ಮೇಲೆ ಪಫ್‌ ಇಡಿಸಿ ಕೆಳಗೆ ಅಗಲ ಬಾರ್ಡರ್‌ ಇಡಬಹುದು.

- ತೋಳಿನಲ್ಲಿ ಎಂಬ್ರಾಯಿಡರಿ ವರ್ಕ್ ಇದ್ದರೆ ತೋಳಿನ ಭಾಗವನ್ನು ಇನ್ನಷ್ಟುಹೆಚ್ಚಿಸಿ ಕೈಯ ಮುಕ್ಕಾಲು ಭಾಗ ಕವರ್‌ ಮಾಡುವಂತೆ ಮಾಡಬಹುದು.

- ಬ್ಲೌಸ್‌ನ ಮುಂಭಾಗ ಅಥವಾ ಹಿಂಭಾಗದ ಡಿಸೈನ್‌ನಲ್ಲಿ ಬೋಟ್‌ನೆಕ್‌ನಂಥ ವಿನ್ಯಾಸಕ್ಕಿಂತ ವಿ ಶೇಪ್‌ ಡೀಪ್‌ ರೌಂಡ್‌ ಚೆಂದ.

- ಈಗೀಗ ರೇಷ್ಮೆ ಸೀರೆಗೆ ಕಲಂಕಾರಿ ಪ್ರಿಂಟ್‌ನ ಬ್ಲೌಸ್‌ ಟ್ರೆಂಡ್‌ ಆಗ್ತಿದೆ. ಹೈನೆಕ್‌ ಅಂದರೆ ಕತ್ತಿನವರೆಗೂ ಬರುವ ಕಲಂಕಾರಿ ಬ್ಲೌಸ್‌ನಲ್ಲಿ ತ್ರೀಫೋತ್‌ರ್‍ ಅಳತೆಯ ತೋಳಿನ ಡಿಸೈನ್‌ ಇರುತ್ತೆ. ತೋಳಿನ ತುಂಬ ಮೇಲಿಂದ ಕೆಳಗಿನವರೆಗೂ ಜರಿ ವರ್ಕ್ ಇರುತ್ತೆ. ಮೈಯ ತುಂಬ ಕಲಂಕಾರಿ ಪ್ರಿಂಟ್‌. ಇದು ಕಂಟೆಂಪರರಿ ಅನಿಸಿಕೊಂಡಿರುವ ಡಿಸೈನ್‌. ಅದಿತಿ ರಾವ್‌ ಹೈದರಿ ಇತ್ತೀಚಿಗೆ ಇಂಥ ಬ್ಲೌಸ್‌ ತೊಟ್ಟು ಗಮನ ಸೆಳೆದಿದ್ದರು.

- ಅಗಲವಾಗಿ ಹಬ್ಬಿದ ಬೆಲ್‌ ಡಿಸೈನ್‌ ಸ್ಲೀವ್ಸ್ ಇರುವ ಬ್ಲೌಸ್‌ಗಳನ್ನೂ ಪಾರಂಪರಿಕ ಸೀರೆಗೆ ಧರಿಸುತ್ತಾರೆ. ಕಾಂಟ್ರಾಸ್ಟ್‌ ಕಲರ್‌ನ ಬ್ಲೌಸ್‌ ಹೊಲಿಸಿಕೊಂಡರೆ ಮುಂಭಾಗ ಬೋಟ್‌ನೆಕ್‌ ವಿನ್ಯಾಸ ಮಾಡಿಕೊಂಡು ಈ ಸ್ಟೈಲ್‌ ಮಾಡಬಹುದು. ಅಂಥಾ ಅದ್ಭುತ ಲುಕ್‌ ಅಂತನಿಸದಿದ್ದರೂ ಸಖತ್‌ ಟ್ರೆಂಡಿ ಅನಿಸೋದಂತೂ ಗ್ಯಾರೆಂಟಿ. ಫುಲ್‌ ತೋಳು ಬೆಲ್‌ ವಿನ್ಯಾಸದಲ್ಲಿರುವ ಡಿಸೈನ್‌ ಒಂದಾದರೆ, ಮೊಣಕೈಯವರೆಗೂ ನಾರ್ಮಲ್‌ ಸ್ಲೀಮ್ಸ್ ಇದ್ದು ಇಲ್ಲಿಂದ ಟ್ರಾನ್ಸಪರೆಂಟ್‌ ಬೆಲ್‌ ಶೇಪ್‌ ತೋಳಿನ ವಿನ್ಯಾಸ. ಇದಕ್ಕೆ ಕಾಲರ್‌ನೆಕ್‌ ಡಿಸೈನ್‌ ಚೆಂದ.

...ಉಫ್‌, ಒಂದಲ್ಲ, ಎರಡಲ್ಲ ಇಂಥ ನೂರಾರು ವೆರೈಟಿಗಳಿವೆ. ನಿಮ್ಮ ಮನೋಭಾವ, ಸೀರೆಯ ವಿನ್ಯಾಸ ಎಲ್ಲ ನೋಡಿಕೊಂಡು ಬ್ಲೌಸ್‌ ಡಿಸೈನ್‌ ಮಾಡಿ. ಬ್ಲೌಸ್‌ ಪ್ಲೆಯಿನ್‌ ಆಗಿದ್ರೆ ಕ್ರಿಯೇಟಿವಿಟಿಗೆ ಹೆಚ್ಚು ಅವಕಾಶ. ಸೀರೆ ಬ್ಲೌಸ್‌ ಬಿಟ್ಟು ಸಪರೇಟ್‌ ಬ್ಲೌಸ್‌ ಹೊಲಿಸಿಕೊಂಡರೂ ಸಖತ್ತಾಗಿ ಸ್ಟೈಲ್‌ ಮಾಡಬಹುದು.

ಫ್ಯಾಷನ್ ಅಂತ ಸೀರೆಗೆ ಬಿಕಿನಿ ಬ್ಲೌಸ್ ಬೇಕಾ?

- ಜರಿವರ್ಕ್, ಎಂಬ್ರಾಯಿಡರಿ ವಿನ್ಯಾಸದಲ್ಲೂ ಹೊಸತನವಿರುವ ಹಾಗೆ ನೋಡ್ಕೊಳ್ಳಿ.

ಮಾಡರ್ನ್‌ ಸೀರೆ ಬ್ಲೌಸ್‌ನಲ್ಲಿ ನೂರಾರು ವೆರೈಟಿ

ಹಬ್ಬದ ಮಾಸವಾಗಿರುವ ಕಾರಣ ಸಾಂಪ್ರದಾಯಿಕ ಸೀರೆಗೆ ಜೈ ಅನ್ನೋರೇ ಹೆಚ್ಚು. ಆದರೆ ಅವರ ನಡುವೆ ಡಿಫರೆಂಟ್‌ ಆಗಿ ಕಾಣ್ಬೇಕು ಅಂತಿರೋರು ಇದಕ್ಕೆ ಸಂವಾದಿಯಾದ ಮಾಡರ್ನ್‌ ಸೀರೆ ಹಾಗೂ ಬ್ಲೌಸ್‌ನತ್ತ ಆಕರ್ಷಿತರಾಗಿತ್ತಾರೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದ ಬ್ಲೌಸ್‌ಗಳ ಡಿಸೈನ್‌ಗಳಿಗೆ ಆಕಾಶವೇ ಎಲ್ಲೆ. ಕೋಲ್ಡ್‌ ಶೋಲ್ಡರ್‌ ಬ್ಲೌಸ್‌ಗಳ ಸ್ಟೈಲ್‌ ತೀರಾ ಸಾಮಾನ್ಯವಾಗಿದೆ. ದೇಹಕ್ಕಂಟಿನಿಲ್ಲುವ ಟೀ ಶರ್ಟ್‌ ಥರದ ಮೆಟೀರಿಯಲ್‌ನಲ್ಲಿ ಕಡುಬಣ್ಣದ ಉದ್ದದ ಬ್ಲೌಸ್‌ಹೊಲಿಸಿ ಅದರ ಮೇಲೆ ಕಾಟನ್‌ ಸೀರೆಯುಟ್ಟರೆ ಎಲಿಗೆಂಟ್‌ ಲುಕ್‌. ಸ್ವೀವ್‌ಲೆಸ್‌ ಬ್ಲೌಸ್‌ನ ಮೇಲೆ ಪುಟ್ಟಕೋಟ್‌ ಥರದ ವಿನ್ಯಾಸ ಮತ್ತೊಂದು. ಆಫ್‌ ಶೋಲ್ಡ್‌ ಬ್ಲೌಸ್‌ಗಳಲ್ಲಂತೂ ಸಾವಿರಾರು ವಿನ್ಯಾಸದ ಆಯ್ಕೆಗಳಿವೆ. ಆಫ್‌ ಶೋಲ್ಡರ್‌ನಲ್ಲಿ ಬೆಲ್ಲಿ ತೋಳುಗಳ ಬ್ಲೌಸ್‌ ಸಖತ್‌ ಟ್ರೆಂಡಿ. ಒಂದು ಭಾಗದಲ್ಲಿ ಪಾರದರ್ಶಕ ಬಟ್ಟೆಯಲ್ಲಿ ತ್ರೀಫೋತ್‌ರ್‍ ಸ್ಲೀವ್‌್ಸ ಮತ್ತೊಂದು ಕಡೆ ಸ್ಲೀವ್‌ಲೆಸ್‌ ಬ್ಲೌಸ್‌ ಹೊಲಿಸಿ ಸೀರೆಯಲ್ಲೇ ಕೋಲ್ಡ್‌ ಶೋಲ್ಡರ್‌ ಡಿಸೈನ್‌ ಮಾಡುವ ಪ್ರತಿಭಾವಂತರೂ ಇದ್ದಾರೆ.

ಟಸ್ಸೆಲ್‌ನಲ್ಲೂ ಹಲವು ಮಾದರಿಯ ಸಾರಿ ಬ್ಲೌಸ್‌ಗಳಿವೆ. ಅದರ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯಬಹುದು.

ಬ್ಲೌಸ್‌ ಡಿಸೈನ್‌ ಹೆಚ್ಚಿದ್ದರೆ ಆಭರಣಗಳ ಜಾಗವನ್ನು ಅವೇ ತುಂಬುತ್ತವೆ. ಬ್ಲೌಸ್‌ ಡಿಸೈನ್‌ ಅದ್ಧೂರಿ ಮಾಡಿ ಹೆಚ್ಚು ಆಭರಣವನ್ನು ಹೇರಿಕೊಂಡರೆ ಅಭಾಸ ಅನಿಸಬಹುದು. ಇಂಥ ಸೂಕ್ಷ್ಮಗಳ ಕಡೆ ಹೆಚ್ಚು ಗಮನ ಕೊಡಿ. ಚೆಂದದ ಸೀರೆ ಬ್ಲೌಸ್‌ ಹೊಲಿಸುವ ಹೆಣ್ಮಕ್ಕಳಿಗೆ ಈ ಸಲದ ಹಬ್ಬ ನಿರಾಸೆ ಮಾಡದಿರಲಿ. ಖುಷಿ ಹೆಚ್ಚಿಸಲಿ ಅನ್ನೋದು ನಮ್ಮ ಹಾರೈಕೆ.

click me!